ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ವರ್ತಮಾನಕ್ಕೆ ಬೇಕು ಸಾಂತ್ವನದ ಮುಲಾಮು

ಎಲ್ಲರೂ ಅವರಷ್ಟಕ್ಕೆ ಧರ್ಮಮಾರ್ಗದಲ್ಲಿ ಬದುಕಿದರೆ ಸಾಕು, ಧರ್ಮ ಗೆಲ್ಲುತ್ತದೆ ಎಂಬ ಅರಿವನ್ನು ಬಿತ್ತಬೇಕಾದದ್ದು ಈ ಹೊತ್ತಿನ ಅನಿವಾರ್ಯ
Published : 14 ಫೆಬ್ರುವರಿ 2024, 0:30 IST
Last Updated : 14 ಫೆಬ್ರುವರಿ 2024, 0:30 IST
ಫಾಲೋ ಮಾಡಿ
Comments

ನಮ್ಮ ಭರತಭೂಮಿಯ ವೈಶಿಷ್ಟ್ಯವೇ ಹಾಗೆ. ಹತ್ತಾರು ಮತಪಂಥಗಳು, ನೂರಾರು ಜಾತಿ, ಬುಡಕಟ್ಟುಗಳು, ಸಾವಿರಾರು ಭಾಷೆ, ಬೋಧೆಗಳಲ್ಲಿ ಹಸನುಗೊಂಡ ಸಮೃದ್ಧ ನೆಲವಿದು. ಸರ್ವಜನಾಂಗದ ಶಾಂತಿಯ ಪ್ರಜಾತಂತ್ರ ತೋಟದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಿಭಿನ್ನ ಹಿನ್ನೆಲೆ. ಜನಮನದ ಸಾಮಾನ್ಯ ತುಡಿತಗಳಲ್ಲಿ ಭಕ್ತಿಭಾವವೂ ಒಂದು.

ಆರಾಧಿಸುವ ದೇವರು, ಆರಾಧನಾ ಕ್ರಮಗಳಲ್ಲಿ ಭಿನ್ನತೆಯಿದ್ದರೂ ಧಾರ್ಮಿಕಶ್ರದ್ಧೆಯು ಸಾಮಾಜಿಕ ನೈತಿಕತೆಗೆ ಮೂಲದ್ರವ್ಯವಾಗಿಯೂ ವೈಯಕ್ತಿಕ ನೆಲೆಯಲ್ಲಿ ಸನ್ಮಾರ್ಗದ ದಿಕ್ಸೂಚಿಯಾಗಿಯೂ ಒದಗುತ್ತಾ ಬಂದಿದ್ದಕ್ಕೆ ಇತಿಹಾಸದಲ್ಲಿ ಕುರುಹುಗಳಿವೆ. ಹಾಗಿದ್ದೂ ಮೌಲ್ಯಗಳು ಅಧಃಪತನ ಕಂಡಿರುವ ಪ್ರಸ್ತುತ ದುರಿತ ಕಾಲಘಟ್ಟದಲ್ಲಿ, ಭಕ್ತಿಭಾವ ಕೂಡ ಇತರ ಪದಾರ್ಥಗಳಂತೆ ಸ್ವಾರ್ಥಕ್ಕೋ ಲಾಭಕ್ಕೋ ಹಣ, ಅಧಿಕಾರವೆಂಬ ವಿಷದೊಟ್ಟಿಗೆ ಸೇರಿ ಕಲಬೆರಕೆ ಗೊಂಡಿರುವುದು ಸತ್ಯ. ಹೊಸ್ತಿಲ ಒಳಗಿರಬೇಕಾದ ವೈಯಕ್ತಿಕ ನೆಲೆಯ ಜಾತಿಮತಗಳ ಪ್ರೀತಿ, ನಂಬಿಕೆ, ಆಚರಣೆಗಳಂತೂ ಈಗ ಬೀದಿಗೆ ಬಂದು ಅಬ್ಬರಿಸು
ತ್ತಿರುವ ಹೊತ್ತು.

ಅಷ್ಟಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕಾದದ್ದು ಏನೆಂದರೆ, ‘ದಯೆಯೇ ಧರ್ಮದ ಮೂಲ’ ಎಂಬುದನ್ನು ಅರಿತಿದ್ದರೆ ಜಗತ್ತಿನಲ್ಲಿ ಈ ಪರಿ ಗಲಭೆ, ಹಿಂಸೆ, ಯುದ್ಧ, ರಕ್ತಪಾತ, ಸಾವುನೋವುಗಳೆಲ್ಲಾ ನಡೆಯುತ್ತಿದ್ದವೇ? ‘ಅಶಕ್ತರಲ್ಲಿ ದೇವರನ್ನು ಕಾಣಬೇಕು’ ಎಂಬ ಭಕ್ತಿವಾಣಿಯು ಅರ್ಥವಾಗಿದ್ದರೆ ಸುಡುವ ಬಡತನ, ಹಸಿವು, ಅಸುರಕ್ಷತೆಯಿಂದ ಜಗತ್ತು ಬಳಲುತ್ತಿತ್ತೇ? ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎಲ್ಲವೂ ದೈವನಿಯಮಗಳು ಎಂದು ನಾವು ಬಗೆದಿದ್ದರೆ ಹೀಗೆಲ್ಲಾ ಸುಳ್ಳು, ಮೋಸ, ವಂಚನೆ, ಭ್ರಷ್ಟಾಚಾರ, ಅನಾಚಾರ ನಮ್ಮನ್ನು ಆಳುತ್ತಿದ್ದವೇ?
ಮತ್ತೊಬ್ಬರನ್ನು ವಂಚಿಸುವುದು, ನೋಯಿಸುವುದೆಲ್ಲ ದೈವನಿಂದನೆಯೆಂದು ಅರಿತಿದ್ದರೆ ಈ ಪರಿ ದೌರ್ಜನ್ಯ, ಅತ್ಯಾಚಾರ, ಆಕ್ರಂದನ ಕೇಳಿಬರುತ್ತಿದ್ದವೇ? ಹಾಗಿದ್ದರೆ ನಮ್ಮಲ್ಲಿ ನಿಜವಾದ ದೈವಭಕ್ತಿ ಎಲ್ಲಿದೆ ಎಂದು ಯೋಚಿಸಬೇಕಿದೆ.

ನಿಜ, ನಮ್ಮ ಶ್ರದ್ಧಾಭಕ್ತಿಯಲ್ಲಿ ನೈಜತೆ, ಬದ್ಧತೆ ಇದ್ದಿದ್ದರೆ ಜಗತ್ತು ಇಷ್ಟೊಂದು ಕ್ಷೋಭೆಗೆ ಒಳಗಾಗುತ್ತಿ ರಲಿಲ್ಲ. ಜಗತ್ತಿನೆಲ್ಲೆಡೆ ಇರುವ ಧರ್ಮಸಾರವನ್ನು ಅರ್ಥೈಸುವಲ್ಲಿ ಸೋತ ಅನುಯಾಯಿಗಳು ಅಪಾರ್ಥ ಗಳನ್ನೇ ಸಮಾಜದ ಮೇಲೆ ಹೇರುತ್ತಾ ನಿಜವಾದ ಅರ್ಥದಲ್ಲಿ ಧರ್ಮವಿರೋಧಿಗಳಾಗಿರುವ ವಾಸ್ತವ ಎದುರಿಗಿದೆ.

‘ಸಹನೆ ಮತ್ತು ಪ್ರೀತಿಯೇ ನನ್ನ ಧರ್ಮ’ ಎಂಬ ಗಾಂಧೀಜಿಯ ಆಶಯವನ್ನು ಕಣ್ಣಿಗೊತ್ತಿಕೊಳ್ಳ
ಬೇಕು. ನಮಗೆಲ್ಲಾ ದೈವಭಕ್ತಿ, ನಂಬಿಕೆಗಳು ಇರಬೇಕು ಮತ್ತವು ಪ್ರಾಮಾಣಿಕವಾಗಿರಬೇಕು. ಯಾಕೆಂದರೆ, ನಮ್ಮ ನಡುವಿನ ಮೋಸಗಾರರು, ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಜಾತಿವಾದಿಗಳು, ಮತಾಂಧರು, ಹಿಂಸಾವಿನೋದಿಗಳು, ಯುದ್ಧೋನ್ಮಾದಿಗಳು, ಭಯೋತ್ಪಾದಕರಲ್ಲಿ ಹೆಚ್ಚಿನವರು ಅಪಾರ ದೈವಭಕ್ತರೂ ಧರ್ಮಶ್ರದ್ಧೆಯುಳ್ಳವರಾಗಿಯೇ ಅಂತಹ ನೀಚ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು! ಸತ್ಯ, ನ್ಯಾಯ, ನೀತಿ, ಮಾನವೀಯತೆಯನ್ನು ನಿತ್ಯ ಕೃತಿಯಲ್ಲಿ ಬಾಳದೇ ಹೋದವರು ಅದು ಹೇಗೆ ದೈವಭಕ್ತರಾಗಿ ಉಳಿದಾರು?

ಜಾತಿಭೇದ, ವರ್ಗಸಂಘರ್ಷಗಳನ್ನು ನಿರ್ಮೂಲ ಮಾಡುವಲ್ಲಿ ಶ್ರದ್ಧಾಕೇಂದ್ರಗಳು, ಮಠಮಾನ್ಯಗಳ ಪಾಲು ದೊಡ್ಡದಿರಬೇಕಿತ್ತು. ವಿಪರ್ಯಾಸವೆಂದರೆ, ಅವೆಲ್ಲಾ ತಮ್ಮ ಆಸ್ತಿ-ಸಂಪತ್ತನ್ನು ಕ್ರೋಡೀಕರಿಸುವ, ವೃದ್ಧಿಸುವ, ರಾಜಕೀಯ ಲಾಭ ಪಡೆಯುವ, ಭ್ರಷ್ಟರನ್ನು ರಕ್ಷಿಸುತ್ತಿರುವಂತಹ ನಿದರ್ಶನಗಳೇ ಬಹಳ. ದೇವರು, ಧರ್ಮಗಳ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಸೀಳಿ ಕಂದಕ ಸೃಷ್ಟಿಸುವಂತಹ ಸದ್ಯದ ಸ್ಥಿತಿ ನಿಜಕ್ಕೂ
ಅಪಾಯಕಾರಿಯಾದದ್ದು.

ಹಿಂಸೆಯನ್ನು ಭೂಮಿಯಿಂದಲೇ ಓಡಿಸಬೇಕೆಂದು ಪಣ ತೊಟ್ಟವರು ಅದೆಷ್ಟೋ ಮಂದಿ ಸಂತರು, ದಾರ್ಶನಿಕರು. ಸಾಕ್ರೆಟಿಸ್‍ನಂತೆ ಕೆಲವರು ಆ ಪ್ರಯತ್ನದಲ್ಲಿ ಜೀವತ್ಯಾಗಕ್ಕೂ ಸಿದ್ಧರಾಗಿ, ಹಿಂಸೆಗೇ ಬಲಿಯಾದರು! ಲೋಕದ ಕಣಕಣವೂ ಹುಟ್ಟುವ ಪ್ರತಿ ಜೀವಚರವೂ ದೇವರ ಸೃಷ್ಟಿಯೆಂದು ನಂಬುವ ನಾವು ದೈವತ್ವವನ್ನು ಕಾಣಬೇಕಿರುವುದು ಜೀವಪರ, ಮನುಷ್ಯಪರ ಧೋರಣೆಗಳಲ್ಲಿ. ಪ್ರಕೃತಿಸಹಜ ಭಿನ್ನತೆ ಯನ್ನು ಸ್ವೀಕರಿಸುತ್ತಾ, ರೋಗದಂತೆ ಬಾಧಿಸುತ್ತಿರುವ ರಾಗದ್ವೇಷಗಳನ್ನು ತೊರೆಯದೇ ಹೋದರೆ ನಾಳಿನ ಜಗತ್ತು ಜೀವಕಳೆಯನ್ನು ಕಳೆದುಕೊಂಡು ಸ್ಮಶಾನದಂತೆ ಆಗುತ್ತದೆ. ಭವಿಷ್ಯದಲ್ಲಿ ಆರೋಗ್ಯಕರ ತಲೆಮಾರುಗಳು ಉಳಿಯಬೇಕೆಂದರೆ, ಬೆಳೆಯಬೇಕಾದ ಎಳೆಯ ಕುಡಿಗಳಿಗೆ ದ್ವೇಷ, ಸಂಕುಚಿತತೆಯ ಬದಲು ಒಲವು, ಜೀವದಯೆಯನ್ನು ಧಾರೆಯೆರೆಯಬೇಕಿದೆ.

ಪರಧರ್ಮ ಸಹಿಷ್ಣುಗಳಾಗದ ವಿನಾ ನಾವು ಮನುಷ್ಯರಾಗುವುದಿಲ್ಲ ಎಂಬುದನ್ನರಿತು ನಮ್ಮ ಧಾರ್ಮಿಕ, ರಾಜಕೀಯ ನಿಲುವುಗಳು ನಮ್ಮೊಳಗಿನ ಮಾನವೀಯತೆಯನ್ನೇ ಕೊಲ್ಲುವಷ್ಟು ಕ್ರೂರವಾಗದಂತೆ ಕಾಯ್ದುಕೊಳ್ಳಬೇಕು. ‘ಸ್ಥಾವರಕ್ಕಳಿವುಂಟು...’ ಎಂಬಂತಹ ಅರಿವಿನಲ್ಲಿ ನಮಗೆ ಮನುಷ್ಯರ ಸದ್ಗುಣ, ನಡತೆಯು ಗುಡಿ, ಚರ್ಚು, ಮಸೀದಿಗಳಿಗಿಂತಲೂ ಮುಖ್ಯವಾಗಬೇಕು. ನಿರ್ಜೀವವಾದ ಕಲ್ಲು, ಕಂಬ, ಗೋಪುರ, ಮಿನಾರು, ಶಿಲುಬೆಗಳಲ್ಲಿ ದೇವರನ್ನು ಹುಡುಕುವ ನಾವು, ದೇವರ ಜೀವಂತ ಸೃಷ್ಟಿಯಾದ ಮನುಷ್ಯರಲ್ಲಿ ದೇವರನ್ನು ಹುಡುಕುವುದು ಮತ್ತು ಸ್ವತಃ ದೇವರಾಗುವ ಅಗತ್ಯವನ್ನು ಮರೆಯಬಾರದು.

ಪ್ರಕೃತಿಯ ಆರಾಧನೆ ಶ್ರೇಷ್ಠವಾದುದು. ಸಕಲ ಜೀವಚರಗಳಿಗೆ ಲೇಸನು ಬಗೆವುದೇ ದೇವರೆಡೆಗೆ ನಮ್ಮನ್ನು ಕೊಂಡೊಯ್ಯುವ ಹಾದಿ ಎಂದು ಭಾವಿಸಿದರೆ ಈ ಜೀವಜಗತ್ತು ನಿರಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT