‘ನಿಂದಕರಿರಬೇಕು’ ಎಂದು ಪುರಂದರದಾಸರು ಹೇಳಿದ್ದರು. ದೇವಾನುದೇವತೆಗಳಿಗೂ ನಿಂದನಾಸ್ತುತಿ ಎನ್ನುವುದು ಸ್ವೀಕೃತ. ಸಮಾಜೋ ವಿಜ್ಞಾನವು ಆತ್ಮವಿಮರ್ಶೆ, ಟೀಕೆ ಹಾಗೂ ವಿಶ್ಲೇಷಣೆಗೆ ಅವಕಾಶ ಕಲ್ಪಿಸಿದೆ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಮುಕ್ತ ಅಭಿಪ್ರಾಯ ಹಾಗೂ ಚರ್ಚೆ ಅವಶ್ಯವೂ ಹೌದು. ಈಗ ಸಾಮಾಜಿಕ ಮಾಧ್ಯಮವನ್ನು ಸಾರ್ವಜನಿಕ ಶೌಚಾಲಯ ಎಂದು ಭಾವಿಸಿರುವವರ ಕುಚೇಷ್ಟೆಯು ನಿಂದನಾಸ್ತುತಿಯನ್ನು ಹಗುರ ಮಾಡುವುದೇನು ಬಂತು; ಹಾಳು ಹಳ್ಳ ಹಿಡಿಸಿಬಿಟ್ಟಿದೆ.

2025ರ ಡಿಸೆಂಬರ್ ತಿಂಗಳಲ್ಲಿ ಹಿಂದಿಯಲ್ಲಿ ‘ಧುರಂಧರ್’ ಸಿನಿಮಾ ತೆರೆಕಂಡಿತು. ಕನ್ನಡದಲ್ಲಿ ‘ಡೆವಿಲ್’, ‘45’ ಹಾಗೂ ‘ಮಾರ್ಕ್’ ಸಿನಿಮಾಗಳು ಬಿಡುಗಡೆಯಾದವು. ನಾಲ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದು ತಾರಾ ವರ್ಚಸ್ಸಿನ ನಟರು. ‘ಧುರಂಧರ್’, ರಣವೀರ್ ಸಿಂಗ್ ತಾರಾಬಲದ ಚಿತ್ರ. ‘ಡೆವಿಲ್’ನಲ್ಲಿ ದರ್ಶನ್ ನಾಯಕತ್ವದ ಪ್ರಭಾವಳಿ. ‘45’ಕ್ಕೆ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ತ್ರಿತಾರಾ ಶಕ್ತಿ. ಸುದೀಪ್ ವರ್ಚಸ್ಸಿನ ಕಿಚ್ಚು ‘ಮಾರ್ಕ್’ ಚಿತ್ರಕ್ಕೆ ಇದೆ. ಈ ಸಿನಿಮಾಗಳು ಭಿನ್ನ ಕಾರಣಕ್ಕೆ ಸುದ್ದಿಯಲ್ಲಿದ್ದವು. ಅದು ಟೀಕಾಪ್ರಹಾರಕ್ಕೆ ಸಂಬಂಧಿಸಿದ ವಿದ್ಯಮಾನ.

ಸಿನಿಮಾ ವಿಮರ್ಶೆಯಲ್ಲಿ ಪಳಗಿದವರ ಸಾಲಿನಲ್ಲಿ ಇರುವ ಅನುಪಮಾ ಚೋಪ್ರಾ ಅವರು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಎಂಬ ಮಾಧ್ಯಮ ಸಂಸ್ಥೆಗಾಗಿ ಕೆಲಸ ಮಾಡುತ್ತಾರೆ. ಅವರು ‘ಧುರಂಧರ್’ ಸಿನಿಮಾದ ವಿಡಿಯೊ ವಿಮರ್ಶೆಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ‘ಕುತರ್ಕದ ರಾಷ್ಟ್ರೀಯತೆಯ, ಪುರುಷಾಹಂಕಾರ ಮುಂದುಮಾಡಿದ, ಉನ್ಮಾದದ ಊಟೆಯ ಸಿನಿಮಾ ಇದು’ ಎನ್ನುವ ಧಾಟಿಯಲ್ಲಿ ಅಭಿಪ್ರಾಯ ಮಂಡಿಸಿದ್ದರು. ನಟ ಪರೇಶ್ ರಾವಲ್ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದ ಮೂಲಕ ಅನುಪಮಾ ಮೇಲೆ ಮುಗಿಬಿದ್ದರು. ಧಮಕಿ ಹಾಕುವ ರೀತಿಯಲ್ಲಿ ಪೋಸ್ಟ್ಗಳನ್ನು ಹರಿಬಿಟ್ಟರು. ಕೊನೆಗೆ ವಿಧಿಯಿಲ್ಲದೆ ಅನುಪಮಾ ತಮ್ಮ ವಿಮರ್ಶೆಯನ್ನು ಯೂಟ್ಯೂಬ್ನಿಂದ ಅಳಿಸಿಹಾಕಿದರು.

‘ಮಾರ್ಕ್’ ಸಿನಿಮಾ ಪ್ರಚಾರದ ಸಮಾರಂಭದಲ್ಲಿ ಸುದೀಪ್ ಅವರು ತಾವು ಯುದ್ಧಕ್ಕೂ ಸಿದ್ಧ ಎಂಬ ಸಂದೇಶವೊಂದನ್ನು ವಾಚ್ಯವಾಗಿ ಹೇಳಿದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಸುತ್ತಲಿನ ಅಭಿಮಾನಿಗಳು ಅದನ್ನು ವೈಯಕ್ತಿಕವಾಗಿ ಪರಿಗಣಿಸಿ, ಆವೇಶದಿಂದ ಪ್ರತಿಕ್ರಿಯಿಸಿದರು. ಆಮೇಲೆ, ತಾವು ಪೈರಸಿ ಮಾಡುವವರ ವಿಷಯದಲ್ಲಿ ಯುದ್ಧ ಸಾರಿದ್ದು ಎಂಬುದಾಗಿ ಸುದೀಪ್ ಸ್ಪಷ್ಟೀಕರಣ ಕೊಟ್ಟರು. ಅದಾಗಿ ಕೆಲವೇ ದಿನಗಳ ನಂತರ ‘45’ ಚಿತ್ರತಂಡವು ಸಿನಿಮಾ ಕುರಿತು ಆಕ್ಷೇಪಾರ್ಹ ಪೋಸ್ಟರ್ ಹಾಕುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಒಕ್ಕಣೆಯನ್ನು ಸಾಮಾಜಿಕ ಮಾಧ್ಯಮದಲ್ಲೇ ಹರಿಬಿಟ್ಟಿತು.

‘ಧುರಂಧರ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಆಗಿರುವುದರಿಂದ, ಸಿನಿಮಾ ಮೆಚ್ಚಿಕೊಂಡ ವೀಕ್ಷಕ ಸಮುದಾಯದಿಂದ ಟೀಕಾಕಾರರಿಗೆ ದೊಡ್ಡಮಟ್ಟದ ಬೆದರಿಕೆ ಬಂದುದು ಸ್ಪಷ್ಟ. ಕನ್ನಡ ಚಿತ್ರಗಳು ಯಶಸ್ಸನ್ನು ಪಡೆದೇ ತೀರುವ ಹತಾಶೆಯ ಮಾರ್ಗಗಳಂತೆ ಟೀಕೆ– ಪ್ರತಿ ಟೀಕೆಗಳ ಈ ವರಸೆ ವ್ಯಕ್ತಗೊಳ್ಳುತ್ತಿದೆ.

ಜನಪ್ರಿಯ ಚಿತ್ರವೊಂದು ಗೆಲ್ಲುವುದಕ್ಕೂ, ಅದರ ಗುಣಮಟ್ಟಕ್ಕೂ ಯಾವಾಗಲೂ ಸಂಬಂಧ ಇರಬೇಕು ಎಂದೇನೂ ಇಲ್ಲ. ಆಯಾ ಕಾಲಮಾನದ ಪ್ರೇಕ್ಷಕರ ಮನೋಭೂಮಿಕೆ ಹಾಗೂ ಮಾರುಕಟ್ಟೆ ತಂತ್ರಗಳನ್ನು ಆಧರಿಸಿ ಈ ಸ್ವೀಕೃತಿಯ ವಿವೇಕವೂ ಬದಲಾಗುತ್ತಾ ಇರುತ್ತದೆ. ಗಿರೀಶ ಕಾಸರವಳ್ಳಿ ಅವರ ಸಿನಿಮಾ ತೆರೆಕಂಡಾಗ, ಪ್ರಮುಖ ಚಿತ್ರಮಂದಿರದ ಎರಡು ಪ್ರದರ್ಶನಗಳನ್ನು ಅದಕ್ಕಾಗಿ ಬಿಟ್ಟುಕೊಡುವ ಉದಾರ ಮನಸ್ಸು ರಾಜ್ಕುಮಾರ್ ಅವರದ್ದಾಗಿತ್ತು. ಈಗ ಸಾಮಾಜಿಕ ಮಾಧ್ಯಮದ ಬೊಬ್ಬೆಗಳ ಮೂಲಕ ಒಬ್ಬರು ಇನ್ನೊಬ್ಬರನ್ನು ಹಣಿಯುವ, ಮುಗಿಸಿಹಾಕುವ ವ್ಯವಸ್ಥಿತ ಜಾಲವೊಂದು ಹೆಡೆ ಎತ್ತಿದೆ. ಪೈರಸಿ ಕೂಡ ಅದರ ಭಾಗವಾಗಿಯೇ ನಿರ್ಲಜ್ಜೆಯಿಂದ ನಡೆಯುತ್ತಿರುವುದು ಸ್ಪಷ್ಟ. ಆದರೆ, ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ಎಲ್ಲ ರೀತಿಯ ವಿಮರ್ಶೆ, ವಿಶ್ಲೇಷಣೆಗಳನ್ನು ತೆಗೆದುಹಾಕುವುದು, ರೇಟಿಂಗ್ ಕೊಡಕೂಡದು ಎಂದು ನ್ಯಾಯಾಲಯದಿಂದ ಆದೇಶ ತರುವ ಒಂದು ಟ್ರೆಂಡ್ ಶುರುವಾಗಿದೆ. ಇದು ಎಷ್ಟು ಸರಿ ಎಂಬ ಮುಖ್ಯ ಪ್ರಶ್ನೆಯೊಂದು ಈಗ ಉದ್ಭವಿಸಿದೆ.

‘ಧುರಂಧರ್’ ಸಿನಿಮಾ ಬಗ್ಗೆ ಟೀಕೆ ವ್ಯಕ್ತಪಡಿಸಿದ ವಿಮರ್ಶಕರನ್ನು ಬೆದರಿಸಿ, ಮುಕ್ತ ಅಭಿವ್ಯಕ್ತಿಗೆ ಕೊಡಲಿ ಪೆಟ್ಟು ಕೊಡುತ್ತಿರುವುದು ಸರಿಯಲ್ಲ ಎಂಬ ಅರ್ಥದಲ್ಲಿ ‘ಫಿಲ್ಮ್ ಕ್ರಿಟಿಕ್ಸ್ ಗಿಲ್ಡ್’ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಿತು. ಆದರೆ, ಕೂಗುಮಾರಿಗಳ ಹೇಷಾರವದ ಎದುರು ಅದು ಅರಣ್ಯ ರೋದನವಾಯಿತು. ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದಂತೆಯೂ ಭಿನ್ನ ಅಭಿಪ್ರಾಯಗಳಿಗೆ ಅವಕಾಶವನ್ನೇ ನೀಡದಿರುವ ಪ್ರಕ್ರಿಯೆ ಶುರುವಾಗಿದೆ; ಅದಕ್ಕೆ ಗಮನಾರ್ಹ ವಿರೋಧವೇನೂ ವ್ಯಕ್ತವಾದಂತಿಲ್ಲ.

ನಮ್ಮ ಸಾಂಸ್ಕೃತಿಕ ಬಹುತ್ವದ ನೂಲುಗಳ ವಸ್ತ್ರ ಯಾವತ್ತೂ ಗಟ್ಟಿ, ಆಕರ್ಷಕ. ನಿಂದನೆ, ವಿಮರ್ಶೆಯು ಸುಧಾರಣೆಯ ಮಾರ್ಗ ಎನ್ನುವ ಸಾಮಾನ್ಯ ಜ್ಞಾನವೂ ಮುಕ್ಕಾಗುತ್ತಿರುವುದು ಸೃಜನಶೀಲ ಅಭಿವ್ಯಕ್ತಿಯ ದಮನದ ಸೂಚನೆ. ಇದು ಹೀಗೆಯೇ ಮುಂದುವರಿದರೆ ಹಣ ಹಂಚಿ ಪಡೆಯುವ ‘ಉಘೇ ಉಘೇ’ ಎಂಬ ರಿಪೋರ್ಟುಗಳೇ ಮುಂದೆ ವಿಮರ್ಶೆಯಾಗುವ ಅಪಾಯದ ದಿನಗಳು ದೂರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.