ಬುಧವಾರ, ಜೂಲೈ 8, 2020
28 °C
ಇಂದಿನ ಆಧುನಿಕ ಕಾಲಘಟ್ಟದ ಧಾವಂತದ ಬದುಕಿನಲ್ಲಿ ನಮ್ಮನಮ್ಮ ಆಹಾರಾಭ್ಯಾಸವೇ ನಮ್ಮ ಮೈಮನಸುಗಳನ್ನೀಗ ಕಾಯಬೇಕಿದೆ

ಆರೋಗ್ಯಕರ ಬದುಕಿಗಿರಲಿ ಆಹಾರ ‍ಪ್ರಜ್ಞೆ

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

ಮನುಷ್ಯ ದೇಹವು ಮೇಲ್ನೋಟಕ್ಕೆ ಮೂಳೆ ಮಾಂಸದ ತಡಿಕೆಯೆನಿಸಿದರೂ ದೇಹರಚನೆಯನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ತಿಳಿಯುವುದೇನೆಂದರೆ, ಅದು ಇಟ್ಟಿಗೆಯಂತೆ ಬಹುಕೋಟಿ ಕೋಶಗಳಿಂದ ಕಟ್ಟಲ್ಪಟ್ಟ ಒಂದು ಕ್ರಮಬದ್ಧ ನಿರ್ಮಿತಿ, ಜೊತೆಗದು ಸುಂದರವೂ, ಸಂಕೀರ್ಣವೂ ಆದ ಅದ್ಭುತ ಕಲಾಕೃತಿ. ಮಾತ್ರವಲ್ಲ, ಜೀವರಾಸಾಯನಿಕ ಕ್ರಿಯೆಯಲ್ಲಿ ಒಂದಕ್ಕೊಂದು ಪೂರಕವಾಗಿ, ಪ್ರೇರಕವಾಗಿ ಒದಗ ಬಲ್ಲ ಕೋಶಗಳು ಮತ್ತು ಅಸಂಖ್ಯ ಸೂಕ್ಷ್ಮಜೀವಾಣುಗಳನ್ನು ಒಳಗೊಂಡಿರುವ ಒಂದು ಆಂತರಿಕ ಪ್ರಕೃತಿ!

ಜೀರ್ಣಾಂಗದೊಳಗಿನ ಕೋಶಗಳೆಲ್ಲವೂ ತಂತಮ್ಮ ಹೊಣೆಗಾರಿಕೆಯ ಸ್ಪಷ್ಟತೆಯಿರುವ ಸಂವೇದನಾಶೀಲ ರಚನೆಗಳಾಗಿದ್ದು, ಕಾರ್ಯನಿರ್ವಹಣೆಗೆ ಅಗತ್ಯ ಪೋಷಕಾಂಶ, ವ್ಯಾಯಾಮ, ವಿಶ್ರಾಂತಿಯನ್ನು ನಿರೀಕ್ಷಿಸುತ್ತವೆ. ಜೀವಕೋಶಗಳು ಸೂಕ್ತ ಮತ್ತು ನಿಯಮಿತ ಪ್ರಚೋದನೆಗೆ ಒಳಪಡುತ್ತಿದ್ದಲ್ಲಿ ಮಾತ್ರ ನಾವು ನಿತ್ಯದ ಬದುಕಲ್ಲಿ ಉಲ್ಲಸಿತರಾಗಿ ತೊಡಗಿಸಿಕೊಳ್ಳುವುದು ಸಾಧ್ಯ. ಆಂತರಿಕ ಪರಿಸರವನ್ನು ಸುಸ್ಥಿತಿಯಲ್ಲಿರಿಸದ ಹೊರತು ನಾವು ಬಾಹ್ಯ ಪರಿಸರವನ್ನು ನಿಯಂತ್ರಿಸಲು ಸಾಧ್ಯವಾಗದು.

ಇಂದಿನ ಆಧುನಿಕ ಕಾಲಘಟ್ಟದ ಧಾವಂತದ ಬದುಕು ವಯೋಮಾನದ ಭೇದಗಳಾಚೆಗೆ ನಮಗೆಲ್ಲಾ ಅಪರಿಮಿತ ಮಾನಸಿಕ ಒತ್ತಡವನ್ನು ತಂದೊಡ್ಡಿದೆ. ಮನೆಮಂದಿಗೆಲ್ಲ ಈಗ ಹತ್ತಾರು ಬೇಕು-ಬೇಡಿಕೆಗಳಿಗೆ ಒಟ್ಟೊಟ್ಟಿಗೇ ಓಗೊಡಬೇಕಾದ ತುರ್ತಿದೆ. ಮನಸ್ಸಿನೊಟ್ಟಿಗೆ ದೇಹವೂ ಅದಕ್ಕೆ ಸ್ಪಂದಿಸಲೇಬೇಕಿದೆ. ಹಾಗಾಗಿ ನಮ್ಮನಮ್ಮ ಆಹಾರಾಭ್ಯಾಸವೇ ನಮ್ಮ ಮೈಮನಸು
ಗಳನ್ನೀಗ ಕಾಯಬೇಕಿದೆ, ಸಿದ್ಧಗೊಳಿಸಬೇಕಿದೆ.

ವ್ಯಕ್ತಿಯ ಆರೋಗ್ಯ, ಅಭ್ಯುದಯ, ನಡೆ-ನಿಲುವು ಮತ್ತು ಕ್ರಿಯಾಶೀಲತೆಗೆ ಅಗತ್ಯವಾದ ಶಕ್ತಿ ಮತ್ತು ಸತ್ವಗಳು ಒದಗುವುದು ಅವನು ತಿನ್ನುವ ಆಹಾರ, ಮೂಡುವ ಚಿಂತನೆ, ಮಾಡುವ ಕೆಲಸಗಳಿಂದ. ಹೀಗಾಗಿ, ಆಹಾರವು ಬಹುಮುಖ್ಯವಾಗಿ ಒಳಗೊಂಡಿರ
ಬೇಕಾದದ್ದು ಪೋಷಕಾಂಶಗಳನ್ನು. ಆದರೆ, ನಾವೀಗ ನಾಲಿಗೆ ಚಪಲಕ್ಕಾಗಿ ತಿನ್ನುತ್ತಿರುವ ಅದೆಷ್ಟೋ ಆಹಾರ ಪದಾರ್ಥಗಳು ದೇಹವನ್ನು ಗಾಸಿಗೊಳಿಸುವಂತಹ ವಿಷಕಾರಿಗಳು.

ಇತ್ತೀಚಿನ ಆತಂಕವೇನೆಂದರೆ, ನಮ್ಮ ಮೆನುವಿನಲ್ಲಿ ದೇಹಕ್ಕೆ ಅಗತ್ಯವೂ ಸ್ವಚ್ಛವೂ ಆಗಿರುವ ಪೋಷಕತ್ವಗಳ ಬದಲಾಗಿ ರೋಗಕಾರಕಗಳು ಮತ್ತು ಹಾನಿಕಾರಕ ರಾಸಾಯನಿಕಗಳೇ ಹೆಚ್ಚೆಚ್ಚು ಸ್ಥಾನ ಪಡೆಯುತ್ತಿರುವುದು! ಪರಿಣಾಮ, ಅವುಗಳನ್ನು ವಿಘಟಿಸಲು ಮತ್ತು ವಿಸರ್ಜಿಸಲು ಜೀರ್ಣನಾಳದ ಅಂಗಾಂಶ ಮತ್ತು ಗ್ರಂಥಿಗಳು ಹರಸಾಹಸವನ್ನೇ ಮಾಡಬೇಕಿರುತ್ತದೆ.

ಕೆಲವೊಮ್ಮೆ ದೇಹದೊಳಗೆ ರಾಸಾಯನಿಕಗಳ ಪ್ರತಿಕ್ರಿಯೆಗಳಿಂದ ಮುಖ್ಯವಾಗಿ ಜೀರ್ಣನಾಳ, ಯಕೃತ್ತು ಮತ್ತು ಕಿಡ್ನಿ ಹಾನಿಗೊಳಗಾಗುತ್ತವೆ. ಹಾಗಾಗಿ, ಮನುಷ್ಯನನ್ನು ಆನುವಂಶೀಯ ದೋಷ ಮತ್ತು ಬಾಹ್ಯ ರೋಗಾಣುಗಳಿಗಿಂತ ಹೆಚ್ಚು ಬಾಧಿಸುತ್ತಿರುವುದು ವಿಷಯುಕ್ತ ಆಹಾರ ಸೇವನೆಯ ಪರಿಣಾಮವೇ. ಆಹಾರೋತ್ಪಾದನೆಯ ವಿವಿಧ ಹಂತಗಳಾದ ಬೀಜ ಮೊಳೆಯುವ, ಗಿಡ ಬೆಳೆಯುವ, ಫಸಲು ಪಡೆಯುವ, ಸಂಸ್ಕರಣೆ, ಶೇಖರಣೆ, ಸಾಗಣೆ ಮತ್ತು ವಿತರಣಾ ಹಂತಗಳಲ್ಲೆಲ್ಲಾ ಆಹಾರವು ವಿಷಮಯಗೊಳ್ಳುತ್ತಿದೆ. ಕಲಬೆರಕೆಯದ್ದು ಬಹುದೊಡ್ಡ ಸಮಸ್ಯೆ. ಆರೋಗ್ಯವೇ ಭಾಗ್ಯವೆಂದು ಅರಿತಾದ ಮೇಲೆ ಆಹಾರ ಮತ್ತು ಔಷಧಕ್ಕೆಂದು ನಾವೆಲ್ಲ ದುಪ್ಪಟ್ಟು ಹಣ ವಿನಿಯೋಗಿಸುತ್ತಿದ್ದೇವೆ. ಅತ್ಯಾಧುನಿಕ ಆಸ್ಪತ್ರೆ ಸೌಲಭ್ಯಗಳ ಹೊರತಾಗಿಯೂ ಸಾರ್ವಜನಿಕ ಆರೋಗ್ಯದ ಮಟ್ಟವೀಗ ಕುಸಿದಿದೆ. ಮಾತ್ರೆ-ಔಷಧದ ರೂಪದಲ್ಲಿ ಪಡೆಯಬೇಕಾದ ನಿಗದಿತ ಪ್ರಮಾಣದ ರಾಸಾಯನಿಕ
ಗಳನ್ನು ಎಚ್ಚರಿಕೆ ತಪ್ಪಿ ಬಳಸಿದಲ್ಲಿ, ಆರೋಗ್ಯ ಹದಗೆಡಲು ಔಷಧಿಯೇ ಒಂದು ಕಾರಣವಾಗಿಬಿಡುವ ಸಾಧ್ಯತೆ ಇರುತ್ತದೆ. ಮೂಲಭೂತ ಹಕ್ಕಾಗಿ ದಕ್ಕಬೇಕಿದ್ದ ಆರೋಗ್ಯ ವ್ಯವಸ್ಥೆಯು ದಂಧೆಯಾಗಿ ಬದಲಾದ ನಂತರ, ಅನವಶ್ಯಕ ಪರೀಕ್ಷೆ- ಔಷಧೋಪಚಾರಗಳಿಗೆ ಬಡಪಾಯಿಗಳನ್ನು ನೂಕುವ ಪರಿಪಾಟವೂ ಹೆಚ್ಚಿದೆ. ಮಾತ್ರೆಗಳನ್ನು ಉಪಾಹಾರದಂತೆ, ಉಪಾಹಾರವನ್ನು ಮಾತ್ರೆಗಳಂತೆ ಸೇವಿಸುತ್ತಿರುವ ವಿಚಿತ್ರ ಕಾಲಘಟ್ಟವಿದು.

ಜೀರ್ಣಾಂಗದ ಮಹತ್ವವನ್ನು ಸಾರುವ ಸಲುವಾಗಿ 1958ರ ಮೇ 29ರಂದು ಪ್ರೊ. ಹೆನ್ರಿ ಕೋವೆನ್ ಮುಂದಾಳತ್ವದಲ್ಲಿ ನಡೆದ ಪ್ರಥಮ ವಿಶ್ವಮಟ್ಟದ ‘ಗ್ಯಾಸ್ಟ್ರೋಎಂಟೆರಾಲಜಿ’ ಸಮಾವೇಶದ ಸ್ಮರಣಾರ್ಥ 2003ರಿಂದ ಈಚೆಗೆ ಪ್ರತಿವರ್ಷವೂ ಮೇ 29ರಂದು ‘ಅಂತರರಾಷ್ಟ್ರೀಯ ಜೀರ್ಣಾಂಗ ಆರೋಗ್ಯದ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಮನುಷ್ಯನನ್ನು ಕಾಡುವ ರೋಗಗಳಲ್ಲಿ ಜೀರ್ಣಾಂಗ ಸಂಬಂಧಿ ರೋಗಗಳದ್ದೇ ಸಿಂಹಪಾಲು. ಬುದ್ಧಿವಂತರೆನಿಸಿಕೊಂಡ ನಾವು ಆರೋಗ್ಯಕರ ಬದುಕಿಗೊಂದು ‘ಆಹಾರ ಪ್ರಜ್ಞೆ’ ಹೊಂದಬೇಕು. ಹಾಗಾಗಿ, ಜೀರ್ಣಾಂಗ ಸ್ವಾಸ್ಥ್ಯದ ನೆಪದಲ್ಲಿ ದೈಹಿಕ ಕ್ಷಮತೆ ಕಾಪಾಡುವುದು, ಅತಿಯಾದ ಧೂಮಪಾನ, ಮದ್ಯಸೇವನೆ ತಡೆಯುವುದು, ಮಾಂಸಾಹಾರವನ್ನು ಮಿತಿಗೊಳಿಸುವುದು, ಆಹಾರದಲ್ಲಿ ರಾಸಾಯನಿಕಗಳನ್ನು ನಿಯಂತ್ರಿಸಿ, ನಾರಿನಾಂಶವನ್ನು ಉತ್ತೇಜಿಸುವುದು ಅವಶ್ಯಕ.

ಫಾಸ್ಟ್‌ಫುಡ್‌ ಮತ್ತು ಜಂಕ್‍ಫುಡ್‍ಗಳು ತಕ್ಷಣದ ಅಗತ್ಯ ಮತ್ತು ಬಾಯಿಚಪಲವನ್ನು ನೀಗುತ್ತವಾದರೂ ಹಾಗೆ ‘ನಿಧಾನ ವಿಷ’ವನ್ನು ಉಣ್ಣುತ್ತಿರುವ ಪರಿಣಾಮವಾಗಿ ದೇಹ ನಂಜಾಗುತ್ತಿದೆ. ಆಹಾರ ಇಲಾಖೆಗೂ ಆಹಾರೋದ್ಯಮದ ಗುಣಮಟ್ಟ ಪರೀಕ್ಷೆಯ ಜವಾಬ್ದಾರಿ ನೆನಪಿದ್ದಂತಿಲ್ಲ. ಒಟ್ಟಾರೆ, ಮನೆಯ ಹೊರಗಿನ ಆಹಾರಾವಲಂಬನೆ ಹೆಚ್ಚಿದಷ್ಟೂ ಆರೋಗ್ಯ ಹದಗೆಡುತ್ತದೆ ಎಂಬುದನ್ನು ನಾವು
ನೆನಪಿಡಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು