ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉದ್ಯಮಶೀಲತೆ: ಭರವಸೆ ಸಾಕೆ?

ಉದ್ಯಮ ನಡೆಸಬಲ್ಲೆ ಎನ್ನುವ ವಿಶ್ವಾಸ ಹೊಂದಿರುವ ಯುವ ಸಮೂಹಕ್ಕೆ ಅಗತ್ಯ ನೆರವು, ಮಾರ್ಗದರ್ಶನ ಲಭ್ಯವಾಗಿಸುವುದು ಸರ್ಕಾರದ ಆದ್ಯತೆಯಾಗಬೇಕಲ್ಲವೇ?
Last Updated 24 ಜನವರಿ 2022, 19:30 IST
ಅಕ್ಷರ ಗಾತ್ರ

‘ಉದ್ಯೋಗ ಕೇಳುವವರಾಗುವ ಬದಲು ಉದ್ಯಮಿಯಾಗಿ... ನೀವೇ ಬೇರೆಯವರಿಗೆ ಉದ್ಯೋಗ ನೀಡಿ...’ ಇದು, ಇತ್ತೀಚಿನ ದಿನಗಳಲ್ಲಿ ನೀತಿ ನಿರೂಪಕರು ಮತ್ತು ಸರ್ಕಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ರಾಜಕೀಯ ನಾಯಕರಿಂದ ಯುವ ಸಮೂಹಕ್ಕೆ ನಿರಂತರವಾಗಿ ರವಾನೆಯಾಗುತ್ತಿರುವ ಸಂದೇಶ.

ಯುವ ಸಮುದಾಯದಲ್ಲಿ ಉದ್ಯಮಶೀಲತೆ ಮೈಗೂಡುವಂತೆ ನೋಡಿಕೊಳ್ಳಲು ನೀತಿ ನಿರೂಪಕರು ವಿಶೇಷ ಮುತುವರ್ಜಿ ವಹಿಸುತ್ತಿರುವುದು ಸ್ವಾಗತಾರ್ಹವೇ ಆದರೂ, ವಾಸ್ತವಿಕ ಸವಾಲುಗಳತ್ತಲೂ ಗಮನಹರಿಸಬೇಕಲ್ಲವೇ? ಉನ್ನತ ಸ್ಥಾನದಲ್ಲಿರುವವರು ಉದ್ಯಮಶೀಲತೆಯನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಲ್ಲವೇ? ಉದ್ಯೋಗಾವಕಾಶಗಳನ್ನು ಎದುರು ನೋಡುತ್ತಿರುವ ಯುವ ಸಮೂಹಕ್ಕೆ ಅರ್ಹತೆಗೆ ತಕ್ಕ ಉದ್ಯೋಗ ದೊರಕಿಸಿ ಕೊಡಲು ಸಾಧ್ಯವಾಗದೆ ಕೆಂಗಣ್ಣಿಗೆ ಗುರಿಯಾಗುವ ಸಂದರ್ಭ ಎದುರಾಗಿರುವಾಗ, ಆಳುವವರಿಂದ ಹೊರಹೊಮ್ಮುವ ಸ್ಫೂರ್ತಿಯ ಮಾತುಗಳು ನಿಜಕ್ಕೂ ನವೋದ್ಯಮಗಳ ಸ್ಥಾಪನೆಗೆ ಅಡಿಗಲ್ಲಾಗಲಿವೆಯೇ?

ಉದ್ಯಮಶೀಲತೆಯ ಉತ್ತೇಜನಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಕನಿಷ್ಠ ತಿಳಿವಳಿಕೆ ಇರುವ ಯಾರಿಗೇ ಆದರೂ ಬಾಯಿ ಮಾತಿನ ಭರವಸೆಗಳಿಗಿಂತ ಮಾರುಕಟ್ಟೆಯಲ್ಲಿನ ವಾಸ್ತವದತ್ತಲೇ ಗಮನ ಹರಿಯುವುದು ಸಹಜವಲ್ಲವೇ?

ಕಳೆದ ಐದಾರು ವರ್ಷಗಳಿಂದ ಭಾರತದಲ್ಲಿ ಉದ್ಯಮ ವಲಯ ಎದುರಿಸುತ್ತಿರುವ ಸವಾಲುಗಳಿಗೂ ಸರ್ಕಾರದ ಕಾರ್ಯವೈಖರಿಗೂ ನೇರ ಸಂಬಂಧ ಕಲ್ಪಿಸಲು ಅನುವಾಗುವ ಹಲವು ಅಂಶಗಳು ಕಣ್ಣೆದುರೇ ಇರುವಾಗಲೂ, ಸರ್ಕಾರವನ್ನು ನಡೆಸುವವರು ಉದ್ಯಮಿಗಳಾಗಿ ಎಂದು ಯುವ ಸಮುದಾಯಕ್ಕೆ ಕರೆ ನೀಡುವುದು ಹೊಣೆಗೇಡಿತನವಲ್ಲವೇ? ಎಲ್ಲರೂ ಉದ್ಯಮಿಗಳಾಗಲು ಸಾಧ್ಯವೇ? ಉದ್ಯಮ ನಡೆಸುವ ಪ್ರಕ್ರಿಯೆಯಲ್ಲಿ ಎದುರಾಗುವ ಆರ್ಥಿಕ, ಸಾಮಾಜಿಕ, ವೈಯಕ್ತಿಕ ಹಾಗೂ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಎಲ್ಲರಲ್ಲೂ ಮೈಗೂಡುವುದು ದುಸ್ತರವೇ ಆಗಿರುವಾಗ, ‘ಉದ್ಯಮಿಯಾಗುವುದು ಮೇಲು, ಉದ್ಯೋಗಿಯಾಗುವುದು ಕೀಳು’ ಎಂಬ ಮನೋಭಾವ ಬಿತ್ತಲು ಹೊರಡುವುದು ಸೂಕ್ತವೇ? ಎಲ್ಲ ರೀತಿಯ ಒತ್ತಡಗಳನ್ನೂ ತಾಳಿಕೊಂಡು ಉದ್ಯಮ ನಡೆಸಬಲ್ಲೆ ಎನ್ನುವ ವಿಶ್ವಾಸ ಹೊಂದಿರುವ ಯುವ ಸಮೂಹಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕಲ್ಲವೇ?

ಆರ್ಥಿಕತೆಯು ಪ್ರಗತಿಪಥದಲ್ಲಿ ದಾಪುಗಾಲಿಡುತ್ತ, ಜನರಲ್ಲಿ ಕೊಳ್ಳುವ ಶಕ್ತಿ ನಿರಂತರವಾಗಿ ಏರುತ್ತಿದ್ದರೆ ಸಹಜವಾಗಿಯೇ ಹೊಸ ಉದ್ಯಮಗಳು ಶುರುವಾಗು ತ್ತವೆ. ಜನರಲ್ಲಿ ಕೊಳ್ಳುವ ಶಕ್ತಿ ಕುಂದಿ ಮಾರುಕಟ್ಟೆ ಯಲ್ಲಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕುಸಿಯ ತೊಡಗಿದರೆ ನವೋದ್ಯಮಗಳ ಸ್ಥಾಪನೆ ಒತ್ತಟ್ಟಿಗಿರಲಿ, ಇರುವ ಉದ್ಯಮಗಳನ್ನು ಉಳಿಸಿಕೊಳ್ಳುವುದೂ ದುಸ್ತರವಾಗುತ್ತದೆ. ನೋಟು ರದ್ದತಿ ಮತ್ತು ಜಿಎಸ್‍ಟಿ ಜಾರಿಯಿಂದ ಮೊದಲೇ ನಲುಗಿದ್ದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ (ಎಂಎಸ್‍ಎಂಇ) ವಲಯ, ಕೊರೊನಾ ಕಾರಣಕ್ಕೆ ಮತ್ತೊಮ್ಮೆ ಏದುಸಿರು ಬಿಡುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿರುವುದರಿಂದ ಸಹಜವಾಗಿಯೇ ಸರಕುಗಳ ಉತ್ಪಾದನಾ ವೆಚ್ಚವೂ ಏರುಗತಿಯಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸೆಣಸಲು ಬೇಕಿರುವ ಗುಣಮಟ್ಟ ಮತ್ತು ಕಡಿಮೆ ಬೆಲೆ ಎಂಬ ಎರಡು ಪ್ರಮುಖ ಅಸ್ತ್ರಗಳಲ್ಲಿ ಒಂದನ್ನು ಸರ್ಕಾರದ ತೆರಿಗೆ ನೀತಿಯ ಕಾರಣಕ್ಕೆ ಉತ್ಪಾದನಾ ವಲಯ ಕಳೆದುಕೊಳ್ಳುತ್ತಿದೆ.ವಾಸ್ತವ ಹೀಗಿರುವಾಗ ಹೊಸ ಉದ್ಯಮ ಸ್ಥಾಪಿಸುವ ಉತ್ಸಾಹ ಮೂಡುವುದಾದರೂ ಹೇಗೆ?

ಒಕ್ಕೂಟ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ ‘ಭಾರತದಲ್ಲೇ ತಯಾರಿಸಿ’ ಎಂಬುದು ಯಶಸ್ಸು ಕಂಡಿದ್ದರೆ, ದೇಶದ ತಯಾರಿಕಾ ವಲಯ ಏಕೆ ಮಂಕಾಗುತ್ತಿತ್ತು? ಉದ್ಯಮ ನಡೆಸಲು ಪೂರಕ ವಾತಾವರಣ ನಿರ್ಮಿಸುವಲ್ಲಿ ಸಮಾಜದ ಆದ್ಯತೆಗಳೂ ಬಹುಮುಖ್ಯ ಪಾತ್ರ ವಹಿಸುತ್ತವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಮುತುವರ್ಜಿ ತೋರುತ್ತ, ಸಮಾಜವೂ ಶಾಂತಿ, ನೆಮ್ಮದಿಯ ಬದುಕನ್ನೇ ಆದ್ಯತೆಯನ್ನಾಗಿಸಿಕೊಂಡಾಗ ಸಹಜವಾಗಿಯೇ ಹೂಡಿಕೆದಾರರು ನಮ್ಮತ್ತ ಸುಳಿಯುತ್ತಾರೆ. ಉದ್ಯಮ ವಲಯದಲ್ಲಿ ಹೂಡಿಕೆ ಹೆಚ್ಚುತ್ತ ಮಾರುಕಟ್ಟೆ ಚಲನಶೀಲವಾಗಿದ್ದರೆ ಸಹಜವಾಗಿಯೇ ಹೊಸ ಉದ್ಯೋಗಾವಕಾಶಗಳೂ ಉದ್ಯಮದ ಕನಸುಗಳೂ ಚಿಗುರೊಡೆಯುತ್ತವೆ.

ತಮ್ಮ ಕೌಟುಂಬಿಕ ಹಿನ್ನೆಲೆಯ ಕಾರಣಕ್ಕೆ ಸಾಮಾಜಿಕ ಬಂಡವಾಳದಿಂದ ವಂಚಿತವಾಗಿರುವ ಯುವ ಸಮೂಹವೇ ಹೆಚ್ಚಿರುವ ನಮ್ಮಲ್ಲಿ, ಮೊದಲ ತಲೆಮಾರಿನ ಉದ್ಯಮಿಗಳನ್ನು ರೂಪಿಸಲು ವಾಸ್ತವಿಕ ನೆಲೆಗಟ್ಟಿನ ಮಾರ್ಗದರ್ಶನದ ಜರೂರತ್ತಿದೆ. ಮೊದಲು ಉದ್ಯೋಗಿಯಾಗಲು ಅಗತ್ಯವಿರುವ ಅವಕಾಶ ಸೃಷ್ಟಿಸಿದರೆ ಆನಂತರ ಉದ್ಯಮಿಯಾಗುವ ಅವರ ಕನಸುಗಳಿಗೆ ರೆಕ್ಕೆ ಮೂಡಲಿದೆ. ಉದ್ಯಮ ಕ್ಷೇತ್ರ ಯಾವುದೇ ಆದರೂ ಬಹಳಷ್ಟು ಪೂರ್ವಸಿದ್ಧತೆ ಮತ್ತು ಪ್ರಾಯೋಗಿಕ ತಿಳಿವಳಿಕೆಯ ಅನುಪಸ್ಥಿತಿಯಲ್ಲಿ ಯಶಸ್ಸು ಗಳಿಸುವುದು ಕಷ್ಟಸಾಧ್ಯ. ವಾಸ್ತವ ಹೀಗಿರುವಾಗ ಬಾಯಿ ಮಾತಿನಲ್ಲಿ ಭರವಸೆ ತುಂಬುವ ಬದಲು ಉದ್ಯಮಶೀಲತೆ ಉತ್ತೇಜಿಸಲು ಅಗತ್ಯವಿರುವ ಬಂಡವಾಳದ ಲಭ್ಯತೆ, ಉದ್ಯಮಸ್ನೇಹಿ ನೀತಿ ಮತ್ತು ಮೂಲಸೌಕರ್ಯ ವೃದ್ಧಿಗೆ ಆಳುವವರು ಆದ್ಯತೆ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT