ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಇರಲಿ ಪುಸ್ತಕದ ಗೂಡು

ಇಂದಿನ ‘ವ್ಯಕ್ತಿಕೇಂದ್ರಿತ’ ಪರಿಸ್ಥಿತಿಯಲ್ಲಿ, ಪ್ರತಿಯೊಂದು ಮನೆಯಲ್ಲೂ ತಮ್ಮದೇ ಆದ ಒಂದು ಪುಟ್ಟ ಗ್ರಂಥಾಲಯವನ್ನು ಇಟ್ಟುಕೊಳ್ಳುವುದು ಬಹಳ ಅಗತ್ಯ
Published 20 ನವೆಂಬರ್ 2023, 0:30 IST
Last Updated 20 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಗ್ರಂಥಾಲಯ ಸಪ್ತಾಹವು ನಿತ್ಯದ ಹಬ್ಬವಾಗಲಿ’ ಎಂಬ ಆಶಯವುಳ್ಳ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ, ನ. 17) ತುಂಬ ಮೌಲಿಕವಾದುದಾಗಿದೆ. ಅಂತೆಯೇ ‘ಮನೆಯೇ ಮಂತ್ರಾಲಯ...’ ಎನ್ನುವ ಹಾಗೆ ಪ್ರತಿ ಮನೆಯೂ ಒಂದು ಪುಟ್ಟ ಗ್ರಂಥಾಲಯ ಆಗಬೇಕಾಗಿದೆ. ಇತ್ತೀಚೆಗೆ ಹಲವು ಲಕ್ಷ, ಕೋಟಿಗಳಷ್ಟು ಖರ್ಚು ಮಾಡಿ ವಿನೂತನ ವಿನ್ಯಾಸದೊಂದಿಗೆ ಮನೆಯನ್ನು ಕಟ್ಟುವುದು, ನಂತರ ವೈಭವದ ಗೃಹಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂಧು-ಬಳಗವನ್ನು ಆಹ್ವಾನಿಸಿ, ಸಂಭ್ರಮಿಸುವುದು ಸಾಮಾನ್ಯ ಸಂಗತಿಯಾಗಿದೆ. ಐಷಾರಾಮಿ ಪೀಠೋಪಕರಣ ಕೂಡ ಇರುತ್ತದೆ. ಆದರೆ ಪುಸ್ತಕಗಳ ಗೂಡಿಗೆ ಅವಕಾಶವೇ ಇರುವುದಿಲ್ಲ. ಕನಿಷ್ಠ ತಾವು ಖುಷಿಯಿಂದ ಅಭ್ಯಾಸ ಮಾಡಿದ ಕೆಲವು ಪಠ್ಯಪುಸ್ತಕಗಳಾದರೂ ಇರುವುದಿಲ್ಲ.

ಬಿ.ಆರ್.ಅಂಬೇಡ್ಕರ್ ಅವರು, ‘ಪುಸ್ತಕಗಳಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ’ ಎಂದಿದ್ದಾರೆ. ಈ ಮಾತಿನ ಅರ್ಥ ಅನೇಕರಿಗೆ ಆಗಿರುವುದೇ ಇಲ್ಲ. ಮನೆ ಎಂದರೆ ಭೋಗದ ಕೇಂದ್ರವಷ್ಟೇ ಅಲ್ಲ ಜ್ಞಾನದ ಕೇಂದ್ರವೂ ಆಗಬೇಕಾಗಿದೆ. ‘ನಹಿ ಜ್ಞಾನೇನ ಸದೃಶಂ, ಪವಿತ್ರಂ’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಕುವೆಂಪು ಅವರು, ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು...’ ಎಂದಿದ್ದಾರೆ. ಜ್ಞಾನದಾಹದ ಬಿತ್ತನೆ ಮನೆಯಲ್ಲಿಯೇ ಆರಂಭವಾಗಬೇಕು. ಮನೆಯಲ್ಲಿನ ಹಿರಿಯರಲ್ಲಿ ಅಧ್ಯಯನದ ಅಭಿರುಚಿ ಇದ್ದರೆ ಮಕ್ಕಳಲ್ಲೂ ಓದುವ ಆಸಕ್ತಿ ತನಗೆ ತಾನೇ ಚಿಗುರುತ್ತದೆ.

ಪ್ರತಿ ಮನೆಗೂ ಕನ್ನಡದ ದೈನಿಕ ನಿತ್ಯ ಒಂದಾದರೂ ಬರಬೇಕು. ಅದರಿಂದ, ನಾವು ಕೂಪಮಂಡೂಕಗಳಾಗದೆ ಸಮಕಾಲೀನ ಸಂದರ್ಭದ ಜ್ಞಾನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಜ್ಞಾನವು ಪ್ರಜ್ಞೆಯಾಗಿ ಪರಿಣಮಿಸಬೇಕಾದರೆ ಸಾಪ್ತಾಹಿಕ, ಪಾಕ್ಷಿಕ, ಮಾಸಿಕಗಳನ್ನು ಕೊಂಡು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇವುಗಳ ಜೊತೆಗೆ ಮಹಾನ್ ವ್ಯಕ್ತಿಗಳ ಜೀವನಚರಿತ್ರೆ, ವಿಚಾರಗಳನ್ನು ತಿಳಿಸುವ ಪುಸ್ತಕಗಳು, ರಾಮಾಯಣ, ಮಹಾ ಭಾರತದಂತಹ ಸೃಜನಶೀಲ ಗ್ರಂಥಗಳು, ಅವರವರ ಆಸಕ್ತಿಗೆ ಅನುಗುಣವಾದ ಕೃತಿಗಳನ್ನು ಮನೆಯಲ್ಲಿ ತಂದು ಇಟ್ಟುಕೊಂಡು ಆಗಾಗ ಓದುತ್ತಿರುವುದರಿಂದ ಜ್ಞಾನದ ಆಳ-ಅಗಲದ ಪರಿಚಯವಾಗುತ್ತದೆ. ತನ್ಮೂಲಕ ಜೀವನಮೌಲ್ಯಗಳನ್ನು, ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಪ್ರತಿಯೊಂದು ಮನೆಯಲ್ಲೂ ಅವರದೇ ಆದ ಒಂದು ಪುಟ್ಟ ಗ್ರಂಥಾಲಯವನ್ನು ಇಟ್ಟುಕೊಳ್ಳುವುದು ಇಂದಿನ ‘ವ್ಯಕ್ತಿಕೇಂದ್ರಿತ’ ಪರಿಸ್ಥಿತಿಯಲ್ಲಿ ಬಹಳ ಅಗತ್ಯ.

ಇಂದು ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ಗಳಲ್ಲಿ ಅನೇಕ ಮಾಹಿತಿಗಳು ಲಭ್ಯವಾಗುತ್ತವಾ
ದರೂ ನಮಗೆ ಅಗತ್ಯವಿರುವ ನಿರ್ದಿಷ್ಟ ಮಾಹಿತಿ ಮತ್ತು ಸಮಗ್ರವಾದ ವಿವರಣೆ ಸಿಗುತ್ತದೆ ಎಂದುಕೊಳ್ಳ
ಲಾಗದು. ಕೆಲವು ವೇಳೆ ಅಂತರ್ಜಾಲದಲ್ಲಿ ದೊರೆಯುವ ಮಾಹಿತಿಯು ಖಚಿತ ಹಾಗೂ ನಂಬಲರ್ಹ ಎಂದೂ ಹೇಳಲಾಗದು. ಎಲ್ಲರೂ ಗ್ರಂಥಾಲಯಗಳಿಗೆ ಹೋಗುವುದಾಗಲೀ ಅಲ್ಲಿ ನಮಗೆ ಬೇಕಾದ ಪುಸ್ತಕವನ್ನು ಹುಡುಕುವುದಾಗಲೀ ತುಂಬ ಕಷ್ಟದ ಕೆಲಸವಾಗುತ್ತದೆ. ಆದ್ದರಿಂದ ಅವರವರ ಆಸಕ್ತಿಯ, ಅಗತ್ಯದ ಪುಸ್ತಕಗಳನ್ನು ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಂಡು ಓದುವುದು ಸುಲಭವಾದೀತು. ಆಗ ಓದು ನಿರಂತರವಾಗಿ ಸಾಗುತ್ತದೆ, ತಮ್ಮ ಬಿಡುವಿನ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲೂ ಸಾಧ್ಯವಾಗುತ್ತದೆ.

ಕುಟುಂಬದ ಒಟ್ಟು ವರಮಾನದ ಶೇ 1– 2 ರಷ್ಟನ್ನು ಮಾತ್ರ ಪುಸ್ತಕಗಳನ್ನು ಕೊಂಡುಕೊಳ್ಳಲು ಮೀಸಲಿಟ್ಟರೂ ಒಳ್ಳೆಯ ಗ್ರಂಥಾಲಯವನ್ನು ರೂಪಿಸಿ ಕೊಳ್ಳಬಹುದು (ಪುಸ್ತಕ ಪ್ರದರ್ಶನಗಳಲ್ಲಿ ವಿಶೇಷ ರಿಯಾಯಿತಿ ಇರುತ್ತದೆ. ರಸ್ತೆಬದಿ ಕೆಲವರು ಅರ್ಧಬೆಲೆಗೆ ಮಾರುತ್ತಿರುತ್ತಾರೆ). ಎಷ್ಟೋ ಮಂದಿ ಮಕ್ಕಳ ಚಪ್ಪಲಿ, ಬೂಟುಗಳಿಗೆಂದು, ಹೋಟೆಲ್ಲು-ಸಿನಿಮಾಗಳಿಗೆಂದು ಇದಕ್ಕಿಂತ ಹೆಚ್ಚು ಮೊತ್ತವನ್ನು ಖರ್ಚು ಮಾಡುತ್ತಾರೆ. ಆದರೆ ಪುಸ್ತಕಗಳಿಂದ ಸಿಗುವ ಜ್ಞಾನ, ಆನಂದ ಬೇರೆ ಯಾವುದರಿಂದಲೂ ಸಿಗಲಾರದೆಂಬ ಸತ್ಯ ಅನೇಕರಿಗೆ ತಿಳಿಯದು.

ನಮ್ಮಲ್ಲಿ ಅನೇಕರು ಪದವಿ, ಸ್ನಾತಕೋತ್ತರ ಪದವಿ ಪಡೆದವರಾಗಿದ್ದರೂ ಸಾಮಾಜಿಕ, ರಾಜಕೀಯ ಪರಿಜ್ಞಾನದ ಕೊರತೆಯಿಂದ ಕೂಡಿದವರಾಗಿರುತ್ತಾರೆ. ಅಷ್ಟೇ ಅಲ್ಲದೆ ನಾನಾ ಮೂಢನಂಬಿಕೆ
ಗಳಿಂದ ಬದುಕನ್ನು ದುರ್ಭರಗೊಳಿಸಿಕೊಂಡಿರುತ್ತಾರೆ. ನೆಮ್ಮದಿಗಾಗಿ ಕಂಡಕಂಡ ಜ್ಯೋತಿಷಿಗಳ ಮೊರೆ ಹೋಗಿ ದಾರಿ ತಪ್ಪಿ ಅಲೆಯುತ್ತಿರುತ್ತಾರೆ. ಸರಳ ಬದುಕಿನ ಮೌಲ್ಯ ಹಾಗೂ ವೈಚಾರಿಕ ಚಿಂತನೆಗಳ ಬಗ್ಗೆ ಆತ್ಮವಿಶ್ವಾಸ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಸ್ವಾಧ್ಯಾಯದಿಂದ ಇಂತಹ ಗೊಂದಲಗಳಿಂದ ಪಾರಾಗಬಹುದು. ‘ಸ್ವಾಧ್ಯಾಯಾನ್ನ ಪ್ರಮದಿತವ್ಯಂ, ಧರ್ಮಾನ್ನ ಪ್ರಮದಿತವ್ಯಂ’ (ಸ್ವ ಅಧ್ಯಯನ
ವನ್ನು ಬಿಡಬೇಡ, ಧರ್ಮವನ್ನು ಬಿಡಬೇಡ) ಎಂಬ ಋಷಿವಾಕ್ಯಗಳು ಇದನ್ನು ಸಮರ್ಥಿಸುತ್ತವೆ.

‘ನಿನಗೆ ನೀನೇ ಬೆಳಕು’ ಎಂಬುದು ಬುದ್ಧನ ಕೊನೆಯ ಮಾತು. ‘ಅರಿವೇ ಗುರು’ ಎಂಬುದು ಅಲ್ಲಮನ ನುಡಿ. ಹೀಗಾಗಿ, ನಮ್ಮ ಸಮಾಜವನ್ನು ಭಯಂಕರವಾಗಿ ಆವರಿಸಿರುವ ಅಜ್ಞಾನ ಹೋಗಬೇಕಾದರೆ, ಎಲ್ಲರೂ ತಮಗೆ ತಾವೇ ನಿಜವಾದ ಜ್ಞಾನದ ಕಡೆ ಹೆಜ್ಜೆ ಹಾಕಬೇಕಾಗಿದೆ. ಬಿಡುವಿಲ್ಲದೆ ದುಡಿದುಡಿದು ದಣಿಯುತ್ತಿರುವ ಯುವಕರು ಮತ್ತು ಇತರರಿಗೆ, ಜ್ಞಾನದ ಕಣಜಗಳಾಗಿರುವ ಒಳ್ಳೆಯ ಪುಸ್ತಕಗಳು ದಾರಿ ಸೂಚಿಸುವ ಕೈಮರಗಳಾಗುತ್ತವೆ. ಆದ್ದರಿಂದ ಒಂದೊಂದು ಮನೆಯೂ ಒಂದು ಪುಟ್ಟ ಗ್ರಂಥಾಲಯ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT