ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹಳಿಗಳ ಮೇಲೆ ಪ್ರಾಣಬಿಟ್ಟ ಕಾರ್ಮಿಕರನ್ನು ಶಂಕಿಸಿದ್ದು ಕ್ರೂರ ವ್ಯಂಗ್ಯ

ಅರೆಬೆಂದ ಚಪಾತಿ ಹೇಳುವುದೇನು? ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಕೊನೆಯಿಲ್ಲವೇ?
Last Updated 13 ಮೇ 2020, 1:29 IST
ಅಕ್ಷರ ಗಾತ್ರ

‘ದಿ ಗಾಡ್ಸ್ ಮಸ್ಟ್‌ ಬಿ ಕ್ರೇಜಿ’ ಎಂಬ ಇಂಗ್ಲಿಷ್‌ ಚಲನಚಿತ್ರದ ಬುಡಕಟ್ಟು ನಾಯಕ ಕ್ಸಿ, ಒಂದು ಮೇಕೆಯನ್ನು ಬೇಟೆಯಾಡುತ್ತಾನೆ. ಅದನ್ನು ಕಾಯುತ್ತಿದ್ದ ಕುರುಬರ ಹುಡುಗನಿಗೂ ಬಂದು ತನ್ನ ಪಾಲನ್ನು ತಿನ್ನುವಂತೆ ಆಹ್ವಾನಿಸುತ್ತಾನೆ. ಆದರೆ ಆ ಹುಡುಗ ಸೈಕಲ್ ತುಳಿದುಕೊಂಡು ಏನೇನೋ ಗೊಣಗುತ್ತ ಕೋಪದಲ್ಲಿ ಅಲ್ಲಿಂದ ಹೊರಟುಹೋಗುತ್ತಾನೆ. ಕ್ಸಿಗೆ ಆ ಹುಡುಗ ಏನೆನ್ನುತ್ತಾನೆಂಬುದೇ ಗೊತ್ತಾಗದೆ ಮಾಂಸ ಸುಡಲು ತಯಾರಿ ನಡೆಸುತ್ತಾನೆ. ಆದರೆ ಆ ಹುಡುಗ ವಾಪಸ್‌ ಬಂದದ್ದು ಪೊಲೀಸ್‌ ಜೀಪಿನೊಂದಿಗೆ. ಪೊಲೀಸರನ್ನು ನೋಡಿ ವಿಚಲಿತನಾಗದ ಕ್ಸಿ, ಅವರಿಗೂ ಊಟ ಮಾಡಲು ವಿನಂತಿಸುತ್ತಾನೆ. ಆದರೆ ಕೋಪದಲ್ಲಿದ್ದ ಪೊಲೀಸ್‌, ಆ ಬೇಟೆಯನ್ನೆತ್ತಿ ಜೀಪಿನ ಮೇಲೆ ಹಾಕಿಕೊಂಡಾಗ, ಕ್ಸಿ ಇನ್ನೊಂದು ಮೇಕೆಯನ್ನು ಬೇಟೆಯಾಡಲು ಮುಂದಾಗುತ್ತಾನೆ. ಪೊಲೀಸ್‌ ಇವನ ಮೇಲೆ ಫೈರಿಂಗ್ ಮಾಡಿ, ಸ್ಟೇಷನ್ನಿಗೆ ಕರೆದೊಯ್ದು, ಕೋರ್ಟಿಗೆ ಹಾಜರುಪಡಿಸಿ ಮತ್ತೆ ಅವನನ್ನು ಮಾಮೂಲಿ ಸ್ಥಿತಿಗೆ ಮರಳಿಸಿದರು ಎನ್ನುವಲ್ಲಿಗೆ ಕತೆ ಕೊನೆಗೊಳ್ಳುತ್ತದೆ.

ಕೋರ್ಟಿನಲ್ಲಿ ಸಾಕ್ಷ್ಯ ನುಡಿಯುವಾಗ ಕೂಡ ಕ್ಸಿ ಪೊಲೀಸ್‌ ಮೇಲೆ ಆರೋಪ ಹೊರಿಸುತ್ತ, ಇವನು ತನ್ನ ಪಾಲಿನ ಬೇಟೆಯನ್ನು ಕಿತ್ತುಕೊಂಡ ಎಂದೇ ಆರೋಪಿಸುತ್ತಾನೆ. ಆದರೆ ಸದಾ ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಾಡಿ, ಆ ದಿನದ ಆಹಾರವನ್ನು ಅಂದೇ ಸಂಪಾದಿಸಿ ತನ್ನವರ ಕೂಡು ಕುಟುಂಬದೊಂದಿಗೆ ನೆಮ್ಮದಿಯಿಂದ ಇದ್ದವನನ್ನು ಈ ನಾಗರಿಕ ಲೋಕ ಜೈಲಿಗಟ್ಟುವುದು ಈ ಚಿತ್ರ ನೋಡುವವರಿಗೆ ಒಂದು ಕ್ರೌರ್ಯವಾಗಿ ಕಾಣುತ್ತದೆ. ಜೈಲಿನಲ್ಲಿ ಅನ್ನಾಹಾರ, ನೀರು ತ್ಯಜಿಸಿ ಮುದುಡಿಕೊಂಡು, ಒಂದು ಚಿಕ್ಕ ಬೆಳಕಿಂಡಿಯಿಂದ ಬರುವ ಬೆಳಕಿನ ಕೋಲುಗಳನ್ನೇ ತನ್ನ ಎಂದಿನ ಮಂದಸ್ಮಿತ ಮುಖದಿಂದ ನೋಡುವಾಗ, ಇವನೊಂದು ವಿಷಾದ ಆದರೂ ಅದ್ಭುತ ಕಲಾಕೃತಿಯಂತೆ ಇಡೀ ಚಿತ್ರದುದ್ದಕ್ಕೂ ವೀಕ್ಷಕರ ಅನುಕಂಪ ಗಿಟ್ಟಿಸಿಕೊಳ್ಳುತ್ತಾನೆ. ಆ ಜೈಲಿನಲ್ಲಿ ಆ ಕ್ಷಣಕ್ಕೆ ಅವನಿಗೆ ಬೇಕಿರುವುದು ಊಟ ಅಲ್ಲ, ತನ್ನವರನ್ನು ಕಾಣುವ ಹಂಬಲ ಮಾತ್ರ. ಹಕ್ಕಿಯಂತೆ ಹಾರುವ ತನ್ನ ಸ್ವಚ್ಛಂದ ಬದುಕಿನ ಹಂಬಲ.

ಮಹಾರಾಷ್ಟ್ರದ ಔರಂಗಾಬಾದ್‌ ಬಳಿ ಮೊನ್ನೆ ರೈಲು ಹಾಯ್ದು 16 ಜನ ಪ್ರಾಣತೆತ್ತ ಸುದ್ದಿ ಬಂದಾಗ, ಈ ವಲಸೆ ಕಾರ್ಮಿಕರು ಯಾಕೆ ಎಲ್ಲಾ ಬಿಟ್ಟು ಹಳಿಯ ಮೇಲೇ ಮಲಗಿದರು ಎಂಬ ಪ್ರಶ್ನೆ ಎಲ್ಲರಂತೆ ನನ್ನನ್ನೂ ಕಾಡಿತ್ತು‌. ಮರುದಿನ ಪತ್ರಿಕೆ ಓದಿದಾಗ ಗೊತ್ತಾಗಿದ್ದೇನೆಂದರೆ, ಅವರು ಪೊಲೀಸರ ಕಣ್ತಪ್ಪಿಸಿ ಊರಿಗೆ ಹೊರಡಲು ಇಡೀ ರಾತ್ರಿ ರೈಲು ಹಳಿಗಳ ಜೊತೆಗೆ ಹೆಜ್ಜೆ ಹಾಕಿದ್ದರು. ಆ ಹಳಿಗಳು ರಾತ್ರಿಯ ಕಗ್ಗಾಡಿನಲ್ಲಿ ತಮ್ಮ ಊರಿನ ದಾರಿಯನ್ನು ತಪ್ಪಿಸಲಾರವು ಹಾಗೂ ಪೊಲೀಸರು ಹಿಡಿದು ಕ್ವಾರಂಟೈನ್ ಮಾಡಲಾರರು, ಹಾಗೊಂದುವೇಳೆ ಕ್ವಾರಂಟೈನ್ ಆಗುವುದೇ ಇದ್ದರೆ ತಮ್ಮ ಊರಿನಲ್ಲೇ ಆಗಬಹುದೆಂಬ ನಿರೀಕ್ಷೆ ಅವರಲ್ಲಿತ್ತು. ದಣಿವಾರಿಸಿಕೊಳ್ಳಲು ಕುಳಿತವರು ಹಾಗೆಯೇ ನಿದ್ರೆಗೆ ಜಾರಿ ಹೆಣವಾದರು. ಅಂತಹವರೆಡೆಗೆ ಲೋಕ ಕಣ್ಣೀರು ಮಿಡಿಯುವುದರ ಬದಲಾಗಿ, ಅನುಮಾನದ ದೃಷ್ಟಿಯಿಂದಲೇ ನೋಡಿದ್ದು ಒಂದು ಕ್ರೂರ ವ್ಯಂಗ್ಯ.

ಯಾವುದೇ ಮನುಷ್ಯನಿಗೆ ಕಷ್ಟಗಳು ಎದುರಾದಾಗ ಮೊದಲು ನೆನಪಾಗುವುದು ತನ್ನ ಹೆತ್ತವರು, ತನ್ನ ಊರು, ಬಂಧುಬಳಗ. ಲಾಕ್‌ಡೌನ್ ಇವರಲ್ಲಿ ಎಷ್ಟು ಭಯ ಹುಟ್ಟಿಸಿತ್ತೆಂದರೆ, ಸದ್ಯ ತಮ್ಮ ಊರು ಮುಟ್ಟಿದರೆ ಸಾಕು ಎನ್ನುವಷ್ಟರಮಟ್ಟಿಗಿನ ಆತಂಕ. ಈ ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ ಕೈಯಲ್ಲಿ ಕೆಲಸವಿಲ್ಲ, ಕೆಲಸವಿಲ್ಲದೆ ಸಂಬಳವಿಲ್ಲ, ಸಂಬಳವಿಲ್ಲದೆ ಊಟವಿಲ್ಲ. ಅವರಿವರು ಕೊಟ್ಟ ಊಟದಿಂದ ಹೇಗೋ ದಿನ ದೂಡಿದರೂ ಮನೆಯವರನ್ನು ನೆನಪಿಸಿಕೊಂಡು ಇವರು ಪೊಲೀಸರ ಕಣ್ಣು ತಪ್ಪಿಸಿ ಕಳ್ಳದಾರಿ ಹಿಡಿದದ್ದು ಕಾನೂನಿನ ನೆಲೆಯಲ್ಲಿ ತಪ್ಪಾದರೂ‌ ಮಾನವೀಯ ನೆಲೆಯಲ್ಲಿ ಬೇರೆಯದೇ ಅರ್ಥ ಕೊಡುತ್ತದೆ.

ಹೀಗೆ ಮಹಾನಗರದ ಭವ್ಯ ಕಟ್ಟಡಗಳಿಗೆ ಕಲ್ಲು, ಸಿಮೆಂಟು, ಇಟ್ಟಿಗೆ ಹೊತ್ತು ಉದ್ಯಮಗಳ ಚಕ್ರ ತಿರುಗಲು ಸಾಧ್ಯವಾಗಿಸಿದ ಈ ಕಾರ್ಮಿಕರ ಮನದಿಂಗಿತವನ್ನು ಸರ್ಕಾರ ಅರ್ಥ ಮಾಡಿಕೊಂಡು, ಅವರನ್ನು ಉಚಿತವಾಗಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಇವರು ಸರ್ಕಾರದ ಸಹಾಯಕ್ಕಾಗಿ ಕಾಯದೆ ರೈಲು ಹಳಿಯೆಂಬ ಕಳ್ಳ ದಾರಿ ಹಿಡಿದಿದ್ದು ಯಾಕೆ ಎಂಬ ಬಗ್ಗೆಯೂ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.

ತನ್ನ ಆಹಾರವನ್ನು ತಾನು ಸಂಪಾದಿಸಿಕೊಂಡದ್ದು ತಪ್ಪು ಎಂಬುದು ಕ್ಸಿಗೆ ಅರಿವಾಗಲು ಆತ ನಾಗರಿಕ ಜಗತ್ತನ್ನು ಪ್ರವೇಶಿಸಬೇಕಾಯಿತು. ರೈಲು ಅಪಘಾತಕ್ಕೆ ಬಲಿಯಾದವರಿಗೆ ರೈಲ್ವೆ ಇಲಾಖೆ ಮೊದಲು ‘ಅತಿಕ್ರಮ ಪ್ರವೇಶ’ವೆಂಬ ಕಾರಣಕ್ಕೆ ಕಳ್ಳರಪಟ್ಟ ಕಟ್ಟಿತು. ನಂತರ ಅನುಕಂಪವೆಂಬಂತೆ ಪರಿಹಾರ ಘೋಷಿಸಿತು.

ಆ ರಕ್ತಸಿಕ್ತ ರೈಲು ಹಳಿಗಳು, ಅವುಗಳ ಮೇಲೆ ಬಿದ್ದ ಹರಕು ನೋಟುಗಳು, ಬುತ್ತಿ ಕಟ್ಟಿಕೊಂಡಿದ್ದ ಅರೆಬೆಂದ ಚಪಾತಿಗಳು. ಅವರು ಅಂದು ಹೀಗೆ ಹೆಣವಾಗುವ ದಿನ ಬುದ್ಧಪೂರ್ಣಿಮೆಯ ವೈಶಾಖ ಚಂದ್ರನಿದ್ದ. ಆ ಚಂದ್ರನಂತೆ ಅಲ್ಲಲ್ಲಿ ತುಸು ಕಪ್ಪುಕಲೆ ಹೊತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಪಾತಿಗಳು, ಚೂರಾದ ಚಂದ್ರನಂತೆ ಕಾಣಿಸುತ್ತಿದ್ದದ್ದನ್ನು ನೋಡಿ ಬುದ್ಧ ನಕ್ಕಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT