‘ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವಲ್ಲಿ ನಮ್ಮ ಶಿಕ್ಷಣ ಕ್ರಮ ವಿಫಲವಾಗುತ್ತಿದೆಯೆ?’ ಎಂಬ ಪ್ರಶ್ನೆ ಹಾಗೂ ‘ಭಾಷಾ ಬೋಧನೆಯಲ್ಲಿ ವಿಷಯಕ್ಕೆ ಮಹತ್ವ ನೀಡಿ ಅದನ್ನಷ್ಟೇ ಬೋಧಿಸುವುದು ನಮ್ಮ ಕಲಿಕಾ ಕ್ರಮದಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ’ ಎಂಬ ಅಭಿಪ್ರಾಯ (ಲೇ: ಎಂ.ಜಿ. ರಾಮಚಂದ್ರ, ಜುಲೈ 17), ಸಮಸ್ಯೆಯನ್ನು ಸ್ಪಷ್ಟವಾಗಿಯೇ ಗುರ್ತಿಸಿದೆ. ಆದರೆ, ಸಮಸ್ಯೆ ನಿವಾರಣೆಗೆ ಅವರು ನೀಡಿರುವ, ‘ಕನ್ನಡವನ್ನು ಕಲಿಸುವ ಭಾಷಾ ಶಿಕ್ಷಕ, ತರಗತಿಯಲ್ಲಿ ಪಠ್ಯದಲ್ಲಿನ ವ್ಯಾಕರಣದ ಸಂಗತಿಗಳನ್ನು ಪರಿಚಯಿಸಿದರಷ್ಟೇ ಸಾಲದು; ಪ್ರತ್ಯೇಕವಾಗಿ ವ್ಯಾಕರಣ ಬೋಧನೆಯನ್ನೂ ಮಾಡಬೇಕು’ ಎಂಬ ಪರಿಹಾರವು, ಅವರಿಗಿರುವ ವ್ಯಾಕರಣದ ಮೇಲಿನ ಅರಿವು, ಅಭಿಮಾನವನ್ನು ವ್ಯಕ್ತಪಡಿಸುತ್ತದೆಯೇ ಹೊರತು ಪೂರ್ಣವಾಗಿ ಒಪ್ಪಲಾಗದು.

ವ್ಯಾಕರಣವು ಭಾಷೆಯ ಸ್ವರೂಪದ ಸೂಕ್ಷ್ಮಗಳನ್ನು ಸ್ವಾರಸ್ಯಕರವಾಗಿ ಹಾಗೂ ಆನಂದದಾಯಕವಾಗಿ ನಮಗೆ ಮನವರಿಕೆ ಮಾಡಿಕೊಡುತ್ತದೆ ಎಂಬುದು ನಿರ್ವಿವಾದದ ಸಂಗತಿ. ವ್ಯಾಕರಣದ ಮೊದಲ ಅಧ್ಯಾಯವಾದ ವರ್ಣಮಾಲೆಯೊಂದರಲ್ಲೇ ನಾವು ಅರಿತುಕೊಳ್ಳಬಹುದಾದ ಸಂಗತಿಗಳೇ ನಮಗೆ ನಿಸ್ಸಂಶಯವಾಗಿ ರೋಮಾಂಚನವನ್ನು ಉಂಟು ಮಾಡುತ್ತವೆ. ಆದರೆ, ಭಾಷಾ ಸಾಮರ್ಥ್ಯವನ್ನು ರೂಪಿಸಿಕೊಳ್ಳುವಲ್ಲಿ ವ್ಯಾಕರಣ ಜ್ಞಾನದ ಅನುಕೂಲವನ್ನು ಒದಗಿಸಿಕೊಡಬಹುದೇ ಹೊರತು ಅನಿವಾರ್ಯವಲ್ಲ. ವ್ಯಾಕರಣದ ಗಂಧ– ಗಾಳಿಯೂ ಇಲ್ಲದ ಅನೇಕರು ಉತ್ತಮಮಟ್ಟದ ಭಾಷಾ ಸಾಮರ್ಥ್ಯವನ್ನು ಗಳಿಸಿರುವ ಉದಾಹರಣೆಗಳು ನಮ್ಮಲ್ಲಿವೆ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಗಳಲ್ಲಿ ಪಠ್ಯಪುಸ್ತಕಗಳಲ್ಲಿರುವ ಗದ್ಯ, ಪದ್ಯಗಳ ಅರ್ಥವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆಯೇ ಹೊರತು, ಭಾಷಾ ಕೌಶಲಗಳ ಬೆಳವಣಿಗೆಗೆ ಪೂರಕವಾಗಿ ಬೋಧನೆ ಮಾಡುತ್ತಿಲ್ಲ. ಮಕ್ಕಳು ಭಾಷೆಯನ್ನು ಕಲಿಯುವ ರೀತಿ, ಇದಮಿತ್ಥಂ ಎಂದು ಹೇಳಲಾಗದಷ್ಟು ಆಶ್ಚರ್ಯಕರ ಆಗಿರುತ್ತದೆ. ಒಮ್ಮೆ, ಏನೋ ತರಲೆ ಮಾಡುತ್ತಿದ್ದ ನನ್ನ ಎಲ್.ಕೆ.ಜಿ. ಹಂತದಲ್ಲಿರುವ ಮೊಮ್ಮಗಳಿಗೆ, ‘ಸುಮ್ನಿರು. ಇಲ್ಲಾಂದ್ರೆ ಚೆನ್ನಾಗಿ ಬಂದು ಹೊಡಿತೀನಿ’ ಅಂದದ್ದಕ್ಕೆ ಅವಳು, ‘ಚೆನ್ನಾಗಿ ಬಂದು ಹೊಡಿತೀನಿ ಅನ್ಬಾರದು ತಾತ, ಬಂದು ಚೆನ್ನಾಗಿ ಹೊಡಿತೀನಿ ಅನ್ನಬೇಕು’ ಅಂತ ಕನ್ನಡ ಮೇಷ್ಟ್ರನ್ನೇ ತಿದ್ದಿದ್ದಳು. ಹಾಗಾಗಿ, ಭಾಷಾ ಕಲಿಕೆ ಬಹಳ ವಿಸ್ಮಯವಾಗಿ ಆಗುತ್ತಿರುತ್ತದೆ. ನಾವು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.

‘ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ’ ಎಂಬ ಗಾದೆಯಂತೆ, ಮಾತಾಡ್ತಾ ಇದ್ರೆ ಮಾತು, ಬರೆಯುತ್ತಾ ಇದ್ದರೆ ಬರವಣಿಗೆ ಬರುತ್ತದೆ. ಚರ್ಚಾ ಸ್ಪರ್ಧೆ, ಗದ್ಯ ಪದ್ಯ ವಾಚನ, ಏಕಪಾತ್ರಾಭಿನಯ, ಪ್ರಬಂಧ ರಚನೆ, ಗಾದೆಗಳ ಅರ್ಥ ವಿಸ್ತರಣೆ, ಸಾರಾಂಶ ಬರವಣಿಗೆ, ಗದ್ಯವನ್ನು ಸಂಗ್ರಹಿಸಿ ಬರೆಯುವುದು, ಪ್ರವಾಸ ಕಥನ, ಉಕ್ತಲೇಖನ– ಹೀಗೆ ಹತ್ತು ಹಲವು ಸಾಂದರ್ಭಿಕವಾಗಿ ಹೊಂದಿಕೊಳ್ಳುವಂತಹ ಕ್ರಿಯಾಯೋಜನೆಗಳ ಮೂಲಕ ಮಕ್ಕಳನ್ನು ಭಾಷೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ನಿರಂತರವಾಗಿ ಪ್ರಯತ್ನಿಸುತ್ತಿರಬೇಕು. ಆಗ, ತನಗೆ ತಾನೆ ಮಕ್ಕಳಲ್ಲಿ ಭಾಷೆಯ ಬಗ್ಗೆ ಆಸಕ್ತಿ ಹಾಗೂ ಕಲಿಕೆ ಸಾಧ್ಯವಾಗುತ್ತದೆ.

ಮಕ್ಕಳು ಸಾಮಾನ್ಯವಾಗಿ ವ್ಯಾಕರಣವನ್ನು ಕಬ್ಬಿಣದ ಕಡಲೆ ಎಂದು ಭಾವಿಸುತ್ತಾರೆ. (ನಾವು ಬಿ.ಎ. ಆನರ್ಸ್ನಲ್ಲಿ ಕೇಶಿರಾಜನ ಶಬ್ದಮಣಿದರ್ಪಣವನ್ನು ಅರಿತುಕೊಳ್ಳಲು ಹೆಣಗಾಡುತ್ತಿದ್ದೆವು). ಆದ್ದರಿಂದ, ಪಾಠ ಮತ್ತು ಪದ್ಯಗಳ ಬೋಧನೆಯ ನಡುವೆಯೇ ಬರಬಹುದಾದ ವ್ಯಾಕರಣದ ವಿಶೇಷಗಳನ್ನು ಬಿಡಿಸಿ ಹೇಳಿ ಮಕ್ಕಳಲ್ಲಿ ಕುತೂಹಲವನ್ನು ಉಂಟು ಮಾಡಬೇಕು.

ಭಾಷೆ ನಿಂತ ನೀರಲ್ಲ. ಕಾಲಕಾಲಕ್ಕೆ ಹಲವಾರು ಕಾರಣಗಳಿಂದಾಗಿ ಹೊಸ ಹೊಸ ಪದಗಳು, ನುಡಿಗಟ್ಟುಗಳು, ಶೈಲಿ, ನಿರೂಪಣೆ, ಸಂವಾದಗಳು ಹುಟ್ಟಿಕೊಳ್ಳುತ್ತಿರುತ್ತವೆ. ಅದು ಯಾವ ವ್ಯಾಕರಣ ನಿಯಮಗಳಿಗೂ ಒಳಪಡದೆ ತನ್ನದೇ ಆದ ರೀತಿಯಲ್ಲಿ ವಿನೂತನವಾಗಿ ವಿಕಾಸಗೊಳ್ಳುತ್ತಿರುತ್ತದೆ. ತದನಂತರ ವಯ್ಯಾಕರಣಿಗಳು ಅಲ್ಲಿ ಆಗಿರುವ ತರ್ಕವನ್ನು ಕಂಡುಹಿಡಿಯುತ್ತಾರೆ. ಹೀಗೆಯೇ ಬರೆಯಬೇಕು, ಹೀಗೆಯೇ ಮಾತನಾಡಬೇಕು ಎಂಬ ಕಟ್ಟಳೆಗಳನ್ನು ವಿಧಿಸಿದರೆ, ಯಾವುದೇ ಭಾಷೆಯು ಸಂಸ್ಕೃತದಂತೆ ಜನರಿಂದ ಮರೆಯಾಗುತ್ತದೆ. ಕುವೆಂಪುರವರು ಹೇಳುವ ಹಾಗೆ– ಈ ವ್ಯಾಕರಣ, ಛಂದಸ್ಸು, ಅಲಂಕಾರ ಇತ್ಯಾದಿ ಶಾಸ್ತ್ರಗಳು, ‘ಕಲಿಯುವುದಕೆ ಅಲ್ತು, ಮರೆಯುವುದಕೆ ಕಲ್ತು’ ಎಂಬುದನ್ನು ಅರಿಯಬೇಕಾಗಿದೆ.

ಭಾಷೆಯನ್ನೇ ವಿಶೇಷವಾಗಿ ಅಧ್ಯಯನ ಮಾಡುವವರು ಮತ್ತು ಸಾಹಿತ್ಯಾಭ್ಯಾಸಿಗಳಿಗೆ ವ್ಯಾಕರಣದ ಅಧ್ಯಯನ ಖಂಡಿತವಾಗಿ ಸಹಾಯಕವಾಗುತ್ತದೆ. ಆದರೆ, ಸಾಮಾನ್ಯ ಜನರು ಭಾಷೆಯನ್ನು ಚೆನ್ನಾಗಿ ಕಲಿತರೆ ಸಾಕು.

ಪ್ರತ್ಯೇಕವಾದ ವ್ಯಾಕರಣ ಬೋಧನೆ ಮತ್ತು ವ್ಯಾಕರಣಬದ್ಧ ಬರವಣಿಗೆಯ ನಿರೀಕ್ಷೆ ಮಕ್ಕಳನ್ನು ಭಾಷಾ ಕಲಿಕೆಯಿಂದ ವಿಮುಖರನ್ನಾಗಿ ಮಾಡುತ್ತದೆ. ಭಾವನೆಗಳ, ವಿಚಾರಗಳ ಸಮರ್ಪಕ ಅಭಿವ್ಯಕ್ತಿಗಾಗಲೀ ಅಥವಾ ಗ್ರಹಿಕೆಗಾಗಲೀ ಬೇಕಾಗಿರುವುದು ಪದ ಸಂಪತ್ತು. ವೈಚಾರಿಕತೆ, ಚಿಂತನಶೀಲ ಬುದ್ಧಿಮತ್ತೆ, ನಿರಂತರ ಅಧ್ಯಯನ, ಅನುಭವ ಪ್ರಾಮಾಣ್ಯ ಮುಂತಾದ ಒಳನೋಟಗಳಿಂದಲೂ ಭಾಷಾ ಸಾಮರ್ಥ್ಯ ವಿಕಸನ ಹೊಂದುತ್ತಿರುತ್ತದೆ. ‘ಸ್ವಾಧ್ಯಾಯಾನ್ನಃ ಪ್ರಮದಿತವ್ಯಂ’ (ಸ್ವಂತ ಅಧ್ಯಯನವನ್ನು ಬಿಡಬಾರದು) ಎಂಬ ತೈತ್ತಿರೀಯ ಉಪನಿಷತ್ ಮಾತನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಭಾಷೆಗೂ, ಬದುಕಿಗೂ, ಸಂಸ್ಕೃತಿಗೂ, ಪರಂಪರೆಗೂ ಅವಿನಾಭಾವ ಸಂಬಂಧವಿದೆ. ವ್ಯಾಕರಣವೆಂಬುದು ಅದ್ಭುತವಾದ ಒಂದು ಜ್ಞಾನ. ಆದರೆ, ಎಲ್ಲರಿಗೂ ಅನಿವಾರ್ಯ ಹಾಗೂ ಭಾಷಾ ಸಾಮರ್ಥ್ಯಕ್ಕೆ ಅತ್ಯಗತ್ಯ ಎಂಬುದು ವಾಸ್ತವ ಸಂಗತಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.