ಪ್ರಿಯ ಓದುಗ, ನಮಸ್ಕಾರ
ಪ್ರತಿವರ್ಷ ಆಗಸ್ಟ್ 12ರಂದು ನನ್ನ ಕುರಿತು ವಿಚಾರಸಂಕಿರಣ, ಉಪನ್ಯಾಸ, ನನ್ನಲ್ಲಿರುವ ಪುಸ್ತಕಗಳ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸುತ್ತಾರೆ. ‘ಗ್ರಂಥಪಾಲಕರ ದಿನಾಚರಣೆ’ ಎಂಬ ಹೆಸರಿನಲ್ಲಿ ಇವೆಲ್ಲ ನಡೆಯುತ್ತವೆ. ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಯ ಜನಕ ಎಂದೇ ಖ್ಯಾತರಾದ ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ನಿಮಿತ್ತ ಈ ಎಲ್ಲ ಸಂಭ್ರಮ ಮತ್ತು ಸಡಗರ.
ಗ್ರಂಥಾಲಯಗಳ ಮೂಲಕ ಜ್ಞಾನ ಪ್ರಸಾರದ ಕಾರ್ಯ ಅತ್ಯಂತ ಸುಲಲಿತವಾಗಿ ನಡೆಯಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ರಂಗನಾಥನ್ ನನ್ನ (ಸಾರ್ವಜನಿಕ ಗ್ರಂಥಾಲಯಗಳ) ಕಾರ್ಯನಿರ್ವಹಣೆಗೆ ಒಂದು ವೈಜ್ಞಾನಿಕ ತಳಹದಿಯನ್ನು ನಿರ್ಮಿಸಿದರೇನೋ ಸರಿ. ಆದರೆ ಕಾಲಾನಂತರದಲ್ಲಿ ನಾನು ಸಮಸ್ಯೆಗಳ ಆಗರವಾದೆ. ಗುಣಮಟ್ಟದ ಪುಸ್ತಕಗಳ ಕೊರತೆ, ಪೀಠೋಪಕರಣಗಳ ಕೊರತೆ, ಸುಸಜ್ಜಿತ ಕಟ್ಟಡ ಇಲ್ಲದಿರುವುದು, ಸಿಬ್ಬಂದಿಯ ಕೊರತೆ ಹಾಗೂ ಅವರ ಅಸಮರ್ಪಕ ಕಾರ್ಯನಿರ್ವಹಣೆ, ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಇರುವುದು... ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಪೋಣಿಸಲಾಗುತ್ತಿದೆ.
ಪ್ರಿಯ ಓದುಗ, ಈ ಮೇಲಿನ ಸಮಸ್ಯೆಗಳೆಲ್ಲ ನಿರಾಧಾರ ಎಂದು ನಾನು ವಾದಿಸುತ್ತಿಲ್ಲ. ಸಮಸ್ಯೆಗಳ ಹುತ್ತದಲ್ಲಿ ನಾನು ಮುಳುಗಿ ಹೋಗಿದ್ದೇನೆ. ಪುಸ್ತಕಗಳ ವಿಷಯವಾಗಿ ಹೇಳುವುದಾದರೆ, ಓದಲು ಗುಣಾತ್ಮಕ ಪುಸ್ತಕಗಳು ನನ್ನಲ್ಲಿರುವುದು ಶೇ 30ರಿಂದ 40 ಮಾತ್ರ. ಉಳಿದ ಪುಸ್ತಕಗಳು ಸಂಖ್ಯಾತ್ಮಕ ದೃಷ್ಟಿಯಿಂದ ಖರೀದಿಸಿದವುಗಳೇ ವಿನಾ ಓದಲು ಯೋಗ್ಯವಾಗಿಲ್ಲ. ನನ್ನಲ್ಲಿರುವ ಪುಸ್ತಕಗಳ ರಾಶಿಯನ್ನು ನೋಡಿ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತಕ್ಕಡಿಯಲ್ಲಿ ತೂಗಿ ಖರೀದಿಸುವರೆಂಬ ವಿಡಂಬನಾತ್ಮಕ ಹೇಳಿಕೆ ಚಾಲ್ತಿಯಲ್ಲಿದೆ. ಈ ಮಾತು ಕೇಳಿದಾಗಲೆಲ್ಲ ನಾನು ಅದೆಷ್ಟು ವೇದನೆಯಿಂದ ನರಳಿದ್ದೇನೆಂದು ಗೊತ್ತೇ ನಿನಗೆ?
ಓದಲು ಯೋಗ್ಯವಲ್ಲದ ಪುಸ್ತಕಗಳ ರಾಶಿಯನ್ನು ನನ್ನ ಒಡಲಲ್ಲಿ ತುಂಬುತ್ತಿರುವವರು ಯಾರು ಎಂದು ದೂಷಿಸಲು ನನ್ನಲ್ಲಿ ದೀರ್ಘ ಪಟ್ಟಿಯೇ ಇದೆ. ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕಾಗಿ ರಾಜ್ಯದ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಹೋಬಳಿ ಮತ್ತು ಹಳ್ಳಿಗಳಲ್ಲೂ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಜೊತೆಗೆ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಪರಿಣಾಮವಾಗಿ, ಕನ್ನಡ ಭಾಷೆಯಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಕೆಲವು ಪ್ರಕಾಶಕರಂತೂ ಎರಡು– ಮೂರು ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಪುಸ್ತಕಗಳನ್ನು ಪ್ರಕಟಿಸಿ ಲಾಭ ಮಾಡಿಕೊಳುತ್ತಿದ್ದಾರೆಂಬ ಆರೋಪ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಕಣ್ಣಿದ್ದೂ ಕುರುಡಾಗಿದೆ. ಹಾಗೆಂದು ನಾನು ಎಲ್ಲ ಪ್ರಕಾಶಕರನ್ನೂ
ಕಾಮಾಲೆ ಕಣ್ಣಿನಿಂದ ನೋಡುತ್ತಿಲ್ಲ. ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ನನ್ನಿಂದ ದೂರವೇ ಉಳಿದಿದ್ದಾರೆ.
ಪ್ರಕಾಶಕರ ಹುನ್ನಾರದ ಹಿಂದೆ ನನ್ನ ಇಲಾಖೆಯ ಅಧಿಕಾರಿಗಳ ಪಾತ್ರವಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಪ್ರಕಾಶನ ಸಂಸ್ಥೆಗಳೊಂದಿಗೆ ಒಳಒಪ್ಪಂದಕ್ಕಿಳಿದು ಕಸದ ರಾಶಿಯನ್ನೆಲ್ಲ ನನ್ನ ಒಡಲಲ್ಲಿ ತುಂಬುತ್ತಿದ್ದಾರೆ. ಪುಸ್ತಕ ಆಯ್ಕೆ ಸಮಿತಿಯವರು ತಮಗೆ ನಿಗದಿಪಡಿಸಿದ ಅಲ್ಪ ಸಮಯದಲ್ಲೇ ರಾಶಿ ರಾಶಿ ಪುಸ್ತಕಗಳನ್ನು ನನಗಾಗಿ ಆಯ್ಕೆ ಮಾಡುತ್ತಾರೆ. ಒಂದೆರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಓದುವುದಾದರೂ ಹೇಗೆ ಸಾಧ್ಯ? ಇನ್ನು ಇರುವ ಅಲ್ಪಸಂಖ್ಯೆಯ ಗುಣಾತ್ಮಕ ಪುಸ್ತಕಗಳಾದರೂ ಓದಲು ಓದುಗರಿಗೆ ದೊರೆಯುತ್ತಿವೆಯೇ ಎನ್ನುವ ಪ್ರಶ್ನೆಗೆ ಮತ್ತದೇ ನಿರಾಶಾದಾಯಕ ಉತ್ತರ. ಪುಸ್ತಕಗಳ ಉಪ
ಯೋಗ ಹೆಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಕೂಗು ಕೇಳಿಬರುತ್ತಿದೆ. ಗ್ರಂಥಾಲಯದಲ್ಲಿ ಕೆಲಸದ ವೇಳೆ ಸಿಬ್ಬಂದಿಯ ಅನುಪಸ್ಥಿತಿ ಸಾಮಾನ್ಯವಾಗಿದೆ. ಅದೆಷ್ಟೋ ಸಿಬ್ಬಂದಿಗೆ ನನ್ನಲ್ಲಿರುವ ಪುಸ್ತಕಗಳ ಹೆಸರೇ ಗೊತ್ತಿರುವುದಿಲ್ಲ.
ಹಳ್ಳಿಗರಿಗೂ ಪುಸ್ತಕ ಓದುವ ಭಾಗ್ಯ ದೊರೆಯಲೆಂದು ನನ್ನನ್ನು ಗ್ರಾಮೀಣ ಪ್ರದೇಶಗಳಿಗೂ ಒಯ್ದು ಪ್ರತಿಷ್ಠಾಪಿಸಿದ್ದಾರೆ. ಪುಸ್ತಕಗಳ ಸಂಗ್ರಹದ ವಿಷಯವಾಗಿ ಆಯಾ ಗ್ರಾಮೀಣ ಪ್ರದೇಶಗಳಲ್ಲಿ
ಅಗತ್ಯವಾದ ಓದಿನ ಬೇಕು-ಬೇಡಗಳ ಸಮೀಕ್ಷೆ ಮಾಡಬೇಕು. ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಿಂದ ಬೇಡಿಕೆಯ ಪಟ್ಟಿಯನ್ನು ಪಡೆಯಬೇಕು. ಆದರೆ ಇಲ್ಲಿಯೂ ಇಲಾಖೆಯದು ಸರ್ವಾಧಿಕಾರಿ ಧೋರಣೆ. ದೂರದ ನಗರದಲ್ಲಿ ಕುಳಿತು ತಾವು ಆಯ್ಕೆ ಮಾಡಿ ಕಳುಹಿಸಿದ ಪುಸ್ತಕಗಳನ್ನೇ ನನ್ನಲ್ಲಿನ
ಅಲ್ಮೆರಾಗಳಲ್ಲಿ ತುಂಬುತ್ತಿದ್ದಾರೆ. ಅರೆಕಾಲಿಕ ನೌಕರಿ ಮತ್ತು ಸೀಮಿತ ಸಂಬಳದಿಂದ ಮೇಲ್ವಿಚಾರಕರು ನನ್ನನ್ನು ಸರಿಯಾಗಿ ಪೋಷಿಸುತ್ತಿಲ್ಲ. ಸ್ಥಳೀಯರು ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಪರಿಣಾಮ ಅದೆಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಬಾಗಿಲುಗಳು ಸದಾಕಾಲ ಮುಚ್ಚಿರುತ್ತವೆ.
ಇಷ್ಟೆಲ್ಲ ಅಸಂಗತಗಳ ನಡುವೆ ನಾನಿನ್ನೂ ಉಸಿರಾಡುತ್ತಿರುವೆ. ಈಗ ನನಗಿರುವ ಏಕೈಕ ಆಸರೆ ಎಂದರೆ ಓದುಗ ದೊರೆ ನೀನು ಮಾತ್ರ. ಮೊಬೈಲ್ ವ್ಯಸನಿಯಾದ ನೀನು ಈಗ ನನ್ನನ್ನು ನಿರ್ಲಕ್ಷಿಸುತ್ತಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ತಂತ್ರಜ್ಞಾನದ ಹೊಡೆತಕ್ಕೆ ನಾನು ನಲುಗಿಹೋಗಿದ್ದೇನೆ. ನಾನು ನಶಿಸಿಹೋಗುವ ಮೊದಲು ನನ್ನ ಒಡಲಲ್ಲಿರುವ ಜ್ಞಾನಾಮೃತದ ಧಾರೆ ಸವಿಯಲು ಬಾ. ನಿನ್ನ ಆಗಮನಕ್ಕಾಗಿ ಕಾದಿರುವೆ.
–ಇಂತಿ ನಿನ್ನ ಗ್ರಂಥಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.