ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭಾಷೆ- ‘ವ್ಯವಹಾರ’ದ ನಂಟಷ್ಟೇ ಸಾಕೆ?

ಜ್ಞಾನ ಸೃಷ್ಟಿಯಲ್ಲಿ ಭಾಷೆಗಳ ಮಹತ್ವವನ್ನು ನಾವು ಅರಿಯಬೇಕಿದೆ
Last Updated 25 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ, ಮೊದಲ ಸೆಮಿಸ್ಟರಿನ ಪದವಿ ತರಗತಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ರಾಜ್ಯದಲ್ಲಿ ಪಠ್ಯಕ್ರಮಗಳು ಭರದಿಂದ ಸಿದ್ಧವಾಗುತ್ತಿವೆ. ಆದರೆ, ನಾವಿಲ್ಲಿ ಭಾಷೆಗಳನ್ನು ಅಳವಡಿಸುವ ವಿಚಾರದಲ್ಲಿ ಎರಡು ಪೂರ್ವಗ್ರಹಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

ಮೊದಲನೆಯದಾಗಿ, ಮೊದಲ ಎರಡು ವರ್ಷದ ಪಠ್ಯಕ್ರಮದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ, ಇಲ್ಲಿಯವರೆಗೆ ಕಡ್ಡಾಯವಾಗಿದ್ದ ಇಂಗ್ಲಿಷ್ ಭಾಷೆಯನ್ನು ಒಂದು ಆಯ್ಕೆಯ ಭಾಷೆಯಾಗಿಯಷ್ಟೇ ಪರಿಗಣಿಸಿರುವುದು, ದೂರದೃಷ್ಟಿಯ ಕೊರತೆಯನ್ನು ಸೂಚಿಸುತ್ತದೆ.

ಎರಡನೆಯದಾಗಿ, ಎಲ್ಲ ಭಾಷೆಗಳ ವಿಚಾರದಲ್ಲಿ ಗಮನಿಸುವುದಾದರೆ, ಹೊಸ ಪಠ್ಯಕ್ರಮದಲ್ಲಿ ಭಾಷೆಯನ್ನು ಒಂದು ಜ್ಞಾನವಾಗಿ ಪರಿಗಣಿಸದೆ, ಕೇವಲ ದೈನಂದಿನ ವ್ಯವಹಾರಕ್ಕೆ ಅಗತ್ಯವಾದ ಸಂವಹನ ಕಲೆಯನ್ನು ಉದ್ದೀಪಿಸಲು ಬೇಕಾದ ವಿಷಯವಾಗಿ ಸರಳೀಕರಿಸಿರುವುದನ್ನು ಕಾಣಬಹುದು.

ಹೊಸ ಶಿಕ್ಷಣ ನೀತಿಗೆ ರಾಜ್ಯದಲ್ಲಿ ಹೆಚ್ಚಿನ ಪ್ರತಿಭಟನೆ ಬಂದಿರುವುದು ಕನ್ನಡ ವಿಭಾಗಗಳಿಂದ. ಹಾಗಾಗಿ, ಕನ್ನಡವನ್ನು ಕಡ್ಡಾಯಗೊಳಿಸಿದರೆ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸುಲಭವಾಗುತ್ತದೆ ಎನ್ನುವ ದೂರಾಲೋಚನೆ ಸಹಜ. ಆದರೆ, ಇದನ್ನು ಇಂಗ್ಲಿಷ್ ಮತ್ತು ಕನ್ನಡದ ನಡುವಿನ ಭಾಷೆಗಳ ತಿಕ್ಕಾಟಕ್ಕೆ ಸೀಮಿತಗೊಳಿಸದೆ ಸೂಕ್ಷ್ಮವಾಗಿ ಗಮನಿಸಿದರೆ, ಇಂಗ್ಲಿಷ್ ಅನ್ನು ಒಂದು ಆಯ್ಕೆಯ ಭಾಷೆಯನ್ನಾಗಿ ಪರಿಮಿತಿಗೊಳಿಸುವುದರಿಂದ ಮುಂದೆ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ತಿಳಿಯುತ್ತದೆ.

ವಿಶೇಷವಾಗಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಇಲ್ಲಿಯವರೆಗೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದ್ದ ಇಂಗ್ಲಿಷನ್ನು ಸಂಪೂರ್ಣವಾಗಿ ತ್ಯಜಿಸಿಬಿಡಬಹುದು. ನಗರಗಳ ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಗಳು, ನಮಗೆ ಹೇಗೂ ಇಂಗ್ಲಿಷ್ ಗೊತ್ತಿದೆ, ಬೇರೆ ಭಾಷೆ ಆಯ್ಕೆ ಮಾಡೋಣವೆಂದು ನಿರ್ಧರಿಸ ಬಹುದು. ಇದರಿಂದಾಗಿ, ನಿಧಾನವಾಗಿ ಇಂಗ್ಲಿಷ್ ಭಾಷಾ ವಿಭಾಗಗಳು ಮುಚ್ಚಿಹೋಗುವ ಸಾಧ್ಯತೆಯಿದೆ. ಆದರೆ, ಇದು ಕೇವಲ ಇಂಗ್ಲಿಷ್ ವಿಭಾಗದ ಅಸ್ತಿತ್ವದ ಪ್ರಶ್ನೆಯಲ್ಲ. ಇಲ್ಲಿಯವರೆಗೆ, ಇಷ್ಟವಿದ್ದೋ ಇಲ್ಲದೆಯೋ ಇಂಗ್ಲಿಷ್ ಅನ್ನು ಕಡ್ಡಾಯವಾಗಿ ಓದಿದ ವಿದ್ಯಾರ್ಥಿಗಳಿಗೆ ಅದರಿಂದ ಏನೂ ಉಪಯೋಗವಾಗಿಲ್ಲವೇ? ಜಾಗತಿಕ ಭಾಷೆಯಾಗಿರುವ ಇಂಗ್ಲಿಷನ್ನು ಕಷ್ಟವೆಂದು ಪರಿಗಣಿಸಿ ದೂರವಿರಿಸಿದರೆ, ನಷ್ಟ ಯಾರಿಗೆ?

ಇಂಗ್ಲಿಷ್ ಭಾಷೆಯು ಶಿಕ್ಷಣ ಮಾಧ್ಯಮವಾಗಬೇಕಾದ ಅಗತ್ಯವಿಲ್ಲ, ನಿಜ. ಆದರೆ, ಕನ್ನಡದ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇಂಗ್ಲಿಷ್ ಯಾವತ್ತೂ ಪೂರಕವಾಗಿಯೇ ಕೆಲಸ ಮಾಡಿದೆ. ಕನ್ನಡದ ಸಾಹಿತ್ಯ ಪ್ರಕಾರಗಳಿಗೆ, ವಿಮರ್ಶೆಗೆ, ಚಿಂತನ ಕ್ರಮಕ್ಕೆ ಇಂಗ್ಲಿಷಿನ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ನಮ್ಮಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಹೆಚ್ಚಿನ ವಿದ್ವಾಂಸರು ಶೇಕ್ಸ್‌ಪಿಯರ್, ವರ್ಡ್ಸ್‌ವರ್ಥ್, ಟಾಲ್‌ಸ್ಟಾಯ್‌ ಮುಂತಾದ ಸಾಹಿತಿಗಳಿಂದ ಗಾಢವಾಗಿ ಪ್ರಭಾವಿತರಾಗಿರುವುದನ್ನು ಉಲ್ಲೇಖಿಸುತ್ತಾರೆ. ಜೊತೆಗೆ, ಜಗತ್ತಿನ ಸಾಹಿತ್ಯ ಮತ್ತು ಜ್ಞಾನ ನಮಗೆ ಲಭ್ಯವಾಗುತ್ತಿರುವುದು ಇಂಗ್ಲಿಷಿನ ಮೂಲಕ. ಹಾಗಾಗಿ, ಅದನ್ನೊಂದು ಆಯ್ಕೆಯನ್ನಾಗಿಸುವುದೆಂದರೆ, ನಮ್ಮ ವಿದ್ಯಾರ್ಥಿಗಳ ಜ್ಞಾನ ವಿಕಸನವನ್ನು ಸೀಮಿತಗೊಳಿಸಿದಂತೆಯೇ.

ಹಾಗಾಗಿ, ಇಂಗ್ಲಿಷನ್ನು ಕೂಡ ಕನ್ನಡದಂತೆ ಕಡ್ಡಾಯ ಭಾಷೆಯಾಗಿ ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿತ. ಅದರಂತೆ, ಭಾಷೆಯನ್ನು ಕೇವಲ ಎರಡು ವರ್ಷಕ್ಕಷ್ಟೇ ಸೀಮಿತಗೊಳಿಸದೆ, ಎಲ್ಲ ಹಂತದಲ್ಲೂ ಕಡ್ಡಾಯಗೊಳಿಸುವುದು ವರ್ತಮಾನದ ಸಮಾಜದಲ್ಲಿ ಬಹಳ ಅಗತ್ಯ, ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಯಾಕೆಂದರೆ ಪ್ರಸಕ್ತ, ಹೆಚ್ಚಿನ ಮನೆಗಳಲ್ಲಿ ಮಕ್ಕಳಿಗೆ ಹಿತವಚನದ ಮೂಲಕ ಬದುಕುವ ಕಲೆಯನ್ನು ಕಲಿಸುವ ಹಿರಿಯರು ಇಲ್ಲದಿರುವಾಗ, ಹೆತ್ತವರು ಉದ್ಯೋಗನಿಮಿತ್ತ ಬ್ಯುಸಿಯಾಗಿರುವಾಗ, ಅಧ್ಯಾಪಕರು ಸಿಲೆಬಸ್ ಮುಗಿಸುವ ತರಾತುರಿಯಲ್ಲಿರುವಾಗ, ಸುಲಭವಾಗಿ ಕೈಗೆ ಸಿಗುವ ಅಂತರ್ಜಾಲ ಪ್ರಪಂಚ ಎಳೆ ಮನಸ್ಸುಗಳಲ್ಲಿ ಗೊಂದಲ ಸೃಷ್ಟಿಸುತ್ತಿರುವಾಗ, ಭಾಷೆಗಳ ಮೂಲಕ ಸಿಗುವ ಶ್ರೇಷ್ಠ ಸಾಹಿತ್ಯವೊಂದೇ ಮಕ್ಕಳಿಗೆ ದಾರಿದೀಪವಾಗಬಲ್ಲುದು, ಪರಿಪೂರ್ಣವಾಗಿ ಬದುಕಲು ತಿಳಿಹೇಳಬಲ್ಲುದು.

ಆದರೆ, ಭಾಷಾ ಕಲಿಕೆಯನ್ನು ನಾವು ಕೇವಲ ಸಂವಹನ ಮಾಧ್ಯಮದ ಸ್ಥಾನಕ್ಕೆ ತಂದಿರಿಸಿದ್ದೇವೆ. ಇಂಗ್ಲಿಷ್‌ನಿಂದ ಮೊದಲ್ಗೊಂಡು ಕನ್ನಡದಲ್ಲೂ ಸಾಹಿತ್ಯವನ್ನು ಕಡೆಗಣಿಸಿ, ಕೇವಲ ವ್ಯವಹಾರದ ಮಾತುಕತೆಗೆ ಬೇಕಾಗುವಷ್ಟು ಭಾಷೆಯನ್ನು ಕಲಿಸುವ ಪಠ್ಯಕ್ರಮಗಳ ಅಳವಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ಭಾಷೆಯನ್ನು ಪ್ರೆಸೆಂಟೇಷನ್ ಕೊಡುವುದು, ಇ–ಮೇಲ್ ಮಾಡುವುದು ಅಥವಾ ರಿಪೋರ್ಟ್ ಬರೆಯುವಂತಹ ಕೌಶಲಗಳನ್ನು ಸಿದ್ಧಿಸಿಕೊಳ್ಳುವುದಕ್ಕಷ್ಟೇ ಸೀಮಿತಗೊಳಿಸುತ್ತಿದ್ದೇವೆ.

ಭಾಷೆಯನ್ನು ಇಷ್ಟು ಸುಲಭವಾಗಿ ಸರಳೀಕರಿಸಲು ಬರುವುದಿಲ್ಲ. ಯಾವುದೇ ಭಾಷೆಯಲ್ಲಿರುವ ಪ್ರತೀ ಶಬ್ದಕ್ಕೂ ಒಂದು ಹಿನ್ನೆಲೆಯಿದೆ, ಕಥೆಯಿದೆ, ಇತಿಹಾಸವಿದೆ, ಸಂಸ್ಕೃತಿಯಿದೆ. ವಾಕ್ಯಕ್ಕೆ ಅನುಸಾರ ವಾಗಿ ವಿಭಿನ್ನ ಅರ್ಥಗಳಿವೆ. ಇಂತಹ ಸೊಗಸಿನ ಭಾಷೆಯೊಂದನ್ನು, ಕೇವಲ ನಮ್ಮ ವ್ಯವಹಾರಕ್ಕೆ ಅನುಸಾರವಾಗಿ ಒಣ ವಾಕ್ಯ ಪ್ರಯೋಗಗಳ ಮೂಲಕ ಮುಂದಿನ ಪೀಳಿಗೆಗಳಿಗೆ ತಲುಪಿಸುವುದೆಂದರೆ, ಭಾಷೆಗಳಿಗೆ ಮಾಡುವ ದೊಡ್ಡ ಅಗೌರವವೇ ಸರಿ.

ಪ್ರಸಕ್ತ, ನಮ್ಮ ಹೆಚ್ಚಿನ ಮಾನವೀಯ ಸಂಬಂಧ ಗಳನ್ನು ತಕ್ಷಣದ ಲಾಭ– ನಷ್ಟದ ದೃಷ್ಟಿಯಿಂದ ನೋಡುತ್ತಿರುವುದರಿಂದ, ಭಾಷೆಗಳನ್ನಾದರೂ ಈ ವ್ಯವಹಾರದಿಂದ ದೂರವಿಡುವುದು ಬಹಳ ಅಗತ್ಯ. ವಿಶೇಷವಾಗಿ, ಈ ಹೊಸ ಶಿಕ್ಷಣ ನೀತಿ ಮುಂದಿನ ಪೀಳಿಗೆಗಳನ್ನು ರೂಪಿಸಲಿರುವುದರಿಂದ, ಭಾಷೆಗಳ ಜ್ಞಾನಸಂಪತ್ತಿನಿಂದ ಸಿಗುವ ದಾರಿದೀಪವು ಭವಿಷ್ಯದತ್ತ ದೃಢ ಹೆಜ್ಜೆಯಿಡಲು ಅವರಿಗೆ ಬಹಳ ಸಹಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT