ಶನಿವಾರ, ಸೆಪ್ಟೆಂಬರ್ 18, 2021
29 °C
ವಿಜ್ಞಾನವಿಲ್ಲದೆ ಕುಂಟುತ್ತಿರುವ ಧರ್ಮವನ್ನೂ ಧರ್ಮವಿಲ್ಲದೆ ಕುರುಡಾಗಿರುವ ವಿಜ್ಞಾನವನ್ನೂ ಸರಿಪಡಿಸುವ ಮಂತ್ರವಾದಿ ಎಲ್ಲಿದ್ದಾನೆ?

ಸಂಗತ: ದಾರ್ಶನಿಕರೆಲ್ಲ ಒಟ್ಟಿಗೇ ಮತ್ತೆ ಹುಟ್ಟಿಬರಲಿ!

ದಾದಾಪೀರ್ ನವಿಲೇಹಾಳ್ Updated:

ಅಕ್ಷರ ಗಾತ್ರ : | |

Prajavani

ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಗೆಲಿಲಿಯೊ ಗಣಿತದ ತರಗತಿಗಳನ್ನು ಕದ್ದು ಕೇಳುತ್ತಾ ಕನವರಿಸುತ್ತಾ ಖಭೌತ ವಿಸ್ಮಯಗಳ ಕುರಿತು ಗುಣಿಸುತ್ತಿದ್ದ. ಅಪ್ಪನ ಆಗ್ರಹಕ್ಕೆ ಮೆಡಿಕಲ್ ಸೇರಿದ್ದ ಆತ, ವೈದ್ಯಕೀಯಕ್ಕೆ ಹೊರತಾದ ತನ್ನ ಕುತೂಹಲ ಮತ್ತು ಆಸಕ್ತಿಯ ಕ್ಷೇತ್ರದಲ್ಲಿ ಸೃಜನಶೀಲವಾದುದನ್ನು ಸಾಧಿಸಲು ಸಾಧ್ಯವಾಯಿತು.

ಗ್ರಹ, ತಾರೆ, ನೀಹಾರಿಕೆಗಳ ರೂಪ ಸೌಂದರ್ಯದ ಜೊತೆಗೆ ಅವು ಚಲಿಸುವ ಪಥವನ್ನೂ ದೂರವನ್ನೂ ಲೆಕ್ಕ ಹಾಕುತ್ತಾ ಅಲ್ಲೆಲ್ಲೂ ದೇವರನ್ನು ಕಾಣದೆ ಗೆಲಿಲಿಯೊ ಚಡಪಡಿಸುತ್ತಿದ್ದ. ಆಗಸದ ಅನಂತದಲ್ಲಿ ನಡೆಯುತ್ತಿ ರುವುದಕ್ಕೂ ನೆಲದಲ್ಲಿ ಮನುಷ್ಯ ಮಾಡಿಕೊಂಡ ಗುಡಿ, ಚರ್ಚು, ಮಸೀದಿಗಳಿಗೂ ಏನೇನೂ ಸಂಬಂಧ ಇಲ್ಲದಿರುವುದನ್ನು ಗುರುತಿಸಿಯೂ ತನ್ನ ಪಾಡಿಗೆ ತಾನು ಗಣಿತದ ಸೂತ್ರ ಪ್ರಮೇಯಗಳಲ್ಲಿ ಮುಳುಗಿ ನಂಬಿಕೆ ಮತ್ತು ಸತ್ಯದ ನಡುವಿನ ವ್ಯತ್ಯಾಸದ ಅರಿವಾಗಿ ಅಚ್ಚರಿ ಪಡುತ್ತಿದ್ದ. ಜಗತ್ತು ಅದುವರೆಗೆ ನಂಬಿದ ಸಂಗತಿ ಸತ್ಯವೇ ಅಲ್ಲವೆಂದೂ, ಅದಕ್ಕೆ ಅರಿವಿನ ಅಭಾವ ಕಾರಣವೆಂದೂ ತಿಳಿಸಲು ಹೋಗಿ ತೊಂದರೆಗೆ ಪಕ್ಕಾದ. ಸಮಾಜಕ್ಕೆ ಗೆಲಿಲಿಯೊ ಹೇಳುತ್ತಿದ್ದ ಸತ್ಯವು ಅಪಥ್ಯವಾಗಿ, ತಿಳಿಗೇಡಿ ಸಮಾಜದ ಎದುರು ಕ್ಷಮೆ ಕೋರುವ ಅನಿವಾರ್ಯಕ್ಕೆ ಸಿಲುಕಿ ಹೊರಬಂದು, ಅದಮ್ಯ ಆತ್ಮವಿಶ್ವಾಸದಿಂದ ‘ಇದು ತಿರುಗೇ ತಿರುಗು ತ್ತದೆ’ ಎಂದು ನೆಲಕ್ಕೊಮ್ಮೆ ಜಾಡಿಸಿ ಒದ್ದ. ಜಗತ್ತು ಕಂಡ ಅಪ್ರತಿಮ ವಿಜ್ಞಾನಿಯೊಬ್ಬ ಹೇಳಿದ ಸತ್ಯವನ್ನು ಈಗ ಅದೇ ಜಗತ್ತು ನಿಸ್ಸಂದೇಹವಾಗಿ ನಂಬಿದೆ.

ಸದ್ಯದ ಸಾಮಾಜಿಕ ಪ್ರಪಂಚ ಅತಿ ಎನ್ನುವಷ್ಟು ಲೌಕಿಕವಾಗಿದೆ. ವಿಜ್ಞಾನವನ್ನೂ ಧರ್ಮವನ್ನೂ ಜೀವಪರ ಆಶಯಗಳಿಗಾಗಿ ಧ್ಯಾನಿಸಿದ ಜಾಗತಿಕ ಪರಂಪರೆಗೆ ತೀರಾ ವ್ಯತಿರಿಕ್ತವಾಗಿ ಪ್ರಾಪಂಚಿಕ ಲಾಭದ ಆಸೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ಧರ್ಮಗಳ ಆತ್ಯಂತಿಕ ಅವಸ್ಥೆಯಲ್ಲಿ ಮನುಷ್ಯ ಮತ್ತು ಪ್ರಕೃತಿ ಕೇವಲ ಹುಚ್ಚು ಅಧಿಕಾರ ಹಾಗೂ ಮಾರಾಟದ ಸರಕಾಗುವ ಆತಂಕವನ್ನು ಅಫ್ಗಾನಿಸ್ತಾನದಲ್ಲಿ ಕಾಣುತ್ತಿದ್ದೇವೆ. ಅಲ್ಲಿನ ಆಘಾತಕಾರಿ ಬೆಳವಣಿಗೆಗಳು ವಿಜ್ಞಾನ ಮತ್ತು ಧರ್ಮಗಳ ಅರಿವಿನ ಅಭಾವದಿಂದ ನಡೆಯದೆ ಅವುಗಳ ವಿಕೃತ ಪ್ರಯೋಗ ಬುದ್ಧಿಯಿಂದ ನಡೆಯುತ್ತಿವೆ. ಇಂತಹ ಕಡೆ ಮಾನವೀಯ ಮೌಲ್ಯಗಳಿಗೆ ಅರ್ಥವೇ ಇಲ್ಲ. ಹೀಗೆ ಜಗತ್ತು ಅರಾಜಕತೆಯಿಲ್ಲದೆ, ರಕ್ತಪಾತವಿಲ್ಲದೆ ಇರುವುದು ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ಸೃಷ್ಟಿಗೆ ಯಾರು ಹೊಣೆ? ವಿಜ್ಞಾನ
ವಿಲ್ಲದೆ ಕುಂಟುತ್ತಿರುವ ಧರ್ಮವನ್ನೂ ಧರ್ಮವಿಲ್ಲದೆ ಕುರುಡಾಗಿರುವ ವಿಜ್ಞಾನವನ್ನೂ ಸರಿಪಡಿಸುವ ಮಂತ್ರ ವಾದಿ ಎಲ್ಲಿದ್ದಾನೆ? ಬುದ್ಧ, ಬಸವ, ಗಾಂಧಿ ಎಲ್ಲರೂ ಒಟ್ಟಿಗೇ ಮರುಹುಟ್ಟು ಪಡೆಯಬೇಕಾದ ಕಾಲವಿದು.

ನೀತಿ ಮತ್ತು ನ್ಯಾಯಪ್ರಜ್ಞೆಯನ್ನು ಅನುತ್ಪಾದಕ ವೆಂದು ಭಾವಿಸಿರುವ ಲೋಕಬುದ್ಧಿ ಸಹಜವಾಗಿ ಅವುಗಳನ್ನು ಜಾಣತನದಿಂದ ಪ್ರತ್ಯೇಕವಾಗಿಯೇ ಬಳಸಿಕೊಳ್ಳುತ್ತದೆ. ಈ ಬಗೆಯ ಅಪಬಳಕೆಯ ಅಪಾಯದಿಂದ ಹೊರಬರಬೇಕಾದ ನಮ್ಮ ಯುವ ಸಮುದಾಯ ತನ್ನ ಹೊಣೆಗಾರಿಕೆಯ ಕುರಿತು ಅಖಂಡ ಉಪೇಕ್ಷೆಯಿಂದ ಕೂಡಿರುವುದು ವಿಷಾದನೀಯ.

ಯುವ ಸಾಫ್ಟ್‌ವೇರ್ ಎಂಜಿನಿಯರೊಬ್ಬ ತನ್ನ ಅಪ್ಪನ ಅಣ್ಣ ತೀರಿಕೊಂಡಿರುವುದಾಗಿ ಫೋನ್‌ನಲ್ಲಿ ತಿಳಿಸಿದ್ದನ್ನು ಕೇಳಿ ರೇಗಿ ಹೋಗಿತ್ತು. ದೊಡ್ಡಪ್ಪ ತೀರಿಕೊಂಡರು ಅಂತ ಹೇಳಲಾಗದ ಆತನ ಬಡತನಕ್ಕೆ ಏನೆನ್ನುವುದು? ಮತ್ತೊಬ್ಬ ವೈದ್ಯ ತನ್ನ ಅಜ್ಜಿ ಸತ್ತಾಗ ಬರಲಿಲ್ಲ. ಯಾವುದೋ ಕಾರ್ಯನಿಮಿತ್ತ ಊರಿಗೆ ಬಂದು ಹಿಂತಿರುಗಿ ಹೊರಟಾಗ ಆತನ ಚಿಕ್ಕಪ್ಪ ‘ನಾಳೆ ನಿನ್ನ ಅಜ್ಜಿಯ ವರ್ಷದ ತಿಥಿ, ಮುಗಿಸಿಕೊಂಡು ಹೋಗ ಬಾರದೇ?’ ಅಂತ ನಿವೇದಿಸಿದರೆ, ‘ನಾಳೆಯ ನನ್ನ ಸಂಬಳವನ್ನು ನೀನು ಕೊಡುತ್ತೀಯ ಹಾಗಾದರೆ?’ ಎಂದು ಕೇಳಿಬಿಟ್ಟ ಭೂಪ! ಮಗನ ಮಾತಿಗೆ ಎದುರಿಗಿದ್ದ ತಾಯಿ, ತಂದೆ ಕೊಕ್ ಎಂದು ನಕ್ಕರು ಪುಣ್ಯವಂತರು!

ನಾವು ಎಂತಹ ಶಿಕ್ಷಣವನ್ನು ಕಲಿಸುತ್ತಿದ್ದೇವೆ? ಕೆಲವರಂತೂ ಗುಬ್ಬಿಗೆ ಈಜು ಕಲಿಸುವ, ಮೀನಿಗೆ ಮರ ಹತ್ತುವುದನ್ನು ಹೇಳಿಕೊಡುವ ಕೊನೆಯಿಲ್ಲದ ಮೂರ್ಖ ಯತ್ನದಲ್ಲಿ ತೊಡಗುತ್ತಾರೆ. ಮಕ್ಕಳು ಓದಬೇಕು, ಓದುತ್ತಲೇ ಇರಬೇಕು. ಆಟ, ಸಂಗೀತ, ಸೂರ್ಯ, ಚಂದ್ರ, ನದಿ, ಬೆಟ್ಟ, ಸಾಗರ, ಹಬ್ಬ, ಉತ್ಸವ, ಜಾತ್ರೆ, ಹೊಲ, ಗದ್ದೆ, ಬಂಧು ಬಳಗಗಳ ಗೊಡವೆಯಿಲ್ಲದಂತೆ ಓದುವುದೂ ಒಂದು ಓದೇ? ಗೆಲಿಲಿಯೊ, ಐನ್‌ಸ್ಟೀನ್‌ನಂತಹವರ ಓದು ಏಕಕಾಲಕ್ಕೆ ಸಂಭ್ರಮವೂ ಧ್ಯಾನವೂ ಆಗಿದ್ದುದರಿಂದಲೇ ಜಾಗತಿಕ ಸಮುದಾಯವನ್ನು ಬೆರಗುಗೊಳಿಸಿತು. ಆ ಬೆರಗು ಇವತ್ತಿಗೂ ಯುವಜನರ ಆಶಾದೀಪವಾಗಿ ಬೆಳಗು ವಂತಿದೆ. ಬೆಳಕಿಗೆ ತೆರೆದುಕೊಳ್ಳುವ ಕಣ್ಣುಗಳು ಬೇಕಾಗಿವೆ ಅಷ್ಟೇ.

ಮಕ್ಕಳಿಗೆ ಸಂಪತ್ತಿನ ದೊಡ್ಡ ಗುರಿ ಸಾಧನೆಯ ಪಾಠ ಹೇಳುವ ಪೋಷಕರು, ಅದನ್ನು ನ್ಯಾಯಮಾರ್ಗದ ಮೂಲಕವೇ ತಲುಪುವ ಆದರ್ಶವನ್ನು ಯಾಕೆ ಗಟ್ಟಿ ದನಿಯಲ್ಲಿ ಹೇಳುತ್ತಿಲ್ಲ? ಇದು ಕೇವಲ ಭೌತಿಕ ಅಭಿವೃದ್ಧಿ ಹಿತಾಸಕ್ತಿ ಹೊಂದಿದ, ಆಧ್ಯಾತ್ಮಿಕವಾಗಿ ಸೋತ ಪತನಮುಖಿ ಸಮಾಜವೊಂದರ ಸುಂದರ ಬಾಹ್ಯ ಚಹರೆಯೇ?

ಕಲೆ, ವಿಜ್ಞಾನ ಯಾವುದೇ ಇರಲಿ, ಪುಸ್ತಕಗಳ ಓದು ಹೃದಯವಂತಿಕೆಯನ್ನು ಉದ್ದೀಪಿಸುವಂತಿ ರಬೇಕು. ಜ್ಞಾನದ ಅಂತ್ಯವಿಲ್ಲದ ಪಯಣದಲ್ಲಿ ಮನುಷ್ಯ ನಾಗರಿಕನಾಗಿ ಮಾಗಬೇಕು. ನಾಗರಿಕತೆಯು ವಂಶಾನುಗತವಾಗಿ ಬರುವಂತಹದ್ದಲ್ಲ. ಅದನ್ನು ಕಠಿಣತಮ ಶ್ರದ್ಧೆ ಮತ್ತು ಪ್ರಯತ್ನಗಳಿಂದ ಗಳಿಸಬೇಕಾಗುತ್ತದೆ. ನಾಗರಿಕರಾಗುವುದು ಎಷ್ಟು ಕಷ್ಟ ಅಂತ ಗಾಂಧಿಯನ್ನು ಓದಿ ಅರ್ಥ ಮಾಡಿಕೊಳ್ಳಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು