ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆಟದಿಂದ ಕಲಿಯೋಣ ಪಾಠ

ಆಟದಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳು ಕೊನೆಗೆ ಜೀವನದ ಸವಾಲುಗಳಿಗೂ ಅನ್ವಯಿಸುತ್ತವೆ ಎನ್ನುವುದೇ ಸ್ವಾರಸ್ಯ!
Last Updated 17 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಮಕ್ಕಳನ್ನು ‘ಚಾಂಪಿಯನ್’ ಆಗಿಸಬೇಕೆಂದರೆ, ಮನೋವಿಜ್ಞಾನದ ಪ್ರಕಾರ ಅಪ್ಪ-ಅಮ್ಮ ಕೇಳ ಬೇಕಾದುದು ‘ನೀನೇನು ಕಲಿತೆ?’ ‘ನಿನ್ನ ಟೀಂ ಮೇಟ್‍ಗೆ ಸಹಾಯ ಮಾಡಿದೆಯಾ?’ ‘ತುಂಬಾ ಶ್ರಮಪಡುವು
ದರಲ್ಲಿಯೂ ಸಂತೋಷ ಸಿಗಲು ಸಾಧ್ಯವೇ ಎಂಬುದನ್ನು ಗಮನಿಸಿದೆಯಾ?’ ಎಂಬಂಥ ಪ್ರಶ್ನೆಗಳನ್ನು.

ಮೊನ್ನೆಯಷ್ಟೇ ಒಲಿಂಪಿಕ್ಸ್ ಮುಗಿದಿದೆ. ಆಟದಿಂದ ಜೀವನಪಾಠ ಕಲಿಯುವುದು ಪದಕ ಗೆದ್ದಷ್ಟೇ ಮುಖ್ಯ. ಕೈಲಾ ರಾಸ್ ಎಂಬ ಪ್ರಸಿದ್ಧ ಒಲಿಂಪಿಕ್ ಜಿಮ್ನಾಸ್ಟ್‌ಳ ಕೋಚ್ ‘ಉಕ್ಲಾ ಜಿಮ್ನಾಸ್ಟಿಕ್ಸ್‌ ತಂಡ’ದ ವೆಲೋರಿ ಕೊಂಡಾ ಅವರ ಅನುಭವವನ್ನು ನೋಡಿದರೆ, ಕ್ರೀಡಾಪಟುಗಳ ಮಾತನ್ನು ಒಬ್ಬ ಕೋಚ್ ‘ಆಲಿಸುವುದು’ ಎಷ್ಟು ಅಗತ್ಯ ಎಂಬುದರ ಅರಿವಾಗುತ್ತದೆ. ತನ್ನ ಮೇಲಿನ ದೌರ್ಜನ್ಯವನ್ನು ಕೈಲಾ ಹಂಚಿಕೊಂಡ ಬಗೆಯನ್ನು ವೆಲೋರಿ ಹೀಗೆ ಹೇಳುತ್ತಾರೆ– ‘ಕೈಲಾ ಇದ್ದಕ್ಕಿದ್ದ ಹಾಗೆ ಒಮ್ಮೆ ನನ್ನ ಕೊಠಡಿಗೆ ಬಂದು ಮಾತನಾಡತೊಡಗಿದಳು. ಮೊದಲು ತನ್ನ ಶಾಲೆ-ಕಾಲೇಜು, ಮನಸ್ಸಿಗೆ ಏನೆಲ್ಲಾ ಬಂತೋ ಅದೆಲ್ಲವನ್ನೂ. ನನ್ನ ಒಳದನಿ ಪಿಸುಗುಟ್ಟುತ್ತಿತ್ತು ‘ಮತ್ತೇನೋ ಇದೆ, ಸುಮ್ಮನಿರು’ ಎಂದು. ತನಗಾದ ಕೆಟ್ಟ ಅನುಭವದ ಬಗ್ಗೆ ಕೊನೆಗೂ ಅವಳು ಬಾಯಿಬಿಟ್ಟಳು’.

‘ತಂಡದ ಎಲ್ಲರಲ್ಲಿ ಸುರಕ್ಷಿತ ಭಾವನೆ ಮೂಡಿಸುವುದು ನನ್ನ ಕರ್ತವ್ಯವಾಗಿತ್ತು. ಟೀಂ ಮೀಟಿಂಗ್‌ಗಳಲ್ಲಿ ಈ ವಿಷಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದೆ. ಆ ವರ್ಷದ ಕೊನೆಯಲ್ಲಿ ನಾವು ರಾಷ್ಟ್ರೀಯ ಚಾಂಪಿಯನ್‍ಷಿಪ್ ಗೆದ್ದೆವು. ಬಳಿಕ ಕೈಲಾ ನನ್ನೊಡನೆ- ಈ ಸೀಸನ್‌ನಲ್ಲಿ ನಾನು ಮಾತನಾಡುತ್ತ, ನನ್ನ ಒತ್ತಡಗಳನ್ನು ಹೊರಹಾಕುತ್ತಾ ‘ಎತ್ತರಕ್ಕೆ’ ಬೆಳೆಯುತ್ತಾ ಹೋದೆ ಎಂದುಹೇಳಿದಳು’.

ಕ್ಯಾಟೆಲಿನ್ ಒಹಾಶಿ ಎಂಬ ಪ್ರಸಿದ್ಧ ಜಿಮ್ನಾಸ್ಟ್‌ಗೆ ಉಕ್ಲಾ ತಂಡವು ದೊಡ್ಡ ಮೊತ್ತದ ಶಿಷ್ಯವೇತನ ನೀಡಿತ್ತು. ಆದರೂ ಕ್ಯಾಟೆಲಿನ್ ‘ಮತ್ತೆ ನನಗೆ ಎಂದೂ ‘ಮಹಾನ್’ ವ್ಯಕ್ತಿ ಆಗಲು ಇಷ್ಟವಿಲ್ಲ!’ ಎಂದೇ ಹೇಳುತ್ತಿದ್ದಳು. ವಿಜಯಕ್ಕಾಗಿ ನಡೆಸುವ ಪ್ರಯತ್ನ ತನ್ನ ಸಂತಸವನ್ನೇ ಕಸಿಯುತ್ತಿದೆ ಎಂದು ಆಕೆಗೆ ಅನ್ನಿಸತೊಡಗಿತ್ತು. ಕ್ಯಾಟೆಲಿನ್‌ಗೂ ಕೋಚ್‌ ಆಗಿದ್ದ ವೆಲೋರಿ, ಇಂತಹ ಮನೋಭಾವದಿಂದ ಹೊರತರಲು ಆಕೆಯಲ್ಲಿ ವಿಶ್ವಾಸ ಮೂಡಿಸುವ ದಾರಿಯನ್ನು ಅನುಸರಿಸಬೇಕಾಯಿತು. ಜಿಮ್‍ಗೆ ಹೊರತಾಗಿ ಶಾಲೆ, ಸ್ನೇಹಿತರು, ಕುಟುಂಬ, ಹವ್ಯಾಸ ಎಲ್ಲದರ ಬಗೆಗೂ ಮಾತನಾಡಬೇಕಾಯಿತು. ಕ್ಯಾಟೆಲಿನ್‌ ನಿಧಾನವಾಗಿ ಜಿಮ್ನಾಸ್ಟಿಕ್ಸ್‌ ಅನ್ನು ಪ್ರೀತಿಸತೊಡಗಿದಳು, ಚಾಂಪಿಯನ್‍ ಪಟ್ಟಕ್ಕೂ ಏರಿದಳು.

ಕೆಲವೊಮ್ಮೆ ಫೇವರಿಟ್ ಎಂದುಕೊಂಡ ಟೀಂ ಸೋತುಬಿಡುತ್ತದೆ ಅಥವಾ ಊಹಿಸಲಾಗದಷ್ಟು ಹಿಂದಿದ್ದ ಮತ್ತೊಂದು ಟೀಂ ಗೆದ್ದುಬಿಡುತ್ತದೆ. ಆದರೆ ಆಟದ ಹಿಂದಿರುವ ನೋವು-ನಲಿವು, ತರಬೇತಿ- ಸಾಧನೆಯ ಅಂಶಗಳನ್ನು ಗಮನಿಸುವವರು ಕಡಿಮೆ.

ಕ್ರೀಡೆಗಳಿಂದ ದೈಹಿಕ ಲಾಭವಷ್ಟೇ ಅಲ್ಲ. ಶಾಲೆಯ ಆಟಗಳಲ್ಲಿ ಭಾಗವಹಿಸುವುದು ಖಿನ್ನತೆಯ ಸಾಧ್ಯತೆಯನ್ನು ತಗ್ಗಿಸುತ್ತದೆ. ತಂಡಗಳಲ್ಲಿ ಆಡುವಾಗ ಸ್ನೇಹಪರತೆ, ‘ಒಂದು ತಂಡ’ ಎಂಬ ಭಾವನೆಯು ಸಾಮಾಜಿಕ ಕೌಶಲಗಳನ್ನು ಹೆಚ್ಚಿಸುತ್ತವೆ.

ನಿಮ್ಮ ಫೇವರಿಟ್ ಅಥ್ಲೀಟ್ ಇನ್ನೇನು ಗೆಲುವಿನ ಹಂತದಲ್ಲಿದ್ದಾಳೆ, ಉಸಿರು ಬಿಗಿ ಹಿಡಿದು ನೋಡುತ್ತಿದ್ದೀರಿ, ಕೊನೇ ಗಳಿಗೆಯಲ್ಲಿ ಅವಳು ‘ಮಿಸ್’ ಮಾಡಿಬಿಡುತ್ತಾಳೆ. ಆಗ ಆಕೆ ಅನುಭವಿಸಿದ್ದು ‘ಚೋಕಿಂಗ್’ ಎಂಬ ಪ್ರಕ್ರಿಯೆಯನ್ನು. ಸತತ ಅಭ್ಯಾಸದ ನಂತರ, ಎಲ್ಲಿ ಅದು ನಿಜವಾಗಿ ಬೇಕೋ ಅಂತಹ ಕಡೆ ಕೆಲಸ ಮಾಡದಿರುವ ಅಪಾಯ.

ಅನುಮಾನ-ಭಯ-ಚಿಂತೆಯಿಂದ ತುಂಬಿದ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು ಕಷ್ಟ. ಆಗ, ಎಷ್ಟೇ ಸಾಧನೆ, ತರಬೇತಿ ನಮ್ಮ ಬೆನ್ನಿಗಿದ್ದರೂ ತುಂಬಾ ‘ಸಿಲ್ಲಿ’ ಎನಿಸಬಹುದಾದ ತಪ್ಪುಗಳನ್ನು ನಾವು ಮಾಡಿಬಿಡಬಹುದು! ತೀವ್ರ ಒತ್ತಡವು ನಾವು ಮಾಡ ಬೇಕಾದ ಕಾರ್ಯದ ಬಗ್ಗೆ ಅತಿಯಾದ ವಿಶ್ಲೇಷಣೆ ಮಾಡಿಕೊಳ್ಳುವಂಥ ಸ್ಥಿತಿಯನ್ನು ತಂದಿಡುತ್ತದೆ. ಅಂದರೆ ನಾವು ‘ಆಟೊಮ್ಯಾಟಿಕ್’ ಆಗಿ ಮಾಡುತ್ತಿದ್ದ ಕಾರ್ಯವನ್ನೂ ಅತಿ ಎಚ್ಚರದಿಂದ ಮಾಡಲು ಹೋಗಿ ತಪ್ಪಿಬಿಡುತ್ತೇವೆ. ಇವೆಲ್ಲವೂ ಆಟಕ್ಕಷ್ಟೇ ಅಲ್ಲ ಕೊನೆಗೆ ಜೀವನದ ಯಾವ ಸವಾಲಿಗೂ ಅನ್ವಯಿಸುತ್ತವೆ ಎನ್ನುವುದೇ ಸ್ವಾರಸ್ಯ!

ಇಂತಹ ಸಂದರ್ಭ ಸೃಷ್ಟಿಯಾಗಬಾರದೆಂದರೆ, ಒತ್ತಡದ ಪರಿಸ್ಥಿತಿಯನ್ನು ಮತ್ತೆ ಮತ್ತೆ ಕೃತಕವಾಗಿ ಸೃಷ್ಟಿಸಬೇಕು. ಅಭ್ಯಾಸ ನಡೆಸಬೇಕು. ಆಟವಾಡುವ ಗಳಿಗೆಯಲ್ಲಿ ಕೆಲವು ದೀರ್ಘ ಶ್ವಾಸಗಳು ಸಹಾಯಕ. ತಮ್ಮ ಒಳಗಿನ ಸಾಮರ್ಥ್ಯದ ಬದಲು ಹೊರಗಿನ ಅಂಶಗಳ ಬಗ್ಗೆ ಆ ಗಳಿಗೆಯಲ್ಲಿ ಗಮನ ಕೇಂದ್ರೀಕರಿಸು ವುದೂ ಉಪಯುಕ್ತ. ಅಂದರೆ, ಗಾಲ್ಫರ್‌ಗಳು ತಮ್ಮ ಕೈಗಳ ಚಲನೆ ಗಮನಿಸುವ ಬದಲು, ಬಾಲ್ ಹೇಗೆ ಹಾರುತ್ತದೆ ಎಂಬುದನ್ನು ಗಮನಿಸುವ ರೀತಿ.

ಆಟ-ಪಾಠ-ಜೀವನ ಎಲ್ಲಕ್ಕೂ ಹಳೆಯ ಇಂಗ್ಲಿಷ್ ಗಾದೆ ‘ಪ್ರ್ಯಾಕ್ಟೀಸ್ ಮೇಕ್ಸ್ ಮ್ಯಾನ್ ಪರ್‍ಫೆಕ್ಟ್’ ಎಂಬುದನ್ನು ಈಗ ನಾವು ಬದಲಿಸಬೇಕಿರುವುದು ‘ಪ್ರ್ಯಾಕ್ಟೀಸ್ ಅಂಡರ್ ಪ್ರೆಷರ್, ವಿತ್ ಫೋಕಸ್ ಮೇಕ್ಸ್ ಪರ್‍ಫೆಕ್ಟ್’ ಎಂಬಂತೆ. ಒತ್ತಡವನ್ನು ಎದುರಿಸಿ, ಅಭ್ಯಾಸ ಮಾಡಿದ ಮನಸ್ಸುಗಳಿಗೆ ‘ಆಡುವುದು ಸಂತೋಷಕ್ಕಾಗಿ’ ಎಂದು ಸಹಜವಾಗಿ ಅನ್ನಿಸುತ್ತದೆ. ಆಗ ಆ ಮನಸ್ಸುಗಳಿಗೆ ಗೆಲುವು ಬೇಕಾಗಿರಲಿ, ಇಲ್ಲದಿರಲಿ, ಅದು ನಿಶ್ಚಿತವಾಗಿಯೂ ಲಭಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT