ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಾನಸಿಕ ಆರೋಗ್ಯ- ಈ ಹೊತ್ತಿನ ಸವಾಲು

ಕೋವಿಡ್‌ ನಂತರದ ಪರಿಸ್ಥಿತಿಯನ್ನು ನಾವು ಸಮರ್ಥವಾಗಿ ಎದುರಿಸಿ ಆರೋಗ್ಯ ಕಾಯ್ದುಕೊಳ್ಳಬೇಕೆಂದರೆ, ಮಾನಸಿಕ ಸ್ಥಿರತೆ ಬಹುಮುಖ್ಯ
Last Updated 5 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ (ಅ. 4– 10) ನಡೆಯುತ್ತಿದೆ. ಮೆಂಟಲ್‌ ಹೆಲ್ತ್‌ ಇನ್‌ ಆ್ಯನ್‌ ಅನ್‌ಈಕ್ವಲ್‌ ವರ್ಲ್ಡ್‌- ಹಲವು ವಿಧದ ಅಸಮಾನತೆಗಳಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಎಲ್ಲರ ಹಕ್ಕಾಗಿರುವ ಬಗೆಗೆ ಈ ಬಾರಿಯ ಧ್ಯೇಯವಾಕ್ಯ ನಮ್ಮ ಗಮನ ಸೆಳೆಯುತ್ತದೆ. ‘ಕೋವಿಡ್ ಪ್ಯಾಂಡೆಮಿಕ್’ ಮುಗಿಯಿತೇನೋ ಎಂದು ನಿಟ್ಟುಸಿರುಬಿಡುವ ಹೊತ್ತಿಗಾಗಲೇ ಮಾನಸಿಕ ಅನಾರೋಗ್ಯದ ‘ಪ್ಯಾಂಡೆಮಿಕ್’ ಆರಂಭವಾಗುತ್ತಿದೆ ಎಂಬುದನ್ನು ಬಹುಜನ ಗಮನಿಸಿದಂತಿಲ್ಲ.

ಕೊರೊನಾ ಸೋಂಕಿನ ಪರಿಸ್ಥಿತಿ ಆರೋಗ್ಯ ಕ್ಷೇತ್ರದಲ್ಲಿನ ಹಲವು ರೀತಿಯ ಅಸಮಾನತೆಗಳನ್ನು ನಮ್ಮೆದುರು ತೆರೆದಿಟ್ಟಿದೆ. ಯಾವ ದೇಶವೂ ಎಷ್ಟೇ ಶ್ರೀಮಂತವಾದರೂ ಸೋಂಕಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ನಂತರದ ಪರಿಣಾಮಗಳನ್ನಾದರೂ ನಾವು ಸರಿಯಾಗಿ ಎದುರಿಸಿ ಆರೋಗ್ಯವನ್ನು ಉಳಿಸಿಕೊಳ್ಳಬೇಕೆಂದರೆ, ಮಾನಸಿಕ ಸ್ಥಿರತೆ ಬಹುಮುಖ್ಯ ಎನ್ನುವ ಸತ್ಯವನ್ನು ನಾವು ಗಮನಿಸಲೇಬೇಕು.

ಜಾಗತಿಕ ಮಾನಸಿಕ ಆರೋಗ್ಯಕ್ಕಾಗಿ ದುಡಿಯುವ ಸಂಸ್ಥೆ ‘ವರ್ಲ್ಡ್‌ ಮೆಂಟಲ್ ಹೆಲ್ತ್ ಫೆಡರೇಷನ್’ (ಡಬ್ಲ್ಯುಎಫ್‌ಎಂಎಚ್‌) ಅಸ್ತಿತ್ವಕ್ಕೆ ಬಂದದ್ದು 1948ರಲ್ಲಿ. ಜಗತ್ತು ಮಹಾಯುದ್ಧದಿಂದ ಚೇತರಿಸಿಕೊಳ್ಳುತ್ತಿದ್ದ ಕಾಲ. ವಿಶ್ವ ಆರೋಗ್ಯ ಸಂಸ್ಥೆ, ಡಬ್ಲ್ಯುಎಫ್‌ ಎಂಎಚ್‌, ವಿಶ್ವಸಂಸ್ಥೆ, ಯುನೆಸ್ಕೊ ಸೇರಿ ಮಾನಸಿಕ ಆರೋಗ್ಯದ ಬಗೆಗಿನ ವಿಶೇಷ ಕಾಳಜಿಯಿಂದ ರೂಪಿಸಿದ ಯೋಜನೆಗಳು, ಯುದ್ಧಾನಂತರದ ಪರಿಣಾಮಗಳಿಂದ ಜಗತ್ತು ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಈಗ ಮತ್ತೆ ಅಂಥದ್ದೇ ಸಂದರ್ಭ. ಈಗಿರುವ ಕೋವಿಡ್ ನಂತರದ ಜಾಗತಿಕ ಬಿಕ್ಕಟ್ಟು ಇಲ್ಲಿಯವರೆಗೆ ಇದ್ದ ಆರ್ಥಿಕ- ಸಾಮಾಜಿಕ ಅಂತರಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇದು, ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರದಿರದು.

ಕೋವಿಡ್‍ನಿಂದಾಗಿ, ಕೋವಿಡ್ ಸಂದರ್ಭದಲ್ಲಿ ಇತರ ಕಾರಣಗಳಿಂದಾಗಿ ಆತ್ಮೀಯರನ್ನು ಕಳೆದುಕೊಂಡವರಿಗೆ ಆ ದುಃಖ ನಿಭಾಯಿಸುವುದೂ ಒಂದು ಮುಖ್ಯ ಸವಾಲೇ. ಆರ್ಥಿಕವಾಗಿ ಉದ್ಯೋಗದ ನಷ್ಟ, ಬದಲಾದ ಸಾಂಸ್ಕೃತಿಕ ಜಗತ್ತಿನ ರೀತಿ-ನೀತಿಗಳು, ಮಕ್ಕಳ ಶಿಕ್ಷಣದ ಗೊಂದಲಗಳು ಇವೆಲ್ಲ ಒತ್ತಡ ತರುವುದು ನಿಶ್ಚಿತ. ಒತ್ತಡ ನಿಭಾಯಿಸುವ ಮೊದಲ ಹಂತವೇ ಒತ್ತಡವನ್ನು ಗುರುತಿಸಿಕೊಳ್ಳುವುದು!

‘ಸಂತೋಷ’ದ ಹೊಸ ವಿಜ್ಞಾನದತ್ತ ಗಮನಹರಿ ಸೋಣ. ಮನಸ್ಸು ಸಂತಸವಾಗಿರುವುದು ಕೇವಲ ಮಾನಸಿಕ ಆರೋಗ್ಯಕ್ಕಷ್ಟೇ ಅಲ್ಲ, ದೇಹದಲ್ಲಿ ಬರ ಬಹುದಾದ ಇತರ ಕಾಯಿಲೆಗಳನ್ನು ತಡೆಗಟ್ಟಲೂ ಅಗತ್ಯ ಎನ್ನುವುದನ್ನು ನಿರೂಪಿಸಿದೆ. ಆದರೆ ಬರೀ ಸಂತೋಷದ ಪರಿಸ್ಥಿತಿಗಳಲ್ಲೇ ನಾವು ಬದುಕಲು ಸಾಧ್ಯವಿಲ್ಲ. ‘ಸಂತೋಷ’ದ ಅಧ್ಯಯನಕ್ಕೆಂದೇ ಮೀಸಲಾದ ವಿಜ್ಞಾನದ ಶಾಖೆಯ ಪ್ರಕಾರ, ಸಂತೋಷ ಮತ್ತು ಅಸಂತೋಷಗಳೆರಡೂ ಒಂದು ರೇಖೆಯ ಎರಡು ತುದಿಗಳಲ್ಲ. ಅವು ವ್ಯಕ್ತಿಯಲ್ಲಿ ಏಕಕಾಲಕ್ಕೆ ವಿವಿಧ ಪ್ರಮಾಣಗಳಲ್ಲಿ ಇರಬಹುದಾದ ಅಂಶಗಳು. ಹೇಗೆ ಕಾಯಿಲೆ ಇಲ್ಲದಿರುವುದಷ್ಟೇ ಆರೋಗ್ಯ ಎನಿಸುವುದಿಲ್ಲವೋ ಅದೇ ರೀತಿ, ದುಃಖವಿಲ್ಲ ಎಂದಾಕ್ಷಣ ಅಲ್ಲಿ ಸಕಾರಾತ್ಮಕ ಭಾವನೆಗಳುಳ್ಳ ಸಂತೋಷವಿದೆ ಎಂದರ್ಥವಲ್ಲ.

ಬೇರೆಯವರ ಕಷ್ಟವನ್ನು ನೋಡಿ ಮನಸ್ಸು ಪಡುವ ಕೆಟ್ಟ ಸಂತಸಕ್ಕೂ ಮತ್ತೊಬ್ಬರ ಸಂತಸವನ್ನು ನೋಡಿದಾಗ ಮನಸ್ಸು ಪಡಬಹುದಾದ ಆನಂದಕ್ಕೂ ಬೇರೆ ಬೇರೆ ಪದಗಳಿಲ್ಲವಷ್ಟೆ. ಹಾಗಾಗಿ, ಗ್ರಹಿಸುವಾಗ- ವ್ಯಕ್ತಪಡಿಸುವಾಗ ಭಾಷೆಯನ್ನು ಮೀರಿದ ಸಂವೇದನಾ ಜಗತ್ತನ್ನು ಮನಸ್ಸು ತೆರೆದು ನೋಡುವ, ಸ್ಪಂದಿಸುವ ಸಾಮರ್ಥ್ಯವನ್ನು ನಾವಿಂದು ಕಲಿಯಬೇಕಿದೆ.

ಮಿದುಳು- ಮನಸ್ಸುಗಳು ಸಂತಸವನ್ನೇ ಹುಡುಕುವುದಕ್ಕೆ ಪ್ರಕೃತಿಸಹಜವಾಗಿ ತೊಡಗುತ್ತವೆ. ಶಿಶುಗಳು ಸಿಹಿಯನ್ನೇ ಇಷ್ಟಪಡುತ್ತವೆ. ಕಹಿಯನ್ನು ನಾಲಿಗೆಗಿಟ್ಟರೆ ಮುಖ ಸಿಂಡರಿಸುತ್ತವೆ. ಜೋಗುಳದ ಸಂಗೀತಕ್ಕೆ ತಲೆದೂಗುತ್ತವೆ, ಅದೇ ಕರ್ಕಶ ಧ್ವನಿಗೆ ಕಿಟಾರೆಂದು ಕಿರುಚುತ್ತವೆ. ಹಾಗೆಯೇ ಮಾನವ ಮಿದುಳು- ಮನಸ್ಸು ‘ಸಂಘ ಜೀವನ’ಕ್ಕೆ ಹೊಂದಿಕೊಂಡವು. ಬೇರೆಯವರೊಂದಿಗೆ ಇರುವಾಗ, ಚಟುವಟಿಕೆಯಿಂದಿದ್ದಾಗ, ಆಟವಾಡುವಾಗ ‘ಸಂತೋಷ’ದ ಪ್ರಮಾಣ ಏರುತ್ತದೆ. ಇಲ್ಲಿ ಮುಖ್ಯವಾಗುವುದು ‘ನಾವು’, ‘ನಾನು ಎಲ್ಲರೊಂದಿಗೆ ಸೇರಿಕೊಂಡಿದ್ದೇನೆ’ ಎಂಬ ಭಾವ. ‌

ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ನಡೆದ ಅಧ್ಯಯನವೊಂದು, ಮರಣಪತ್ರಗಳು ಯಾವಾಗಲೂ ವ್ಯಕ್ತಿ ‘ಏಕಾಕಿ’ಯಾಗಿದ್ದುದನ್ನೇ ಒತ್ತಿ ಹೇಳುತ್ತವೆ ಎಂಬುದನ್ನು ಗುರುತಿಸಿದೆ. ದುಡ್ಡು ‘ಸಂತೋಷ’ವನ್ನು ನೀಡುತ್ತದೆಯೇ ಎಂಬ ಪ್ರಶ್ನೆಯೂ ಆರ್ಥಿಕ ಹಿನ್ನಡೆಯ ಈ ಸಂದರ್ಭದಲ್ಲಿ ಮುಖ್ಯವೇ. ನಮ್ಮ ಜೈವಿಕ- ಸಾಮಾಜಿಕ ಅಗತ್ಯಗಳನ್ನು ಮೀರಿ ಸುರಕ್ಷತೆ- ಸಂಘ ಜೀವನ- ಒಟ್ಟಾಗಿ ಬಾಳುವುದು- ಇರುವುದರಲ್ಲಿ ಸಂತಸ ಪಡುವುದು– ಇವು ಭವಿಷ್ಯಕ್ಕಾಗಿ ನಾವು ಕೂಡಿಡುವುದಕ್ಕಿಂತ ಮುಖ್ಯವಾಗುತ್ತವೆ.

ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದು ಒಂದೆಡೆಯಾದರೆ, 2020ರ ಹೊತ್ತಿಗಾಗಲೇ ಜಗತ್ತಿನ ಎರಡನೇ ಅತಿ ದೊಡ್ಡ ಅಸಮರ್ಥತೆಯಾಗಿ ನಮಗೆ ಎದುರಾಗುತ್ತಿರುವ ಖಿನ್ನತೆಯನ್ನು ಎದುರಿಸುವುದು, ಅದರಿಂದ ತಪ್ಪಿಸಿಕೊಳ್ಳುವುದು ಇನ್ನೊಂದೆಡೆ, ಸಮಾಜದ ಈ ಹೊತ್ತಿನ ಸವಾಲುಗಳು. ಇವೆರಡನ್ನೂ ಯಶಸ್ವಿಯಾಗಿ ನಿಭಾಯಿಸುವುದು ಕೋವಿಡ್‍ನಂತಹ ಪ್ಯಾಂಡೆಮಿಕ್‍ಗಳ ನಡುವೆಯೂ ಸಮಾಜದ ಆರೋಗ್ಯವನ್ನು ಕಾಪಾಡಬಲ್ಲವು.

ಲೇಖಕಿ: ಮನೋವೈದ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT