ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಎಲ್ಲ ಬಗೆಯ ಕಲೆಗಳು ಬಹುತ್ವದ ಧ್ವನಿಗಳೇ ಆಗಿರುತ್ತವೆ
Published : 12 ಸೆಪ್ಟೆಂಬರ್ 2023, 23:30 IST
Last Updated : 12 ಸೆಪ್ಟೆಂಬರ್ 2023, 23:30 IST
ಫಾಲೋ ಮಾಡಿ
Comments

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ವೀರಭದ್ರಪ್ಪ ಶ್ರೇಷ್ಠ ಜಾನಪದ ಕಲಾವಿದರಾಗಿದ್ದರು. ಅವರಿಗೆ 90 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರಿಂದ ನಿಲ್ಲಲು, ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರ ಕೊರಳಿಗೆ ಕರಡಿವಾದ್ಯ ಹಾಕಿ ನಿಲ್ಲಿಸಿಬಿಟ್ಟರೆ, ಕುಣಿಕುಣಿದು ಬಾರಿಸುತ್ತಿದ್ದರು. ಕರಡಿವಾದನದ ಮೂಲಕ, ದೂರದಲ್ಲಿ ನಿಂತ ಶಿಷ್ಯನಿಗೆ ಟೆಲಿಗ್ರಾಂ ಮಾದರಿಯಲ್ಲಿ ಸಂದೇಶ ರವಾನಿಸುತ್ತಿದ್ದರು. ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸರ ಮುಂದೆ ಅವರು ಕರಡಿವಾದನ ಟೆಲಿಗ್ರಾಂ ಪ್ರದರ್ಶಿಸಿ ‘ವ್ಹಾವ್‌!’ ಎಂದು ತಮ್ಮ ಇಳಿವಯಸ್ಸಿನಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡು ಸಂಭ್ರಮಿಸಿದ್ದರು.

ನಟ ರಾಘವೇಂದ್ರ ರಾಜ್‌ಕುಮಾರ್ ತಮ್ಮ ‘13’ ಚಿತ್ರ ತೆರೆಕಾಣಲಿರುವುದರ ಅಂಗವಾಗಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ‘ಅಭಿನಯವೇ ನನಗೆ ಚಿಕಿತ್ಸೆ. ಲಕ್ವ ಹೊಡೆದು ಚೇತರಿಸಿಕೊಂಡ ನಂತರ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವುದು ಒಂದು ರೀತಿಯ ಚಿಕಿತ್ಸೆಯಂತೆ ಭಾಸವಾಗುತ್ತದೆ’ ಎಂದು ಹೇಳಿದ ಅನುಭೂತಿಯ ಸಂಗತಿ ಓದಿದಾಗ, ವೀರಭದ್ರಪ್ಪ ಅವರ ಚಿತ್ರ ಥಟ್ಟನೆ ಕಣ್ಣ ಮುಂದೆ ಬಂದಿತು.

ಕಲೆಗೆ ಒಂದು ವಿಚಿತ್ರ ಶಕ್ತಿ ಇದೆ. ಅದು ಎಲ್ಲ ದುರಿತ ಕಾಲಗಳಲ್ಲಿ ‘ಮಂತ್ರಶಕ್ತಿ’ಯಾಗಿ ಸಮಾಜವನ್ನು ಪೊರೆಯುತ್ತದೆ. ಮುದುಡಿದ ಮನಸ್ಸನ್ನು ಕ್ಷಣಮಾತ್ರದಲ್ಲಿ ಅರಳಿಸುತ್ತದೆ. ದೇಹದಲ್ಲಿ ಸಂತೋಷದ ಹೊಳೆ ಉಕ್ಕುವಂತೆ ಮಾಡುತ್ತದೆ. ಕಲಾವಿದರಿಗೆ ವಯಸ್ಸಾಗುತ್ತದೆ, ಆದರೆ ಮುಪ್ಪು ಬರುವುದಿಲ್ಲ. ಯಾವ ಕಲಾವಿದನೂ ದುರ್ಬಲನಲ್ಲ ಎನ್ನುತ್ತಿದ್ದರು ಡಿವಿಜಿ.

ಖ್ಯಾತ ಪಿಟೀಲು ವಾದಕರಾಗಿದ್ದ ಟಿ.ಎನ್.ಕೃಷ್ಣನ್ 80ರ ಗಡಿ ದಾಟಿದ ನಂತರವೂ ಕಾರ್ಯಕ್ರಮ ಕೊಡುತ್ತಿದ್ದರು. ವೇದಿಕೆ ಹತ್ತಿ ಬರುವುದಕ್ಕೆ ಅವರಿಗೆ ತುಂಬಾ ಕಷ್ಟವಾಗುತ್ತಿತ್ತು. ಪಿಟೀಲು ಕೈಗೆತ್ತಿಕೊಳ್ಳುತ್ತಲೇ ಅವರು ತರುಣರಾಗಿ ಬಿಡುತ್ತಿದ್ದರು. ‘ನನಗೆ ಮುಪ್ಪು ಬಂದಿರುವುದು ತಿಳಿಯುತ್ತದೆ. ಆದರೆ ಯಾವಾಗ ಕೈಗೆ ಈ ಪಿಟೀಲು ಬರುತ್ತದೋ ಆಗ ವೃದ್ಧಾಪ್ಯ ಮರೆತು 18ರ ಯೌವನ ಮರುಕಳಿಸುತ್ತದೆ’ ಎಂದು ಅವರು ಹೇಳುತ್ತಿದ್ದರು.

ಬದುಕಿನ ನಿರಂತರ ಸಂತೋಷಕ್ಕೆ ಕಲೆಯೊಂದು ಜೊತೆಗಿರಬೇಕು. ಅದನ್ನು ಶ್ರದ್ಧೆ, ಶ್ರಮ, ತಾಳ್ಮೆ, ಸತತ ಅಭ್ಯಾಸದಿಂದ ಉನ್ನತೀಕರಿಸಿಕೊಳ್ಳಬೇಕು. ಕಲಾಕ್ಷೇತ್ರದಲ್ಲಿ ಹೆಚ್ಚು ಗಳಿಕೆ ಇಲ್ಲ ಎಂಬ ಮಾತೊಂದು ಇದೆ. ಆದರೆ  ಸಂತೋಷ ಕೂಡ ದೊಡ್ಡ ಸಂಪತ್ತು ಎಂಬುದನ್ನು ಮರೆಯಬಾರದು.

ಬದುಕಿನ ಅರ್ಥವನ್ನು ಶೋಧಿಸುವ ಶಕ್ತಿ ಕಲೆಗೆ ಮಾತ್ರ ಇದೆ. ಅದು ಬದುಕಿಗೆ ಹೊಸ ಆಯಾಮ ಕೊಡುತ್ತದೆ. ಮುಖ್ಯವಾಗಿ, ಎಲ್ಲ ಕಲೆಗಳು ಬಹುತ್ವದ ಧ್ವನಿಯಾಗಿರುತ್ತವೆ. ವಿಧಾನಸಭೆ, ಲೋಕಸಭೆಯ ಕಲಾಪಗಳು ಜಡಗೊಂಡಾಗ ಕಾವ್ಯದ ಒಂದು ಸಾಲು ಉಲ್ಲೇಖವಾದರೆ ಹೊಸ ಉತ್ಸಾಹ ಮೂಡುತ್ತದೆ. ಬಜೆಟ್ ಮಂಡನೆಯಲ್ಲಿ ಕಾವ್ಯದ ಸಾಲುಗಳನ್ನು ಉಲ್ಲೇಖಿಸುವುದು ಒಂದು ಒಳ್ಳೆಯ ಸಂಪ್ರದಾಯವಾಗಿ ರೂಪುಗೊಂಡಿದೆ. ಕಾವ್ಯವು ಬಜೆಟ್‌ಗಿಂತಲೂ ಹೆಚ್ಚು ತೂಗುತ್ತದೆ.

ಆಂತರಿಕ ಒಳಬೇಗುದಿಗಳಿಂದ ಬಿಡುಗಡೆಯಾಗಲು ಕಲೆ ಒಂದು ಉತ್ತಮ ಮಾಧ್ಯಮ, ದಿವ್ಯ ಔಷಧಿ. ಕಲೆಯ ಅಭ್ಯಾಸವೇ ಒಂದು ಧ್ಯಾನ. ಕಲೆ ಯಾವತ್ತೂ ಪ್ರಭುತ್ವದ ಸ್ನೇಹಿತ ಅಲ್ಲ. ಅದು ಸದಾ ಪ್ರತಿಪಕ್ಷವಾಗಿ ಕೆಲಸ ಮಾಡುತ್ತದೆ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಜನರನ್ನು ಬಡಿದೆಬ್ಬಿಸುವ ಹಾಡುಗಳು ಎಲ್ಲ ಭಾಷೆಗಳಲ್ಲಿಯೂ ಹುಟ್ಟಿಕೊಂಡವು. ಇವು ಜನರ ಮನಸ್ಸನ್ನು ಗಾಢವಾಗಿ ತಟ್ಟಿ ಸ್ವಾತಂತ್ರ್ಯ ಹೋರಾಟಕ್ಕೆ ಸೆಳೆದವು. ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟಕ್ಕೆ ಕಾವು ಬಂದದ್ದು ಕ್ರಾಂತಿಕಾರಿ ಕವಿ ಗದ್ದರ್ ಅವರ ಹಾಡುಗಳಿಂದ.

ಚಳವಳಿಗಳನ್ನು ರೂಪಿಸುವಲ್ಲಿ ಕಲೆಯ ಪಾತ್ರ ದೊಡ್ಡದು. ಯುದ್ಧ, ರೋಗಬಾಧೆ, ಅತಿವೃಷ್ಟಿ, ಅನಾವೃಷ್ಟಿ, ವಿಪ್ಲವಗಳು ಹುಟ್ಟಿಕೊಂಡಾಗ ಕಲೆ ಪರ್ಯಾಯ ಮಾರ್ಗಗಳನ್ನು ಶೋಧಿಸುತ್ತದೆ. ಕೊರೊನಾ ಕಾಲಘಟ್ಟದಲ್ಲಿ ಅನೇಕರು ಸಾಹಿತ್ಯ ರಚನೆ, ಸಂಗೀತ ಮತ್ತು ಭಾಷೆಗಳ ಕಲಿಕೆಯಲ್ಲಿ ತೊಡಗಿದ್ದನ್ನು ನೆನೆಯಬಹುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೈಲು ಸೇರಿದವರು ಖಿನ್ನತೆಗೆ ಒಳಗಾಗದಂತೆ ಕಾಪಾಡಿಕೊಳ್ಳಲು ಓದುವ, ಬರೆಯುವ, ಬೇರೆ ಭಾಷೆಗಳನ್ನು ಕಲಿಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

ಕಲೆಗೆ ಜಾತಿ, ಧರ್ಮ, ಭಾಷೆಯ ಗಡಿಗಳಿಲ್ಲ. ತಳ ಸಮುದಾಯದ ಜಾನಪದ ಕಲಾವಿದ ಸನಾದಿ ಅಪ್ಪಣ್ಣ, ಕಲೆಯಿಂದ ಕೀಳರಿಮೆಯನ್ನು ಗೆಲ್ಲುವುದು ಸಾಧ್ಯವಾಯಿತು ಎಂದು ಹೇಳುತ್ತಿದ್ದರು. ಸನಾದಿ ನುಡಿಸಲು ಪೂಜೆ ವೇಳೆಗೆ ಅವರಿಗೆ ಬೀಳಗಿ ಮಂದಿರದ ಪ್ರವೇಶ ದೊರೆಯುತ್ತಿತ್ತು. ಎಸ್ಕಿಮೊ ಜನರು ಹಿಮದ ಕೆಳಗೆ ಸಿಲುಕಿದಾಗ ಸಾವಿನ ಭೀತಿ ಗೆಲ್ಲಲು ಒಬ್ಬರಿಗೊಬ್ಬರು ಕಥೆ ಹೇಳುತ್ತಾರಂತೆ. ಕಥೆ ಹೇಳುವುದು ಮತ್ತು ಕಥೆ ಕಟ್ಟುವ ಕಲೆ ಎಸ್ಕಿಮೊ ಜನರ ಬದುಕಿನ ಭಾಗವೇ ಆಗಿದೆ.

ಮಕ್ಕಳು ಪಠ್ಯದ ಆಚೆಗೆ ಲಲಿತಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು ಬಹಳ ಅವಶ್ಯ. ಪರೀಕ್ಷೆಯಲ್ಲಿ ಪಡೆದ ಅಂಕಗಳಿಂದ ಅಲ್ಲ, ಕಲೆಯಿಂದ ಮಾತ್ರ ಅವರು ಮುಂದಿನ ಬದುಕು ಎದುರಿಸುವ ಸಾಮರ್ಥ್ಯ ಪಡೆದುಕೊಳ್ಳಬಲ್ಲರು.

ಮನೆಯಲ್ಲಿ ಬೆಳಗಿನ ಉಪಾಹಾರ ತಡವಾದರೆ ‘ಮುನಿಸು ತರವೇ ಮುಗುದೆ, ಹಿತವಾಗಿ ನಗಲೂ ಬಾರದೆ’ ಎಂದು ಕವಿ ಸುಬ್ರಾಯ ಚೊಕ್ಕಾಡಿ ಅವರ ಭಾವಗೀತೆಯನ್ನು ಸಣ್ಣಗೆ ಹಾಡಿದರೆ ಸಾಕು, ಕೆಲವೇ ಕ್ಷಣಗಳಲ್ಲಿ ಉಪ್ಪಿಟ್ಟಿನ ಘಮಘಮ ವಾಸನೆ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT