ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಉದಾರ ಶಿಕ್ಷಣ: ನಡೆಯಲಿ ವಿಶ್ಲೇಷಣೆ

ಸಮಾಜ ಮುಕ್ತವಾಗದೆ, ಶಿಕ್ಷಣ ವ್ಯವಸ್ಥೆ ಉದಾರವಾಗಿರಲು ಸಾಧ್ಯವಿಲ್ಲ
Last Updated 14 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ವಲಯದಲ್ಲಿ ಈಗ ಚರ್ಚೆಗೆ ಒಳಗಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉದಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದೊಂದು ಸ್ವಾಗತಾರ್ಹ ಅಂಶವೆಂದು ಶಿಕ್ಷಣತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ, ಉದಾರ ಶಿಕ್ಷಣವೆಂದರೇನು ಎಂದು ಕೂಲಂಕಷವಾಗಿ ಅರಿಯುವ ಅಗತ್ಯವಿದೆ. ಮುಖ್ಯವಾಗಿ, ಪ್ರಸಕ್ತ ಉದಾರ ಶಿಕ್ಷಣವನ್ನು ಮೂಲಾರ್ಥದಲ್ಲಿ ಅಳವಡಿಸಲಾಗುತ್ತಿದೆಯೇ ಅಥವಾ ಜಾಗತೀಕರಣದ ಕಪಿಮುಷ್ಟಿಯಲ್ಲಿ ಇದು ತನ್ನ ಅಂತಃಸತ್ವವನ್ನು ಕಳೆದುಕೊಂಡಿದೆಯೇ ಎಂದು ವಿಶ್ಲೇಷಿಸಬೇಕಿದೆ.

ಮೊದಲನೆಯದಾಗಿ, ಉದಾರ ಶಿಕ್ಷಣವು ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆಗೆ ಒತ್ತು ನೀಡುತ್ತದೆ. ಇದರ ಧ್ಯೇಯವು ಜ್ಞಾನ ಮತ್ತು ಕೌಶಲ ಅಭಿವೃದ್ಧಿ ಮಾಡುವುದು, ವಿಮರ್ಶಾತ್ಮಕ ಚಿಂತನೆ ಉದ್ದೀಪಿಸುವುದು ಮತ್ತು ನಾಗರಿಕ ಪ್ರಜ್ಞೆ ಬೆಳೆಸುವುದು. ಜೊತೆಗೆ, ಸಮುದಾಯ ಸೇವೆ ಹಾಗೂ ಸಂಶೋಧನೆಯ ಮೂಲಕ ಸಕ್ರಿಯ ಪೌರತ್ವ ಬೆಳೆಸುತ್ತದೆ. ಅಲ್ಲದೆ, ವಿದ್ಯಾರ್ಥಿಯನ್ನು ಅಜ್ಞಾನದ ಸಂಕೋಲೆಗಳಿಂದ ಮುಕ್ತಗೊಳಿಸಿ, ಜ್ಞಾನದ ಗಡಿಗಳನ್ನು ವಿಸ್ತರಿಸಿ, ಸ್ವತಂತ್ರ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಉದಾರ ಶಿಕ್ಷಣದ ಪರಿಕಲ್ಪನೆಯಲ್ಲಿ ಬೌದ್ಧಿಕ ಸೃಜನಶೀಲತೆ, ವೈವಿಧ್ಯಮಯ ವಿಚಾರಗಳು ಮತ್ತು ಅನುಭವಗಳ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದೂ ಐಕ್ಯವಾಗಿವೆ.

ಈ ಪ್ರಸ್ತುತತೆಯಲ್ಲಿ, ಉದಾರ ಶಿಕ್ಷಣದ ಪರಿಕಲ್ಪನೆಯ ಇತಿಹಾಸದತ್ತ ಬೆಳಕು ಚೆಲ್ಲಿದರೆ, ಇದರ ಮೂಲವನ್ನು ಗ್ರೀಕ್ ಜ್ಞಾನ ಪರಂಪರೆಯಲ್ಲಿ ಗುರುತಿಸಬಹುದು. ಜಾನ್ ಹೆನ್ರಿ ನ್ಯೂಮನ್ ಹೇಳುವಂತೆ, ಉದಾರ ಶಿಕ್ಷಣವು ಪ್ಲೇಟೊ, ಅರಿಸ್ಟಾಟಲ್ ಮುಂತಾದ ಶ್ರೇಷ್ಠ ಚಿಂತಕರಿಂದ ಅಭಿವೃದ್ಧಿಪಡಿಸಿದ ಒಂದು ಕಲ್ಪನೆಯಾಗಿದೆ.

ಇದು ಮಧ್ಯ ಯುಗದಲ್ಲಿ ನಿಗ್ರಹಕ್ಕೊಳಪಟ್ಟರೂ ಮುಂದೆ ಹನ್ನೆರಡನೇ ಶತಮಾನದಲ್ಲಿ ಅರಿಸ್ಟಾಟಲನ ತತ್ವಶಾಸ್ತ್ರದ ಪುನರುತ್ಥಾನದೊಂದಿಗೆ ಮರುಜೀವ ಪಡೆಯಿತು. ಆಧುನಿಕ ಕಾಲಘಟ್ಟದಲ್ಲಿ ಉದಾರ ಶಿಕ್ಷಣವನ್ನು ಪುನರ್ ಪ್ರತಿಪಾದಿಸಿದ ಶ್ರೇಯಸ್ಸು ಜಾನ್ ಹೆನ್ರಿ ನ್ಯೂಮನ್, ಥಾಮಸ್ ಹಕ್ಸ್ಲೆ ಮತ್ತು ಎಫ್‌.ಡಿ ಮೋರಿಸರಂತಹ ಚಿಂತಕರಿಗೆ ಸಲ್ಲುತ್ತದೆ.

ಜಾಗತೀಕರಣಪ್ರೇರಿತ ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಉದಾರ ಶಿಕ್ಷಣದ ಅಳವಡಿಕೆ ಹಿಂದೆಂದಿಗಿಂತಲೂ ಅನಿವಾರ್ಯವಾಗಿದೆ. ಯಾಕೆಂದರೆ, ಇದು ಮನುಷ್ಯನ ಮನಸ್ಸನ್ನು ಮುಕ್ತಗೊಳಿಸಿ, ಜ್ಞಾನದ ವಿವಿಧ ಶಾಖೆಗಳು ಹೇಗೆ ಪರಸ್ಪರ ಜೋಡಣೆಯಾಗಿ ಅವಲಂಬಿತವಾಗಿವೆ ಎಂಬುದನ್ನು ಅರಿಯಲು ಸಹಾಯ ಮಾಡುತ್ತದೆ. ವಿವಿಧ ಜ್ಞಾನಶಿಸ್ತುಗಳ ನಡುವೆ ಗೋಡೆಗಳು ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ, ಸಮನ್ವಯ ಸಾಧಿಸಲು ಜ್ಞಾನಶಿಸ್ತುಗಳ ಮರುಜೋಡಣೆ ಅಗತ್ಯವಿದೆ. ಮುಖ್ಯವಾಗಿ, ವಿಜ್ಞಾನ ಮತ್ತು ಕಲೆ ಎನ್ನುವುದು ವಿಭಿನ್ನ ಖಂಡಗಳಾಗಿಯೇ ಉಳಿಯುವ ಬದಲಾಗಿ, ‘ಕಲಾವಿಜ್ಞಾನ’ವಾಗಬೇಕಿದೆ.

ಸ್ಟೀವ್ ಜಾಬ್ಸ್ ಹೇಳಿದಂತೆ, ತಂತ್ರಜ್ಞಾನದೊಂದಿಗೆ ಮಾನವಿಕತೆ ಜೋಡಣೆಯಾದರೆ ಮಾತ್ರ ಯಶಸ್ಸು ಸಾಧ್ಯ. ಈ ದಿಸೆಯಲ್ಲಿ, ನಾವು ಕಲಿಯುವ ಪಠ್ಯಕ್ರಮದಲ್ಲಿ ವೈವಿಧ್ಯ ಅಳವಡಿಸಿಕೊಳ್ಳುವುದರೊಂದಿಗೆ, ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶ ಕಲ್ಪಿಸುವ ಅಗತ್ಯವಿದೆ. ಒಟ್ಟಿನಲ್ಲಿ, ಕಲಿಕೆಯೆನ್ನುವುದು ಒಂದು ಉಲ್ಲಾಸದಾಯಕ ಚಟುವಟಿಕೆಯಾಗಬೇಕೇ ವಿನಾ, ಮಾನಸಿಕ ಒತ್ತಡದ್ದಲ್ಲ.

ಜಾಗತಿಕ ಮಟ್ಟದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳು, ನೂತನ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳ ಸ್ಫೋಟ ಮತ್ತು ಇವುಗಳ ಪರಿಣಾಮವಾಗಿ ಹೆಚ್ಚಿರುವ ಕೌಶಲಗಳ ಬೇಡಿಕೆಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸವಾಲುಗಳನ್ನು ಸೃಷ್ಟಿಸಿವೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆ ಮಾತ್ರ ವಿದ್ಯಾರ್ಥಿಗಳಿಗೆ ಈ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ಶಕ್ತಿ ತುಂಬಲು ವಿಫಲವಾಗಿದೆ. ವಿಶೇಷವಾಗಿ, ಅವರಲ್ಲಿ ಕುತೂಹಲ ಹುಟ್ಟಿಸುವ, ಪ್ರಶ್ನಿಸುವ, ಆಲೋಚನೆ ರೂಪಿಸುವ ಮತ್ತು ಭಾವನಾತ್ಮಕ ಆಯಾಮಗಳ ಅಭಿವೃದ್ಧಿಯ ಮೂಲಕ ಸಬಲೀಕರಣಗೊಳಿಸಿ ಬಹುತ್ವದ ಸಮಾಜ ನಿರ್ಮಿಸುವಲ್ಲಿ ಎಡವಿದೆ.

ಸದ್ಯದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡುವುದನ್ನು ಒಳಗೊಂಡಂತೆ, ‘ಶಿಕ್ಷಣವನ್ನು ಹೆಚ್ಚು ಪ್ರಾಯೋಗಿಕ, ಸಮಗ್ರ, ಆವಿಷ್ಕಾರ ಆಧಾರಿತ, ವಿದ್ಯಾರ್ಥಿ ಕೇಂದ್ರಿತ ಮತ್ತು ಆನಂದದಾಯಕ’ ಆಗಿಸುವ ಉದ್ದೇಶವನ್ನು ಪ್ರಸ್ತಾಪಿಸುತ್ತದೆ. ವಿಮರ್ಶಾತ್ಮಕ ಮತ್ತು ಮುಕ್ತ ಚಿಂತನೆಗೆ ಹೆಚ್ಚು ಒತ್ತು ನೀಡಲಾಗಿದೆ. ದುರದೃಷ್ಟವಶಾತ್, ವಾಸ್ತವದಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಮುಕ್ತ ಅನುಸಂಧಾನ ನಡೆಯುವ ಸಾಧ್ಯತೆಗಳು ವಿರಳವಾಗಿವೆ. ಹಾಗಾಗಿ, ಸಮಾಜ ಮುಕ್ತವಾಗದೆ ಶಿಕ್ಷಣ ವ್ಯವಸ್ಥೆ ಉದಾರವಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಮನಗಾಣಬೇಕಿದೆ.

ಅನಿಶ್ಚಿತತೆಯ ಈ ಕಾಲಘಟ್ಟದಲ್ಲಿ ಜ್ಞಾನವೊಂದೇ ಜನರನ್ನು ಸಶಕ್ತಗೊಳಿಸುವ ಸಾಧನ. ಹಾಗಾಗಿ, ಇದಕ್ಕೆ ಪೂರಕವಾದ ಉದಾರ ಶಿಕ್ಷಣದ ವೈಶಿಷ್ಟ್ಯಗಳಾದ ಸ್ವಾತಂತ್ರ್ಯ, ದೇಹ-ಮನಸ್ಸುಗಳ ಸಮತೋಲನ, ಕುತೂಹಲ ಸೃಷ್ಟಿ, ಆನಂದದಾಯಕ ಕಲಿಕೆ, ಸ್ವಯಂಶಿಸ್ತು ಮತ್ತು ಶಿಕ್ಷಾರಹಿತ ಮುಕ್ತ ಅಧ್ಯಯನವನ್ನು ನಿಜವಾಗಿ ಅಳವಡಿಸಿಕೊಳ್ಳಲು ಸಾಧ್ಯವೇ? ಇಲ್ಲವೇ ಅದು ಕೇವಲ ಆಶಯವಾಗಿ ಉಳಿಯುವುದೇ? ಈ ಕುರಿತು ಪರಾಮರ್ಶೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT