ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬದಲಾಗಲಿ ಬಾಳೆಲೆಯಲ್ಲಿನ ಬಗೆಬಗೆ

ಅತಿಥಿಗಳ ಆರೋಗ್ಯದ ಕಾಳಜಿ ಆತಿಥೇಯರದ್ದು ಕೂಡ. ಉಪಾಹಾರ, ಊಟೋಪಚಾರದಲ್ಲಿ ಪ್ರಜ್ಞಾಪೂರ್ವಕವಾಗಿ ಆಗಬೇಕಿದೆ ಬದಲಾವಣೆ
Last Updated 19 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಅದು, ಸಹಕಾರ ಸಂಘವೊಂದರ ವಾರ್ಷಿಕ ಸರ್ವಸದಸ್ಯರ ಸಭೆ. ಸಭೆ ಮುಕ್ತಾಯಗೊಂಡ ನಂತರ ಉಪಾಹಾರದ ವ್ಯವಸ್ಥೆಯಾಗಿತ್ತು. ಕಾಫಿ ಕೌಂಟರ್ ಬಳಿ ಕಾದು ನಿಂತಿದ್ದ ಆ ಪರಿಚಿತ ಹಿರಿಯರನ್ನು ‘ತಿಂಡಿ ಆಯ್ತಾ?’ ಎಂದು ಮಾಮೂಲಾಗಿ ವಿಚಾರಿಸಿದ್ದೇ ತಡ ಅಡ್ಡಡ್ಡ ತಲೆಯಾಡಿಸಿದರು. ‘ಈ ತಿಂಡೀನ ಹೇಗೆ ತಿನ್ಲಿ? ಜಿಲೇಬಿ ಜೊತೆಗೆ ಗೋಬಿ ಮಂಚೂರಿ. ನಂಗೆ ಶುಗರ್ ಇದೆ, ಸ್ವೀಟ್ ಆಗಲ್ಲ. ಜೊತೆಗೆ ಕೊಲೆಸ್ಟ್ರಾಲ್, ಕರಿದ ತಿಂಡೀನೂ ಮುಟ್ಟಲ್ಲ. ಹೊಟ್ಟೆ ಹಸೀತಿದೆ ಕಾಫಿನಾದ್ರೂ ಕುಡ್ದು ಹೋಗಣ ಅಂದ್ರೆ ಶುಗರ್‌ಲೆಸ್ ಇಲ್ವಂತೆ. ಈಗ ಮಾಡಿಕೊಡ್ತೀವಿ ಅಂದಿದ್ದಕ್ಕೆ ಕಾಯ್ತಾ ಇದೀನಿ’ ಎಂದು ತುಂಬಾ ಬೇಸರದಲ್ಲಿ ಅವರು ಹೇಳಿದಾಗ ನನ್ನ ಮನಸ್ಸಿಗೂ ಪಿಚ್ಚೆನಿಸಿತ್ತು!

ಹೌದು, ಅಲ್ಲಿ ಸೇರಿದವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು. ಅವರಲ್ಲಿ ಮಧುಮೇಹ ಇದ್ದವರ ಉಪಾಹಾರದ ಕತೆ ಏನು? ಹಾಗಂತ ಹೆಚ್ಚು ಹೊತ್ತು ಹಸಿದಿರಲೂ ಕಷ್ಟ. ಆಯೋಜಕರು ಇದರ ಬಗ್ಗೆಯೂ ಯೋಚಿಸಿ ಎಲ್ಲರಿಗೂ ಒಗ್ಗುವ ತಿಂಡಿಯ ವ್ಯವಸ್ಥೆ ಮಾಡಬೇಕಿತ್ತು. ಇದು ಅವರ ಕರ್ತವ್ಯ ಕೂಡ ಎಂದು ಆ ಕ್ಷಣಕ್ಕೆ ಬಲವಾಗಿ ಅನಿಸಿತ್ತು.

ಆ ಹಿರಿಯರೇನೋ ಆಹಾರದಲ್ಲಿ ಶಿಸ್ತನ್ನು ರೂಢಿಸಿಕೊಂಡವರು. ಸಿಹಿ, ಕರಿದದ್ದು ದೇಹಕ್ಕೆ ಆಗಿಬರದೆಂದು ದೂರವಿದ್ದಾರೆ. ಆದರೆ ಮಧುಮೇಹಿಗಳಲ್ಲಿ ಕೆಲವರು ತಮ್ಮ ತಮ್ಮ ಮನೆಯಲ್ಲಿ ಕಟ್ಟುನಿಟ್ಟಾಗಿ ಆಹಾರದ ಪಥ್ಯ ಮಾಡುವವರಾದರೂ ಹೊರ ಹೋದೊಡನೆ ತಮ್ಮ ಸಮಸ್ಯೆಯನ್ನು ಮರೆಯುತ್ತಾರೆ! ಎಚ್ಚರಿಸಲು, ನಿರ್ಬಂಧ ಹೇರಲು ಕುಟುಂಬದವರೂ ಹತ್ತಿರವಿಲ್ಲದಿದ್ದಾಗ ಬಾಯಿ ಚಪಲದ ಕೈ ಮೇಲಾಗುತ್ತದೆ. ಅದರಲ್ಲೂ ಆರೋಗ್ಯಕರ ಆಹಾರದ ವ್ಯವಸ್ಥೆಯೇ ಇಲ್ಲದಾಗ ಸಿಕ್ಕಿದ್ದನ್ನೆಲ್ಲಾ ತಿಂದು ಸ್ಯಾಸ್ಥ್ಯ ಕೆಡಿಸಿಕೊಳ್ಳುವುದಂತೂ ನಿಶ್ಚಿತ.

ಹಿಂದೆಲ್ಲಾ ಭೋಜನದಲ್ಲಿ ಸ್ವೀಟ್ ಬಂದ ಸಂದರ್ಭದಲ್ಲಿ ‘ಬೇಡ ಬೇಡ’ವೆಂದು ಕೈ ಅಡ್ಡ ಹಿಡಿಯುವಾಗ ಇಲ್ಲಾ ‘ಒಂದು ಸಣ್ಣ ಪೀಸ್ ಸಾಕು’ ಎನ್ನುವಾಗ ‘ಓ! ನಿಮ್ಗೆ ಶುಗರ‍್ರಾ’ ಎಂದು ಪಕ್ಕದವರು ಉದ್ಗರಿಸಿದರೆ ಒಂಥರಾ ಮುಜುಗರ. ಕಾಫಿಗೆ ಸಕ್ಕರೆ ಬೇಡವೆಂದರೂ ಇಂತಹದ್ದೇ ಚಡಪಡಿಸುವ ಪ್ರಶ್ನೆ. ತಮಗ್ಯಾಕೆ ಇಂಥ ಸ್ಥಿತಿ ಬಂದಿತು ಎಂಬ ಕೊರಗು.

ಹೌದು, ಆಗೆಲ್ಲಾ ಡಯಾಬಿಟಿಸ್ ಸಮಸ್ಯೆ ಇಷ್ಟು ವ್ಯಾಪಕವಾಗಿರಲಿಲ್ಲ. ಆದರೆ ಈಗ? ‘ನಿಮ್ಗೆ ಶುಗರ‍್ರಾ’ ಎಂದು ಕೇಳುವುದು ಹೋಗಲಿ ‘ನಿಮ್ದು ಎಷ್ಟು ಯುನಿಟ್ ಇನ್ಸುಲಿನ್?’ ಎಂಬ ನೇರ ಪ್ರಶ್ನೆ, ಕ್ರಿಕೆಟ್ ಸ್ಕೋರ್ ಕೇಳುವಂತೆ!

ಕೇಳುವವರಿಗೂ ಹೇಳುವವರಿಗೂ ಅಂತಹ ಮುಜುಗರವೇನಿಲ್ಲ. ಎಲ್ಲರಿಗೂ ಬರುತ್ತಿದೆ, ಇನ್ನು ಮುಚ್ಚಿಡುವುದು ಏನು ಎಂಬ ಮನೋಭಾವ. ಹಾಗಾಗಿ ‘ನಂದು ದಿನಕ್ಕೆ ನಲವತ್ತು ಯುನಿಟ್, ಐವತ್ತು ಯುನಿಟ್’ ಅಂತೆಲ್ಲಾ ಹೆಮ್ಮೆಯಿಂದಲೇ ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ!

ಹೌದು, ಊಟದ ಮನೆಯಲ್ಲಿ ಬಡಿಸುವ ಕ್ರಮವೂ ಈಗ ಹದ ತಪ್ಪಿದೆ. ಬಗೆ ಬಗೆಯ ಪಲ್ಯಗಳಿಗೆ ಸ್ಥಾನವಿಲ್ಲ. ಒಂದೆರಡು ವಿಧದ ಪಲ್ಯಗಳನ್ನು ಎಲೆಯ ತುದಿಯಲ್ಲಿ ಒಂಚೂರು ಬಡಿಸಿದ ಶಾಸ್ತ್ರ ಮಾಡಿದರೆ ಮುಗಿಯಿತು. ಮತ್ತೆ ಅದರ ವಿಚಾರ ಇರಲ್ಲ. ಅದೇ ಪ್ರತಿಷ್ಠೆ ಮೆರೆಯಲು ಮಾಡುವ ಮೂರ್ನಾಲ್ಕು ಬಗೆಯ ಸ್ವೀಟ್‍ಗಳನ್ನು ಮತ್ತೆ ಮತ್ತೆ ಕೇಳುತ್ತಾ ಒತ್ತಾಯಪೂರ್ವಕವಾಗಿ ಬಡಿಸುತ್ತಾರೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ, ಎಲ್ಲರ ದೇಹಕ್ಕೂ ಅದರಲ್ಲೂ ಮಧುಮೇಹಿಗಳಿಗೆ ಅತಿ ಅಗತ್ಯವಾದ ಸೊಪ್ಪು, ತರಕಾರಿಗಳು ಶರೀರ ಸೇರುತ್ತಿಲ್ಲ. ಉದರದ ಬಹುಭಾಗವನ್ನು ಸಿಹಿ ಭಕ್ಷ್ಯಾನ್ನಗಳು ತುಂಬುತ್ತಿವೆ! ಇಂತಹ ಪದ್ಧತಿಯೇ ದೇಹಾರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿರುವುದು.

ಮದುವೆ, ಮುಂಜಿ, ಸಭೆ, ಸಮಾರಂಭಗಳ ಆಯೋಜಕರು ಈ ವಿಚಾರದಲ್ಲಿ ಯೋಚಿಸಿ ಉಪಾಹಾರ, ಊಟೋಪಚಾರದಲ್ಲಿ ಪ್ರಜ್ಞಾಪೂರ್ವಕವಾಗಿ ಬದಲಾವಣೆ ಮಾಡಿಕೊಳ್ಳಬೇಕು. ತಿಂಡಿ ತಿನಿಸುಗಳಿಗೆ ಸಕ್ಕರೆ ಕಡಿಮೆ ಬಳಸುವುದು, ಸ್ವೀಟುಗಳ ಸಂಖ್ಯೆಯನ್ನು ಕಡಿತಗೊಳಿಸುವುದು, ಕರಿದ ಪದಾರ್ಥಗಳನ್ನು ಮಿತಿಗೊಳಿಸುವುದು, ವೈವಿಧ್ಯಮಯ ತರಕಾರಿ ಸಲಾಡು, ಕೂಟು, ಪಲ್ಯಗಳನ್ನು ಹೆಚ್ಚು ತಯಾರಿಸುವುದು ಅತಿ ಅಗತ್ಯ.

ಅತಿಥಿಗಳ ಆರೋಗ್ಯದ ಕಾಳಜಿ ಆತಿಥೇಯರದ್ದು ಕೂಡ. ತಮ್ಮ ಸ್ಥಾನಮಾನವನ್ನು ವೈಭವೀಕರಿಸಲು ಇನ್ನೊಬ್ಬರ ಸ್ಯಾಸ್ಥ್ಯವನ್ನು ಕೆಡಿಸುವುದು ಸರಿಯಲ್ಲ. ಹೌದು, ನಮ್ಮ ನಾಡು ಮಧುಮೇಹಿಗಳ ರಾಜಧಾನಿ ಎನಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಬಾಳೆಲೆಯಲ್ಲಿನ ಬಗೆಗಳು ದೇಹಪ್ರಕೃತಿಗೆ ಅನುಗುಣವಾಗಿ ಬದಲಾಗಲೇಬೇಕಾದ ಅನಿವಾರ್ಯ ಇದೆ.

‘ಹೇಗೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಸ್ವೀಟ್ ತಿಂದ್ರೆ ಒಂದೆರಡು ಯುನಿಟ್ ಜಾಸ್ತಿ ತಗೊಂಡ್ರೆ ಆಯ್ತು’ ಎಂಬ ಮನೋಭಾವ ಅಪಾಯಕಾರಿ. ‘ಅಯ್ಯೋ ನಂಗೆ ಡಯಾಬಿಟಿಸ್ ಬಂದ್ಬಿಟ್ಟಿದೆ. ಇನ್ನು ಜೀವನಪರ್ಯಂತ ಇದರ ಜೊತೆ ಏಗ್ಬೇಕಲ್ಲ’ ಎಂದು ಸದಾ ಚಿಂತೆಯಲ್ಲಿದ್ದರೂ ನಿಯಂತ್ರಣ ಖಂಡಿತಾ ಕಷ್ಟ. ಆರೋಗ್ಯಕರ ಆಹಾರ, ವಿರಾಮ, ಜೀವನಶೈಲಿಯ ಜೊತೆಗೆ ಮನಸ್ಸು ನಿರಾಳವಾಗಿದ್ದರೆ, ಸಂತಸದಿಂದಿದ್ದರೆ, ಉತ್ತಮ ಹವ್ಯಾಸಗಳಲ್ಲಿ ಮಗ್ನವಾಗಿದ್ದರೆ ಆಶ್ಚರ್ಯವೆನಿಸುವ ಮಟ್ಟದಲ್ಲಿ ಸಕ್ಕರೆಯ ಅಂಶ ಇಳಿಯುತ್ತದೆ. ಮನಸ್ಸಿನ ತಾಕತ್ತೇ ಅಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT