ಭಾನುವಾರ, ಏಪ್ರಿಲ್ 11, 2021
25 °C
ಭಾರತದ ಕೋಟ್ಯಂತರ ಜನರ ಬದುಕಿನಲ್ಲಿ ಕ್ರಿಕೆಟ್‌ ಹಾಸುಹೊಕ್ಕಾಗಿದೆ. ಆದರೂ ಇಲ್ಲಿಯ ಎಷ್ಟು ಅಂತರರಾಷ್ಟ್ರೀಯ ಕ್ರೀಡಾಂಗಣಗಳಿಗೆ ಕ್ರಿಕೆಟಿಗರ ಹೆಸರನ್ನು ಇಡಲಾಗಿದೆ?

ಸಂಗತ: ಕ್ರಿಕೆಟ್ ಕಣಕ್ಕಿಲ್ಲ ಕ್ರಿಕೆಟಿಗರ ಹೆಸರು!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಕೆಂಟುಕಿಯಲ್ಲಿ ಕ್ರಿಕೆಟ್ ಕ್ರೀಡಾಂಗಣವೊಂದಕ್ಕೆ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಅವರ ಹೆಸರನ್ನು ಇಡಲಾಯಿತು. ಆ ಮೈದಾನವನ್ನು ಉದ್ಘಾಟಿಸಿದ್ದ ಗಾವಸ್ಕರ್, ‘ಈ ದೇಶದಲ್ಲಿ ಕ್ರಿಕೆಟ್ ಪ್ರಮುಖ ಆಟವಲ್ಲ. ಆದರೂ ಇಲ್ಲಿಯ ಕ್ರೀಡಾಂಗಣಕ್ಕೆ ನನ್ನ ಹೆಸರು ಕೊಡಲಾಗಿದೆ. ಇದು ನನಗೆ ಲಭಿಸಿದ ದೊಡ್ಡ ಸನ್ಮಾನ’ ಎಂದು ಭಾವುಕರಾಗಿದ್ದರು.

ಭಾರತದ ಕೋಟ್ಯಂತರ ಜನರ ಜೀವನಶೈಲಿಯಲ್ಲಿ ಕ್ರಿಕೆಟ್‌ ಹಾಸುಹೊಕ್ಕಾಗಿದೆ. ಆದರೂ ಇಲ್ಲಿಯ ಎಷ್ಟು ಅಂತರರಾಷ್ಟ್ರೀಯ ಕ್ರೀಡಾಂಗಣಗಳಿಗೆ ಕ್ರಿಕೆಟಿಗರ ಹೆಸರನ್ನು ಇಡಲಾಗಿದೆ?

ಭಾರತದ ಕ್ರಿಕೆಟ್ ಇತಿಹಾಸದ ಪುಟಗಳನ್ನು ತಿರುವಿ ನೋಡಿ ಅಥವಾ ಗೂಗಲ್‌ನಲ್ಲಿ ಜಾಲಾಡಿ. ಒಂದೇ ಒಂದು ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೂ ದಿಗ್ಗಜ ಕ್ರಿಕೆಟಿಗರ ಹೆಸರು ಇಟ್ಟಿರುವುದು ಕಾಣಿಸುವುದಿಲ್ಲ. ಆಂಧ್ರಪ್ರದೇಶದ ವಿಜಯನಗರಂ ಕ್ರೀಡಾಂಗಣಕ್ಕೆ ಅಲ್ಲಿಯ ರಾಜಕುಮಾರ ಮತ್ತು ಕ್ರಿಕೆಟಿಗರಾಗಿದ್ದ ಪೂಸಪಾಟಿ ವಿಜಯಾನಂದ ಗಜಪತಿ ರಾಜು ಅವರ ಹೆಸರು ಇಡಲಾಗಿದೆ. ಪಂಜಾಬ್‌ನ ಪಟಿಯಾಲದಲ್ಲಿ ದುರ್ಮರಣಕ್ಕೀಡಾದ ಯುವ ಕ್ರಿಕೆಟಿಗ ಧ್ರುವ ಪಾಂಡೋವ್‌ ಅವರ ಹೆಸರು ಇಡಲಾಗಿದೆ. ಆದರೆ ಇವೆರಡೂ ಅಂತರರಾಷ್ಟ್ರೀಯ ಅಂಗಳಗಳಲ್ಲ. ಮೊಹಾಲಿಯ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡುವ ಸಂದರ್ಭದಲ್ಲಿ ಅದರ ಪದಾಧಿಕಾರಿಯಾಗಿದ್ದ ಐ.ಎಸ್.ಬಿಂದ್ರಾ ಅವರ ಹೆಸರು ಇಡಲಾಯಿತು!

ಇದೇ ರೀತಿ ಮಾಜಿ ಪ್ರಧಾನಿಗಳು, ರಾಜಕೀಯ ಧುರೀಣರು, ಉದ್ಯಮಿಗಳು, ಕ್ರಿಕೆಟ್ ಆಡಳಿತದಲ್ಲಿ ಗುರುತಿಸಿಕೊಂಡವರ ಹೆಸರಿನ ಕ್ರೀಡಾಂಗಣಗಳಿವೆ. ನಾಮಕರಣದ ವಿಚಾರದಲ್ಲಿ ಹಿಂದಿನ ಪರಿಪಾಟವೇ ಈಗಲೂ ಮುಂದುವರಿದಿದೆ. ಇತ್ತೀಚೆಗೆ, ಅಹಮದಾಬಾದಿನ ಮೊಟೇರಾದಲ್ಲಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದು ದೊಡ್ಡ ಚರ್ಚೆಗೆ ಕಾರಣವಾಯಿತು.

ಅಂಗಣಗಳಿಗೆ ರಾಜಕೀಯ ಧುರೀಣರ ಹೆಸರಿಟ್ಟಾಗ ಟೀಕಿಸುವವರನ್ನು ಸಮಾಧಾನಗೊಳಿಸಲು ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೆ ಆಟಗಾರರ ಹೆಸರು ಇಡಲಾಗುತ್ತಿದೆ. ದೆಹಲಿಯಲ್ಲಿರುವ ಮಾಜಿ ಸಚಿವ, ದಿವಂಗತ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸ್ಪಿನ್ ಬೌಲಿಂಗ್ ದಿಗ್ಗಜ ಬಿಷನ್ ಸಿಂಗ್ ಬೇಡಿ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಟ್ಯಾಂಡ್‌ಗಳು ಮತ್ತು ವೀರೇಂದ್ರ ಸೆಹ್ವಾಗ್ ಹೆಸರಿನ ಪ್ರವೇಶದ್ವಾರ ಇದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗಾವಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ಗಳಿವೆ.

ಇದರಲ್ಲಿ ವೆಸ್ಟ್‌ ಇಂಡೀಸ್ ನಡೆ ಅನುಕರಣೀಯ. ಆ್ಯಂಟಿಗಾದ ನಾರ್ತ್‌ಸೌಂಡ್‌ನಲ್ಲಿ ವಿವಿಯನ್ ರಿಚರ್ಡ್ಸ್‌, ಬಾರ್ಬಡೀಸ್‌ನಲ್ಲಿ ತ್ರಿ ಡಬ್ಲ್ಯುಸ್‌ ಓವೆಲ್ (ಫ್ರ್ಯಾಂಕ್ ವೊರೆಲ್, ಕ್ಲೈಡ್ ವಾಲ್ಕಾಟ್ ಮತ್ತು ಎವರ್ಟನ್ ವೀಕ್ಸ್‌ ಅವರ ನೆನಪಿಗಾಗಿ), ಸೇಂಟ್ ಲೂಸಿಯಾದಲ್ಲಿ ಡ್ಯಾರೆನ್ ಸಾಮಿ, ಟ್ರಿನಿಡಾಡ್‌ನಲ್ಲಿ ಬ್ರಯನ್ ಲಾರಾ
ಕ್ರೀಡಾಂಗಣಗಳಿವೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ಮುತ್ತಯ್ಯ ಮುರಳೀಧರನ್ ಅಂತರರಾಷ್ಟ್ರೀಯ ಕ್ರೀಡಾಂಗಣ ಇದೆ. ಅಷ್ಟೇ ಏಕೆ ಇಂಗ್ಲೆಂಡ್‌ನಲ್ಲಿರುವ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ ಕೂಡ ಮಾಜಿ ಕ್ರಿಕೆಟಿಗ ಸರ್ ಥಾಮಸ್ ಲಾರ್ಡ್ಸ್‌ ಅವರ ನೆನಪಿನಂಗಳ. ಆಸ್ಟ್ರೇಲಿಯಾದಲ್ಲಿ ಸರ್ ಡಾನ್ ಬ್ರಾಡ್ಮನ್ ಮತ್ತು ಅಲನ್ ಬಾರ್ಡರ್‌ ಅವರ ಹೆಸರಿನ ಕ್ರೀಡಾಂಗಣಗಳಿವೆ. ‌

ಈ ವಿಷಯದಲ್ಲಿ ದೇಶದ ಹಾಕಿ ಮತ್ತು ಫುಟ್‌ಬಾಲ್ ಸಂಸ್ಥೆಗಳೇ ಪರವಾಗಿಲ್ಲ. ದೆಹಲಿಯ ಹಾಕಿ ಅಂಗಣಕ್ಕೆ ಮೇಜರ್ ಧ್ಯಾನಚಂದ್ ಮತ್ತು ಸಿಕ್ಕಿಂ ರಾಜ್ಯದ ಫುಟ್‌ಬಾಲ್ ಅಂಗಳಕ್ಕೆ ಭೈಚುಂಗ್ ಭುಟಿಯಾ ಅವರ ಹೆಸರಿದೆ. ಆದರೆ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ ಬಿಸಿಸಿಐ ಮಾತ್ರ ಇಂತಹ ಹೆಜ್ಜೆ ಇಟ್ಟಿಲ್ಲ.

ಅಪರೂಪವೆಂಬಂತೆ, ಎರಡು ಕ್ರಿಕೆಟ್ ಕ್ರೀಡಾಂಗಣಗಳಿಗೆ ಇಬ್ಬರು ಹಾಕಿ ದಿಗ್ಗಜರ ಹೆಸರುಗಳಿವೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕ್ಯಾಪ್ಟನ್ ರೂಪ್‌ಸಿಂಗ್ ಮತ್ತು ಲಖನೌನಲ್ಲಿ ಕೆ.ಡಿ.ಸಿಂಗ್ ಬಾಬು ಕ್ರೀಡಾಂಗಣಗಳಿವೆ. ಈ ಮೈದಾನಗಳು ಕ್ರಿಕೆಟ್ ಅಂಗಳಗಳಾಗುವುದಕ್ಕಿಂತ ಮುನ್ನ ಹಾಕಿ ಕಣಗಳಾಗಿದ್ದದ್ದು ಕೂಡ ಅವರ ಹೆಸರುಗಳು ಉಳಿಯಲು ಕಾರಣ.

ಇಂತಹ ಸಂದರ್ಭಗಳಲ್ಲಿ ‘ಹೆಸರಲ್ಲೇನಿದೆ ಬಿಡಿ’ ಎಂದು ಹೇಳುವುದು ಲೋಕಾರೂಢಿ. ಆದರೆ ಒಮ್ಮೆ ಯೋಚಿಸಿ. ಕರ್ನಾಟಕದಲ್ಲಿ ಜಿ.ಆರ್.ವಿಶ್ವನಾಥ್ ಹೆಸರಿರುವ ಅಂಗಳದಲ್ಲಿ ಅವರಿಂದಲೇ ಗತಕಾಲದ ಸಾಧನೆಗಳ ಕಥೆಯನ್ನು ಕೇಳುವ ಅನುಭವ ಹೇಗಿರಬಹುದು? ಅದೇ ರೀತಿ ಚಂಡೀಗಡದಲ್ಲಿ ಕಪಿಲ್ ದೇವ್, ದೆಹಲಿಯಲ್ಲಿ ಬಿಷನ್ ಸಿಂಗ್ ಬೇಡಿ, ಮುಂಬೈನಲ್ಲಿ ತೆಂಡೂಲ್ಕರ್ ಮತ್ತು ಇಂದೋರ್‌ನಲ್ಲಿ ಕರ್ನಲ್ ಸಿ.ಕೆ. ನಾಯ್ಡು ಅವರ ಹೆಸರಿನ ಅಂಗಳಗಳಿದ್ದರೆ ಎಷ್ಟು ಚೆಂದ.

ಇವತ್ತು ಕ್ರಿಕೆಟ್ ಈ ಮಟ್ಟಕ್ಕೆ ಬೆಳೆಯಲು ಇವರೆಲ್ಲರ ಆಟದ ಸೊಬಗು ಕಾರಣವಲ್ಲವೇ? ಆದರೂ
ಕ್ರೀಡಾಂಗಣಗಳಿಗೆ ಅವರ ಹೆಸರಿಡಲು ಹಿಂಜರಿಕೆ ಏಕೆ? ಆ ಮೂಲಕ ಅವರ ಯಶೋಗಾಥೆಗಳ ಕುರಿತು ಅರಿಯುವ ಕುತೂಹಲವನ್ನು ಯುವಪೀಳಿಗೆಯಲ್ಲಿ ಮೂಡಿಸಬಹುದು. ಇಂತಹ ಔಚಿತ್ಯಪ್ರಜ್ಞೆ ನಮ್ಮಲ್ಲಿ ಮೂಡುವುದೆಂದು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು