ಮಂಗಳವಾರ, ಜೂನ್ 2, 2020
27 °C
ಮೊಬೈಲ್‌ನಲ್ಲಿ ಮಾತನಾಡಲು ಬೇಕಾದ ನೆಟ್‌ವರ್ಕ್‌ಗೇ ತಿಣುಕಾಡಬೇಕಾದ ಸ್ಥಿತಿ ಇರುವ ಹಳ್ಳಿಗಾಡಿನ ಮಕ್ಕಳಿಗೆ, ಆನ್‌ಲೈನ್‌ ತರಗತಿಗಳು ದಕ್ಕಿಯಾವೇ?

ಸಂಗತ | ನೆಟ್‌ವರ್ಕ್‌ ಎಂಬ ಕಬ್ಬಿಣದ ಕಡಲೆ

ನೆಂಪೆ ದೇವರಾಜ್ Updated:

ಅಕ್ಷರ ಗಾತ್ರ : | |

Prajavani

ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ನಮ್ಮ ಊರಿನ ಜೋಗಿ ಗುಡ್ಡ ಮತ್ತು ಅಡ್ಡಗುಡ್ಡಗಳ ನಡುವಿನ ಕಣಿವೆಯಲ್ಲಿ (ತೀರ್ಥಹಳ್ಳಿ ತಾಲ್ಲೂಕು) ಜಿಯೊ ನೆಟ್‌ವರ್ಕ್ ಎಂಬ ರಹಸ್ಯವನ್ನು ಭೇದಿಸಿದ, ಬೆಂಗಳೂರಿನಿಂದ ಊರಿಗೆ ಬಂದ ಆರೇಳು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೀಗ ಈ ಪ್ರದೇಶ ಐ.ಟಿ ಹಬ್ ಆಗಿ ಪರಿವರ್ತನೆಯಾಗಿದೆ. ಮೊಬೈಲ್ ಮತ್ತು ಲ್ಯಾಪ್‍ಟ್ಯಾಪ್‌ಗಳು ಮೊಣಕಾಲೆತ್ತರದವರೆಗೂ ಆವರಿಸಿರುವ ಒಣ ದರಗು, ದರಗಿನ ಮೇಲೆ ಹರಿಯುವ ಉಣುಗು, ಕೆಂಜಿಗೆ ಉಡಿ, ಜೀಕುವ ಬೃಹದಾಕಾರದ ಮರಗಳು, ಉಲಿಯುವ ಸಣ್ಣಪುಟ್ಟ ಪಕ್ಷಿಗಳಿಗೆಲ್ಲ ಪರಿಚಯವಾಗಿವೆ.

ಕೊರೊನಾ ವೈರಸ್‌ ದೆಸೆಯಿಂದ ಶುರುವಾಗಿರುವ, ಆನ್‍ಲೈನ್ ಮೂಲಕ ಮನೆಯಲ್ಲೇ ಕೂತು ಮಾಡುವ ನೌಕರಿಯ ರೀತಿ ನೀತಿಗಳು ಗ್ರಾಮಾಂತರ ಪ್ರದೇಶದ ಹಳೆ ಕಾಲದ ವಯೋಮಾನದವರನ್ನು ದಂಗುಬಡಿಸಹತ್ತಿವೆ. ಬೆಂಗಳೂರಿನಂತಹ ಮಹಾನಗರಗಳಿಂದ ತಿಂಗಳ ಹಿಂದೆ ಎದ್ದೆವೋ ಬಿದ್ದೆವೋ ಎಂದು ಏದುಸಿರುಬಿಡುತ್ತಾ ಶರವೇಗದಲ್ಲಿ ಮನೆ ಸೇರಿದ್ದ ನಮ್ಮಂತಹ ಹಳ್ಳಿಗಳ ಮೂಲನೆಲೆಯ ಸಾವಿರಾರು ಅಣ್ಣ ತಮ್ಮಂದಿರು, ಮೊಬೈಲ್ ನೆಟ್‌ವರ್ಕ್‌ಗಾಗಿ ಗುಡ್ಡ ಬೆಟ್ಟ, ಕಾಡು ಮೇಡುಗಳನ್ನು ಅಲೆದೂ ಅಲೆದೂ ಸುಸ್ತಾಗಿ ‘ವರ್ಕ್ ಫ್ರಂ ಹೋಮ್’ ಎಂಬ ಘೋಷಣೆಗೆ ಎಳ್ಳುನೀರು ಬಿಡುವ ಸಂದರ್ಭಕ್ಕೆ ಇದೀಗ ಸಾಕ್ಷಿಯಾಗಿ ಕೂತಿದ್ದಾರೆ. ಇದರ ಬೆನ್ನಲ್ಲೇ, ವೈಭವೋಪೇತ ಮತ್ತು ದುಬಾರಿತನಕ್ಕೇ ಶಿಕ್ಷಣವೆಂಬ ವ್ಯಾಖ್ಯಾನ ನೀಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನೇಕವು ಆನ್‌ಲೈನ್ ತರಗತಿಗಳನ್ನು ಆರಂಭಿಸುವ ಮೂಲಕ, ಹೊಸ ರೀತಿಯ ಶಿಕ್ಷಣದ ಅಸಮಾನತೆಯೊಂದನ್ನು ಪರಿಚಯಿಸಲು ಹೊರಟಿವೆ.

ಇಂಗ್ಲಿಷ್‌ ಎಂಬ ಕಬ್ಬಿಣದ ಕಡಲೆಯನ್ನು ಕಡೆಗೂ ಅರ್ಥಮಾಡಿಕೊಳ್ಳದೆ, ಸದಾ ಕೀಳರಿಮೆಯಲ್ಲೇ ಹೊಸೆಯುತ್ತಾ ನಿಲ್ಲುವ ಸಂದರ್ಭವೊಂದಕ್ಕೆ ಗ್ರಾಮಾಂತರ ಪ್ರದೇಶದ ಮಕ್ಕಳನ್ನು ದೂಡಿದ ನಮ್ಮ ಶಿಕ್ಷಣ ವ್ಯವಸ್ಥೆಯು ಮತ್ತೊಂದು ಇಂತಹದ್ದೇ ಘನಘೋರ ಪ್ರಪಾತಕ್ಕೆ ಈ ಮಕ್ಕಳನ್ನು ದೂಡಲು ಹವಣಿಸುತ್ತಿದೆ.

ಒಂದು ಕಾಲದ ವರದಾನವಾಗಿದ್ದ, ಅತಿ ವಿಸ್ತಾರವಾದ ಸಂಪರ್ಕಜಾಲ ಹೊಂದಿರುವ ಬಿಎಸ್‍ಎನ್‍ಎಲ್ ಎಂಬ ಸರ್ಕಾರಿ ಸ್ವಾಮ್ಯದ ಟೆಲಿಕಾಂ ವ್ಯವಸ್ಥೆ ಇಂದು ಎಂತಹ ಪರಿಸ್ಥಿತಿಯಲ್ಲಿದೆ? ಪಟ್ಟಣ ಮತ್ತು ನಗರಗಳ ಜನರು ಈ ಸಂಪರ್ಕ ಜಾಲವನ್ನು ಇತಿಹಾಸ ಸೇರಿಸಿದ್ದಾರೆ. ಖಾಸಗಿ ಸ್ವಾಮ್ಯದ ಏರ್‌ಟೆಲ್, ಜಿಯೊಗಳಂತಹವು 5-ಜಿ, 6-ಜಿ ನೆಟ್‌ವರ್ಕ್‌ಗಳನ್ನು ಅಳವಡಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ, 4-ಜಿ ನೀಡುವ ಬಗ್ಗೆಯೇ ತಿಣುಕಾಡುವ ಬಿಎಸ್‌ಎನ್‌ಎಲ್‌ ನಮ್ಮ ಹಳ್ಳಿಗಾಡಿನ ಮಕ್ಕಳಿಗೆ ಏನನ್ನು, ಯಾವಾಗ ಕೊಟ್ಟಾತು ಎಂಬುದೀಗ ಪ್ರಶ್ನೆ. ಹಾಲಿ ಇರುವ ಬಿಎಸ್‌ಎನ್‌ಎಲ್‌ ಸಂಪರ್ಕ ಜಾಲದಲ್ಲಿ ಯುಟ್ಯೂಬ್, ಗೂಗಲ್‍ಗಳು ಕೆಲಸ ಮಾಡುವುದಿರಲಿ, ವ್ಯಕ್ತಿಯೊಬ್ಬನೊಂದಿಗೆ ಮಾತನಾಡಲು ಬೇಕಾಗುವ, ಮೊಬೈಲ್‍ನ ತುದಿಯಲ್ಲಿ ಕಾಣಿಸುವ ಒಂದೇ ಒಂದು ಗೆರೆಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.

ವಿದ್ಯುತ್ ಸ್ತಬ್ಧವಾದಾಗ ಬಿಎಸ್‌ಎನ್‌ಎಲ್‌ ಟವರ್‌ಗಳು ಕಾರ್ಯಾಚರಿಸಲು ಅಳವಡಿಸಿರುವ ಜನರೇಟರುಗಳಿಗೆ ಡೀಸೆಲ್‌ನ ಅಗತ್ಯವನ್ನು ಸಹ ಅರ್ಥ ಮಾಡಿಕೊಳ್ಳದ ಉನ್ನತಾಧಿಕಾರಿಗಳ ದೆಸೆಯಿಂದ ಸ್ಥಳೀಯ ಸಣ್ಣಪುಟ್ಟ ನೌಕರರು ಅಪವಾದ ಹೊರುವಂತಾಯಿತು. ಬಳಕೆದಾರರ ನಿರಂತರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ನೌಕರರೇ ಸ್ವಂತ ಹಣದಿಂದ ಡೀಸೆಲ್ ಪೂರೈಸಿರುವ ನಿದರ್ಶನಗಳೂ ಇವೆ.

ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್ಸ್‌ಟಾಗ್ರಾಮ್‌ನಂತಹವನ್ನು ಒತ್ತಿ ಹಿಡಿದರೆ ಮೊಬೈಲ್ ಮಧ್ಯದಲ್ಲಿ ಧುತ್ತನೆ ಬರುವ ಚಕ್ರವೊಂದು ಆಲೆಕಣೆಯಂತೆ ಗರಗರ ತಿರುಗುತ್ತಾ ದಿನಗಳನ್ನೇ ನುಂಗುತ್ತದೆ. ಇಂತಹ ಸನ್ನಿವೇಶದಲ್ಲಿ, ದೂರದ ಲೋಕವೊಂದರಲ್ಲಿ ನಡೆಯುತ್ತಿರುವ ಆನ್‌ಲೈನ್ ತರಗತಿಗಳು ನಮ್ಮ ಗ್ರಾಮಾಂತರ ಪ್ರದೇಶದ ಮಕ್ಕಳನ್ನು ತಲುಪಲು ಸಾಧ್ಯವೇ? ಈಗಾಗಲೇ ಶೇ 90ರಷ್ಟು ಆನ್‌ಲೈನ್ ತರಗತಿಗಳು ಮುಗಿದಿವೆ ಎಂಬ ಸುದ್ದಿಯನ್ನು ದಿನಪತ್ರಿಕೆಗಳಲ್ಲಿ ನೋಡುತ್ತಾ ಕೈ ಹೊಸೆಯುವುದರಲ್ಲೇ ತೃಪ್ತಿಪಡುವ ಸನ್ನಿವೇಶದಲ್ಲಿ ನಮ್ಮ ಮಕ್ಕಳಿದ್ದಾರೆ.

ಹಾಗೆಂದಮಾತ್ರಕ್ಕೆ ಆನ್‌ಲೈನ್‌ ಶಿಕ್ಷಣವನ್ನು ವಿರೋಧಿಸಬೇಕು ಎಂದರ್ಥವಲ್ಲ. ಎಲ್ಲ ಪ್ರದೇಶದ ಎಲ್ಲ ವಿದ್ಯಾರ್ಥಿಗಳಿಗೂ ಇಂಟರ್ನೆಟ್ ವ್ಯವಸ್ಥೆ ಇಲ್ಲದೆ, ಕೇವಲ ನಗರ ಪ್ರದೇಶದ ಉನ್ನತ ವರ್ಗದ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸದರಿ ಶಿಕ್ಷಣಕ್ರಮವನ್ನು ಪ್ರಚುರಪಡಿಸಿದರೆ ಅದು ತಪ್ಪಾಗುತ್ತದೆ. ಸಮಾನ ಅವಕಾಶಗಳನ್ನು ಸರ್ವ ಮಕ್ಕಳಿಗೂ ನೀಡುವ ಉದ್ದೇಶ ಭಾರತ ಸರ್ಕಾರಕ್ಕೆ ಇರುವುದು ನಿಜವೇ ಆಗಿದ್ದರೆ, ದೇಶದ ಗ್ರಾಮಾಂತರ ಪ್ರದೇಶದ ತುಂಬಾ ಆವರಿಸಿದ್ದರೂ ಕೋಮಾದಲ್ಲಿರುವ ಬಿಎಸ್‌ಎನ್‌ಎಲ್‌ ಸಂಪರ್ಕ ಜಾಲವನ್ನು ಗಟ್ಟಿಗೊಳಿಸಬೇಕು. 4-ಜಿ ತರಂಗಾಂತರವನ್ನು ಬಿಎಸ್‌ಎನ್‌ಎಲ್‌ಗೆ ನೀಡುವ ಮೂಲಕ ಆನ್‍ಲೈನ್ ಶಿಕ್ಷಣದ ಲಾಭವು ಹಳ್ಳಿಗಾಡಿನ ಮಕ್ಕಳಿಗೂ ಸಿಗುವಂತೆ ಮಾಡಬೇಕು ಅಥವಾ ಖಾಸಗಿ ಒಡೆತನದ ಟೆಲಿಕಾಂ ಸಂಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲೂ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿ ಸಂಪರ್ಕ ಜಾಲವನ್ನು ವಿಸ್ತರಿಸಲು ನಿರ್ದೇಶನ ನೀಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು