ಗುರುವಾರ , ಮಾರ್ಚ್ 4, 2021
23 °C
ಅಶಿಸ್ತಿನ ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಂಡರೆ, ಕಚೇರಿಯಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ಸಾಧ್ಯ

ಕಾರ್ಯಕ್ಷಮತೆ: ಕಾಳಜಿ ಮೊದಲಾಗಲಿ

ಡಾ. ಜಿ. ಎನ್.ಮಲ್ಲಿಕಾರ್ಜುನಪ್ಪ Updated:

ಅಕ್ಷರ ಗಾತ್ರ : | |

Prajavani

ಸರ್ಕಾರಿ ನೌಕರರ ಅಶಿಸ್ತಿನ ವರ್ತನೆಗೆ ಲಗಾಮು ಹಾಕಿ, ಅವರ ಕ್ಷಮತೆ ಹೆಚ್ಚಿಸಲು ನಿರಂತರ ನಿಗಾ ಇರಿಸಬೇಕು ಎಂಬ ಆಶಯ ಹೊಂದಿದ ಸಂಪಾದಕೀಯ (ಪ್ರ.ವಾ., ಫೆ. 11) ಅತ್ಯಂತ ಪ್ರಸ್ತುತವಾಗಿದೆ. ಸರ್ಕಾರಿ ಅಥವಾ ಖಾಸಗಿ ಕಚೇರಿಯಲ್ಲಿನ ಸಿಬ್ಬಂದಿಯ ಕಾರ್ಯಕ್ಷಮತೆಯು ಅವರ ಕಾರ್ಯನಿಷ್ಠೆಯನ್ನು ಅವಲಂಬಿಸಿರುತ್ತದೆ. ಅವರಲ್ಲಿ ಇಂಥ ಕಾರ್ಯನಿಷ್ಠೆ ರೂಪುಗೊಳ್ಳಲು ಮುಖ್ಯವಾದ ಪ್ರಮುಖ ಅಂಶಗಳೆಂದರೆ: ಒಂದು, ಅವರ ಕರ್ತವ್ಯಕ್ಕೆ ಸಂಬಂಧಿಸಿದ ಶಿಸ್ತು ನಿಯಮಗಳ ಪಾಲನೆ. ಮತ್ತೊಂದು, ಸಾಕ್ಷಿಪ್ರಜ್ಞೆ. ವಹಿಸಿರುವ ಕೆಲಸಕ್ಕೆ ನ್ಯಾಯ ಒದಗಿಸಬೇಕೆಂಬ ಕಾಳಜಿ ಇದ್ದಲ್ಲಿ, ಈ ಎರಡೂ ಅವಷ್ಟಕ್ಕೆ ಅವೇ ಜಾಗೃತವಾಗಿರುತ್ತವೆ.

ಸರ್ಕಾರಿ ಕಚೇರಿ ಸಿಬ್ಬಂದಿಯ ಕಾರ್ಯಕ್ಷಮತೆಗೆ ಇಲಾಖೆಯ ಅಧಿಕಾರಿಗಳು ಬರೀ ಸುತ್ತೋಲೆ ಹೊರಡಿಸಿದರೆ ಸಾಲದು. ಜೊತೆಗೆ, ಆ ಸುತ್ತೋಲೆಗಳ ನಿರ್ದೇಶನಗಳನ್ನು ಪಾಲಿಸಲು ಮೇಲಿನ ಅಧಿಕಾರಿಗಳೇ ಮೊದಲು ಮುಂದಾಗಬೇಕು. ಅವರ ನಡತೆಯಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ಸೇವಾ ನಿಯಮ ಪಾಲನೆಯಲ್ಲಿ ತಾವೇ ಮೊದಲಾಗುವ ಭಾವ ಇದ್ದರೆ ಅದು, ಉಳಿದ ಸಿಬ್ಬಂದಿ ವರ್ಗದಲ್ಲಿ ಕರ್ತವ್ಯಪ್ರಜ್ಞೆಯನ್ನು ಜಾಗೃತವಾಗಿ ಇರಿಸಿರುತ್ತದೆ. ಇದು, ಅಧಿಕಾರಿಗಳನ್ನು ನಿರ್ವಹಿಸುವ ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತು ಸಚಿವರಿಗೂ ಅನ್ವಯಿಸುತ್ತದೆ.

ಸಿಬ್ಬಂದಿಯಲ್ಲಿ ಕರ್ತವ್ಯಪ್ರಜ್ಞೆ ಮೂಡಬೇಕೆಂದರೆ, ಮೊದಲು ಅವರ ಮನಃಸ್ಥಿತಿ ಸರಿ ಇರಬೇಕು. ಮನಃಸ್ಥಿತಿ ಸರಿ ಇರಬೇಕೆಂದರೆ, ಅಲ್ಲಿನ ಪರಿಸರವು ಕೆಲಸಕ್ಕೆ ತಕ್ಕಂತೆ ಇರಬೇಕು. ಇಲ್ಲಿ ಪರಿಸರ ಎಂದರೆ ಬರೀ ಪರಿಕರಗಳಾಗಿರದೆ, ಮಾಡುವ ಕೆಲಸದ ಉದ್ದೇಶ, ಸ್ವರೂಪ ಮತ್ತು ನಿರೀಕ್ಷಿತ ವರ್ತನೆಗಳನ್ನೂ ಒಳಗೊಂಡಿ
ರುತ್ತದೆ. ಅವರವರ ಕೆಲಸ ಮತ್ತು ಅಧಿಕಾರ ವ್ಯಾಪ್ತಿಯನ್ನು ಮೊದಲು ಅರಿತು ಕಚೇರಿಯಲ್ಲಿ ಉತ್ತಮ ಸಂಬಂಧಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಇಂದು ಇಡೀ ದೇಶಕ್ಕೆ ಪಿಡುಗಾಗಿರುವ ಭ್ರಷ್ಟಾಚಾರಕ್ಕೆ ಮೊದಲನೇ ಕಾರಣ, ನೌಕರರಲ್ಲಿ ಹೆಚ್ಚುತ್ತಿರುವ ಹಣದ ದಾಹ. ಇದರ ಬೀಜ ಮತ್ತು ಪೋಷಣೆಯು ಮೇಲಿನ ಹಂತದ ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳಿಂದಲೇ ಆಗುತ್ತದೆ. ನೌಕರನೊಬ್ಬನ ವೇತನವು ದೈನಿಕ ಅಗತ್ಯಕ್ಕಿಂತ ಕಡಿಮೆ ಇದ್ದಾಗ, ಮೂರು– ನಾಲ್ಕು ಜನ ನಿರ್ವಹಿಸುವ ಕೆಲಸವನ್ನು ಒಬ್ಬನೇ ನಿರ್ವಹಿಸುವ ಒತ್ತಡ ಬಂದಾಗ, ಕಚೇರಿಗೆ ಬರುವುದಕ್ಕೆ ಮತ್ತು ಹೋಗುವುದಕ್ಕೇ ಅತಿಹೆಚ್ಚಿನ ಸಮಯ ವ್ಯಯಿಸುವ ಅನಿವಾರ್ಯ ಇರುವಾಗ, ಬೆಂಗಳೂರಿನಂತಹ ನಗರಗಳಲ್ಲಿ ಸಂಚಾರ ದಟ್ಟಣೆಯಿಂದ ರಸ್ತೆಯಲ್ಲೇ ಶಕ್ತಿ ಮತ್ತು ಸಮಯ ಕಳೆಯಬೇಕಾದ ಸ್ಥಿತಿ ಉಂಟಾದಾಗ ಮಾಡುವ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವುದಿರಲಿ, ಇರುವುದನ್ನು ಕಾಪಾಡಿಕೊಳ್ಳುವುದೇ ಸವಾಲಾಗುತ್ತದೆ.

ಅಶಿಸ್ತನ್ನು ಸಾಮಾನ್ಯ ವರ್ತನೆಯಾಗಿಸಿಕೊಂಡ ಕೆಲವೇ ಸಿಬ್ಬಂದಿಯು ಇತರರಿಗೆ ಕೆಟ್ಟ ಮಾದರಿ ಆಗುತ್ತಿರುವುದರಿಂದ, ಅಂಥವರ ಮೇಲೆ ನಿರ್ದಾಕ್ಷಿಣ್ಯ ವಾಗಿ ಶಿಸ್ತುಕ್ರಮ ಕೈಗೊಂಡರೆ ಕಚೇರಿಯು ಕಚೇರಿಯೇ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಮೇಲಧಿಕಾರಿಗಳು ಮತ್ತು ಅಧಿಕಾರಸ್ಥರ ಕೃಪಾಕಟಾಕ್ಷ ಸಾಮಾನ್ಯವಾಗಿ ಇಂಥವರ ಮೇಲೇ ಇರುತ್ತದೆ. ಹೀಗಿರುವಾಗ, ಮೂಗಿಗೆ ಕವಡೆ ಕಟ್ಟಿಕೊಂಡು ಮೇಲಿನವರು ಹೇಳಿದ್ದನ್ನೆಲ್ಲಾ ಮಾಡಲು, ಮಾಡದಿದ್ದಲ್ಲಿ ಅವರ ಅವಕೃಪೆಗೆ ಒಳಗಾಗಲು ಯಾರು ತಾನೇ ಇಚ್ಛಿಸುತ್ತಾರೆ? ಹಾಗಾಗಿಯೇ ಅವರು ಸಂದರ್ಭ ಸಿಕ್ಕಾಗಲೆಲ್ಲ ಕೆಲಸದಲ್ಲಿ ತಲ್ಲೀನರಾಗಿರುವಂತೆ ನಟಿಸುತ್ತಾರೆಯೇ ಹೊರತು ಕೆಲಸ ಆಗಿರುವುದಿಲ್ಲ. ‘ಸಿ’ ಮತ್ತು ’ಡಿ’ ವರ್ಗದ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ
ಕೊಳ್ಳುವವರ ಸ್ಥಿತಿಯಂತೂ ಹೇಳತೀರದು. ಒಂದೆಡೆ ಅದೇ ಕೆಲಸ ನಿರ್ವಹಿಸಿ ಹೆಚ್ಚು ವೇತನ ಪಡೆಯುವ ಕಾಯಂ ನೌಕರ, ಇನ್ನೊಂದು ಕಡೆ ಸರ್ಕಾರ ನಿಗದಿಪಡಿಸಿದ ದಿನಗೂಲಿ ಆಧಾರಿತ ವೇತನದಲ್ಲಿ ಕಾಲು ಭಾಗಕ್ಕೂ ಹೆಚ್ಚು ಮೊತ್ತವನ್ನು ಮುರಿದುಕೊಂಡು ಶೋಷಿಸುವ ಹೊರ ಗುತ್ತಿಗೆದಾರನ ಮರ್ಜಿ.

ನೌಕರರ ಕಚೇರಿಯೇತರ ಅಗತ್ಯಗಳ ಬಗ್ಗೆ, ನಿಗದಿಪಡಿಸುವ ಕೆಲಸದ ಪ್ರಮಾಣದ ಬಗ್ಗೆ, ಮಾಡುವ ವೇತನ ತಾರತಮ್ಯದ ಬಗ್ಗೆ ಆಲೋಚಿಸದೆ, ಬರೀ ಶಿಸ್ತುಕ್ರಮಗಳಿಂದ ಕಾರ್ಯಕ್ಷಮತೆ ಹೆಚ್ಚಿಸುತ್ತೇವೆ ಎನ್ನುವುದು ಸಾಧುವಲ್ಲ. ಸಾಧ್ಯವಾದಷ್ಟು ಮಟ್ಟಿಗೆ, ಕಚೇರಿ ಮತ್ತು ವಾಸಸ್ಥಳದ ನಡುವಿನ ಅಂತರವನ್ನು ಕಡಿಮೆ ಮಾಡುವ ವಸತಿ ಸಮುಚ್ಚಯಗಳ ಸೌಲಭ್ಯ ಕಲ್ಪಿಸುವುದನ್ನು ಗಂಭೀರವಾಗಿ ತೆಗೆದುಕೊಂಡರೆ, ಅದೆಷ್ಟೋ ಸಮಯ, ಇಂಧನ ಉಳಿತಾಯವಾಗುತ್ತವೆ. ಮಾಲಿನ್ಯ, ಅಪಘಾತದಂತಹ ದುಃಸ್ಥಿತಿಗಳು ದೂರವಾಗುತ್ತವೆ. ಕಚೇರಿಯಲ್ಲಿ ಶೌಚಾಲಯ, ಕುಡಿಯುವ ನೀರು, ಹಣ ಪಾವತಿಸಿ ಪಡೆಯಬಹುದಾದ ಕಾಫಿ-ಟೀ ವ್ಯವಸ್ಥೆಯಂತಹ ಸೌಲಭ್ಯಗಳತ್ತ ಗಮನ ಕೊಡುವುದರಿಂದ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬಹುದು ಎನ್ನುವುದನ್ನು ಮರೆಯುವಂತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ, ಪ್ರಜ್ಞಾಪೂರ್ವಕವಾಗಿ ಕೆಲಸ ಕದಿಯುವವರನ್ನು, ಕಾಲೆಳೆಯುವವರನ್ನು, ಹೊಗಳು ಭಟರನ್ನು, ಅತಿವಿನಯದ ಧೂರ್ತರನ್ನು ಶಿಸ್ತುಕ್ರಮಕ್ಕೆ ಒಳಪಡಿಸುವ ದಿಟ್ಟತನ ಅಧಿಕಾರಿಗಳಲ್ಲಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ, ‘ಸರ್ಕಾರಿ ಕೆಲಸ ದೇವರ ಕೆಲಸ, ದೇವರ ಕೆಲಸ ಎಲ್ಲರ ಕೆಲಸ, ಎಲ್ಲರ ಕೆಲಸಕ್ಕೆ ಯಾರೂ ಬಾಧ್ಯರಲ್ಲ’ ಎನ್ನುವ ಮಾತೇ ನಿಜವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.