ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ರಾಜಕೀಯ ಪರಿಭಾಷೆ– ವಿಶ್ಲೇಷಣೆಗೆ ಇದು ಸಕಾಲ

ರಾಜಕೀಯ ಚಿಂತನೆಗಳು ನಮ್ಮ ರಾಜಕೀಯ ತೀರ್ಮಾನಗಳನ್ನು ಪ್ರಭಾವಿಸದೇ ಇರುವುದರ ಹಿಂದಿನ ಕಾರಣಗಳನ್ನು ನಾವು ಗಮನಿಸಬೇಕಿದೆ
Published : 1 ಸೆಪ್ಟೆಂಬರ್ 2024, 23:37 IST
Last Updated : 1 ಸೆಪ್ಟೆಂಬರ್ 2024, 23:37 IST
ಫಾಲೋ ಮಾಡಿ
Comments

‘ಹೋದರೆಲ್ಲಿ ನಮ್ಮ ರಾಜಕೀಯ ಚಿಂತಕರು?’ ಎಂಬ ಪ್ರಶ್ನೆಯನ್ನು ಯೋಗೇಂದ್ರ ಯಾದವ್‌ ನಮ್ಮ ಮುಂದಿಟ್ಟಿದ್ದಾರೆ (ಪ್ರ.ವಾ., ಆ. 31). ಅವರ ಪ್ರಕಾರ, ಇಂದು ನಾವು ರಾಜಕೀಯ ನೈತಿಕತೆಯ ಕುಸಿತದ ಕುರಿತು ಹೆಚ್ಚು ಚರ್ಚಿಸುತ್ತಿದ್ದೇವೆ. ವಸಾಹತೋತ್ತರ ಭಾರತದ ಎರಡು ದಶಕಗಳಲ್ಲೇ ಆರಂಭಗೊಂಡ ‘ರಾಜಕೀಯ ಚಿಂತನೆಯ ಸವೆತ ಮತ್ತು ಪರಿಭಾಷೆಗಳ ಕುಸಿತ’ ನಮ್ಮ ಕಾಲದ ಬಹಳ ದೊಡ್ಡ ಬಿಕ್ಕಟ್ಟು. ವಾಸ್ತವದಲ್ಲಿ ಆ ಕುರಿತ ಚರ್ಚೆಯಿಂದ ನಾವು ವಿಮುಖರಾಗುತ್ತಿದ್ದೇವೆ ಎನ್ನುವ ಸಂಗತಿಯ ಕಡೆ ನಮ್ಮ ಗಮನ ಸೆಳೆದಿದ್ದಾರೆ.

ಆದರೆ ರಾಜಕೀಯ ಪರಿಭಾಷೆಗಳ ಕುಸಿತಕ್ಕೆ ಕಾರಣವಾದ ಚಾರಿತ್ರಿಕ ಸಂಗತಿಗಳನ್ನು ಅವರು ಚರ್ಚೆಯ ಭಾಗವಾಗಿಸಿಲ್ಲ. ಆದ್ದರಿಂದ, ನಮ್ಮ ಕಾಲದಲ್ಲಿ ರಾಜಕೀಯ ಚಿಂತನೆಗಳು ಏಕೆ ನಮ್ಮ ರಾಜಕೀಯ ತೀರ್ಮಾನಗಳನ್ನು ಪ್ರಭಾವಿಸುತ್ತಿಲ್ಲ ಎನ್ನುವ ಸಂಗತಿಗಳನ್ನು, ಅದಕ್ಕೆ ಇರುವ ಕಾರಣಗಳನ್ನು ಗಮನಿಸಬೇಕಿದೆ ಅನ್ನಿಸುತ್ತದೆ.

ಹಾಗೆ ನೋಡುವುದಾದರೆ, ಮಾನವ ನಾಗರಿಕತೆಯ ಆರಂಭದಿಂದಲೂ ಜನರ ನಡುವೆ ಭಿನ್ನಾಭಿಪ್ರಾಯಗಳು ಇವೆ. ಆದರೆ ಅಂತಹ ಭಿನ್ನಾಭಿಪ್ರಾಯಗಳು ಜನರನ್ನು ವಿಘಟಿಸುತ್ತಿರಲಿಲ್ಲ. ಏಕೆಂದರೆ ಆ ಕಾಲದ ಬೌದ್ಧಿಕತೆ ‘ಭಿನ್ನವಿದ್ದೂ ಬೆರೆತು ಇರುವ ಲೋಕದೃಷ್ಟಿ’ಯ ತಿಳಿವನ್ನು ಆಧರಿಸಿತ್ತು. ಆದರೆ ಬದಲಾದ ಕಾಲದಲ್ಲಿ ‘ಎಲ್ಲವನ್ನೂ ವಿರೋಧಿಸುವ’ ಮಾದರಿಯೊಂದು ನಮ್ಮ ನಡುವೆ ಬೆಳೆದು ನಿಂತಿದೆ.

ದೇಶದಲ್ಲಿ 18ನೇ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಹುತೇಕ ಎಲ್ಲ ಪಕ್ಷಗಳ ರಾಜಕೀಯ ನಾಯಕರು ಬಳಸಿದ ಭಾಷೆ ಮತ್ತು ನುಡಿಗಟ್ಟುಗಳ ಸ್ವರೂಪವು ಈ ‘ಬೌದ್ಧಿಕ ವಿರೋಧಿ’ ಪರಿಕಲ್ಪನೆಯಿಂದ ಪ್ರಭಾವಿತವಾಗಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಇದರ ಜೊತೆ ಜೊತೆಗೆ ಇತ್ತೀಚೆಗೆ ಪ್ರಮುಖ ಕಂಪನಿಯೊಂದರ ಸಿಇಒ ಅವರ ಡಿಎನ್‌ಎ ಕುರಿತ ಹೇಳಿಕೆ, ಕಂಗನಾ ರನೌತ್‌ ಅವರ ಹೇಳಿಕೆಗಳು ಈ ಸಂಗತಿಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ.

ಅಮೆರಿಕದ ಸಮಾಜಶಾಸ್ತ್ರಜ್ಞ ಡೇನಿಯಲ್‌ ರಿಗ್ನಿ, ವರ್ತಮಾನದ ಆಳುವ ವರ್ಗದ ಈ ‘ಬೌದ್ಧಿಕತೆ ವಿರೋಧಿ’ ನಿಲುವು ಮೂರು ಮುಖ್ಯ ಲಕ್ಷಣಗಳನ್ನು ಹೊಂದಿದೆ ಎಂಬ ವಿಶ್ಲೇಷಣೆಯನ್ನು ಮಂಡಿಸಿದ್ದಾರೆ. ಅವುಗಳೆಂದರೆ, 1. ತಮ್ಮ ಅನುಭವಕ್ಕೆ ವಿರುದ್ಧವಾದ ಅಥವಾ ಅನುಭವವನ್ನು ಯಾವ ಅರ್ಥದಲ್ಲೂ ಪ್ರತಿಫಲಿಸದ ವಾದಗಳನ್ನು ಮುಂದಿಡುವುದು. ಉದಾಹರಣೆಗೆ, ನಮ್ಮ ಸಮಾಜದಲ್ಲಿ ಜಾತಿ ಮತ್ತು ಲಿಂಗತಾರತಮ್ಯ ಎಲ್ಲರ ಅನುಭವವೂ ಹೌದು. ಆದರೂ ಬಹುತೇಕರು ಎಲ್ಲಿದೆ ತಾರತಮ್ಯ ಎನ್ನುವಂತೆ ವಾದಿಸುವ ಮೂಲಕ ತಮ್ಮ ಅನುಭವವನ್ನೇ ನಿರಾಕರಿಸಿಕೊಂಡು ಬಿಡುವುದು.

2. ಧಾರ್ಮಿಕತೆಯು ಹರಡುವ ವೈಚಾರಿಕ ವಿರೋಧಿ ಆಲೋಚನೆಗಳನ್ನೇ ಅರಿವು ಎನ್ನುವಂತೆ ಪ್ರಚಾರ ಮಾಡುವುದು. 3. ಬುದ್ಧಿಜೀವಿಗಳು ಯಾವ ಕೆಲಸವನ್ನೂ ಮಾಡುತ್ತಿಲ್ಲ, ಅವರಿಂದ ಯಾವ ಪ್ರಯೋಜನವೂ ಇಲ್ಲ, ಬೌದ್ಧಿಕತೆಯು ವಿಶ್ವವಿದ್ಯಾಲಯದಲ್ಲಿ ಕುಳಿತ ಗಣ್ಯರ ಕಸರತ್ತು ಮಾತ್ರ ಎನ್ನುವ ಧೋರಣೆಯನ್ನು ಜನರ ಸಾಮಾನ್ಯ ಜ್ಞಾನವಾಗಿಸುವ ಮೂಲಕ, ದುಡಿಯುವ ಜನರ ಮೇಲೆ ದಿನನಿತ್ಯ ನಡೆಯುವ ಶೋಷಣೆಯ ವಿರುದ್ಧ ಧ್ವನಿ ಎತ್ತುವ, ಪ್ರಭುತ್ವದ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಡುವ ಚಳವಳಿಗಳನ್ನು ಬೌದ್ಧಿಕತೆಯ ಪರಿಧಿಯ ಆಚೆ ಇಟ್ಟುಬಿಡುವುದು.

ಇಂದಿನ ಆಳುವವರ್ಗವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ, ಬಹಳ ಮುಖ್ಯವಾಗಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಮೇಲಿನ ಎಲ್ಲಾ ಮನೋಧೋರಣೆಗಳನ್ನು ಅತ್ಯಂತ ಪರಿಣಾಮ
ಕಾರಿಯಾಗಿ ಜನರಿಗೆ ತಲುಪಿಸುತ್ತಿದೆ. ಆ ಮೂಲಕ ಅವರು ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳಿಂದ ವಿಮುಖರಾಗಿ ಯೋಚಿಸುವಂತೆ ಅವರನ್ನು ಮಾಡಲಾಗುತ್ತಿದೆ.

ಬಹುತೇಕ ಬುದ್ಧಿಜೀವಿಗಳು ದೇಶದ ಅಭಿವೃದ್ಧಿಗೆ ಮಾರಕ, ಜಾತ್ಯತೀತತೆ ಒಂದು ರೋಗಪೂರಿತ ಪರಿಭಾಷೆ, ಜನಾಂಗೀಯವಾದ ಈ ಕಾಲಕ್ಕೆ ಬೇಕು ಎಂಬ ಮಾನಸಿಕತೆಯನ್ನು ನಮ್ಮ ಸಮಾಜ ಇಂದು ಬೆಳೆಸಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಹಾಗಾಗಿ, ಯಾದವ್‌ ವಾದಿಸಿರುವಂತೆ ‘ರಾಜಕೀಯ ಪರಿಭಾಷೆಯ ಕುಸಿತ’ವು ಬುದ್ಧಿಜೀವಿಗಳ ಸಮಸ್ಯೆ ಮಾತ್ರವಲ್ಲ. ಬದಲಾಗಿ, 21ನೇ ಶತಮಾನದ ಆಳುವವರ್ಗವು ಮೂಲತಃ ಬೌದ್ಧಿಕತೆ, ವೈಚಾರಿಕತೆ ಮತ್ತು ವೈಜ್ಞಾನಿಕ ಅರಿವಿನ ವಿರುದ್ಧ ಮತ್ತು ಯಥಾಸ್ಥಿತಿವಾದದ ಪರವಾಗಿರುವ ಸಮಸ್ಯೆಯನ್ನಾಗಿಯೂ ಅದನ್ನು ನೋಡಬೇಕಿದೆ ಅನ್ನಿಸುತ್ತದೆ.

ಆಳುವವರ್ಗವು ವೈಜ್ಞಾನಿಕತೆಯ ವಿರೋಧಿ ಅನ್ನುವುದರ ಅರ್ಥ, ವಿಜ್ಞಾನ ಉತ್ಪಾದಿಸುವ ತಂತ್ರ
ಜ್ಞಾನವನ್ನು ಅದು ವಿರೋಧಿಸುತ್ತದೆ ಎಂದಲ್ಲ. ಅದು ಇಂದಿನ ಆಳುವವರ್ಗಕ್ಕೆ ಬೇಕು. ಆದರೆ ವಿಜ್ಞಾನ ಉತ್ಪಾದಿಸುವ ‘ತಿಳಿವು ಮತ್ತು ಲೋಕದೃಷ್ಟಿ’ ಅಪಾಯಕಾರಿ ಅನ್ನುವ ಧೋರಣೆಯನ್ನು ಆಳುವವರ್ಗ ಹೊಂದಿದೆ. ಆದ್ದರಿಂದಲೇ ಶಿಕ್ಷಣವು ಅರಿವಿಗಿಂತ ಕೌಶಲಕ್ಕೆ ಹೆಚ್ಚು ಮಹತ್ವ ನೀಡಬೇಕು ಎನ್ನುವ ನಿಲುವನ್ನು ನೀತಿಯಾಗಿ ಹೊಂದಿದ್ದೇವೆ. ಹಾಗಾಗಿ, ನಮ್ಮ ರಾಜಕೀಯ ಸಂಸ್ಥೆಗಳಲ್ಲಿ ರಾಚನಿಕ ಬದಲಾವಣೆಯನ್ನು ತರುವುದು ‘ರಾಜಕೀಯ ಪರಿಭಾಷೆಯ ಕುಸಿತ’ವನ್ನು ತಡೆಯುವ ಪರಿಣಾಮಕಾರಿ ಆಯ್ಕೆ ಅನ್ನಿಸುತ್ತದೆ.

***

ಲೇಖಕ: ಸಹಾಯಕ ಪ್ರಾಧ್ಯಾಪಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT