ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಧೂಮಲೀಲೆ’ ತಡೆಗೆ ಹೊಸ ತಂತ್ರ

ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆ ಕೈಗೊಳ್ಳುವ ಕ್ರಮಗಳು ಗಮನಾರ್ಹ ಪರಿಣಾಮ ಬೀರುತ್ತವೆ ಎಂಬುದು ಅಧ್ಯಯನಗಳಿಂದ ಕಂಡುಬಂದಿದೆ
Last Updated 8 ಆಗಸ್ಟ್ 2022, 22:00 IST
ಅಕ್ಷರ ಗಾತ್ರ

ನ್ಯೂಜಿಲೆಂಡ್‍ನಲ್ಲಿ ಭವಿಷ್ಯದ ಪೀಳಿಗೆಯನ್ನು ಧೂಮ ಮುಕ್ತವಾಗಿಸುವ ಹೊಸ ತಂತ್ರಕ್ಕೆ ಮುಂದಡಿ ಇಡಲಾಗಿದೆ. 18 ವರ್ಷದ ಗಡಿ ತಲುಪಿದರೂ 2008ರ ನಂತರ ಹುಟ್ಟಿದವರ್‍ಯಾರೂ ಸಿಗರೇಟು ಖರೀದಿಸುವ ಹಾಗಿಲ್ಲ. ಜಗತ್ತಿನಲ್ಲಿಯೇ ‘ಪ್ರಥಮ’ ಎನ್ನಬಹುದಾದ ಈ ಹೊಸ ತಂತ್ರವನ್ನು ಮಿಶ್ರಭಾವದಿಂದ ಜನ ಸ್ವೀಕರಿಸಿದ್ದಾರೆ. ತಂತ್ರದ ಹೊಸತನದ ಬಗ್ಗೆ ಒಂದೆಡೆ ಮೆಚ್ಚುಗೆ, ಇನ್ನೊಂದೆಡೆ, ಯಾವ ವಿಧದಲ್ಲೂ ಪರೀಕ್ಷೆಗೆ ಒಳಗಾಗದ ಈ ಪ್ರಯೋಗಾತ್ಮಕ ತಂತ್ರದ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ.

ಧೂಮಪಾನ ಮಾಡಬಹುದಾದ ವಯಸ್ಸನ್ನು ಏರಿಸುವುದಷ್ಟೇ ಅಲ್ಲ, ಇನ್ನೂ ಕೆಲವು ಕ್ರಮಗಳನ್ನು ನ್ಯೂಜಿಲೆಂಡ್‍ನ ಆಡಳಿತ ವ್ಯವಸ್ಥೆ ಜಾರಿಗೆ ತರಲಿದೆ. ಸಿಗರೇಟುಗಳಲ್ಲಿರುವ ನಿಕೋಟಿನ್ ಪ್ರಮಾಣವನ್ನು ಗಣನೀಯವಾಗಿ ಇಳಿಸಲಾಗುತ್ತಿದೆ. ಈವರೆಗೆ ಸೂಪರ್ ಮಾರ್ಕೆಟ್‍ಗಳು- ಮೂಲೆ ಅಂಗಡಿಗಳಲ್ಲಿ ವ್ಯಾಪಕವಾಗಿ ದೊರಕುತ್ತಿದ್ದ ಸಿಗರೇಟು, ಇನ್ನು ಮುಂದೆ ‘ಸ್ಪೆಷಾಲಿಟಿ ಟೊಬ್ಯಾಕೊ ಸ್ಟೋರ್’ಗಳಲ್ಲಿ ಮಾತ್ರ ದೊರಕಲಿದೆ. ಈ ಎಲ್ಲ ಉಪಕ್ರಮಗಳಿಂದಾಗಿ, 2025ರ ಹೊತ್ತಿಗೆ ನ್ಯೂಜಿಲೆಂಡ್‌ನ ಶೇಕಡ 5ರಷ್ಟು ಜನ ಮಾತ್ರ
ಧೂಮಪಾನಿಗಳಾಗಿರುತ್ತಾರೆ ಎಂಬ ನಿರೀಕ್ಷೆ ಇದೆ.

ಮಾದಕದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಸಾಮಾಜಿಕ-ಕಾನೂನು ಕ್ರಮಗಳನ್ನು ಚಿಕಿತ್ಸೆಯ ಜೊತೆಗೇ ಕೈಗೊಳ್ಳಬೇಕೆಂದು ಸೂಚಿಸುತ್ತದೆ. ಅಪಾಯವನ್ನು ಕಡಿಮೆ ಮಾಡುವ ತಂತ್ರಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧೂಮಪಾನ ನಿರ್ಬಂಧ, ಶಾಲಾ ತಾಣಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿರ್ಬಂಧ, ಆರೋಗ್ಯಕ್ಕೆ ತಂಬಾಕು ತಂದೊಡ್ಡುವ ಅಪಾಯದ ಕುರಿತು ಅದರ ಉತ್ಪನ್ನದ ಪ್ಯಾಕೆಟ್‍ಗಳ ಮೇಲೆ ಎಚ್ಚರಿಕೆ, ಜಾಹೀರಾತು ನಿಷೇಧ ಇವೆಲ್ಲ ನಾವು ನಮ್ಮ ಭಾರತೀಯ ಕಾನೂನಿನಲ್ಲಿ ನೋಡಿರು ವಂತಹವೇ. ಇವೆಲ್ಲದರ ನಡುವೆಯೂ ಶೇಕಡ 29 ರಷ್ಟು ಭಾರತೀಯರು, ಅಂದರೆ 26.7 ಕೋಟಿ ಜನ ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವವರೇ. ಭಾರತವು ಜಗತ್ತಿನ ಎರಡನೇ ಅತಿ ಹೆಚ್ಚು ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರ. 2017-18ರ ಅಂಕಿ-ಅಂಶ ಗಳ ಪ್ರಕಾರ, ತಂಬಾಕು ತಂದೊಡ್ಡುವ ವಿವಿಧ ಕಾಯಿಲೆಗಳಿಂದ ಉಂಟಾಗಿರುವ ಆರ್ಥಿಕ ಹೊರೆ ₹ 1.77 ಲಕ್ಷ ಕೋಟಿ.

ಆದರೂ ಆಡಳಿತ ವ್ಯವಸ್ಥೆಯು ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳು ಗಮನಾರ್ಹ ಪರಿಣಾಮ ಬೀರುತ್ತವೆ ಎಂಬುದು ಅಧ್ಯಯನಗಳಿಂದ ಕಂಡುಬಂದಿದೆ. ಸರ್ಕಾರದ ಕ್ರಮಗಳು ‘ಅರೆ ಮನಸ್ಸಿನಿಂದ’, ‘ಗಂಭೀರವಲ್ಲದ’, ‘ಕಾಗದದ ಮೇಲಷ್ಟೇ ನಿಲ್ಲುವ ಕ್ರಮಗಳು’ ಎಂದು ಜನರು ಮಾತನಾಡಬಹುದು. ಆದರೆ ಧೂಮಪಾನದ ಬಗೆಗಿನ ಸಮಾಜದ ಧೋರಣೆಯಲ್ಲಿ ಈ ಕ್ರಮಗಳು ಹಂತ ಹಂತವಾಗಿ ಸುಧಾರಣೆ ತರುತ್ತಿರುವುದನ್ನು ಗ್ಲೋಬಲ್‌ ಯೂತ್‌ ಟೊಬ್ಯಾಕೊ ಸರ್ವೆ– ಜಿವೈಟಿಎಸ್‌ ಗುರುತಿಸಿದೆ. 2003, 2006, 2009 ಮತ್ತು 2019ರ ಅಂಕಿ-ಅಂಶಗಳಲ್ಲಿ ಇದು ಸುಸ್ಪಷ್ಟ.

ತಂಬಾಕು ಉಪಯೋಗಿಸುವವರ ಸಂಖ್ಯೆಯಲ್ಲಿ ಇಳಿಕೆ, ಮನೆಯಲ್ಲಿ ತಂಬಾಕಿನ ಹೊಗೆಯಲ್ಲಿ ಇಳಿಕೆ, ವಯಸ್ಸಿನ ಕಾರಣ ಸಿಗರೇಟು ಮಾರುವುದಕ್ಕೆ ನಿರಾ ಕರಿಸುವ ಧೋರಣೆಯಲ್ಲಿ ಹೆಚ್ಚಳ ಕಂಡುಬಂದಿರು ವುದು ಉಲ್ಲೇಖಾರ್ಹ. ಸಮೂಹ ಮಾಧ್ಯಮ
ಗಳಲ್ಲಿ ತಂಬಾಕಿನ ವಿರುದ್ಧದ ಸಂದೇಶಗಳನ್ನು ಶೇಕಡ 52ರಷ್ಟು ವಿದ್ಯಾರ್ಥಿಗಳು ಗಮನಿಸಿದ್ದರು ಎನ್ನುವುದೂ ಮುಖ್ಯವೇ.

ನಿಯಮಗಳ ಅಲಕ್ಷ್ಯವೂ ಭಾರತೀಯರಾದ ನಮಗೆ ಸಹಜವೇ! ಬೆಂಗಳೂರು ಏರ್‌ಪೋರ್ಟ್‌ನ ‘ಸ್ಮೋಕಿಂಗ್ ಕ್ಯಾಬಿನ್‍’ನಲ್ಲಿ ಕುಳಿತ ಕೆಲವರು ಅದರ ಬಾಗಿಲು ತೆರೆದೇ ಇರುವಂತೆ ಬಾಗಿಲಿನ ಸೆನ್ಸಾರ್‌ಗೆ ಕೈ ಅಡ್ಡ ಹಿಡಿಯುತ್ತಾರೆ, ತಾವೇ ಬಾಗಿಲಿನ ಮುಂದೆ ನಿಲ್ಲುತ್ತಾರೆ ಏಕೆ?! ಕ್ಯಾಬಿನ್ ಒಳಗೆ ತಾಜಾ ಗಾಳಿ ಬರಬೇಕೆಂದು! ‘ಸ್ಮೋಕ್ ಕ್ಯಾಬಿನ್’ ನಿರ್ಮಿಸುವ ಉದ್ದೇಶವನ್ನೇ ಈ ವ್ಯಕ್ತಿಗಳು ನಿರರ್ಥಕಗೊಳಿಸಿಬಿಡುತ್ತಾರೆ. ‘ಸ್ಮೋಕ್ ಕ್ಯಾಬಿನ್’ ಉದ್ದೇಶವೇ ಧೂಮಪಾನಿಗಳು ಹೊರಬಿಡುವ ಹೊಗೆಯಿಂದ ಇತರರಿಗೆ ಹಾನಿಯಾಗಬಾರದು ಮತ್ತು ಧೂಮಪಾನಿಗಳಿಗೆ ‘ಬೇಕೆಂದರೆ ನೀವು ಸೇದಿದ ಹೊಗೆಯನ್ನು ನೀವೇ ಸೇವಿಸಿ, ಸಾಧ್ಯವಿಲ್ಲ ಎಂದಾದರೆ ಹೊರಬನ್ನಿ, ಆಗ ಧೂಮಪಾನ ಮಾಡುವಂತಿಲ್ಲ’ ಎಂಬಂತೆ ಕಟ್ಟು ಮಾಡುವುದು. ಯಾವುದಾದರೊಂದು ಉಪಾಯದಿಂದ ಬಾಗಿಲನ್ನು ತೆರೆದಿಟ್ಟೇ ತಮ್ಮ ಧೂಮಪಾನ ಮುಂದುವರಿಸುವುದ ರಿಂದ ಎರಡೂ ಉದ್ದೇಶಗಳು ಸಂಪೂರ್ಣವಾಗಿ ವಿಫಲ ವಾಗುತ್ತವೆ.

ಇಲ್ಲಿ ಕಾನೂನು ಮಾತ್ರ ಏನು ಮಾಡೀತು?! ಆಗ ಬೇಕಾದದ್ದು, ಸುತ್ತಲಿರುವ ನಾಗರಿಕರು ಕೈಜೋಡಿಸಿ, ತಪ್ಪನ್ನು ತಡೆಯುವ ಕಾರ್ಯ, ತಪ್ಪನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಕಾನೂನನ್ನು ಸರಿಯಾಗಿ ಜಾರಿ ಮಾಡುವ ನಾಗರಿಕ ಬದ್ಧತೆ.

ನ್ಯೂಜಿಲೆಂಡ್‌ನಲ್ಲಿ ಸಿಗರೇಟ್‍ಗಳ ಮೇಲೆ ತೆರಿಗೆ ಎಷ್ಟು ಹೆಚ್ಚೆಂದರೆ, ಒಂದು ಪ್ಯಾಕ್ ಸಿಗರೇಟ್‍ಗೆ 20 ಯು.ಎಸ್. ಡಾಲರ್‌ಗಳು. ಹಾಗಾಗಿ, ಕಾಳಸಂತೆ ಈಗಲೇ ಅಲ್ಲಿ ಜೋರಾಗಿಯೇ ಇದೆ! ಆದರೂ ನ್ಯೂಜಿ ಲೆಂಡ್‌ ಕೈಗೊಂಡಿರುವ ದಿಟ್ಟ ಕ್ರಮಗಳ ಹಿಂದೆ, ಈಗಾ ಗಲೇ ಶೇಕಡ 85ರಷ್ಟಿರುವ ‘ಧೂಮಮುಕ್ತ’ ಜನಸಂಖ್ಯೆ ಜೊತೆಗಿದೆ. ಅಂತಹ ಕ್ರಮಗಳು ಭಾರತದಲ್ಲಿಯೂ ಒಂದು ದಿನ ಬರಬಹುದೇ? ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT