ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನೈತಿಕ ಶಿಕ್ಷಣ: ಸಂವಿಧಾನವೇ ಮೂಲ ಸೆಲೆ

ಮತಧರ್ಮ ನಿರಪೇಕ್ಷವಾದ ನೈತಿಕ ಮೌಲ್ಯಗಳನ್ನು ಶಿಕ್ಷಣದಲ್ಲಿ ತರುವುದಕ್ಕೆ ಆಧಾರವನ್ನು ಒದಗಿಸುವುದು ‘ಭಾರತ ಸಂವಿ
ಅಕ್ಷರ ಗಾತ್ರ

ವಿಧಾನಸೌಧದಲ್ಲಿ ಸೋಮವಾರ ಬಹಳ ಮಹತ್ವದ ದುಂಡುಮೇಜಿನ ಸಭೆ ನಡೆಯಿತು. ಶಾಲೆಗಳಲ್ಲಿ ಯಾವ ಮಾದರಿಯ ‘ನೈತಿಕ ಶಿಕ್ಷಣ’ವನ್ನು ನೀಡಬೇಕು ಎನ್ನುವುದರ ಕುರಿತ ಸಮಾಲೋಚನೆಯಲ್ಲಿ ಪ್ರಾತಿನಿಧ್ಯ ಚೆನ್ನಾಗಿಯೇ ಇತ್ತು. ಈ ಮುಂಚೆ ಈ ಕುರಿತು ನೀತಿ ನಿರ್ದೇಶನ ನೀಡಿದ್ದ ಶಿಕ್ಷಣ ಸಚಿವರು, ‘ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಒಳಗೊಂಡು ಎಲ್ಲಾ ಧರ್ಮಗಳ ಒಳ್ಳೆಯ ಅಂಶಗಳು ನೀತಿ ಪಾಠದಲ್ಲಿ ಇರಲಿವೆ’ ಎಂದು ಹೇಳುತ್ತಾ, ಕುರಾನ್, ಬೈಬಲ್ಲಿನಲ್ಲಿರುವ ಉತ್ತಮ ಅಂಶಗಳ ಸೇರ್ಪಡೆಗೆ ತಕರಾರಿಲ್ಲ ಎಂಬ ರಿಯಾಯಿತಿಯನ್ನೂ ನೀಡಿದ್ದರು. ಆದರೆ ಮೊನ್ನೆಯ ಸಭೆಯಲ್ಲಿ ಹೆಚ್ಚಿನವರು ಭಗವದ್ಗೀತೆ, ರಾಮಾಯಣ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಕುರಾನ್, ಬೈಬಲ್ ಬಗ್ಗೆ ಯಾರೂ ಮಾತನಾಡಿಲ್ಲ. ಕ್ರೈಸ್ತ ಗುರುಗಳೊಬ್ಬರು ನೈತಿಕ ಶಿಕ್ಷಣವು ಧರ್ಮಾತೀತವಾಗಿರಬೇಕು ಎಂದಿದ್ದರೆ, ಮುಸ್ಲಿಂ ಗುರುಗಳೊಬ್ಬರು, ವಿವಿಧ ಸಂಸ್ಕೃತಿಗಳ ನಮ್ಮ ನಾಡಿನಲ್ಲಿ ‘ಯೂನಿವರ್ಸಲ್ ಚಿಂತನೆ’ಗಳನ್ನು ನಾವು ತರಬೇಕು ಎಂದಿದ್ದಾರೆ.

ಶೈಕ್ಷಣಿಕವಾದ ಯಾವುದೇ ಅಂಶಗಳನ್ನು ಧಾರ್ಮಿಕತೆಯ ಚೌಕಟ್ಟಿನಲ್ಲಿ ನೋಡಿದರೆ ಏನಾಗುತ್ತದೆ ಎಂಬುದನ್ನು ನಾವು ಹಿಂದಿನ ವರ್ಷ ಹಿಜಾಬ್, ಕೇಸರಿ ಶಾಲು, ಗಣೇಶೋತ್ಸವ, ಶಾಲೆಯಲ್ಲಿಯೇ ನಮಾಜಿನಂತಹ ವಿವಾದಗಳು ಭುಗಿಲೆದ್ದಾಗ, ‘ತಮ್ಮ ಬೋಧನೆಗಳ ಮೂಲಕ ಸಮಾಜವನ್ನು ಎಚ್ಚರಿಸುವ’ ವಿವಿಧ ಕೋಮಿನ ಧಾರ್ಮಿಕ ಮುಖಂಡರು ನೀಡಿದ ಕೊಡುಗೆ ಏನು ಎಂಬುದರಲ್ಲಿ ಕಂಡಿದ್ದೇವೆ. ನೈತಿಕ ಶಿಕ್ಷಣಕ್ಕಾಗಿ ಧರ್ಮಗ್ರಂಥಗಳಿಗೆ ಕೈಹಾಕಿದರೆ ಮತ್ತೊಮ್ಮೆ ಕೋಮುಭಾವನೆಗಳನ್ನು ಕೆದಕಿ ನಾವು ಶಾಲಾ
ವಾತಾವರಣವನ್ನು ಇನ್ನಷ್ಟು ಮಲಿನಗೊಳಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಭೆಯಲ್ಲಿ ಕ್ರೈಸ್ತ ಧರ್ಮಗುರುಗಳು ಹೇಳಿದ ಹಾಗೆ ‘ಜಾತ್ಯತೀತ’ ಎಂದರೆ, ‘ಮತಧರ್ಮ ನಿರಪೇಕ್ಷ’ವಾದ ನೈತಿಕ ಮೌಲ್ಯಗಳನ್ನು ಶಿಕ್ಷಣದಲ್ಲಿ ತರಬೇಕು. ಇದಕ್ಕೆ ಯಾವುದಾದರೂ ಒಂದು ಗ್ರಂಥ ಆಧಾರವನ್ನು ಒದಗಿಸುತ್ತದೆ ಎಂದರೆ ಅದು ‘ಭಾರತ ಸಂವಿಧಾನ’ ಮಾತ್ರ.

ಮಕ್ಕಳನ್ನು ಭಾವಿ ಜೀವನಕ್ಕಾಗಿ ಸಜ್ಜುಗೊಳಿಸುವ ಜೊತೆಯಲ್ಲಿಯೇ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೂ ಅಗತ್ಯ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ, ಬಹುತ್ವವೇ ಬಲವಾದ ವೈಶಿಷ್ಟ್ಯವಾದ ಭಾರತದಲ್ಲಿ ಅದು ಯಾವುದೇ ಒಂದು ಅಥವಾ ಹಲವು ಧರ್ಮಗ್ರಂಥಗಳಿಂದ ಸಾಧ್ಯವಾಗುವುದಿಲ್ಲ. ಎಲ್ಲಾ ಪ್ರತ್ಯೇಕ ಧರ್ಮಗಳ ಮೂಲ ಮಾನವೀಯ ಮೌಲ್ಯಗಳನ್ನು ಒಳಗೊಂಡು, ಆಧುನಿಕ ಭಾರತಕ್ಕೆ ಅಗತ್ಯವಾದ ಮೌಲ್ಯಗಳನ್ನು ಕಲಿಸುವುದಕ್ಕಾಗಿ ಇರುವ ಒಂದೇ ಒಂದು ಗ್ರಂಥವೆಂದರೆ, ‘ಭಾರತ ಸಂವಿಧಾನ’.

ಸಂವಿಧಾನದ ಪ್ರಸ್ತಾವನೆಯನ್ನು ಓದಿ, ಅದರಲ್ಲಿ, (ಜಾತಿ, ಧರ್ಮಗಳನ್ನು ಮೀರಿ) ‘ಭಾರತದ ಜನತೆಯಾದ ನಾವು’, ‘ಸಾರ್ವಭೌಮ, ಸಮಾಜವಾದಿ, ಮತಧರ್ಮ ನಿರಪೇಕ್ಷ, ಜನಸತ್ತಾತ್ಮಕ ಗಣರಾಜ್ಯ’ವನ್ನಾಗಿ ಮಾಡುವುದಕ್ಕಾಗಿ ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಮತ್ತು ಉಪಾಸನೆಯ ಸ್ವಾತಂತ್ರ್ಯ; ಸ್ಥಾನಮಾನ, ಅವಕಾಶಗಳ ಸಮತೆ; ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಬಂಧುತ್ವಭಾವನೆ ಮೂಡಿಸುವ ದೃಢ ಸಂಕಲ್ಪವನ್ನು ಮಾಡಿದ್ದೇವೆ. ಇವು ನಮಗೆ ನಾವೇ ಕೊಟ್ಟುಕೊಂಡಿರುವ ನಾಗರಿಕ ಮೌಲ್ಯಗಳು. ಸಂವಿಧಾನದ ಮೂರನೇ ಭಾಗದಲ್ಲಿ ನಮಗೆ ನೀಡಲಾಗಿರುವ ಮೂಲಭೂತ ಹಕ್ಕುಗಳು ನಮ್ಮ ಗಳಿಕೆಗಳು, ಅವುಗಳಿಗೆ ಇರುವ ಸಮಂಜಸವಾದ ನಿರ್ಬಂಧಗಳು ನಮ್ಮ ಬಾಧ್ಯತೆಗಳು.

ನಾಲ್ಕನೇ ಭಾಗದ ವಿಧಿ 51 ಎ-ಯಲ್ಲಿ ನಿಗದಿಗೊಳಿಸಿರುವ ‘ಮೂಲಭೂತ ಕರ್ತವ್ಯಗಳು’ ಭಾರತದ ನಾಗರಿಕರಾಗಿ ನಾವು ಅನುಸರಿಸಬೇಕಾದ ನೀತಿಗಳು, ಮನೋವೃತ್ತಿಗಳು ಮತ್ತು ವರ್ತನೆಗಳು. ಅದರಲ್ಲಿ ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು; ಧರ್ಮ, ಭಾಷೆ, ಪ್ರದೇಶ, ಲಿಂಗ ಇತ್ಯಾದಿ ಭೇದಭಾವಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಮಾನ ಭ್ರಾತೃತ್ವದ ಭಾವನೆ ಬೆಳೆಸುವುದು, ಸ್ತ್ರೀಯರ ಗೌರವಕ್ಕೆ ಕುಂದುಂಟುಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು, ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯಪರಂಪರೆಯನ್ನು ಗೌರವಿಸುವುದು, ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವಂತಹ ಮೌಲ್ಯಗಳನ್ನು ಕರ್ತವ್ಯಗಳಾಗಿ ನಮಗೆ ನಾವೇ ವಿಧಿಸಿಕೊಂಡಿದ್ದೇವೆ.

ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ರೀತಿಯಲ್ಲಿ ಮಕ್ಕಳನ್ನು ಸಜ್ಜುಗೊಳಿಸುವ ಅಗತ್ಯವಿದೆ. ಇದು ಯಾವುದೇ ಒಂದು ಅಥವಾ ಹೆಚ್ಚು ಧರ್ಮಗ್ರಂಥಗಳಿಂದ ಸಾಧ್ಯವಿಲ್ಲ, ಇಂಥದೊಂದು ದೂರದೃಷ್ಟಿ, ಸಾಂವಿಧಾನಿಕ ಮನೋವೃತ್ತಿ ಧಾರ್ಮಿಕ ಮುಖಂಡರು ಎನಿಸಿಕೊಂಡವರಲ್ಲಿ ಇರುವುದಿಲ್ಲ.

ಮಕ್ಕಳಿಗಿಂತ ಮೊದಲು ಶಿಕ್ಷಕರಿಗೆ ಇಂಥ ನೈತಿಕ ಪಾಠವಾಗಬೇಕು ಎಂದು ಸಭೆಯಲ್ಲಿ ಮೂಡಿಬಂದ ಅಭಿಪ್ರಾಯ ಸಮರ್ಥನೀಯ. ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ನಾಗರಿಕ ಮೌಲ್ಯಗಳನ್ನು ಪಠ್ಯದ ರೂಪದಲ್ಲಿ ಸಂಯೋಜಿಸಿ, ಕಲಿಕೆ, ಅರಿವು, ಅನ್ವಯ, ಆಚರಣೆಗಳನ್ನು ಸಾಧ್ಯವಾಗಿಸುವ ಕಾರ್ಯಯೋಜನೆ ಯನ್ನು ಹಾಕಿಕೊಂಡು ಶಿಕ್ಷಕರಿಗೆ ನೈತಿಕ ಶಿಕ್ಷಣವನ್ನು ನೀಡುವುದು ಹೆಚ್ಚು ಸಮಂಜಸ. ಸರ್ಕಾರ ಈ ಕುರಿತು ಸಕಾರಾತ್ಮಕವಾಗಿ ಕಾರ್ಯಪ್ರವೃತ್ತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT