ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅಧಿವೇಶನ: ಅರಿವಾಗುವುದೆಂದು ಮಹತ್ವ?

Last Updated 13 ಜನವರಿ 2023, 19:31 IST
ಅಕ್ಷರ ಗಾತ್ರ

ನಾನು, ಬೆಂಗಳೂರಿನಲ್ಲಿ ಪದವಿ ಕಾಲೇಜೊಂದರಲ್ಲಿ ಪ್ರಾಂಶುಪಾಲನಾಗಿದ್ದಾಗ, ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಬೇಡಿಕೆಯೆಂದರೆ, ಅಧಿವೇಶನವನ್ನು ವೀಕ್ಷಿಸಲು ತಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿ ಕೊಡಬೇಕು ಎಂಬುದು. ಅದರಿಂದ ಉಂಟಾಗುವ ಪ್ರಯೋಜನ ಅಷ್ಟರಲ್ಲೇ ಇದೆ ಎಂದು ಮೊದಲು ಅನಿಸಿದರೂ ಆ ತಿಳಿವಳಿಕೆಯೂ ವಿದ್ಯಾರ್ಥಿ ಗಳಿಗೆ ಇರಲಿ ಎಂದು ಆಶಿಸುತ್ತಾ, ಆಗಲಿ ಎಂದು ಒಪ್ಪಿಗೆ ಸೂಚಿಸಿದೆ.

ಒಂದು ಕಾಲದಲ್ಲಿ ನನಗೂ ಆ ಕುತೂಹಲ ಉಂಟಾಗಿದ್ದ ನೆನಪು ಮರುಕಳಿಸಿತ್ತು. ಈ ರೀತಿಯ ತಿಳಿವಳಿಕೆ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಮಾತ್ರವೇನು, ಪದವಿ ಮಟ್ಟದ ಎಲ್ಲ ವಿದ್ಯಾರ್ಥಿಗಳೂ ಅದರ ಪರಿಚಯ ಹೊಂದುವುದು ಒಳ್ಳೆಯದೇ ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ, ಇದೊಂದು ರೀತಿಯ ಪ್ರಾಕ್ಟಿಕಲ್ ಕ್ಲಾಸ್‌ನಂತೆ ಆಗಬಹುದೇ ಎಂಬ ಯೋಚನೆಯೂ ಬರುತ್ತಿತ್ತು.

ಹೌದು, ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಶಾಸನಸಭೆಯ ಪರಿಚಯ ಚೆನ್ನಾಗಿಯೇ ಇರಬೇಕು. ಪ್ರಜಾಪ್ರಭುತ್ವದ ಈ ಪ್ರಧಾನ ಸಂಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರಾಥಮಿಕ ತಿಳಿವಳಿಕೆ ಈ ವಿದ್ಯಾರ್ಥಿಗಳಿಗೆ ಮಾತ್ರವೇ ಏನು, ಎಲ್ಲ ಮತದಾರರಿಗೂ ಇರಬೇಕಾದದ್ದು ಅವಶ್ಯಕ. ಹಾಗೆಂದ ಮಾತ್ರಕ್ಕೆ ಎಲ್ಲರೂ ಅಧಿವೇಶನಗಳನ್ನು ವೀಕ್ಷಿಸಲು ಹೋಗಲಾಗದು. ಆ ಉದ್ದೇಶದಿಂದಲೇ ವಿಧಾನಸಭಾ ಹಾಗೂ ಸಂಸತ್ ಅಧಿವೇಶನಗಳನ್ನು ವೀಕ್ಷಿಸಲು ಅನುವಾಗುವಂತೆ ‘ದೂರದರ್ಶನ’ವು ನೇರ ಪ್ರಸಾರ ಮಾಡುತ್ತಿರುವುದು ತಿಳಿದ ವಿಷಯವೇ.

ಕೆಲವು ವಿದ್ಯಾರ್ಥಿಗಳಿಗೆ ಹೀಗೆ ಬೇರೆ ಕಡೆ ಹೋಗುವುದು ತರಗತಿ ತಪ್ಪಿಸಿಕೊಳ್ಳಲು ಒಂದು ಅಧಿಕೃತ ಮಾರ್ಗವಾಗಿತ್ತು ಎಂಬುದು ಗುಟ್ಟಿನ ವಿಷಯವೇನೂ ಆಗಿರಲಿಲ್ಲ. ಆದರೂ, ವಿದ್ಯಾರ್ಥಿಗಳಿಗೆ ಒಂದು ಮನೋಲ್ಲಾಸದ ಪರ್ಯಾಯ ಮಾರ್ಗವಿರಲಿ ಎಂಬ ಕಾರಣದಿಂದ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಏನು ಎಂಬುದರ ಕುರಿತು ಕಿಂಚಿತ್ತು ಅರಿವು ಮೂಡಿಸುವ ಉದ್ದೇಶದಿಂದ ಒಪ್ಪಿಗೆ ಸೂಚಿಸಿದೆ.

ಒಂದೆರಡು ದಿನಗಳ ನಂತರ, ಈ ವೀಕ್ಷಣೆ ಮುಗಿಸಿಕೊಂಡು ಬಂದ ಕೆಲವು ವಿದ್ಯಾರ್ಥಿನಿಯರನ್ನು ‘ಸದನ ವೀಕ್ಷಣೆಯ ಅನುಭವ ಹೇಗಿತ್ತು’ ಎಂದು ಕೇಳಿದೆ. ಒಬ್ಬ ವಿದ್ಯಾರ್ಥಿನಿ ಹೇಳಿದ್ದು, ‘ಸಾರ್, ಬೇಜವಾಬ್ದಾರಿ ಎಂದರೆ ಏನೆಂದು ತಿಳಿಯಬೇಕಾದರೆ ಅಲ್ಲಿಗೆ ಹೋಗಬೇಕು. ಅಲ್ಲಾ ಸಾರ್, ಯಾರೋ ಒಬ್ಬ ಸದಸ್ಯರು ತಮ್ಮ ಸರದಿ ಬಂದಾಗ ಬಂದು, ಪ್ರಶ್ನೋತ್ತರ ಆದ ನಂತರ ಹೊರಟೇಹೋದರು. ಮಂತ್ರಿಗಳು ಅಂತ ಕಾಣುತ್ತೆ. ಅವರು ಭಾಷಣ ಮಾಡುತ್ತಿದ್ದಾಗ ಬೇರೆಯವರು ಮಾತನಾಡುತ್ತಾ ಕುಳಿತಿದ್ದರು...’ ಎಂದೆಲ್ಲಾ ಹೇಳಬೇಕಾದ್ದನ್ನೇ ಹೇಳಿದಳು.

ಬೆಳಗಾವಿಯಲ್ಲಿ ಮೊನ್ನೆಯಷ್ಟೇ ನಡೆದ ಅಧಿವೇಶನದ ಸಮಯದಲ್ಲಿ ಅದನ್ನು ವೀಕ್ಷಿಸಲು ಸರದಿಗಾಗಿ ಕಾಯುತ್ತಿದ್ದ ಶಾಲಾ–ಕಾಲೇಜು ಮಕ್ಕಳ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದಾಗ ಇದೆಲ್ಲಾ ನೆನಪಾಯಿತು.

ಬ್ರಿಟನ್‌ ಪಾರ್ಲಿಮೆಂಟ್‌ನಲ್ಲಿ ರಿಷಿ ಸುನಕ್ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಮಾತನಾಡುತ್ತಿದ್ದಾಗ, ಸಂಸತ್ ಸದಸ್ಯರು ಭಾಷಣದ ಟಿಪ್ಪಣಿ ಮಾಡಿಕೊಳ್ಳುತ್ತಿದ್ದುದನ್ನು ಗಮನಿಸಬಹುದಿತ್ತು (ತಾಂತ್ರಿಕ ಆವಿಷ್ಕಾರಗಳಿದ್ದರೂ). ನಂತರ ಅದನ್ನು ನೋಡಿಕೊಂಡೇ ಚರ್ಚೆಯಲ್ಲಿ ತೊಡಗಿದ್ದುದನ್ನು ಸಹ ಪ್ರಸಾರದಲ್ಲಿ ನೋಡಿದೆವು.

ನಮ್ಮ ವಿಧಾನಸಭಾ ಸದಸ್ಯರ ಬೇಜವಾಬ್ದಾರಿಯುತ ವರ್ತನೆಗೆ ಯಾವುದೇ ಪಕ್ಷಭೇದವಿಲ್ಲ. ನಮ್ಮ ಜನಪ್ರತಿನಿಧಿಗಳು ಅಭಿವೃದ್ಧಿಯ ಮಂತ್ರವನ್ನು ಸದಾ ಜಪಿಸುತ್ತಾರೆ. ಆದರೆ ಅದಕ್ಕೆ ಪೂರಕವಾಗುವ ಯೋಜನೆ ಜಾರಿಯಾಗಬೇಕಾದರೆ, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಮೊದಲು ಅದರ ಮಂಡನೆಯಾಗಬೇಕು, ನಂತರ ಅದನ್ನು ಅನುಷ್ಠಾನಕ್ಕೆ ತರಲು ಇರುವ ಸಾಂವಿಧಾನಿಕ ಮಾನ್ಯತೆಗೆ, ಅದರ ಸಾಧಕ ಬಾಧಕಗಳ ಕುರಿತು ಮಾಡಬೇಕಾದ ಅರ್ಥಪೂರ್ಣ ಚರ್ಚೆಗೆ ಅನುವು ಮಾಡಿಕೊಡಬೇಕು ಎನ್ನುವ ನಡಾವಳಿಗೆ ಏಕೆ ಬದ್ಧತೆ ತೋರುವುದಿಲ್ಲ?

ಪ್ರಸ್ತುತ ಸನ್ನಿವೇಶವನ್ನೇ ಗಮನಿಸಿದರೆ, ಬರಲಿರುವ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆಯಷ್ಟೇ. ಜನಪ್ರತಿನಿಧಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಾಧನಕ್ಕೆ ಅಧಿವೇಶನದ ಚರ್ಚೆಗಳೂ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂಬ ಲವಲೇಶದ ತಿಳಿವಳಿಕೆಯಾದರೂ ಎಂತಹ ಜನಪ್ರತಿನಿಧಿಗಾದರೂ ಇರಲೇಬೇಕು. ಹಾಗಿರುವಾಗ, ನಮ್ಮ ಶಾಸಕ ಮಹೋದಯರು, ಇತರ ರಾಜಕಾರಣಿಗಳ ಕಾಲೆಳೆಯುವುದರಲ್ಲೇ ಕಾಲಹರಣ ಮಾಡದೆ, ‘ನಮ್ಮ ಮತದಾರರಿಗೆ ನಾವು ಬದ್ಧರು’ ಎಂಬುದನ್ನು ಚರ್ಚೆಯ ಮೂಲಕ ಮಾಡಿ ತೋರಿಸಿದ್ದೇ ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರು ಅರ್ಥಪೂರ್ಣ ಕೊಡುಗೆ ನೀಡಿದಂತೆಯೇ ಸರಿ.

ಒಟ್ಟಿನಲ್ಲಿ ನಮ್ಮ ಎಲ್ಲಾ ಶಾಸಕರು ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಳ್ಳುವ ದಿನಗಳು ಎಂದು ಬರುತ್ತವೋ ತಿಳಿಯದು. ಬೆಳಗಾವಿ ಅಧಿವೇಶನವಂತೂ ಶಾಸಕರ ಕಾಲಹರಣಕ್ಕಾಗಿ ಮೀಸಲಾಗಿದೆಯೇನೋ ಎಂಬಂತಿತ್ತು. ನಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡದೆ, ತಮ್ಮನ್ನು ಸದಾ ಗಮನಿಸುವವರು ಇರುತ್ತಾರೆ ಎಂಬುದನ್ನು ತಿಳಿದು, ಜನರ ಜ್ವಲಂತ ಸಮಸ್ಯೆಗಳ ಕುರಿತು ಪಕ್ಷಾತೀತವಾಗಿ ಅರ್ಥಪೂರ್ಣ ಚರ್ಚೆಗೆ ತೊಡಗುವರೇ? ತಮ್ಮ ಜವಾಬ್ದಾರಿಯುತ ನಡೆ–ನುಡಿಯಿಂದ ತರುಣ ಪೀಳಿಗೆಗೆ ಮಾದರಿ ಶಾಸಕರಾಗುವರೇ? ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT