ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಶಿಕ್ಷಕನೆಂಬ ಅಂಬಿಗ ದಿಕ್ಕೆಡುವುದೇಕೆ?

‘ಗ್ರೇಡ್’, ‘ರ್‍ಯಾಂಕ್‌’ ಭರದಲ್ಲಿ ಮಸುಕಾದ ಶಿಸ್ತು, ಸಂಯಮ
Published : 22 ಡಿಸೆಂಬರ್ 2022, 22:15 IST
ಫಾಲೋ ಮಾಡಿ
Comments

ಕೆಲವು ಶಿಕ್ಷಕರು ತಮ್ಮ ಅನುಚಿತ ವರ್ತನೆಯಿಂದ ವೃತ್ತಿಗೌರವಕ್ಕೆ ಮಸಿ ಬಳಿಯುತ್ತಿರುವುದನ್ನು ರಾಜಕುಮಾರ ಕುಲಕರ್ಣಿ ವಿವರಿಸಿದ್ದಾರೆ (ಸಂಗತ, ಡಿ. 22). ‘ರಾಷ್ಟ್ರಶಿಲ್ಪಿ’, ‘ಸಮಾಜದ ಬೆನ್ನೆಲುಬು’, ‘ಸರ್ವರ ಮಿತ್ರ’, ‘ಮಾರ್ಗದರ್ಶಕ’ ಎಂಬಂಥ ವಿಶೇಷಣಗಳಿಗೆ ಒಪ್ಪುವಂತೆ ನಡೆದುಕೊಳ್ಳಬೇಕಾದ ಶಿಕ್ಷಕ ಮೃಗೀಯ ನಡವಳಿಕೆಗಿಳಿಯುವುದು ಸರ್ವತ್ರ ಖಂಡನೀಯ. ಶಿಕ್ಷಕರಾಗಲು ಪ್ರಶಿಕ್ಷಣ ಕೋರ್ಸುಗಳಿವೆ. ಡಿ.ಇಡಿ., ಬಿ.ಇಡಿ., ಎಂ.ಇಡಿ.ಗಳಲ್ಲಿ ಹಾಗಾದರೆ ಕಲಿಸುವುದೇನು, ಕಲಿಯುವುದೇನು ಎನ್ನುವ ಅನುಮಾನ ಕಾಡುತ್ತದೆ.

ಯಾರೋ ಕೆಲವರಿಂದ ಇಡೀ ಗುರುವೃಂದಕ್ಕೇ ಅಪಖ್ಯಾತಿ. ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಶಿಕ್ಷಕರಂತೂ ‘ಗುರು’ ಅನ್ನಿಸಿಕೊಳ್ಳಲು ಅನರ್ಹರು. ಅಂತಹವರಿಗೆ ಎಂತಹ ಕಠೋರ ಶಿಕ್ಷೆ ವಿಧಿಸಿದರೂ ಕಡಿಮೆಯೇ. ಕ್ರೌರ್ಯ, ಅಮಾನವೀಯ ದೌರ್ಬಲ್ಯವಿರುವವರು ಸ್ವಯಂಪ್ರೇರಣೆಯಿಂದ ಶಿಕ್ಷಕ ವೃತ್ತಿ ತ್ಯಜಿಸಲಿ.

ಪಿಶಾಚಿಯನ್ನು ಶಪಿಸುವುದಕ್ಕಿಂತ ಪಿಶಾಚಿಯಲ್ಲಿನ ಪೈಶಾಚಿಕತೆಯನ್ನು ಅವಲೋಕಿಸಬೇಕಂತೆ. ವಾಸ್ತವವಾಗಿ ಕೆಲವು ಶಿಕ್ಷಕರು ಹೀಗೆ ನಮ್ಮ ಕಲ್ಪನೆಗೂ ಮೀರಿದ ದುರ್ವರ್ತನೆಗೆ ಏಕೆ ಮುಂದಾಗುತ್ತಾರೆ? ಯಾವ ಪ್ರಚೋದನೆ ಅವರಿಂದ ಇಂಥ ಘನಘೋರ ತಪ್ಪುಗಳನ್ನು ಮಾಡಿಸುತ್ತದೆ? ನಂಬಿದ ಅಂಬಿಗನೇ ಏಕೆ ದಿಕ್ಕೆಡುತ್ತಾನೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅಗತ್ಯ.

ಶಿಕ್ಷಕರ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ ಎಂಬ ನಿಷ್ಠುರ ದಿಟವನ್ನು ನಾವು ಒಪ್ಪಲೇಬೇಕು. ಒಂದು ತರಗತಿಯಲ್ಲಿ 60-70 ವಿದ್ಯಾರ್ಥಿಗಳಿರುತ್ತಾರೆ.ಹಾಜರಾತಿ ತೆಗೆದುಕೊಳ್ಳುವುದೇ ಒಂದು ಕಠಿಣ ಸವಾಲು. ತರಗತಿಯ ಸದ್ದು, ಗೌಜನ್ನು ಶಿಕ್ಷಕ ಸಹಿಸಬೇಕು. ಒಂದು ಮಾತು ಹೆಚ್ಚು ಬೈಯ್ಯುವಂತಿಲ್ಲ, ತೆಗಳುವಂತಿಲ್ಲ, ಗದರುವಂತಿಲ್ಲ. ತರಗತಿಯಲ್ಲಿ ಗದ್ದಲ ತುಸು ಹೆಚ್ಚಾದರೆ ಶತಪಥ ಹಾಕುವ
ಮುಖ್ಯೋಪಾಧ್ಯಾಯರಿಂದ ಏಕಿಷ್ಟು ಗೊಂದಲ ಎನ್ನುವ ಸಿಡಿಮಿಡಿ, ತಾಕೀತು.

ನಿಜವೆ, ಶಿಕ್ಷಕರು ಮನೆಯಲ್ಲಿ ಅಂದಂದಿನ ತರಗತಿಗೆ ಚೆನ್ನಾಗಿ ತಯಾರಿ ನಡೆಸಿಯೇ ಪಾಠ ಮಾಡಬೇಕು. ಆದರೆ ವಿದ್ಯಾರ್ಥಿಗಳೂ ಹಿಂದಿನ ತರಗತಿಯಲ್ಲಾದ ಅಧ್ಯಾಯ ಓದಿಕೊಂಡು ಬಂದರೆ ತಾನೆ ಅವರಿಗೆ ಪಾಠ ಅರ್ಥವಾಗುವುದು? ಹಾಗೆ ಬಹುತೇಕ ಆಗುತ್ತಿಲ್ಲ. ಆದಲ್ಲಿ ಮಾತ್ರ ತರಗತಿಯಲ್ಲಿ ಅಷ್ಟರಮಟ್ಟಿಗೆ ಶಿಸ್ತು, ನಿಶ್ಶಬ್ದ ಸಾಧ್ಯವಾಗುವುದು. ಕಿರು ಪರೀಕ್ಷೆ, ಪರೀಕ್ಷೆಗಳ ಜೊತೆಗೆ ಸ್ವತಃ ಶಿಕ್ಷಕರು ತರಗತಿಯಲ್ಲಿ ‘ಟೆಸ್ಟ್’ ನಡೆಸಬೇಕು, ಹೋಂವರ್ಕ್ ಕೊಡಬೇಕು, ಅವುಗಳನ್ನು ತಿದ್ದಬೇಕು, ಮಾಪಿಸಬೇಕು.

ಚುನಾವಣೆ ಕರ್ತವ್ಯ ಸರಿ. ಆದರೆ ವಿವಿಧ ಗಣತಿಗಳಿಗೆ ಹಾಗೂ ಸಮೀಕ್ಷೆಗಳಿಗೆ ಶಿಕ್ಷಕರನ್ನು ನೇಮಿಸಲಾಗುತ್ತದೆ. ಬಿಸಿಯೂಟದ್ದೇ ಒಂದು ಭರ್ಜರಿ ಒತ್ತಡ. ಆಯಾ ವಾರ್ಷಿಕ ಪರೀಕ್ಷೆಗಳಲ್ಲಿ ಕಡಿಮೆ ಫಲಿತಾಂಶ ಬಂದರೆ ಅದರ ಹೊಣೆಯನ್ನು ಶಿಕ್ಷಕರೇ ಹೊರಬೇಕು. ಒಂದು ಕಾಲವಿತ್ತು. ತಿಳಿ ವಿನೋದದಿಂದ ವಿದ್ಯಾರ್ಥಿಗಳನ್ನು ಗೆಲ್ಲಬಹುದಿತ್ತು. ತರಗತಿಗೆ ತಡವಾಗಿ ಬಂದವರನ್ನು ‘ಯೂ ಆರ್ ಟೂ ಅರ್ಲಿ ಟು ನೆಕ್ಸ್ಟ್ ಪೀರಿಯಡ್’ ಎನ್ನಬಹುದಿತ್ತು. ಕೈ ತುಂಬ ಮೊಬೈಲಿರುವುದರಿಂದ ನವಿರಿಗೆಲ್ಲಿ ಈಗ ವ್ಯವಧಾನ.

ವಿಶೇಷವಾಗಿ ಪಬ್ಲಿಕ್ ಪರೀಕ್ಷೆಗಳಲ್ಲಿ ನಕಲು ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹಿಡಿದರೆ ಶಿಕ್ಷಕರು ತರಾವರಿ ಉಪದ್ರವಗಳನ್ನು ಎದುರಿಸಬೇಕಾಗುತ್ತದೆ. ಅವರ ದ್ವಿಚಕ್ರ ವಾಹನಗಳ ಸೀಟು ಹರಿಯಬಹುದು, ಚಕ್ರಗಳು ಗಾಳಿ ಕಳೆದುಕೊಳ್ಳಬಹುದು ಅಥವಾ ಇಂಧನ ಕೊಳವೆಗೆ ಸಂಚಕಾರ ಒದಗಬಹುದು. ಒಂದು ವಿದ್ಯಾಲಯದಲ್ಲಿ ಕೆಲವು ಶಿಕ್ಷಕರು ನಡೆಸುವ ‘ಟ್ಯೂಷನ್’ ನಿಸ್ಸಂದೇಹವಾಗಿ ಒಟ್ಟಾರೆ ವಿದ್ಯಾರ್ಥಿಗಳ ಅಶಿಸ್ತಿಗೆ ತನ್ನ ಕೊಡುಗೆ ನೀಡುತ್ತದೆ. ವಿದ್ಯಾರ್ಥಿಗಳನ್ನಷ್ಟೇ ಅಲ್ಲ ಶಿಕ್ಷಕರನ್ನೂ ಎರಡು ಬಣಗಳಾಗಿಸುವ ಪ್ರತಿಕೂಲ ಸ್ಥಿತಿಯನ್ನು ‘ಟ್ಯೂಷನ್’ ಸೃಷ್ಟಿಸಬಹುದು. ‘ಚೆನ್ನಾಗಿ ಪಾಠ ಮಾಡುವವರು’, ‘ಚೆನ್ನಾಗಿ ಪಾಠ ಮಾಡದವರು’ ಎನ್ನುವ ಅನಪೇಕ್ಷಿತ ಮತ್ತು ಸಲ್ಲದ ತಾರತಮ್ಯ ವಿದ್ಯಾರ್ಥಿಗಳ ಪಾಲಾಗುವುದು ತರವಲ್ಲ.

ಎಲ್ಲಿಯತನಕ ನಮ್ಮ ಶಿಕ್ಷಣ ಕ್ರಮ ‘ಗ್ರೇಡ್’, ‘ರ್‍ಯಾಂಕ್’ ಕೇಂದ್ರಿತವಾಗಿರುವುದೋ ಅಲ್ಲಿಯತನಕ ಗುಣಮಟ್ಟದ ಶಿಕ್ಷಣ ನಮ್ಮಿಂದ ದೂರವೇ ಉಳಿದೀತು. ಶಾಲೆಯಿಂದ ಮನೆಗೆ ಮಕ್ಕಳು ವಾಪಸಾಗುತ್ತಲೇ ಪಾಲಕರು ‘ಇವೊತ್ತು ಯಾವ ಟೆಸ್ಟ್‌ನ ಮಾರ್ಕ್ಸ್‌ ಹೇಳಿದರು?’ ಅಂತ ಕೇಳುವುದಲ್ಲ. ‘ಇವೊತ್ತು ಯಾವಾಗ ಹೇಗಿರಬೇಕೆಂದು ಕಲಿಸಿದರು?’ ಎಂದು ವಿಚಾರಿಸುವುದು ಅರ್ಥವತ್ತಾದ ಕುಶಲೋಪರಿ
ಯಾಗುತ್ತದೆ.

ಶಿಕ್ಷಣ ತಜ್ಞ ಡಾ. ಎಚ್.ನರಸಿಂಹಯ್ಯ ಅವರು ಸರ್ವದಾ ನೆನಪಿಸುತ್ತಿದ್ದರು: ‘ದಿ ಪ್ರೈವೇಟ್ ಲೈಫ್ ಆಫ್ ಎ ಟೀಚರ್ ಈಸ್ ಆಫ್ ಪಬ್ಲಿಕ್ ಇಂಪಾರ್ಟೆನ್ಸ್’. ತರಗತಿ ಗುರು-ಶಿಷ್ಯರ ನಡುವಿನ ಸಂಘರ್ಷದ ನೆಲೆಯಾಗಬಾರದು. ಅದು ಪರಸ್ಪರ ಸ್ನೇಹದ ಪರಿಸರವಾಗಬೇಕು. ‘ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?’ ಎಂಬ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಅದ್ಭುತ ಸಾಲೇ ರಿಂಗಣಿಸುತ್ತದೆ.

ಶಾಲೆಗೆ ಪ್ರವೇಶಾತಿ ಸಿಗುವುದೇ ತಡ, ಇನ್ನು ತಮ್ಮ ಮಕ್ಕಳಾಯಿತು, ಶಾಲೆಯಾಯಿತು ಎನ್ನುವ ಧೋರಣೆಯನ್ನು ಪೋಷಕರು ಬಿಡಬೇಕು. ಮಕ್ಕಳಿಗೆ ಪೋಷಕರು ಶಿಸ್ತನ್ನು ಹೇಳಿಕೊಡಬೇಕು. ತರಗತಿಯಲ್ಲಿ ಹೇಗೆ ಕುಳಿತುಕೊಳ್ಳಬೇಕು, ಅಧ್ಯಾಪಕರೊಂದಿಗೆ, ಸಹಪಾಠಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಸಬೇಕು. ಶಿಕ್ಷಕರಾಗಲು ಪ್ರಶಿಕ್ಷಣ ಕೋರ್ಸ್‌ಗಳಿವೆ. ಆ ಕೋರ್ಸ್‌ಗಳು ಹೆಚ್ಚು ಪರಿಣಾಮಕಾರಿ ಆಗುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT