ಬಯಲುನಾಡಿಗೆ ನೀರು ಒದಗಿಸಲು ಜಲಾನಯನ ಅಭಿವೃದ್ಧಿ ಆಧಾರಿತ ಸುಸ್ಥಿರಯೋಜನೆಗಳು ಬೇಕು; ನದಿ ಜೋಡಣೆಗಳಂಥ ಅವೈಜ್ಞಾನಿಕ ಯೋಚನೆಗಳಲ್ಲ!

ಎತ್ತಿನಹೊಳೆ ನದಿತಿರುವು ಯೋಜನೆಯಿಂದ ಉಂಟಾಗಿರುವ ಸಂಕೀರ್ಣ ಸಮಸ್ಯೆಗಳ ಅಗಾಧತೆಯನ್ನು ಅರ್ಥೈಸಿಕೊಳ್ಳುವ ಮುನ್ನವೇ, ರಾಜ್ಯದ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಇನ್ನೂ ಎರಡು ನದಿ ಜೋಡಣೆ ಯೋಜನೆಗಳ ಪ್ರಸ್ತಾವ ಮುನ್ನೆಲೆಗೆ ಬಂದಿವೆ. ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ನದಿಯನ್ನು ವರದಾಕ್ಕೆ ಹಾಗೂ ಅಘನಾಶಿನಿಯನ್ನು ವೇದಾವತಿ ನದಿಗೆ ಜೋಡಿಸುವ ಯೋಜನೆಗಳವು. ಇವುಗಳ ‘ಪ್ರಾಥಮಿಕ ಸಾಧ್ಯತಾ ವರದಿ’ಗಳನ್ನು ಕೇಂದ್ರ ಜಲಶಕ್ತಿ ಇಲಾಖೆಯ ‘ರಾಷ್ಟ್ರೀಯ ನೀರು ಅಭಿವೃದ್ಧಿ ಮಂಡಳಿ’ಯು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಬೇಡ್ತಿ-ವರದಾ ಯೋಜನೆಯ ‘ವಿಸ್ತೃತ ಯೋಜನಾ ವರದಿ’ಯ ತಯಾರಿಗೂ ಸಿದ್ಧತೆ ಸಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನದಿಜೋಡಣೆ ಕಾರ್ಯಕ್ರಮದ ಅನುದಾನ ಬಳಸಿಕೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೆತ್ತಿಕೊಳ್ಳುವ ನೀರಾವರಿ ಯೋಜನೆಗಳಿವು.

ಪಶ್ಚಿಮಘಟ್ಟದ ನದಿಗಳೇ ವಿಶಿಷ್ಟ. ಇಲ್ಲಿರುವ ದಟ್ಟಕಾಡಿನ ಹೊದಿಕೆಯಿಂದಾಗಿ ಮಾತ್ರ ಮಳೆನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮರುಪೂರಣ ಆಗುವುದು. ಇದರಿಂದಾಗಿ ಸೃಜಿಸುವ ಅಸಂಖ್ಯ ಚಿಲುಮೆಗಳು ವರ್ಷದುದ್ದಕ್ಕೂ ಉಣಿಸುವ ನೀರಿನಿಂದಾಗಿ ಸಹ್ಯಾದ್ರಿಯ ನದಿಗಳು ಜೀವತಳೆಯುತ್ತವೆ. ಬೇಡ್ತಿ ಹಾಗೂ ಅಘನಾಶಿನಿ ಈ ಬಗೆಯ ನದಿಗಳು.

ಇಲ್ಲಿನ ಸಮೃದ್ಧ ಮಳೆಕಾಡು ನಾಶವಾಗಿಬಿಟ್ಟರೆ, ಮಳೆನೀರು ಭೂಮಿಯಲ್ಲಿ ಇಂಗದೆ ಒಮ್ಮೆಲೆ ಪ್ರವಾಹವಾಗಿ ಸಮುದ್ರ ಸೇರುತ್ತದೆ! ಜಂಬಿಟ್ಟಿಗೆಯ ಸಡಿಲಮಣ್ಣಿಂದ ಆವೃತವಾಗಿರುವ ಗುಡ್ಡಗಳು ಮಳೆಗಾಲದಲ್ಲಿ ಕುಸಿಯುತ್ತವೆ. ಅಂತರ್ಜಲ ಕುಸಿದು, ಬೇಸಿಗೆಯಲ್ಲಿ ನೀರಿನ ಕೊರತೆ ಇನ್ನಷ್ಟು ತೀವ್ರವಾಗುತ್ತದೆ. ಪಶ್ಚಿಮಘಟ್ಟದಲ್ಲಿ ಕಾಡು ಕುಗ್ಗಿರುವಲ್ಲೆಲ್ಲ ಉಂಟಾಗಿರುವ ಈ ವಿದ್ಯಮಾನಗಳನ್ನು ಅಧ್ಯಯನಗಳು ಈಗಾಗಲೇ ವ್ಯಾಪಕವಾಗಿ ದಾಖಲಿಸಿವೆ.

ಮಲೆನಾಡಿನ ಪರಿಸರದ ಈ ಸೂಕ್ಷ್ಮ ಅರ್ಥವಾದರೆ, ಬೇಡ್ತಿ ಹಾಗೂ ಅಘನಾಶಿನಿ ನದಿ ಜೋಡಣೆಗಳನ್ನು ಏಕೆ
ಕೈಬಿಡಬೇಕೆಂಬುದು ವೇದ್ಯವಾಗುತ್ತದೆ. ಯೋಜನೆಯು ಬಯಸುವ ನೀರಿನ ಸಂಗ್ರಹಣೆಗೆ ಹಲವು ಜಲಾಶಯಗಳನ್ನು ನಿರ್ಮಿಸಬೇಕಾಗುತ್ತದೆ. ನೀರು ಸಾಗಣೆಗೆ ಉದ್ದನೆಯ ಬೃಹತ್ ಕಾಲುವೆಗಳು, ಸುರಂಗಗಳು ಹಾಗೂ ಕೊಳವೆಮಾರ್ಗಗಳನ್ನು ರೂಪಿಸಬೇಕಾಗುತ್ತದೆ. ಈ ಕಾಮಗಾರಿಗಳಿಗಾಗಿ ಹೊಸ ರಸ್ತೆಗಳು ಹಾಗೂ ವಿದ್ಯುತ್ ಮಾರ್ಗಗಳೂ ಬೇಕು. ಇದಕ್ಕೆಲ್ಲ ಯೋಜನಾ ಪ್ರದೇಶದ ಅಮೂಲ್ಯ ಕಾಡು, ಗೋಮಾಳ ಹಾಗೂ ಕೃಷಿಭೂಮಿ ಬಲಿಯಾಗುತ್ತವೆ. ದಕ್ಷಿಣಭಾರತದ ನೀರಿನ ಸೆಲೆಯಾದ ಪಶ್ಚಿಮಘಟ್ಟದ ಇಂಥ ಅಮೂಲ್ಯ ಪ್ರದೇಶಗಳನ್ನು, ‘ಹವಾಮಾನ ಬದಲಾವಣೆ’ಯ ಈ ವಿಷಮ ಕಾಲಘಟ್ಟದಲ್ಲಿ ಕಳೆದುಕೊಳ್ಳುವುದು ಸೂಕ್ತವೇ?

ಒಮ್ಮೆ ಇಲ್ಲಿನ ಜೈವಿಕ ಪರಿಸರ ಧ್ವಂಸಗೊಂಡರೆ ಸಂಭವಿಸುವ ಮಾನವ ಸಂಕಷ್ಟಗಳು ಹಲವಾರು. ವನ್ಯಪ್ರಾಣಿಗಳ ಆವಾಸಸ್ಥಾನ ಛಿದ್ರವಾಗಿ ಸುತ್ತಲಿನ ಜನವಸತಿ ಮತ್ತು ಕೃಷಿಭೂಮಿಗಳಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ ಹಿಗ್ಗುತ್ತದೆ. ಕಾಡು ಬರಿದಾಗಿ, ಭೂಕುಸಿತ ಹೆಚ್ಚಿ, ಕೆರೆ-ತೊರೆಗಳ ಜಲಮೂಲ ಒಣಗಿ, ಕೃಷಿಕರು ಕಂಗೆಡುತ್ತಾರೆ. ಅರಣ್ಯದ ನೈಸರ್ಗಿಕ ಸಂಪನ್ಮೂಲಗಳ ಹರಿವು ಹಾಗೂ ಗೋಮಾಳ ಪ್ರದೇಶಗಳು ಕರಗಿ, ಇಲ್ಲಿನ ಕುಣಬಿ, ಗೌಳಿಗಳಂಥ ವನವಾಸಿಗರ ಜೀವನೋಪಾಯ ಮೂರಾಬಟ್ಟೆಯಾಗುತ್ತದೆ. ನದಿ-ತೊರೆಗಳಲ್ಲಿ ನೀರು ಕಡಿಮೆಯಾಗಿ, ಸ್ಥಳೀಯ ತೋಟಗಾರಿಕೆ ಹಾಗೂ ಸಾಂಬಾರ ಕೃಷಿಗೆ ಹಾನಿಯಾಗುತ್ತದೆ. ನದಿಯಲ್ಲಿ ಸಹಜ ಹರಿವು ತಗ್ಗಿದರೆ, ಕರಾವಳಿಗೆ ಹೋಗಬೇಕಾದ ಪ್ರವಾಹದ ನೀರು ಹಾಗೂ ಪೋಷಕಾಂಶಗಳ ಪ್ರಮಾಣ ತಗ್ಗುತ್ತದೆ. ಇದರಿಂದ, ಬೇಡ್ತಿ ಸಮುದ್ರ ಸೇರುವ ಅಂಕೋಲಾ ತಾಲ್ಲೂಕು ಹಾಗೂ ಅಘನಾಶಿನಿಯು ಸಮುದ್ರ ತಲಪುವ ಕುಮಟಾ ತಾಲ್ಲೂಕಿನ ವಿಶಾಲವಾದ ಅಳಿವೆ ಪ್ರದೇಶಗಳ ಫಲವತ್ತತೆ ಕುಸಿದು, ಜಲಚರಗಳು ವಂಶಾಭಿವೃದ್ಧಿ ಆಗುವ ಕಾಂಡ್ಲಾ ಕಾಡುಗಳು ಕುಗ್ಗಿ, ಅವನ್ನು ಆಧರಿಸಿದ ಮೀನುಗಾರರು ಹಾಗೂ ಬೇಸಾಯಗಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ನದಿಯೊಂದು ಒಣಗಿದಂತೆ ಅದರೊಡಲ ಬದುಕೂ ಸೊರಗತೊಡಗುತ್ತದೆ.

ಹೆಚ್ಚು ನೀರಿರುವ ನದಿಗಳಿಂದ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ‘ನದಿ ಜೋಡಣೆ’ ತತ್ತ್ವವೇನೋ ಸಾಧುವಾದದ್ದೇ. ಮೈದಾನ ಪ್ರದೇಶದಲ್ಲಿ ಕೆಲವು ನದಿಗಳನ್ನು ಈ ಬಗೆಯಲ್ಲಿ ಜೋಡಿಸಲೂ ಸಾಧ್ಯವಾದೀತು. ಆದರೆ, ಅದೇ ಮಾದರಿಯನ್ನು ಸಂಕೀರ್ಣ ಭೌಗೋಳಿಕ ಹಾಗೂ ಜೈವಿಕ ಪರಿಸರವಿರುವ ಪಶ್ಚಿಮಘಟ್ಟಶ್ರೇಣಿಗೆ ಹೇರುವುದು ಸರಿಯಲ್ಲ. ಇಷ್ಟಕ್ಕೂ ಇತ್ತೀಚಿನ ದಶಕಗಳಲ್ಲಿ ಈ ನದಿಗಳಲ್ಲಿ ಮಳೆಗಾಲದ ಎರಡು-ಮೂರು ತಿಂಗಳು ಹೊರತುಪಡಿಸಿದರೆ, ಹೆಚ್ಚುವರಿ ನೀರೂ ಹರಿಯುತ್ತಿಲ್ಲ. ಇವನ್ನೆಲ್ಲ ಗ್ರಹಿಸಿಯೇ ಪಶ್ಚಿಮಘಟ್ಟದಲ್ಲಿ ನದಿ ಜೋಡಣೆ ಮಾಡಬಾರದೆಂದು ತಜ್ಞರು ಹಾಗೂ ಕೃಷಿ ಸಮುದಾಯ ಆಗ್ರಹಿಸುತ್ತಿರುವುದು. ಸಾಮೂಹಿಕ ಭವಿಷ್ಯದ ಹಿತಕ್ಕಾಗಿ ಈ ಪ್ರಯತ್ನಗಳನ್ನು ಸರ್ಕಾರ ಕೈಬಿಡಬೇಕಾಗಿದೆ.

ಇನ್ನು, ಬಯಲುನಾಡಿಗೆ ಕೃಷಿ ಹಾಗೂ ಕುಡಿಯುವ ನೀರನ್ನು ಪೂರೈಸುವುದೂ ಸಹ ಅಗತ್ಯವಾದದ್ದೇ. ಆದರೆ, ಅದಕ್ಕೆ ನದಿ ಜೋಡಣೆಯಂಥ ಅವೈಜ್ಞಾನಿಕ ಯೋಜನೆಗಳ ಭ್ರಮೆಯನ್ನು ತೇಲಿಬಿಡಬಾರದಲ್ಲವೆ? ಈಗಾಗಲೇ ಪರಿಣಾಮಕಾರಿಯೆಂದು ಸಿದ್ಧವಾಗಿರುವ ಜಲಾನಯನ ಅಭಿವೃದ್ಧಿ ಮತ್ತು ಕೆರೆಗಳ ಪುನಶ್ಚೇತನ ಆಧಾರಿತ ಸುಸ್ಥಿರ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುವುದೇ ಅದಕ್ಕೆ ಪರಿಹಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.