ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದ ಅಧ್ಯಕ್ಷತೆ: ಜಿಜ್ಞಾಸೆ ಏಕೆ?

Last Updated 8 ಡಿಸೆಂಬರ್ 2019, 20:02 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮೂರು ದಿನಗಳ ಜಾತ್ರೆ ಎಂದು ಕೆಲವರು ಮೂಗು ಮುರಿದರೂ ಅನೇಕ ದೃಷ್ಟಿಗಳಿಂದ ಮೊದಲಿನಿಂದಲೂ ಅದಕ್ಕೆ ತನ್ನದೇ ಆದ ಮಹತ್ವ ಮತ್ತು ಪ್ರತಿಷ್ಠೆಗಳಿವೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವಂತೂ ಸಾಹಿತಿಯೊಬ್ಬರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ಅತ್ಯಂತ ಗೌರವದ ಸ್ಥಾನವೆಂದು ಪರಿಗಣಿತವಾಗಿರುವ ಕಾರಣ, ಅಧ್ಯಕ್ಷರ ಆಯ್ಕೆಯತ್ತ ಎಲ್ಲರ ದೃಷ್ಟಿ ನೆಟ್ಟಿರುತ್ತದೆ.

ಸಾಹಿತಿಗಳಲ್ಲದ, ಆದರೆ ಹಳೆಯ ಮೈಸೂರಿನ ಆಡಳಿತದ ಮಹತ್ವದ ಸ್ಥಾನದಲ್ಲಿದ್ದವರು ಅಧ್ಯಕ್ಷರಾದ ಮೊದಲಿನ ಕೆಲವು ವರ್ಷಗಳನ್ನು ಹೊರತುಪಡಿಸಿದರೆ, ಆನಂತರದ ವರ್ಷಗಳಲ್ಲಿ ಹಿರಿಯರು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದವರೇ ಸಾಮಾನ್ಯವಾಗಿ ಆಯ್ಕೆಯಾಗುತ್ತಿದ್ದರು. ಕರ್ನಾಟಕ ಏಕೀಕರಣವಾಗದಿದ್ದಾಗಲೂ ಕನ್ನಡದವರೆಲ್ಲ ಒಂದೇ ಎಂದು ತಿಳಿದು, ಯಾವುದೇ ಭಾಗದಿಂದಲಾದರೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದರು. ಇಂತಹ ಆಯ್ಕೆ ಬಗ್ಗೆ ಎಲ್ಲೋ ಕೆಲವೊಮ್ಮೆ ದಕ್ಷಿಣ ಕನ್ನಡ ಮತ್ತು ಉತ್ತರ ಕರ್ನಾಟಕದ ಕೆಲವು ಹಿರಿಯರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಬಿಟ್ಟರೆ, ಉಳಿದಂತೆ ಅದು ವಿವಾದದ ಸಂಗತಿಯಾದದ್ದು ಇಲ್ಲವೆಂದು ಹೇಳಬಹುದು.

ಮುಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಬಹುದೆಂದು ಹಿಂದೆಲ್ಲ ಯಾರು ಬೇಕಾದರೂ ಊಹಿಸಬಹುದಾಗಿತ್ತು ಮತ್ತು ಆ ಊಹೆ ಬಹುಮಟ್ಟಿಗೆ ಸರಿ ಇರುತ್ತಿತ್ತು. ಇದು ಮೊದಲಿಗೆ ಸ್ವಲ್ಪಮಟ್ಟಿಗೆ ಹಳಿ ತಪ್ಪಿದ್ದೆಂದರೆ, ದೇಜಗೌ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ 1970ರ ಸುವರ್ಣ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ. ಆಗ ಅವರಿಗಿಂತ ಹಿರಿಯರಾದ ಅನೇಕ ಸಾಹಿತಿಗಳು ಇದ್ದಾಗ್ಯೂ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕವಿ ಗೋಪಾಲಕೃಷ್ಣ ಅಡಿಗರೇ ಪ್ರಬಲವಾಗಿ ವಿರೋಧಿಸಿ, ಅದು ಅತ್ಯಂತ ವಿವಾದಾಸ್ಪದವಾದ ಸಂಗತಿಯಾದದ್ದು ಈಗ ಇತಿಹಾಸ. ಕನ್ನಡಕ್ಕೆ ದೇಜಗೌ ಅವರ ಕೊಡುಗೆಯನ್ನು ಕನ್ನಡಿಗರು ಮರೆಯಲು ಸಾಧ್ಯವೇ? ಅವರಿಗೆ ಅದು ಬಂದೇ ಬರುತ್ತಿತ್ತು. ಆದರೆ ಸಾಹಿತ್ಯದ ಕೊಡುಗೆ ಮತ್ತು ಹಿರಿತನ ಕಡೆಗಣನೆಗೆ ಒಳಗಾಯಿತೆಂಬುದೇ ವಿವಾದಕ್ಕೆ ಕಾರಣವಾದದ್ದು.

ಇನ್ನು ತಾವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆಂದು ಸೂಚನೆ ಬಂದಾಗ, ತಮಗಿಂತ ಹಿರಿಯರಾದ ಡಿ.ಎಲ್.ಎನ್ ಇದಕ್ಕೆ ಹೆಚ್ಚು ಸೂಕ್ತ ಎಂದು ಹೇಳಿದ ತೀನಂಶ್ರೀಯವರ ನಡೆ, ಹಾಗೆಯೇ ತಾವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವುದ
ಕ್ಕಿಂತಲೂ ಕುವೆಂಪು ಆಯ್ಕೆಯಾಗಿದ್ದರೆ ಜನರಿಗೆಲ್ಲ ಸಂತಸವಾಗುತ್ತಿತ್ತೆಂದು ಪ್ರಾಂಜಲವಾಗಿ ಹೇಳಿದ ಎಂ.ಆರ್.ಶ್ರೀ ಅವರ ನಡೆಯ ಉದಾಹರಣೆಗಳೂ ಇವೆ. ಅಲ್ಲಿಂದ ಮುಂದೆ ಹಿರಿತನ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಷ್ಟೇ ಮುಖ್ಯವಾಗದೆ, ಬೇರೆ ಮಾನದಂಡಗಳೂ ಮುಖ್ಯವಾಗುತ್ತಾ ಹೋದದ್ದು ಎಲ್ಲರಿಗೂ ತಿಳಿದಿರುವಂಥದ್ದೇ. ಅದರಿಂದಾಗಿ ನ್ಯಾಯವಾಗಿಯೇ ಮತ್ತು ಅತ್ಯಂತ ಅರ್ಹವಾಗಿಯೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಾಗಿದ್ದ ಅನೇಕ ಹಿರಿಯರು ಅದರಿಂದ ವಂಚಿತರಾದದ್ದು ಇದೆ. ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸ್ಥಳೀಯ ಆತಿಥೇಯರು ವ್ಯಕ್ತಿಪ್ರಭಾವ, ಜಾತಿ,
ಪ್ರದೇಶಗಳಿಗಷ್ಟೇ ಪ್ರಾಮುಖ್ಯ ನೀಡದೆ ಅಖಂಡ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು, ವ್ಯಕ್ತಿಗಳ ಸಾಹಿತ್ಯಿಕ ಕೊಡುಗೆಯ ಮಹತ್ವ ಮತ್ತು ವಯಸ್ಸಿನ ಹಿರಿತನಕ್ಕೆ ಮಹತ್ವ ನೀಡುವುದು ಎಲ್ಲ ಕಾಲಕ್ಕೂ ಸೂಕ್ತ.

ಈ ಸಲ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಭಾಗದ ಪ್ರಾತಿನಿಧ್ಯ, ಕನ್ನಡಕ್ಕಾಗಿ ಹೋರಾಟ ಮಾಡಿದ ಸಂಗತಿಗಳೂ ಮುನ್ನೆಲೆಗೆ ಬಂದಿವೆ. ಯಾವುದೋ ಭಾಗಕ್ಕೆ ಸೇರಿದವರು ಇನ್ನೊಂದು ಭಾಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಉದಾಹರಣೆಗಳು ಬೇಕಾದಷ್ಟಿವೆ. ಧಾರವಾಡದ ದ.ರಾ.ಬೇಂದ್ರೆ ಶಿವಮೊಗ್ಗದ ಸಮ್ಮೇಳನಕ್ಕೆ, ಶಿವಮೊಗ್ಗದ ಕುವೆಂಪು ಧಾರವಾಡದ ಸಮ್ಮೇಳನಕ್ಕೆ, ಮುಗಳಿಯವರು ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ, ಜಯದೇವಿತಾಯಿ ಲಿಗಾಡೆಯವರು ಮಂಡ್ಯದ ಸಮ್ಮೇಳನಕ್ಕೆ ಹಾಗೂ ಶಿವರಾಮ ಕಾರಂತರು ಮೈಸೂರು ಸಮ್ಮೇಳನಕ್ಕೆ
ಅಧ್ಯಕ್ಷರಾಗಿದ್ದರು.

ಆಯಾ ಭಾಗಕ್ಕೆ ಸೇರಿದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳುವುದಾಗಲೀ ಅಧ್ಯಕ್ಷತೆಯ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಮುನ್ನೆಲೆಗೆ ತರುವುದಾಗಲೀ ಅಷ್ಟು ಸರಿಯಾಗದು. ವಯಸ್ಸಿನ ಹಿರಿತನ, ಆಯಾ ಕ್ಷೇತ್ರದಲ್ಲಿನ ಅವರ ಕೊಡುಗೆಯೇ ಸದಾ ಮುಖ್ಯವಾಗುವುದು ಮೌಲ್ಯಗಳನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಸೂಕ್ತವೆನಿಸುತ್ತದೆ.

ಇನ್ನು ಕನ್ನಡದ ಪರವಾಗಿ ಜೋರು ದನಿಯಲ್ಲಿ ಸರ್ಕಾರದ ಎದುರು ನಿಂತು ಮಾತನಾಡುವುದು ಒಂದು ಪರಿಗಣನೆಯಾಗಬಹುದೇ ಹೊರತು ಅದೇ ಮುಖ್ಯ ಪರಿಗಣನೆಯಾಗಲು ಹೇಗೆ ಸಾಧ್ಯ? ಇದುವರೆಗೆ ಸಾರ್ವಜನಿಕವಾಗಿ ಸಾಹಿತಿಗಳು ದನಿಯೆತ್ತಿದ್ದರೂ ಸರ್ಕಾರದ ಮೇಲೆ ಅದು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ? ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಸರ್ಕಾರ ತುಂಬ ಗಂಭೀರವಾಗಿ ಪರಿಗಣಿಸಿ ಜಾರಿಗೆ ತಂದದ್ದು ನೆನಪಾಗುತ್ತಿಲ್ಲ! ಈಗ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಇದನ್ನೊಂದು ವಿವಾದ ಮಾಡದೆ, ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡದ ಪ್ರೀತಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ನಾವೆಲ್ಲರೂ ಅಭಿನಂದಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT