‘ಟಗರು’ ಕನ್ನಡ ಸಿನಿಮಾ ಬಿಡುಗಡೆಯಾಗಿತ್ತಷ್ಟೇ. ತಮ್ಮೊಳಗಿನ ಕೆಟ್ಟದ್ದನ್ನೆಲ್ಲ ಹೊರಗೆ ಹಾಕಲು ಆ ಸಿನಿಮಾದ ಪಾತ್ರ ಅವಕಾಶ ಒದಗಿಸಿಕೊಟ್ಟಿತು ಎಂದು ಡಾಲಿ ಧನಂಜಯ ಪ್ರತಿಕ್ರಿಯಿಸಿದ್ದರು. ಅವರ ಹೆಸರಿನ ಪಕ್ಕದ ‘ಡಾಲಿ’ ಎಂಬ ವಿಶೇಷಣ ಬಂದದ್ದೇ ಆ ಸಿನಿಮಾ ಪಾತ್ರದಿಂದ.

‘ಕೆಜಿಎಫ್’ ಸಿನಿಮಾದ ಎರಡು ಭಾಗಗಳ ವಸ್ತು ವಿಷಯ ಗಮನಿಸಿ. ಚಿನ್ನದ ಗಣಿಗಳಲ್ಲಿ ಕೆಲಸ ಮಾಡಿದ ಜೀತದಾಳುಗಳ ಬದುಕು–ಬವಣೆ ಸಿನಿಮಾಗಳಲ್ಲಿ ಅಡಗಿದೆ. ಆದರೆ, ಅದನ್ನು ಗುಪ್ತಗಾಮಿನಿಯಾಗಿಸಿ, ನಾಯಕನ ಮೂಲಕ ಹಿಂಸಾವಿನೋದ ಉಣಬಡಿಸಿ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದಿಷ್ಟ ಶೈಲಿಯೊಂದನ್ನು ತೇಲಿಬಿಟ್ಟರು. ಅದಕ್ಕೂ ಮೊದಲು ಹಿಂಸಾತ್ಮಕ ದೃಶ್ಯಗಳು ಸಿನಿಮಾಗಳಲ್ಲಿ ಇರಲಿಲ್ಲ ಎಂದೇನೂ ಅಲ್ಲ. ಅದರ ಬಾಕ್ಸಾಫೀಸ್ ಗಳಿಕೆಯು ಜನಪ್ರಿಯ ಸಿನಿಮಾ ವ್ಯಾಕರಣದ ಬೇರೆಯದೇ ಒಂದು ಮಾದರಿಗೆ ಯಶಸ್ಸಿನ ರುಜು ಹಾಕಿತು.

ಇತ್ತೀಚಿನ ವರ್ಷಗಳಲ್ಲಿ ಯಶಸ್ವಿಯಾಗಿರುವ ಅನೇಕ ಸಿನಿಮಾಗಳಲ್ಲಿ ಹೆಚ್ಚು ಹಿಂಸಾವಿನೋದ ಇರುವುದನ್ನು ಗುರುತಿಸಬಹುದು. ‘ಜೈಲರ್’ ತಮಿಳು ಸಿನಿಮಾದಲ್ಲಿ ವಯಸ್ಸಾದ ಪಾತ್ರಧಾರಿ ರಜನೀಕಾಂತ್, ಖೂಳರನ್ನು ಶಸ್ತ್ರಾಸ್ತ್ರಗಳಿಂದ ಕೊಚ್ಚುತ್ತಾ ಬಂದು, ಕೊನೆಗೆ ತಮ್ಮ ಮಗನೇ ದ್ರೋಹಿ ಎನ್ನುವುದನ್ನು ತಿಳಿದು, ಅವನನ್ನೂ ಶಿಕ್ಷಿಸುವ ದೃಶ್ಯವೊಂದು ಇದೆ. ಮಗನನ್ನು ತಿದ್ದಲಾಗದ ತಂದೆಯ ಹಿಂಸಾ ಪ್ರಕಟಣೆ ಎಂದು ಅದನ್ನು ಭಾವಿಸುವುದಾದರೆ, ಅದು ಅನುಕರಣೀಯವಂತೂ ಅಲ್ಲ. ತಕ್ಷಣಕ್ಕೆ ನಾಯಕನ ಧಾರ್ಷ್ಟ್ಯದ ಚಮಕ್ ಆಗಿ ಅದಕ್ಕೆ ಚಪ್ಪಾಳೆ ಸಲ್ಲಬಹುದು.

ಪ್ರಶಾಂತ್ ನೀಲ್ ಅವರೇ ಕಟ್ಟಿಕೊಟ್ಟ ‘ಸಲಾರ್’ ತೆಲುಗು ಸಿನಿಮಾದಲ್ಲಿ ನಾಯಕ ಪ್ರಭಾಸ್ ಅವರಿಗೆ ಇರುವ ಸಂಭಾಷಣೆಗಿಂತ ಹೆಚ್ಚು ಕೆಲಸ ಸಾಹಸ ದೃಶ್ಯಗಳ ಕೊರಿಯೋಗ್ರಾಫರ್ಗೆ ಇದೆ. ಅಂಗಾಂಗಗಳನ್ನು ಕತ್ತರಿಸುವ ದೃಶ್ಯಗಳನ್ನು ಹಾಗೆ ಹಸಿ ಹಸಿಯಾಗಿ ಮಂದ ಬೆಳಕಿನಲ್ಲಿ ತೋರಿಸುವುದೇ ಅದರ ಹೆಚ್ಚುಗಾರಿಕೆ ಎನ್ನಬೇಕೆ? ಆಪ್ಟೋಮೆಟ್ರಿ (ದೃಷ್ಟಿ ಅಧ್ಯಯನ) ಕಲಿತ ತಮಿಳುನಾಡಿನ ಶೈಲೇಶ್ ಕೊಲನು ಎಂಬ ಯುವಕ ತೆಲುಗಿನಲ್ಲಿ ‘ಹಿಟ್’ ಶೀರ್ಷಿಕೆಯ ಸರಣಿಯಲ್ಲಿ ಮೂರು ಸಿನಿಮಾಗಳನ್ನು ನಿರ್ದೇಶಿಸಿದರು. ಮೂರೂ ಸಿನಿಮಾಗಳ ನಾಯಕರು ಪೊಲೀಸರು. ದುಷ್ಟ ಶಿಕ್ಷೆಗೆ ಅವರೆಲ್ಲರೂ ಹಿಡಿಯುವುದು ಅತಿ ಹಿಂಸಾಮಾರ್ಗವನ್ನೇ. ಮೂರನೇ ಭಾಗದ ಸಿನಿಮಾದ ನಾಯಕ ನಾನಿ. ಅದರಲ್ಲಂತೂ ದುಷ್ಟರ ಅಂಗಾಂಗಗಳನ್ನೇ ಬಗೆದು ತೆಗೆಯುವ ವಿಲಕ್ಷಣ ದರ್ಶನವಿದೆ. ಕಣ್ಣಿನ ಕುರಿತು ಓದಿಕೊಂಡ ಯುವಕನೊಬ್ಬ ಅದನ್ನು ಕೀಳುವಂತಹ ದೃಶ್ಯ ಬರೆದು ಸುಖಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಯೊಂದು ಕಾಡುತ್ತದೆ.

ಇವರಷ್ಟೇ ಅಲ್ಲ, ‘ಅರ್ಜುನ್ ರೆಡ್ಡಿ’ ಹಾಗೂ ‘ಅನಿಮಲ್’ ತರಹದ ಪುರುಷಾಹಂಕಾರ, ಹಿಂಸಾಮುಚ್ಚಟೆಯ ಸಿನಿಮಾಗಳನ್ನು ನಿರ್ದೇಶಿಸಿದ ಸಂದೀಪ್ ರೆಡ್ಡಿ ವಂಗ ಅವರೂ ಫಿಸಿಯೊಥೆರಪಿಯ ವೈದ್ಯ ಶಿಕ್ಷಣ ಪಡೆದವರು. ‘ಮೋಹ್ ಮೋಹ್ ಕೆ ಧಾಗೆ’ ಎಂಬ ಹಿಂದಿಯ ಅತಿ ಮಧುರ ಗೀತೆ ಬರೆದ ವರುಣ್ ಗ್ರೋವರ್ ಅವರು ‘ಸೇಕ್ರೆಡ್ ಗೇಮ್ಸ್’ ರೀತಿಯ ಹಿಂಸಾಮಾರ್ಗದ ವೆಬ್ ಸರಣಿಗೆ ದೃಶ್ಯಗಳನ್ನು ಬರೆಯಲು ಸಾಧ್ಯವಾದುದಾದರೂ ಹೇಗೆ?

ಹಿಂದೊಮ್ಮೆ ಬ್ಯಾಂಕ್ ಉದ್ಯೋಗಿಯಾಗಿದ್ದ ಲೋಕೇಶ್ ಕನಕರಾಜ್ ಅವರನ್ನು ಮೊದಲು ಕಿರುಚಿತ್ರ ಸ್ಪರ್ಧೆಯ ಮೂಲಕ ಬೆನ್ನು ತಟ್ಟಿದವರು ಕಾರ್ತಿಕ್ ಸುಬ್ಬರಾಜ್. ‘ಮೆಕ್ಯಾಟ್ರಾನಿಕ್ಸ್’ ಎಂಜಿನಿಯರಿಂಗ್ ಕಲಿತಿದ್ದ ಕಾರ್ತಿಕ್ ಅವರು ಹಿಂಸೆಯನ್ನು ಹಾಸ್ಯಕ್ಕೆ ಬೆರೆಸಿದಂತಹ ಸಿನಿಮಾಗಳನ್ನು ಮಾಡಿ ಗೆದ್ದವರು. ಲೋಕೇಶ್ ನಿರ್ದೇಶನದ ‘ಕೂಲಿ’ ತಮಿಳು ಸಿನಿಮಾ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಇನ್ನೊಂದು ಹಿಟ್ ಕೊಟ್ಟಿದೆ.

‘ಮಾಸ್ಟರ್’ ತಮಿಳು ಸಿನಿಮಾದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರ ಕ್ರೌರ್ಯಕ್ಕೆ ಕನ್ನಡಿ ಹಿಡಿದಿದ್ದ ಲೋಕೇಶ್, ‘ಕೂಲಿ’ ಸಿನಿಮಾದಲ್ಲಿ ಕೂತಲ್ಲೇ ವ್ಯಕ್ತಿಯೊಬ್ಬನನ್ನು ಬೂದಿ ಮಾಡಿಬಿಡಬಲ್ಲ ಅನ್ವೇಷಣೆಯೊಂದನ್ನು ಸಣ್ಣಪುಟ್ಟ ವಿವರಗಳೊಂದಿಗೆ ತೋರಿಸಿದ್ದಾರೆ.

‘ಅಂತ’ ಕನ್ನಡ ಸಿನಿಮಾ ಬಂದಾಗ ಉಗುರುಗಳನ್ನು ಕಿತ್ತುಹಾಕುವ ದೃಶ್ಯ ನೋಡಿಯೇ ಹಿಂಸೆ ಎಂದಿದ್ದವರು
ನಾವು. ನಾಯಕನನ್ನು ಕಟ್ಟಿಹಾಕಿ ಚಾಟಿ ಏಟು ಕೊಡುವ ದೃಶ್ಯದ ಅವಧಿ ತುಸು ಲಂಬಿಸಿದರೂ ಸಂಕಟಪಡುತ್ತಿದ್ದವರು ನಾವು. ಹೀಗಿರುವಾಗ, ಈ ನಿರ್ದೇಶಕರು ಅದ್ಯಾವ ಮನಃಸ್ಥಿತಿಯಲ್ಲಿ ಇಷ್ಟೆಲ್ಲ ಹಿಂಸಾ ಸರಕನ್ನು ಶಿಲ್ಪವಾಗಿಸುತ್ತಿದ್ದಾರೆ ಎನ್ನುವುದು ಈ ಹೊತ್ತಿನ ಕಾಡುವ ಪ್ರಶ್ನೆಯಾಗಿದೆ.

ಈ ಬರಹದಲ್ಲಿ ಉದಾಹರಿಸಿರುವ ಸಿನಿಮಾಗಳೆಲ್ಲವೂ ಜನಪ್ರಿಯತೆ ಹಾಗೂ ಗಳಿಕೆಯ ದೃಷ್ಟಿಯಲ್ಲಿ ಅನುಕರಣೀಯ ಎನಿಸಿಕೊಂಡಿವೆ. ಅದೇ ಕಾರಣಕ್ಕೆ ಕತ್ತಲು ಕತ್ತಲಾದ ಸಿನಿಮಾಟೊಗ್ರಫಿಯಲ್ಲಿ ರಕ್ತ ಚಿಮ್ಮುವ ಕಥನಗಳ ಬಿಂಬಗಳು ಚೆಲ್ಲಾಪಿಲ್ಲಿಯಾಗುತ್ತಿವೆ. ಇವನ್ನೆಲ್ಲ ತಲೆಯೊಳಗೆ ತುಂಬಿಕೊಳ್ಳುವ ಕೆಲವು ತಲೆಮಾರುಗಳ ಮಿದುಳುಗಳಲ್ಲಿನ ಅದ್ಯಾವ ಗ್ರಂಥಿಯು ಹಿಂಸಾರಸವನ್ನು ಎಷ್ಟರ ಮಟ್ಟಿಗೆ ಒಸರುವುದೋ ಎಂಬ ಆತಂಕವೂ ಆವರಿಸಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.