ಸೋಮವಾರ, ಮಾರ್ಚ್ 8, 2021
22 °C
ಹೆಚ್ಚು ಮಹಿಳೆಯರಿಗೆ ಕೌಶಲಗಳ ತರಬೇತಿ ನೀಡುವ ಗುರಿ ಹೊಂದಿದ್ದರೂ ಮಹಿಳಾ ಕಾರ್ಮಿಕರ ಪ್ರಮಾಣ ಏಕೆ ಕಡಿಮೆಯಾಗುತ್ತಿದೆ?

ಉದ್ಯೋಗ: ಮಹಿಳೆಯರ ಪ್ರಮಾಣ ಇಳಿಕೆ

ಜಿ. ಗುರುಚರಣ್ Updated:

ಅಕ್ಷರ ಗಾತ್ರ : | |

Prajavani

ವಿಶ್ವದಲ್ಲಿ ಭಾರತ ಅತಿ ಕಡಿಮೆ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯನ್ನು (ಎಫ್‌ಎಲ್‌ಎಫ್‌ಪಿಆರ್) ಹೊಂದಿರುವ ರಾಷ್ಟ್ರವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 131 ರಾಷ್ಟ್ರಗಳ ಪೈಕಿ 120ನೇ ಶ್ರೇಯಾಂಕವನ್ನು ಭಾರತಹೊಂದಿದೆ.  2004–05ನೇ ಸಾಲಿನಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಿಗಾಗಿ ಇದ್ದಂತಹ ಎಫ್‌ಎಲ್‌ಎಫ್‌ಪಿಆರ್ ಪ್ರಮಾಣ ಶೇ 42.7. 2009–10ರ ವೇಳೆಗೆ ಈ ಪ್ರಮಾಣ ಶೇ 39.6ಕ್ಕೆ, 2015–16ನೇ ಸಾಲಿನಲ್ಲಿ ಶೇ 27ಕ್ಕೆ ಅದು ಕುಸಿದಿದೆ. ಉದ್ಯೋಗಗಳ ಕೊರತೆ ಜೊತೆಗೆ ಲಿಂಗ ಅಸಮಾನ ಸಾಮಾಜಿಕ ನಿಯಮಗಳು, ತಾರತಮ್ಯ ಧೋರಣೆಗಳು ಈ ಕುಸಿತಕ್ಕೆ ಕಾರಣ.

ಉದ್ಯೋಗದ ಗುಣಮಟ್ಟ, ವೇತನ ಅಂತರ, ಅನೌಪಚಾರಿಕತೆ ಹಾಗೂ ಮಹಿಳೆಯರಿಗೆಂದೇ ಕೆಲಸವನ್ನು ವರ್ಗೀಕರಣ ಮಾಡುವಂತಹ ಸಂಕೀರ್ಣವಾದ ಅಂಶಗಳೂ ಮಹಿಳಾ ಕಾರ್ಮಿಕರ ಪ್ರಮಾಣದ ಇಳಿಕೆಗೆ ಪ್ರಮುಖ ಕಾರಣಗಳು. 2022ರ ವೇಳೆಗೆ 4 ಕೋಟಿ ಭಾರತೀಯರಿಗೆ ಕೌಶಲಗಳನ್ನು ಒದಗಿಸುವ ಗುರಿಯೊಂದಿಗೆ 2015ರಲ್ಲಿ ಸರ್ಕಾರವು ‘ಕೌಶಲ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿತ್ತು. ಅದರಂತೆ 2018–19ರ ಕೇಂದ್ರ ಆಯವ್ಯಯದಲ್ಲಿ ಭಾರತದ ಪ್ರತಿ ಜಿಲ್ಲೆಯಲ್ಲಿಯೂ ಕೌಶಲಾಭಿವೃದ್ಧಿ ಕೇಂದ್ರವನ್ನು ನಿರ್ಮಿಸಲು ಅನುದಾನವನ್ನು ಒದಗಿಸಲಾಯಿತು. ಈ ಅಭಿಯಾನವು, ರಾಷ್ಟ್ರೀಯ ಕೌಶಲ ಅಭಿವೃದ್ಧಿ ಅಭಿಯಾನ (ಎನ್ಎಸ್‌ಡಿಎಂ) ಹಾಗೂ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಎಂಬ ಎರಡು ಪ್ರಮುಖ ಉಪಕ್ರಮಗಳನ್ನು ಒಳಗೊಂಡಿವೆ. ಗುಣಮಟ್ಟದ ಕೌಶಲ ಹಾಗೂ ನಿರೀಕ್ಷಿತ ಕೌಶಲಗಳನ್ನು ಹೊಂದುವ ಉದ್ದೇಶದೊಂದಿಗೆ ಈ ಎರಡೂ ಉಪಕ್ರಮಗಳನ್ನು ಜೊತೆಗೂಡಿಸಿ ರಾಷ್ಟ್ರೀಯ ಕೌಶಲಗಳ ಅರ್ಹತಾ ಚೌಕಟ್ಟನ್ನು (ಎನ್‌ಎಸ್‌ಕ್ಯೂಎಫ್) ರೂಪಿಸಲಾಗಿದೆ. ಭಾರತದಾದ್ಯಂತ 1000ಕ್ಕೂ ಹೆಚ್ಚಿನ ಸಂಖ್ಯೆಯ ಕೌಶಲಾಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸಲು 33 ಕೈಗಾರಿಕಾ ವಲಯಗಳನ್ನು ಸಂಯೋಜಿಸಲಾಗಿದೆ. ಪಿಎಂಕೆವಿವೈ ಅಡಿ ನೊಂದಾವಣೆಗೊಂಡಿರುವ ಯುವಜನರ ಪೈಕಿ ಅರ್ಧದಷ್ಟು ಮಹಿಳೆಯರಿದ್ದಾರೆ. ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ (ಎನ್‌ಎಸ್‌ಡಿಸಿ) ಅಭಿಯಾನದಡಿ, 2011 ಹಾಗೂ 2016ರ ನಡುವೆ ರಾಷ್ಟ್ರದಾದ್ಯಂತ 32,36,700 ಮಹಿಳೆಯರು ಕೌಶಲಾಭಿವೃದ್ಧಿ ತರಬೇತಿ ಪಡೆದುಕೊಂಡಿದ್ದಾರೆ.

ಹೆಚ್ಚು ಮಹಿಳೆಯರಿಗೆ ಕೌಶಲಗಳ ತರಬೇತಿ ನೀಡುವ ಗುರಿ ಹೊಂದಿದ್ದರೂ ಮಹಿಳಾ ಕಾರ್ಮಿಕರ ಪ್ರಮಾಣ ಏಕೆ ಕಡಿಮೆಯಾಗುತ್ತಿದೆ?  ಉದ್ಯೋಗಕ್ಕಾಗಿ ಎಂದೇ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಗುರಿ ಹೊಂದಿರುವಾಗ,  ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸುವಲ್ಲಿ ಮಹಿಳೆಯರನ್ನು ಯಾವ ವ್ಯವಸ್ಥೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂಶಗಳು ತಡೆಯುತ್ತಿವೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಹತ್ತರವಾದ ಚರ್ಚೆ ನಡೆಯುತ್ತಿದೆ. ಕೆಲವು ಅಧ್ಯಯನಗಳು ಕೆಲವು ವಿಶೇಷ ಅಂಶಗಳನ್ನು ಒದಗಿಸಿವೆ. ಅವುಗಳೆಂದರೆ ಉನ್ನತ ಶಿಕ್ಷಣಕ್ಕೆ ಹೆಣ್ಣುಮಕ್ಕಳ ಹೆಚ್ಚಿನ ದಾಖಲಾತಿ, ಹೆಚ್ಚುತ್ತಿರುವ ಕೌಟುಂಬಿಕ ಆದಾಯ ಹಾಗೂ ದುಡಿಯುತ್ತಿರುವ ಮಹಿಳೆಯರ ಸರಿಯಾದ ಅಂಕಿಅಂಶಗಳ ಕೊರತೆ, ಉದ್ಯೋಗರಂಗಕ್ಕೆ ಮಹಿಳೆಯರನ್ನು ಪ್ರತಿಬಂಧಿಸುವಂತಹ ಕೆಲವು ಒಳ ಅಂಶಗಳು ಮತ್ತು ಮಹಿಳೆಯರಿಗೆ ಮೀಸಲಿರುವ ಸಾಂಸ್ಥಿಕ ಚೌಕಟ್ಟುಗಳ ಅನುಪಸ್ಥಿತಿ.

2005 ಹಾಗೂ 2012ರ ನಡುವೆ ಭಾರತದ ಆರ್ಥಿಕತೆಯು ವಾರ್ಷಿಕ 30ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿತು. ಇದೇ ಸಮಯದಲ್ಲಿ ವಾರ್ಷಿಕ 1.3 ಕೋಟಿ ದುಡಿಯುವ ವಯಸ್ಸಿನ ಜನಸಂಖ್ಯೆಯೂ ಹೆಚ್ಚಿತು. ಈ ಅವಧಿಯಲ್ಲಿ, ಕೆಲಸ ಮಾಡುವ ಹಾಗೂ ಸಕ್ರಿಯವಾಗಿ ಕೆಲಸವನ್ನು ಕೋರುವ ದುಡಿಯುವ ವಯಸ್ಸಿನ ಮಹಿಳೆಯರ ಪಾಲು ಶೇ 10ರಷ್ಟು ಇಳಿಕೆಯಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಈ ಇಳಿಕೆ ಗಮನಾರ್ಹವಾಗಿತ್ತು (ಶೇ 49 ರಿಂದ ಶೇ 36).

ಹೆಚ್ಚಿನ ಸಂಖ್ಯೆಯ ಮಹಿಳೆಯರು ಉನ್ನತ ಶಿಕ್ಷಣಪಡೆಯುತ್ತಿದ್ದಾರೆ. ಇದು ಕೌಶಲಾಭಿವೃದ್ಧಿ ಮತ್ತು ಲಿಂಗ ಸಮಾನತೆಯ ದೃಷ್ಟಿಯಿಂದ ಒಳ್ಳೆಯದು. ಆದರೆ ಉದ್ಯೋಗ ರಂಗದಲ್ಲಿ ಇದು ಪ್ರತಿಫಲಿಸುತ್ತಿಲ್ಲ. 2011–12ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ, ಗೃಹಕೃತ್ಯಗಳಲ್ಲಿ ಮುಳುಗಿರುವ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ಮಹಿಳೆಯರು ತಾವು ಉದ್ಯೋಗ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಸ್ತ್ರೀ ಕೌಶಲ ಹಾಗೂ ಲಿಂಗಾಧಾರಿತ ಉದ್ಯೋಗ ವಿಭಾಗೀಕರಣದಂತಹ ಅಂಶಗಳಿಂದಾಗಿ ಕಡಿಮೆ ಉತ್ಪಾದಕತೆ, ಕಡಿಮೆ ವೇತನ ದೊರೆಯುವ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಳ್ಳುವಂತಾಗಿದೆ. ಹಾಗೆಯೇ ಕುಟುಂಬ ಪೋಷಣೆಯ ಕೆಲಸಗಳಿಗೆ ಸಂಬಂಧಪಟ್ಟಂತಹ ಸುರಕ್ಷತಾ ಕಾಳಜಿಗಳು ಹಾಗೂ ಸಾಮಾಜಿಕ ಮಾಪನ ಮಟ್ಟಗಳು ಮಹಿಳೆಯರ ಚಲನೆಯನ್ನು ಹಾಗೂ ವೇತನದ ಕೆಲಸಗಳಲ್ಲಿ ತೊಡಗಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತಿವೆ.

ಈಗಿನ ಅಭಿವೃದ್ಧಿ ಪಥದಲ್ಲಿಯೇ ಸಾಗುತ್ತಿದ್ದಲ್ಲಿ ಯೋಗ್ಯ ಕೆಲಸ ಹಾಗೂ ಲಿಂಗ ಸಮಾನತೆಗೆ ಸಂಬಂಧಿಸಿದ ಸುಸ್ಥಿರ ಬೆಳವಣಿಗೆಯ ಗುರಿಯನ್ನು ಸಾಧಿಸುವುದು ಕಷ್ಟಕರವೆನಿಸುತ್ತದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣದ ಇಳಿಕೆಗೆ ನಿಜವಾದ ಹಾಗೂ ವಾಸ್ತವಿಕ ಕಾರಣಗಳನ್ನು ಗುರುತಿಸಿ, ಅರ್ಥ ಮಾಡಿಕೊಂಡು ಅವಕ್ಕೆ ಸೂಕ್ತ ಪರಿಹಾರ ಹುಡುಕುವುದು ಅನಿವಾರ್ಯ.

ಲೇಖಕ ನಿರ್ದೇಶಕ, ಪಬ್ಲಿಕ್ ಅಫೇರ್ಸ್ ಸೆಂಟರ್‌, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು