ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಲಕ್ಷದ್ವೀಪ ಭೇಟಿ ಯೋಜಿಸುವ ಮುನ್ನ...

ಮೋಜು ಮಸ್ತಿಯ ಹೆಸರಿನಲ್ಲಿ ಪ್ರವಾಸಿ ತಾಣಗಳನ್ನು ಹಾಳುಗೆಡಹುವ ಮನುಷ್ಯ, ಆ ಸ್ಥಳಗಳ ಸೊಬಗು ಕಾಯ್ದುಕೊಳ್ಳಬೇಕಾದ ಬಹುದೊಡ್ಡ ಹೊಣೆಗಾರಿಕೆಯನ್ನು ಕಡೆಗಣಿಸುತ್ತಿದ್ದಾನೆ
Published 15 ಜನವರಿ 2024, 22:17 IST
Last Updated 15 ಜನವರಿ 2024, 22:17 IST
ಅಕ್ಷರ ಗಾತ್ರ

‘ಚೇಸಿಂಗ್‌ ವಾಟರ್‌ಫಾಲ್ಸ್‌’ ಎಂಬ ಹಾಲಿವುಡ್‌ ಚಿತ್ರ ಇತ್ತೀಚೆಗೆ ಬಹುವಾಗಿ ಕಾಡಿತು. ಈ ಚಿತ್ರದ ನಾಯಕಿ ಖ್ಯಾತ ಪತ್ರಿಕೆಯೊಂದರ ಯುವ ಛಾಯಾಗ್ರಾಹಕಿ. ಹೇಗಾದರೂ ಮಾಡಿ ವೃತ್ತಿಬದುಕಿ ನಲ್ಲಿ ಹೆಸರು ಮಾಡಬೇಕೆಂಬ ಹಂಬಲ ಅವಳದು. ಅವಳ ಅದೃಷ್ಟವೆಂಬಂತೆ, ಆ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಅನಾರೋಗ್ಯಪೀಡಿತನಾದಾಗ, ಆತ ಮಾಡುತ್ತಿದ್ದ ಛಾಯಾಗ್ರಹಣದ ಹೊಣೆ ಅನಾಯಾಸ ವಾಗಿ ಇವಳ ಹೆಗಲೇರುತ್ತದೆ.

ಈ ಹೊಸ ಸವಾಲಿನ ಭಾಗವಾಗಿ, ಜಗತ್ತಿಗೆ ಅನಾಮಿಕವಾಗಿ ಉಳಿದ, ಬರೀ ಪುರಾಣ, ಕತೆಗಳಲ್ಲಿ ಮಾತ್ರ ಕೇಳಿದ್ದಂತಹ ಜಲಪಾತಗಳ ಚಿತ್ರಬೇಟೆಗೆ ಹೊರಡಲು ಅವಳು ಅನುವಾಗುತ್ತಾಳೆ. ದಟ್ಟ ಕಾಡಿನೊಳಗೆ ಅವಳ ಗೈಡ್ ಆಗಿ ಬರುವ ಯುವಕನೊಂದಿಗೆ ಅವಳ ಪ್ರೇಮ ಚಿಗುರಿ ಕಥೆ ಅನೇಕ ತಿರುವುಗಳನ್ನು ಪಡೆಯುತ್ತದೆ. ಆತನೊಂದಿಗೆ ಸೇರಿ ಅಪರೂಪದ ಜಲಪಾತಗಳನ್ನು ಅನ್ವೇಷಿಸಿ, ಅವುಗಳ ಅದ್ಭುತ ಸೊಬಗಿನ ಅನನ್ಯ ಚಿತ್ರಗಳನ್ನು ಆಕೆ ಸೆರೆಹಿಡಿಯುತ್ತಾಳೆ. ಆದರೆ ನಂತರ, ಆ ಚಿತ್ರಗಳನ್ನು ನಾಗರಿಕ ಜಗತ್ತಿಗೆ ತೋರಿಸಲು ಆ ಜೋಡಿ ಹಿಂದೇಟು ಹಾಕುತ್ತದೆ.

ಆ ಸೊಬಗಿನ ಖನಿಗಳು ಜನರ ಕಣ್ಣಿಗೆ ಬೀಳದೆ ಅನಾಮಿಕವಾಗಿಯೇ ಉಳಿಯಲಿ ಎಂಬ ಇವರಿಬ್ಬರ ಆಶಯ ಅತ್ಯಂತ ಗಮನಾರ್ಹ. ತಮಗೆ ಸಿಗಬಹುದಾಗಿದ್ದ ಅಪಾರ ಜನಮನ್ನಣೆ, ಸಂಪತ್ತು, ವೃತ್ತಿ ಬದುಕಿನ ಉನ್ನತ ಸ್ಥಾನಗಳನ್ನು ನಿರಾಕರಿಸಿ, ಮನುಷ್ಯನಿಂದ ದೂರವಾಗಿರುವ ಜಲಪಾತಗಳ ಪಾವಿತ್ರ್ಯ ಕಾಪಾಡುವ ಈ ಚಿತ್ರದ ಕಥಾಹಂದರ ಈ ದಿನಮಾನಗಳಲ್ಲಿ ಮೇಲ್ನೋಟಕ್ಕೆ ಒಂದು ಹಗಲುಗನಸಿನಂತೆ ಭಾಸವಾಗುತ್ತದೆ. ಆದರೂ ಇಂತಹ ದ್ದೊಂದು ಸಾಧ್ಯತೆಯನ್ನು ನಮ್ಮ ಎದುರಿಗಿಡುವ ಸಿನಿಮಾ, ನಿಸರ್ಗಪ್ರಿಯರನ್ನು ಸಕಾರಾತ್ಮಕ ಚಿಂತನೆಗೆ ಹಚ್ಚುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಶ್ರೇಣಿಯಲ್ಲಿರುವ ಯಾಣ ಕೂಡ ಇಂತಹುದೇ ಒಂದು ಸ್ಥಳವಾಗಿತ್ತು. ‘ನಮ್ಮೂರ ಮಂದಾರ ಹೂವೇ’ ಚಿತ್ರ ಬಿಡುಗಡೆಯಾದ ನಂತರ ಇದು ಹೆಚ್ಚು ಪ್ರಸಿದ್ಧಿಗೆ ಬಂದಿತು. ಬಳಿಕ ಇಲ್ಲಿಗೆ ಭೇಟಿ ನೀಡುವ ಚಾರಣಿಗರ ಸಂಖ್ಯೆಯೂ ಹೆಚ್ಚಾಗಿ, ಇದ್ದಕ್ಕಿದ್ದಂತೆ ಮನುಷ್ಯನ ಮೋಜಿನ ತಾಣವಾಗಿ ಬದಲಾದ ಯಾಣ ತನ್ನ ಮೊದಲಿನ ಚೆಲುವನ್ನು ಕಳೆದುಕೊಂಡಿತು.

ಸಹ್ಯಾದ್ರಿ ಶ್ರೇಣಿಯ ಅಪೂರ್ವ ಚೆಲುವಿನ ಇನ್ನೊಂದು ತಾಣ ದೂಧ್‌ಸಾಗರ ಜಲಪಾತ. ಇಲ್ಲಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ಬಹುದಿನಗಳವರೆಗೆ ಇದು ಜನರ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಯಾವಾಗ ‘ಚೆನ್ನೈ ಎಕ್ಸ್‌ಪ್ರೆಸ್‌’ ಹಿಂದಿ ಚಲನಚಿತ್ರದ ಮೂಲಕ ಪ್ರಸಿದ್ಧಿಗೆ ಬಂದಿತೋ ಪ್ರವಾಸಿಗರ ದಂಡು ಇಲ್ಲಿಗೂ ಲಗ್ಗೆಯಿಡಲು ಶುರು ಮಾಡಿತು.

ಇಲ್ಲಿ ಹಾದುಹೋಗುವ ರೈಲು ಹಳಿಗಳ ಮೇಲೆ ನಡೆದುಕೊಂಡು ಸಾಗುವ ಚಾರಣಿಗರನ್ನು ಗಮನ
ದಲ್ಲಿಟ್ಟು ಹಾಗೂ ಬೆಟ್ಟದ ಮೇಲಿನ ಜಾರುವ ಹಾವಸೆಯ ಕಾರಣದಿಂದ, ಮುಂಗಾರಿನ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ಗೋವಾ ಪ್ರವಾಸೋದ್ಯಮ ಇಲಾಖೆ ನಿಷೇಧಿಸಿದೆ. ಆದರೂ ಪ್ರತಿವರ್ಷ ಈ ನಿಯಮವನ್ನು ಉಲ್ಲಂಘಿಸುವ ಪ್ರವಾಸಿಗರ ಅತಿಕ್ರಮಣ ಸ್ವಾಭಾವಿಕ ಎಂಬಂತಾಗಿದೆ. ಸುಸ್ಥಿರ, ಪರಿಸರಪೂರಕ‌ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳಿದ್ದರೂ‌ ಇಂತಹ ಕಡೆಯಲ್ಲೆಲ್ಲಾ ಮನುಷ್ಯನ ಮೋಜಿನ ಪ್ರವಾಸದ ಹೆಸರಿನಲ್ಲಿ ವ್ಯಾಪಾರೀಕರಣ ಎಗ್ಗಿಲ್ಲದೆ ನಡೆಯುವುದನ್ನು ನೋಡುತ್ತಿದ್ದೇವೆ.

ಅತಿ ಸೂಕ್ಷ್ಮ ಪರಿಸರ ವಲಯದಲ್ಲಿ ಕಂಡಕಂಡಲ್ಲಿ‌ ಉಗುಳುವವರು, ಬೆಂಕಿ ಹಾಕಿ, ಜೋರಾಗಿ ಧ್ವನಿವರ್ಧಕ ಹಾಕಿಕೊಂಡು ಕುಣಿಯುವ
ವರಲ್ಲಿ ಪಾಪಪ್ರಜ್ಞೆಯ ಒಂದಂಶವೂ ಕಾಣುವುದಿಲ್ಲ. ಸೂಕ್ಷ್ಮ ಪರಿಸರ ತಾಣಗಳ ಮೇಲೆ ಮನುಷ್ಯನ ಹೆಜ್ಜೆ ಗುರುತು ಪ್ರಕೃತಿಗೆ ಎಷ್ಟೊಂದು ಮಾರಕವಾಗಬಲ್ಲದು ಎಂಬುದಕ್ಕೆ, ಕೊಡಗಿನ ಬೆಟ್ಟಗಳನ್ನು ಕಡಿದು ‘ಹೋಂ ಸ್ಟೇ’ಗಳನ್ನಾಗಿ ಪರಿವರ್ತಿಸಿರುವುದರ ಅಪಾಯ ನಮ್ಮ ಕಣ್ಣೆದುರಿಗಿದೆ. ಮುಳ್ಳಯ್ಯನಗಿರಿಯಲ್ಲಿ ಅರಳಿದ ನೀಲಿ ಕುರಂಜಿ ಹೂವುಗಳ ಗಿಡಗಳನ್ನು ಬುಡಸಮೇತ ಕಿತ್ತು ಕಾರಿನೊಳಕ್ಕೆ ತುಂಬಿಕೊಂಡು ಹೊರಟ ಮನುಷ್ಯನ ಲಾಲಸೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು, ಕಂಗಾಲಾಗಿದ್ದೇವೆ. ಕುರಂಜಿ ಹೂವರಳಿದ ಬೆಟ್ಟದಲ್ಲಿ, ವಾರಾಂತ್ಯದಲ್ಲಿ ಕಾರುಗಳಿಂದಾಗುವ ಟ್ರಾಫಿಕ್ ಜಾಮ್ ನೋಡಿದರೆ, ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂಬುದು ಅರ್ಥವಾಗಬಹುದು.

ಸುಮಾರು ಅರವತ್ತೆಂಟು ಸಾವಿರದಷ್ಟು ಜನಸಂಖ್ಯೆ ಯನ್ನಷ್ಟೇ ಹೊಂದಿರುವ, ದಕ್ಷಿಣ ಭಾರತದ ತೀರಪ್ರದೇಶದ ‘ಲಕ್ಷದ್ವೀಪ’ವೆಂಬ ನಡುಗಡ್ಡೆ ಇದ್ದಕ್ಕಿದ್ದಂತೆ ಜಗತ್ತಿನ ಕಣ್ಣಿಗೆ ಬಿದ್ದಿದೆ. ಸೀಮಿತ ಪ್ರವಾಸಿಗರಿಗೆ ಮಾತ್ರ ಅನುಕೂಲಕರವಾಗಿರುವ ಈ ಪ್ರದೇಶ ತನ್ನ ಈ ಜನಪ್ರಿಯತೆಯಿಂದ ‘ಪ್ರವಾಸಿಗರ ಪ್ರವಾಹ’ದಿಂದ ಅಪಾಯ ಎದುರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಶ್ಚಿಮಘಟ್ಟದಂತೆಯೇ ಈ ತೀರದ
ನಡುಗಡ್ಡೆಯಲ್ಲಿರುವ ಅಪರೂಪದ ಹವಳದ ದಂಡೆ, ಡಾಲ್ಫಿನ್, ಆಕ್ಟೋಪಸ್‌ನಂತಹ ಜೀವವೈವಿಧ್ಯ ಹಾಗೂ ಸ್ಥಳೀಯರ ಸಾಮಾಜಿಕ, ಸಾಂಸ್ಕೃತಿಕ ಅಸ್ಮಿತೆ, ಅನನ್ಯತೆ ಯನ್ನು ಕಾಪಾಡುವುದು ಕೂಡ ನಮ್ಮ ಮುಂದಿರುವ ದೊಡ್ಡ ಸವಾಲು.

ಯಾವುದೇ ಒಂದು ಸೂಕ್ಷ್ಮ ಪರಿಸರದಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಮುನ್ನ,
ಪರಿಸರಸ್ನೇಹಿಯಾದ ಸ್ಥಳೀಯ ಬುಡಕಟ್ಟುಗಳ ಬದುಕಿಗೆ ಧಕ್ಕೆಯಾಗದಂತೆ ಯೋಜನೆಗಳನ್ನು ರೂಪಿಸು ವುದು ಅವಶ್ಯ. ಬರೀ ಮೋಜು ಮಸ್ತಿಗೆಂದೇ ಬರುವ ತೀರದಾಚೆಯ ಪ್ರವಾಸಿಗರ ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿಯೂ ಇಂತಹ ತಾಣಗಳ ಸೊಬಗು ಕಾಯ್ದುಕೊಳ್ಳುವಲ್ಲಿ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT