ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ದೌರ್ಜನ್ಯ ತಡೆಗೆ ಬೇಕು ಇಚ್ಛಾಶಕ್ತಿ

ಪ್ರತಿ ವರ್ಷ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ಸರ್ಕಾರ ಗಂಭೀರವಾಗಿ ವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ
Published 17 ಜುಲೈ 2023, 22:52 IST
Last Updated 17 ಜುಲೈ 2023, 22:52 IST
ಅಕ್ಷರ ಗಾತ್ರ

ಕಾಂಗ್ರೆಸ್ ಶಾಸಕ ಡಿ.ತಮ್ಮಯ್ಯ ಅವರ ಪ್ರಶ್ನೆಯೊಂದಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ಸದನದಲ್ಲಿ ಇತ್ತೀಚೆಗೆ ನೀಡಿದ ಉತ್ತರದಲ್ಲಿ, ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಹಿಂದಿನ ಐದು ವರ್ಷಗಳಲ್ಲಿ 10,883 ದೌರ್ಜನ್ಯ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಈ ಪೈಕಿ 8,357 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಮತ್ತು ಉಳಿದವುಗಳಿಗೆ ‘ಬಿ’ ರಿಪೋರ್ಟ್ ಹಾಕಲಾಗಿದೆ’ ಎಂದು ತಿಳಿಸಿದರು. ಈ ಐದು ವರ್ಷಗಳ ಪೈಕಿ 2022ರಲ್ಲಿ ಅತಿ ಹೆಚ್ಚು, ಅಂದರೆ 2,377 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 1,822 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಹಾಕಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಪೊಲೀಸ್ ಠಾಣೆವರೆಗೆ ಬರುವ ಪ್ರಕರಣಗಳ ಸಂಖ್ಯೆಯೇ ಇಷ್ಟಿರುವಾಗ, ಇನ್ನು ದೌರ್ಜನ್ಯಗಳು ನಡೆದರೂ ದಲಿತರು ಅಸಹಾಯಕತೆಯಿಂದ ಅಥವಾ ದೌರ್ಜನ್ಯಕೋರರ ಬೆದರಿಕೆಗೆ ಹೆದರಿ ಬಹಳಷ್ಟು ಪ್ರಕರಣಗಳನ್ನು ಅಲ್ಲಲ್ಲಿಗೇ ಮುಗಿಸಿಕೊಂಡು ಬಿಡುತ್ತಾರೆ ಎಂಬುದನ್ನೂ ಅಲ್ಲಗಳೆಯಲು ಆಗುವುದಿಲ್ಲ. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲೆಂದೇ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989 ಮತ್ತು ನಿಯಮಗಳು 1995 ಎಂಬ ವಿಶೇಷ ಕಾಯ್ದೆಯನ್ನು ರೂಪಿಸಲಾಗಿದೆ. ಇದು ನಮ್ಮ ರಾಜ್ಯದಲ್ಲಿ 1995ರಿಂದಲೂ ಜಾರಿಯಲ್ಲಿದೆ. ಆದರೂ, ಪ್ರತಿವರ್ಷ ಈ ಸಂಬಂಧ ಹೆಚ್ಚು ಹೆಚ್ಚು ದೌರ್ಜನ್ಯ ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗುತ್ತಿರುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ಸರ್ಕಾರ ಗಂಭೀರವಾಗಿ ವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.

ಹೀಗೆ ದಾಖಲಾದ ಪ್ರಕರಣಗಳ ಪೈಕಿ ಶೇ 5ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ ಎಂಬ ಕಳವಳಕಾರಿ ಮಾಹಿತಿಯು ಈ ವಿಷಯದ ಬಗ್ಗೆ ಅಧ್ಯಯನ ನಡೆಸಿದಾಗ ತಿಳಿದುಬರುತ್ತದೆ. ರಾಜ್ಯದಲ್ಲಿ ಸರ್ಕಾರದ ಆಡಳಿತ ಸೂತ್ರ ಹಿಡಿದವರು ಬದಲಾದಾಗ, 1995ರ ನಿಯಮಗಳಲ್ಲಿನ 16ನೇ ವಿಧಿಯ ಅನುಸಾರ, ಹೊಸ ಮುಖ್ಯಮಂತ್ರಿಯು ತಮ್ಮ ಅಧ್ಯಕ್ಷತೆಯಲ್ಲಿ ‘ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ’ಯನ್ನು ರಚಿಸಬೇಕು ಮತ್ತು ಈ ಸಮಿತಿಯು ಪ್ರತಿವರ್ಷದ ಜನವರಿ ಮತ್ತು ಜುಲೈ ತಿಂಗಳಲ್ಲಿ ಸಭೆ ನಡೆಸಬೇಕಾಗುತ್ತದೆ. ಈ ಸಭೆಯಲ್ಲಿ ಹಿಂದಿನ ಆರು ವರ್ಷಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಇಳಿಕೆ ಆಗಿರುವ ಬಗ್ಗೆ, ದೌರ್ಜನ್ಯ ಪ್ರಕರಣಗಳು ಸಮರ್ಪಕವಾಗಿ ನೋಂದಣಿ ಆಗುತ್ತಿರುವ ಬಗ್ಗೆ, ನೋಂದಣಿಯಾದ ಪ್ರಕರಣಗಳಿಗೆ ಸಂಬಂಧಿಸಿ ಸರ್ಕಾರದ ವಕೀಲರು ಸಮರ್ಪಕವಾಗಿ ವಾದ ಮಂಡನೆ ಮಾಡುತ್ತಿರುವ ಬಗ್ಗೆ ವಿಮರ್ಶೆ ಮಾಡಬೇಕಾಗುತ್ತದೆ.

2013ರಿಂದ ಇತ್ತೀಚಿನವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದವರ ಅವಧಿಯಲ್ಲಿ ಈ ಕಾಯ್ದೆಯ ಅನುಷ್ಠಾನ ಎಷ್ಟರಮಟ್ಟಿಗೆ ಆಗಿದೆ ಎಂಬುದನ್ನು ಗಮನಿಸಿದರೆ, ಮೊದಲ ಹೆಜ್ಜೆಯಲ್ಲೇ ಸರ್ಕಾರ ಮುಗ್ಗರಿಸಿ ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸಿದ್ದರಾಮಯ್ಯ ಐದು ವರ್ಷ, ಕುಮಾರಸ್ವಾಮಿ, ಯಡಿಯೂರಪ್ಪ- ಬೊಮ್ಮಾಯಿ ಅವರ ಐದು ವರ್ಷ ಸೇರಿ ಒಟ್ಟು ಹತ್ತು ವರ್ಷಗಳ ಈ ಆಡಳಿತಾವಧಿಯಲ್ಲಿ ಯಾವ ಮುಖ್ಯಮಂತ್ರಿಯ ಕಾಲದಲ್ಲೂ ನಿಗದಿತ ಸಭೆಗಳನ್ನು ನಡೆಸದಿರುವುದು ಎದ್ದು ಕಾಣುತ್ತದೆ.

ಮುಖ್ಯಮಂತ್ರಿ ಮತ್ತು ಆಡಳಿತ ಪಕ್ಷಗಳು ಬದಲಾದರೂ, ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ದಿಸೆಯಲ್ಲಿ ರೂಪಿಸಲಾಗಿರುವ ಕಾಯ್ದೆಯ ಅನುಷ್ಠಾನದಲ್ಲಿ ಮಾತ್ರ ಕಾಳಜಿ, ಉತ್ಸುಕತೆ ಕಾಣುವುದೇ ಇಲ್ಲ.

ಈ ವರ್ಷದ ಜನವರಿ ತಿಂಗಳಿನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆಯನ್ನು ನಡೆಸಲಿಲ್ಲ. ಈಗ ಜುಲೈ ತಿಂಗಳು ಬರುವ ಹೊತ್ತಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿದೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿಯ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಇವರಾದರೂ ಕಾಯ್ದೆ ತಿಳಿಸುವಂತೆ ಸಭೆಯನ್ನು ನಡೆಸಿ, ನಿಯಮ ಪಾಲನೆಗೆ ಮುಂದಾಗಬೇಕು.

ದೌರ್ಜನ್ಯ ತಡೆ ಕಾಯ್ದೆಯ ಆಶಯವನ್ನು ಜಾರಿ ಮಾಡಿ, ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕು. ಈ ವಿಷಯದಲ್ಲಿ ಸಾಮಾಜಿಕ ನ್ಯಾಯಪರರು, ದಲಿತ ಸಂಘಟನೆಗಳ ಮುಖಂಡರು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ತರುವುದು ಅವಶ್ಯ.

ಲೇಖಕ: ‘ಬೆಂಗಳೂರು ದಲಿತ್ ಫೋರಂ’ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT