ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಸಿಪ್ಪೆಯನ್ನು ಸರಾಗವಾಗಿ ತಿಪ್ಪೆಗೆ ಎಸೆಯುವ ಮುನ್ನ ಮತ್ತೊಮ್ಮೆ ಯೋಚಿಸಿ
Published 8 ಮೇ 2024, 23:50 IST
Last Updated 8 ಮೇ 2024, 23:50 IST
ಅಕ್ಷರ ಗಾತ್ರ

ಬೇಸಿಗೆಯ ಧಗೆ ಕಡಿಮೆ ಮಾಡಿಕೊಳ್ಳಲು ನಾವು ತಿನ್ನುವ ಹಣ್ಣುಗಳಲ್ಲಿ ಕಲ್ಲಂಗಡಿಗೆ ಮೊದಲ ಸ್ಥಾನ ನೀಡಿದ್ದೇವೆ. ನಿಂಬೆಯ ಪಾನಕ, ತಂಪು ಪಾನೀಯಗಳು, ಕರಬೂಜ ಹಣ್ಣು, ಮಜ್ಜಿಗೆಯಂಥವು ನಮ್ಮ ದಾಹ- ಹಸಿವುಗಳನ್ನು ತಕ್ಕಮಟ್ಟಿಗೆ ತಣಿಸುತ್ತವೆಯಾದರೂ ಅತ್ಯಾಕರ್ಷಕ ಕೆಂಪು ತಿರುಳಿನ ಕಲ್ಲಂಗಡಿ ಹಣ್ಣು ಎಲ್ಲಾ ವಯೋಮಾನದವರಿಗೂ ಅತ್ಯಂತ ಪ್ರಿಯ. ಬೇಸಿಗೆಯ ಹಣ್ಣೆಂದೇ ಖ್ಯಾತಿ ಇರುವ ಮತ್ತು ಹಲವು ಗಾತ್ರ, ತೂಕಗಳಲ್ಲಿ ಸಿಗುವ ಕಲ್ಲಂಗಡಿ ಹಣ್ಣಿಗೆ ಬೇಸಿಗೆಯಲ್ಲಿ ಭಾರಿ ಬೇಡಿಕೆ ಇರುತ್ತದೆ. ಬೀದಿಬದಿಯ ಅಂಗಡಿ, ಸುಸಜ್ಜಿತ ಮಾಲ್, ಇ–ಕಾಮರ್ಸ್‌ ಮಳಿಗೆಗಳಲ್ಲಿ ಲಭ್ಯವಿರುವ ಕಲ್ಲಂಗಡಿ, ರಾಜ್ಯ– ದೇಶಗಳ ಗಡಿ ದಾಟಿ ಜನರ ಹೊಟ್ಟೆಯನ್ನು ತಣ್ಣಗಿರಿಸಿದೆ.

ಸಿಪ್ಪೆ ಇರುವ ಯಾವುದೇ ಹಣ್ಣನ್ನು ತಿಂದರೂ ತಿರುಳು ತಿಂದ ತಕ್ಷಣ ಸಿಪ್ಪೆಯನ್ನು ಬಿಸಾಕುವುದು ರೂಢಿ. ಕಲ್ಲಂಗಡಿಯ ವಿಷಯದಲ್ಲಿಯೂ ನಾವು ಹಾಗೇ ಮಾಡುತ್ತೇವೆ. ನೀರಿನ ಅಂಶವುಳ್ಳ ಮೃದುವಾದ ತಿರುಳನ್ನು ಆವರಿಸಿರುವ ದಪ್ಪ ತೊಗಟೆಯು ಸಾಮಾನ್ಯವಾಗಿ ತಿಪ್ಪೆ ಸೇರುತ್ತದೆ, ಇಲ್ಲವೇ ದನ–ಕರುಗಳ ಆಹಾರವಾಗುತ್ತದೆ. ಹಲವಾರು ವಿಟಮಿನ್ ಮತ್ತು ಪೋಷಕಾಂಶಗಳನ್ನು ಹೊಂದಿರುವ ತೊಗಟೆಯ ಮಹತ್ವ ತಿಳಿಯದ ಬಹುಪಾಲು ಜನ ಅದನ್ನು ಕಸವೆಂದೇ ಭಾವಿಸಿ ಬೀದಿಪಾಲು ಮಾಡುತ್ತಾರೆ. ತೊಗಟೆಯಲ್ಲಿ ಹಣ್ಣಿನ ತಿರುಳಿನಷ್ಟೇ ಪೌಷ್ಟಿಕಾಂಶಗಳಿವೆ ಎಂದು ಗೊತ್ತಿರುವ ಕೆಲವರು ಸಿಪ್ಪೆಯಿಂದ ಬಗೆಬಗೆಯ ಆಹಾರ ತಯಾರಿಸಿ, ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳುತ್ತಾರೆ.  

ದೂರದ ದಕ್ಷಿಣ ಆಫ್ರಿಕಾದ ನೆಲದಿಂದ ಬಂದ ಹಣ್ಣಿದು ಎಂದು ದಾಖಲೆಗಳಲ್ಲಿ ಇದೆಯಾದರೂ ಮೂಲದ ಕುರಿತು ಹಲವಾರು ತಕರಾರುಗಳಿವೆ. 5,000 ವರ್ಷಗಳಷ್ಟು ಹಳೆಯ ಕಲ್ಲಂಗಡಿಯ ಬೀಜಗಳು ದೊರಕಿದ್ದರ ಬಗ್ಗೆ ಪುರಾತತ್ವ ಇಲಾಖೆಯ ಬಳಿ ದಾಖಲೆಗಳಿವೆ. 1773ರಲ್ಲಿ ಹಣ್ಣಿನ ವಂಶವಾಹಿಯನ್ನು ಶೋಧಿಸಿದ ಸ್ವೀಡನ್ನಿನ ವಿಜ್ಞಾನಿ ಕಾರ್ಲ್‌ ಪೀಟರ್, ಆಫ್ರಿಕಾದ ಕೇಪ್ ಟೌನ್ ಭಾಗದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿಗೂ ಮತ್ತು ವಿಶ್ವದ ಇತರ ಭಾಗಗಳಲ್ಲಿ ಬೆಳೆಯುವ ಹಣ್ಣಿಗೂ ವ್ಯತ್ಯಾಸವಿದೆ ಎಂದು ಗುರುತಿಸಿದ್ದಾರೆ. ಈಜಿಪ್ಟಿನ ಪಿರಮಿಡ್‌ನಲ್ಲಿಯೂ ಟ್ರೇನಲ್ಲಿ ಇರಿಸಲಾದ 4,000 ವರ್ಷ ಹಳೆಯದಾದ ಕಲ್ಲಂಗಡಿ ಹಣ್ಣಿನ ಚಿತ್ರ ಲಭ್ಯವಾಗಿದೆ.

ಹಣ್ಣಿನ ಸಿಪ್ಪೆಯಿಂದ ಪಲ್ಯ, ಉಪ್ಪಿನಕಾಯಿ, ರಸಾಯನ, ಪಾನ್ ಕೇಕ್, ಚಟ್ನಿ, ಚಿಪ್ಸ್, ಗೊಜ್ಜು... ಹೀಗೆ
ಹಲವು ಖಾದ್ಯಗಳನ್ನು ತಯಾರಿಸಿ ತಿನ್ನುವ ಪರಿಪಾಟ ಗ್ರಾಮೀಣ ಭಾಗದ ಅನೇಕ ಮನೆಗಳಲ್ಲಿದೆ. ತಯಾರಿಸಿದ ಖಾದ್ಯದ ಕುರಿತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುತ್ತಿರುವ ನಗರಗಳ ಹಲವಾರು ಗೃಹಿಣಿಯರು ತೊಗಟೆಯಿಂದ ಏನೆಲ್ಲ ಉಪಯೋಗಗಳಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ರುಬ್ಬಿ ದೋಸೆ ಮಾಡಿ ತಿನ್ನುವುದೆಂದರೆ ನಮ್ಮ  ಕಾರವಾರದ ಕಡಲ ತೀರದ ಜನರಿಗೆ ಹಬ್ಬದ ಹೋಳಿಗೆ ತಿಂದಷ್ಟೇ ಖುಷಿಯಾಗುತ್ತದೆ. ತೆಂಗಿನಕಾಯಿ ಚಟ್ನಿಯ ಜೊತೆ ಸೇವಿಸಿದರೆ ದೋಸೆಯ ರುಚಿ ಇಮ್ಮಡಿಯಾಗುತ್ತದೆ ಎಂಬ ಮಾತು ಮಲೆನಾಡಿನ ಮನೆಗಳಲ್ಲಿ ಸರ್ವಸಾಮಾನ್ಯವಾಗಿದೆ. ಸಿಪ್ಪೆಯನ್ನು ಒಣಗಿಸಿ, ಅದರಿಂದ ಹಿಟ್ಟು ತಯಾರಿಸಿ ಬಿಸ್ಕತ್ತು ಮತ್ತು ಕೇಕ್‌ ತಯಾರಿಸಿದವರಿದ್ದಾರೆ.

ಕೊಯಮತ್ತೂರಿನ ಅಶ್ವಲಿಂಗಮ್ ಇನ್‌ಸ್ಟಿಟ್ಯೂಟ್ ಆಫ್ ಹೋಮ್‌ ಸೈನ್ಸ್ ಆ್ಯಂಡ್‌ ಹೈಯರ್‌ ಎಜುಕೇಷನ್ ಫಾರ್ ವಿಮೆನ್‌ ಸಂಸ್ಥೆಯ ಸಂಶೋಧಕರು ಕಲ್ಲಂಗಡಿಯ ಸಿಪ್ಪೆಯನ್ನು ಲೇಹ್ಯವನ್ನಾಗಿ ಪರಿವರ್ತಿಸಿ ಅದನ್ನು ಕಡಲೆಕಾಳು, ಹೆಸರುಕಾಳು ಹಾಗೂ ಸೋಯಾಬೀನ್ ಹಿಟ್ಟಿಗೆ ಮಿಶ್ರಣ ಮಾಡಿ ಉಪ್ಪು, ಕರಿಮೆಣಸು ಸೇರಿಸಿ ರುಚಿಕರವಾದ ಚಿಪ್ಸ್‌ ತಯಾರಿಸುವುದನ್ನು ತೋರಿಸಿದ್ದಾರೆ.

ಕಲ್ಲಂಗಡಿ ಸಿಪ್ಪೆಯ ಭಾಗವು ಹೆಚ್ಚಿನ ನಾರಿನಂಶ ಮತ್ತು ಪ್ರೋಟೀನ್‌ನಿಂದ ಕೂಡಿದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ಆ್ಯಂಡ್‌ ಟೆಕ್ನಾಲಜಿಯವರು ತಿರುಳಿಗಿಂತ ಬೀಜ ಮತ್ತು ಸಿಪ್ಪೆಯಲ್ಲಿ ಆಸ್ಕಾರ್ಬಿಕ್ ಆಮ್ಲ, ಕರೋಟಿನಾಯ್ಡ್‌ ವಿಟಮಿನ್‌ಗಳು ಮತ್ತು ಪೊಟ್ಯಾಶಿಯಂ ಮಿನರಲ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಹೇಳಿದ್ದಾರೆ. ತಿರುಳಿನಲ್ಲಿ 1,500 ಫೈಟೋಕೆಮಿಕಲ್, ಯೋಗ್ಯ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ), ದೇಹದ ಅಂಗಾಂಶಗಳನ್ನು ರಿಪೇರಿ ಮಾಡುವ ಪ್ರೋಟೀನ್  ಅಲ್ಲದ ವಿವಿಧ ಅಮೈನೋ ಆಮ್ಲಗಳು ಇರುತ್ತವೆ. ಸಿಪ್ಪೆಯಲ್ಲಿ ಹೇರಳವಾಗಿ ದೊರಕುವ ಲೈಕೋಪೇನ್ ಅಂಶವು ಕಣ್ಣು ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ. ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ರಕ್ತದೊತ್ತಡ ನಿಯಂತ್ರಿಸಿದರೆ, ಮೆಗ್ನೀಷಿಯಂ ಅಂಶ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.

ಆಂಧ್ರಪ್ರದೇಶದ ಸಂಶೋಧಕರು ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಕರೆಂಟ್ ಮೈಕ್ರೊಬಯಾ
ಲಜಿ ಆ್ಯಂಡ್ ಅಪ್ಲೈಡ್ ಸೈನ್ಸ್ ಪತ್ರಿಕೆಯಲ್ಲಿ ಕಲ್ಲಂಗಡಿಯ ಸಿಪ್ಪೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ರಂಜಕ, ಕ್ಯಾಲ್ಸಿಯಂ, ಸೋಡಿಯಂ, ತಾಮ್ರ, ಸತುವಿನ ಅಂಶ ಹೇರಳವಾಗಿದ್ದು ಅದರಲ್ಲಿ ವಿಟಮಿನ್ ಎ, ಬಿ 6 ಮತ್ತು ಸಿ ಇವುಗಳ ದೊಡ್ಡ ಭಂಡಾರವೇ ಇದೆ ಎಂದು ಪ್ರಬಂಧ ಮಂಡಿಸಿದ್ದಾರೆ. ಮನುಷ್ಯ ದೇಹದ ರಕ್ತನಾಳಗಳನ್ನು ಅಗಲವಾಗಿಸಿ ರಕ್ತವನ್ನು ಸರಾಗವಾಗಿ ಹರಿಯುವಂತೆ ಮಾಡುವ ಎಲ್ ಸಿಟ್ರುಲಿನ್ ಎಂಬ ಅಮೈನೋ ಆಮ್ಲವು ಸಿಪ್ಪೆಯಲ್ಲಿರುತ್ತದೆ. ಇದರ ಇರುವಿಕೆಯಿಂದ ರಕ್ತನಾಳವು ಅಗಲವಾದಾಗ ಹೃದಯದಿಂದ ಹೊರಕ್ಕೆ ಮತ್ತು ಹೃದಯಕ್ಕೆ ರಕ್ತ ಸರಾಗವಾಗಿ ಹರಿದು ಮನುಷ್ಯನ ರಕ್ತದೊತ್ತಡ ಹತೋಟಿಯಲ್ಲಿ ಇರುತ್ತದೆ ಮತ್ತು ರಕ್ತಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆಯಾಗುತ್ತದೆ ಎಂಬ ವರದಿಗಳಿವೆ. ಇಷ್ಟೆಲ್ಲಾ ಉಪಯೋಗಗಳಿರುವಾಗ ಸಿಪ್ಪೆಯನ್ನು ಸರಾಗವಾಗಿ ತಿಪ್ಪೆಗೆ ಎಸೆಯುವ ಮುನ್ನ ಮತ್ತೊಮ್ಮೆ ಯೋಚಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT