ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉತ್ತಮ ಶಿಕ್ಷಕ: ಮಾನದಂಡವೇನು?

ಪ್ರಶಸ್ತಿಗಾಗಿ ಶಿಕ್ಷಕರನ್ನು ಆಯ್ಕೆ ಮಾಡುವ ವಿಧಾನ ಬದಲಾಗಬೇಕಿದೆ
Published 8 ಆಗಸ್ಟ್ 2023, 18:48 IST
Last Updated 8 ಆಗಸ್ಟ್ 2023, 18:48 IST
ಅಕ್ಷರ ಗಾತ್ರ

ಸದಾಶಿವ್ ಸೊರಟೂರು

ಮೊನ್ನೆ ಹೀಗೊಂದು ಸಂದೇಶ ಬಂತು. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ ಮತ್ತು ಅರ್ಹ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿ ಎಂದು ಕೋರಲಾಗಿತ್ತು. ಅಲ್ಲದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮತ್ತೆ ಮತ್ತೆ ಮುಂದೂಡಲಾಯಿತು. ಜಿಲ್ಲಾ ಮಟ್ಟದ ‌ಉತ್ತಮ‌ ಶಿಕ್ಷಕ ಪ್ರಶಸ್ತಿಗೆ ಮನವಿ ಕೋರಿ ಬರುವ ಅರ್ಜಿಗಳ ಸಂಖ್ಯೆಯೂ ಹೆಚ್ಚೇನೂ ಸಮಾಧಾನಕರವಾಗಿಲ್ಲ‌ ಎಂದು ಆತ್ಮೀಯರೊಬ್ಬರು ಹೇಳಿದರು.

ಒಂದು ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರಿರುತ್ತಾರೆ. ಆದರೆ ಬರುವ ಅರ್ಜಿಗಳು ಮಾತ್ರ ಹತ್ತೊ, ಹದಿನೈದೊ.‌ ಇಡೀ ರಾಜ್ಯದಲ್ಲಿ ಲಕ್ಷಗಟ್ಟಲೆ ಶಿಕ್ಷಕರಿದ್ದಾರೆ. ಆದರೆ ಪ್ರಶಸ್ತಿ ಕೋರಿ ಬರುವ ಅರ್ಜಿಗಳ ಸಂಖ್ಯೆ ತೀರಾ ಸಮಾಧಾನಕರವಾಗಿಲ್ಲ ಅಂದರೆ ಏನರ್ಥ?

ಅರ್ಹರಾದ ಉತ್ತಮ ಶಿಕ್ಷಕರು ಇಲ್ಲ ಅಂತಲೊ? ಉತ್ತಮ ಶಿಕ್ಷಕರು ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯಲು ಮನಸ್ಸು ಮಾಡುತ್ತಿಲ್ಲ‌ ಅಂತಲೊ? ಅಥವಾ ಈ ವಿಚಾರ ಹೆಚ್ಚಿನ ಸಂಖ್ಯೆಯ ಶಿಕ್ಷಕರಿಗೆ ತಲುಪಿತ್ತಲ್ಲ ಎಂತಲೊ? ಶಿಕ್ಷಕರಿಗೆ ಪ್ರಶಸ್ತಿ ಪಡೆಯಲು ಇಷ್ಟವಿಲ್ಲವೊ? ಇದರಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು? ತುಂಬಾ ಗಂಭೀರವಾಗಿ ನಾವು ಯೋಚಿಸಬೇಕಿದೆ. ಇದು ಬರೀ ಈ ವರ್ಷದ ಕಥೆಯಲ್ಲ, ಪ್ರತಿವರ್ಷವೂ ಬಹುತೇಕ ಇದೇ ವ್ಯಥೆ.

ನನ್ನ ಮಿತ್ರರೊಬ್ಬರಿಗೆ ಅವರ ಗೆಳೆಯರೊಬ್ಬರು ‘ನೀವು ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಅರ್ಜಿ ಸಲ್ಲಿಸಿ ಎಂದು ಹೇಳಿದ್ದಕ್ಕೆ ಆ ಮಿತ್ರ ಮೈಮೇಲೆ ಹಲ್ಲಿ ಬಿದ್ದವರಂತೆ ಬೆಚ್ಚಿದರು. ‘ಪ್ರಶಸ್ತಿ ಪಡೆದ ಶಿಕ್ಷಕರನ್ನು ಒಂಥರಾ ಅನುಮಾನದ ದೃಷ್ಟಿಯಿಂದ ನೋಡ್ತಾರೆ ಸರ್. ಪ್ರಶಸ್ತಿಗೆ ಲಾಬಿ ಮಾಡಿ ಪಡೆದಿರಬೇಕು ಅಂದುಕೊಳ್ತಾರೆ. ನಾನೊಬ್ಬ ಒಳ್ಳೆ ಮೇಷ್ಟ್ರು ಅನ್ನೋದು ಮಕ್ಕಳ ಮನಸ್ಸಿಗೆ ತಿಳಿದರೆ ಸಾಕು, ಅದೇ ಸಾರ್ಥಕತೆ. ಬಹುಶಃ ಪ್ರಶಸ್ತಿ ಹುಚ್ಚು ನನ್ನ ತಲೆಗೆ ಏರಿದರೆ, ನಾನು ಮಕ್ಕಳ ಮುಖದ ಮೇಲಿನ ನಿಷ್ಕಲ್ಮಷ ಸಂತೋಷ ನೋಡುವುದನ್ನು ಕಳೆದುಕೊಳ್ತೀನಿ. ದಾಖಲೆ ನಿರ್ವಹಣೆ ಕಡೆ ಗಮನ‌ ಹೋಗುತ್ತೆ. ಪ್ರಶಸ್ತಿಗೆ ಸಿದ್ಧವಾಗುವುದೇ ಬೋಧನೆಯಂತಾಗಿಬಿಡುತ್ತದೆ’ ಎಂದರು.

ಇಲ್ಲಿ ನಾವು ಪ್ರಶಸ್ತಿಯನ್ನು ಅನುಮಾನದಿಂದ ನೋಡಬೇಕೊ, ಅದಕ್ಕೆ ಅರ್ಜಿ ಸಲ್ಲಿಸದ ಶಿಕ್ಷಕರನ್ನು ಅನುಮಾನದಿಂದ ನೋಡಬೇಕೊ ಅಥವಾ ಈ ಇಬ್ಬರನ್ನೂ ಬಿಟ್ಟು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದವರನ್ನು ಗುಮಾನಿಯಿಂದ ನೋಡಬೇಕೊ ಗೊತ್ತಾಗುವುದಿಲ್ಲ.

ಕಾದಂಬರಿಕಾರ ಅರ್ನೆಸ್ಟ್ ಹೆಮಿಂಗ್ವೆ ಅವರಿಗೆ ನೊಬೆಲ್ ಪ್ರಶಸ್ತಿ ಬಂದಾಗ ಅವರು ಅದನ್ನು ಸ್ವೀಕರಿಸಲು ಹೋಗಲಿಲ್ಲ. ಆಫ್ರಿಕಾದ ದಟ್ಟ ಅರಣ್ಯವನ್ನು, ಅಲ್ಲಿ ಸಿಗುವ ಏಕಾಂತವನ್ನು ತೊರೆದು ಹೋಗುವುದು ತಮಗೆ ಇಷ್ಟವಿಲ್ಲ ಎಂದು ಉಳಿದರು. ನೊಬೆಲ್ ಸಮಿತಿಯವರೇ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡಿ ಹೋದರು.

ಚಿಲಿ ಕವಿ ಪಾಬ್ಲೊ ನೆರೂಡ ಅವರು ನೊಬೆಲ್ ಪ್ರಶಸ್ತಿ ಸ್ವೀಕಾರ ಮಾಡುವಾಗ ಹೇಳಿದ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ. ‘ನಮ್ಮ ಮನೆಯಲ್ಲಿ ದಿನನಿತ್ಯದ ಬ್ರೆಡ್ ಸಿದ್ಧಗೊಳಿಸುವವ ತುಂಬಾ ಒಳ್ಳೆಯ ಕವಿಯಾಗಿದ್ದಾನೆ. ನೆರೆಮನೆಯಲ್ಲಿ ಹಿಟ್ಟು ಕಲೆಸುವವ ಕೂಡ ಉತ್ತಮ ಕವಿ. ಆದರೆ ನೊಬೆಲ್ ನನಗೆ ಬಂದುಬಿಟ್ಟಿದೆ’ ಎಂದಿದ್ದರು. ಪ್ರಶಸ್ತಿಯ ಹುಚ್ಚು ತಲೆಗೇರಬಾರದು ಎಂಬುದನ್ನು ಈ ಉದಾಹರಣೆಗಳು ನಿರೂಪಿಸುತ್ತವೆ.

ಒಂದು ಪ್ರಶಸ್ತಿಗೆ ನಿಜಕ್ಕೂ ಗೌರವ ಬರುವುದು ಅದನ್ನು ನಾವು ಯಾರಿಗೆ ಕೊಟ್ಟಿದ್ದೇವೆ ಅನ್ನುವುದರ ಮೇಲೆ.‌ ವ್ಯಕ್ತಿಗಳಿಂದಲೇ ಪ್ರಶಸ್ತಿಯ ಗೌರವ ಹಾಳಾದರೆ‌‌ ಅದಕ್ಕಿಂತ ದುರ್ದೈವ ಯಾವುದಿದೆ?

ಪೂರ್ಣಚಂದ್ರ ತೇಜಸ್ವಿಯವರಿಗೆ ‘ಪಂಪ‌’ ಪ್ರಶಸ್ತಿ ಬಂದಾಗ ಅವರು ಹೇಳಿದ ಮಾತುಗಳನ್ನು ನೋಡಿ ಎಷ್ಟು ಮಾರ್ಮಿಕವಾಗಿವೆ.‌ ‘ನಮ್ಮ ತಂದೆಯವರಿಗಾಗ್ಲಿ, ಶಿವರಾಮ ಕಾರಂತರಿಗಾಗ್ಲಿ ಪ್ರಶಸ್ತಿ ಬಂದಾಗ ಅದರಿಂದ ಪ್ರಶಸ್ತಿಗೇ ಮರ್ಯಾದೆ. ಯಾಕಂದ್ರೆ ಅಷ್ಟು ದೊಡ್ಡ ವ್ಯಕ್ತಿಗಳಿಗೆ ಮರ್ಯಾದೆ ಕೊಟ್ಟಾಗ ಮರ್ಯಾದೆ ಕೊಟ್ಟವರಿಗೇ ಮರ್ಯಾದೆ ಬರುತ್ತೆ’ ಅಂದಿದ್ದರು.

ನಿಜಕ್ಕೂ ಶಿಕ್ಷಕರ ಪ್ರಶಸ್ತಿಗೊಂದು ಗೌರವ ದಕ್ಕಬೇಕು.‌ ಪ್ರಶಸ್ತಿಗೆ ನಿಗದಿ‌ ಮಾಡಿದ ಮಾನದಂಡಗಳನ್ನೂ ಮೀರಿದ ಶಿಕ್ಷಕರಿದ್ದಾರೆ.‌ ಅಂತಹ ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಅಂಥವರಿಗೆ ದಕ್ಕಬೇಕು. ಅದಕ್ಕಾಗಿಯಾದರೂ ಅಯ್ಕೆ ಕ್ರಮ ಬದಲಾಗಬೇಕು. 

‘ನಾನೊಬ್ಬ ಒಳ್ಳೆಯ ಮೇಷ್ಟ್ರು, ನನಗೊಂದು ಪ್ರಶಸ್ತಿ ಕೊಡಿ’ ಎಂದು ಅರ್ಜಿ ಬರೆದುಕೊಡುವುದು ಹೇಗೆ? ಇಂತಹ ಮುಜುಗರದ ಕಾರಣದಿಂದಲೇ ಎಷ್ಟೋ ಅರ್ಹ ಶಿಕ್ಷಕರು ಅರ್ಜಿ ಸಲ್ಲಿಸಲು ಮುಂದಾಗುವುದಿಲ್ಲ.‌ ಆತ ಬೋಧಿಸುವುದಕ್ಕೆ ಸಿದ್ಧವಾಗುವ ಸಮಯದಲ್ಲಿ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುತ್ತಾ ಇರಬೇಕೆ? ದಾಖಲೆ ಇಲ್ಲದ ಒಬ್ಬ ಶಿಕ್ಷಕ ಉತ್ತಮ ಶಿಕ್ಷಕ ಆಗಲಾರನೇ? ಅದ್ಭುತ ತಂತ್ರಜ್ಞಾನದ ಈ ಕಾಲದಲ್ಲಿ ಎಂತಹ ದಾಖಲೆಗಳನ್ನು ಬೇಕಾದರೂ ಒಂದು ದಿನದಲ್ಲಿ ಸಿದ್ಧಗೊಳಿಸಬಹುದು. ಇದರ ಬಗ್ಗೆ ಯೋಚಿಸಬೇಕಿದೆ. ಅರ್ಹರು ಅರ್ಜಿ ಸಲ್ಲಿಸದೇ ಇದ್ದಾಗ ಅದು ಅನರ್ಹರ ಪಾಲಾಗುವುದು ಅನಿವಾರ್ಯ.

ಪ್ರಶಸ್ತಿಗಾಗಿ ಶಿಕ್ಷಕರನ್ನು ಆಯ್ಕೆ ಮಾಡುವ ವಿಧಾನ ಬದಲಾಗಬೇಕಿದೆ. ಬರೀ ದಾಖಲೆ ನೋಡಿ ತೀರ್ಮಾನಿಸುವ ಪರಿ ನಿಲ್ಲಬೇಕು. ಲಾಬಿಗಳು ನಿಲ್ಲಬೇಕು. ಒಬ್ಬ ಶಿಕ್ಷಕ ಉತ್ತಮ ಹೌದೋ ಅಲ್ಲವೋ ಅನ್ನುವುದನ್ನು ಅವನ ದಾಖಲೆಗಳು ಹೇಳಬಾರದು. ಮಕ್ಕಳು ಹೇಳಬೇಕು. ಅವರೇ ನಿಜವಾದ ತೀರ್ಪುಗಾರರು. ಪೋಷಕರು ಹೇಳಬೇಕು. ಸಮುದಾಯ‌ ನಿರ್ಧರಿಸಬೇಕು. ಇಲಾಖೆಯ ಅಧಿಕಾರಿಗಳು ಅವಲೋಕಿಸಬೇಕು ಮತ್ತು ಅವನ ಸಹಪಾಠಿ ಶಿಕ್ಷಕರು ಅದನ್ನು ಮೆಚ್ಚಬೇಕು. ಅರ್ಹ ಸೇವೆ ಯಾವತ್ತೂ ಗೌರವಿಸಲ್ಪಡುತ್ತದೆ.

ಹಾಗೆಂದು ಪ್ರಶಸ್ತಿಗಳೆಲ್ಲಾ ಅನರ್ಹರ ಪಾಲಾಗುತ್ತವೆ ಎಂದು ಹೇಳಲಾಗುವುದಿಲ್ಲ. ಅವರಲ್ಲಿ ಅರ್ಹರೂ ಇರುತ್ತಾರೆ. ಆದರೆ ಸಮಾಜವು ಅನರ್ಹ ವ್ಯಕ್ತಿ ಪಡೆದ ಪ್ರಶಸ್ತಿಯನ್ನು ನೋಡಿ ಅರ್ಹನನ್ನೂ ಅನುಮಾನದಿಂದಲೇ ನೋಡುತ್ತದೆ ಅಲ್ಲವೇ? ಅದಾಗಬಾರದು ಎಂಬುದಷ್ಟೇ ಇಲ್ಲಿ ಕಾಳಜಿಯ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT