ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪೌರತ್ವ ಮಸೂದೆ: ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಸಕಿ ಹಾಕುವ ದುರುಳ ಯತ್ನ

ಜನಾಭಿಪ್ರಾಯ ರೂಪಿಸುವ ಮತ್ತು ನ್ಯಾಯಾಂಗ ಹೋರಾಟದ ನೆಲೆಯಲ್ಲಿ ಈ ದಾಳಿಯನ್ನು ಎದುರಿಸಲು ನಾವು ಎಷ್ಟರಮಟ್ಟಿಗೆ ಸಿದ್ಧರಾಗಿದ್ದೇವೆ ಎಂದು ಚಿಂತಿಸಬೇಕಿದೆ
Last Updated 13 ಡಿಸೆಂಬರ್ 2019, 2:06 IST
ಅಕ್ಷರ ಗಾತ್ರ

ಸಂಸತ್ತು ಈಗ ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಮಸೂದೆಯ ಬಗೆಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಇದು ನಮ್ಮ ರಾಷ್ಟ್ರೀಯ ಅಥವಾ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಸಕಿ ಹಾಕುವ ದುರುಳ ಪ್ರಯತ್ನವೇ ಆಗಿದೆ. ಇನ್ನೊಂದು ದೃಷ್ಟಿಯಿಂದ ಇದು, ಮತೀಯ ನೆಲೆ ಮತ್ತು ಸ್ಫೂರ್ತಿಯೊಂದಿಗೆ ‘ಬಲ’ ಪಡೆಯುತ್ತಿದ್ದ ಹೋರಾಟವನ್ನು ಮತಾತೀತ ಪ್ರಗತಿಪರ ನೆಲೆಗೆ ಒಯ್ದು, ಅದನ್ನು ಸರ್ವಜನಾಂಗಗಳ ಹೋರಾಟವನ್ನಾಗಿ ಮಾಡಿದ ಗಾಂಧಿಯವರ ಪ್ರಯತ್ನವನ್ನು ಆಗಿನಿಂದಲೂ ವಿರೋಧಿಸಿಕೊಂಡು ಬಂದ ಜನ, ಈಗ ಅದಕ್ಕಾಗಿ ಗಾಂಧಿಯವರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನವೂ ಆಗಿದೆ.

ಪೊಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ‘ಬುದ್ಧ ನಸುನಕ್ಕ’ ಎಂಬ ಹೆಸರಿಟ್ಟು, ಹಿಂದೂ ಧರ್ಮವನ್ನು ವೈಚಾರಿಕಗೊಳಿಸಲು ಯತ್ನಿಸಿದ ಬುದ್ಧನನ್ನು ಅಣಕಿಸಿದ ನಂತರ, ಹಿಂದೂ ಧರ್ಮದಲ್ಲಿನ ಅಸಮಾನತೆಗಳನ್ನು ಪ್ರತಿಭಟಿಸಿ ಬೌದ್ಧರಾಗಿ ಪರಿವರ್ತನೆಗೊಂಡ ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನವನ್ನೇ (ಡಿ. 6) ಬಾಬರಿ ಮಸೀದಿ ಉರುಳಿಸುವ ಧಾರ್ಮಿಕ ಅನಾಚಾರಕ್ಕಾಗಿ ಆರಿಸಿಕೊಂಡು ಅಂಬೇಡ್ಕರ್‌ ಅವರನ್ನು ಅಣಕಿಸಿದ ನಂತರ, ಈಗ ಮಹಾತ್ಮ ಗಾಂಧಿಯವರ 150ನೇ ಹುಟ್ಟು ವರ್ಷದಲ್ಲಿ, ಭಾರತದ ಜನಸಮುದಾಯದ ಮಧ್ಯೆ ಗಾಂಧಿ ರೂಢಿಸಿದ ಮತಾತೀತ ಆಧ್ಯಾತ್ಮಿಕತೆಯ ಉನ್ನತ ಮೌಲ್ಯಗಳ ಬುಡಕ್ಕೇ ಕೈಹಾಕುವ ಮೂಲಕ, ಅವರ ನೆನಪಿಗೆ ಅಪಚಾರ ಮಾಡಹೊರಟಿರುವುದೇ ಆಗಿದೆ.

ಈ ಸರ್ಕಾರವು ಬುದ್ಧ, ಅಂಬೇಡ್ಕರ್, ಗಾಂಧಿಯವರ ಆಲೋಚನೆಗಳನ್ನು ನಾಶ ಮಾಡುತ್ತಿರುವಾಗಲೇ ಅವರ ನಾಮಸ್ಮರಣೆಯನ್ನೂ ಮಾಡುವ ನಡೆಯ ಹಿಂದಿರುವ ಕಾರಣವೆಂದರೆ, ಬದಲಾವಣೆಯನ್ನು ಬುಡಮೇಲು ಕೃತ್ಯವೆಂದು ಜನ ಗ್ರಹಿಸಬಾರದೆಂಬ ಎಚ್ಚರ ಮತ್ತು ಜನ ಈ ಬದಲಾವಣೆಯನ್ನು ಅನುಮೋದಿಸಿರುವ ಬಗ್ಗೆ ಅದಕ್ಕೇ ಇರುವ ಅನುಮಾನ.

ನಾವು ಮುಖ್ಯವಾಗಿ ನೆನಪಿಡಬೇಕಾದ ಸಂಗತಿ ಎಂದರೆ, ಬುದ್ಧ, ಗಾಂಧಿ ಮತ್ತು ಅಂಬೇಡ್ಕರ್ ಮೂವರೂ ಹಿಂದೂ ಎಂದು ಕರೆಯಲಾಗುವ ಒಂದು ಒಕ್ಕೂಟ ಧರ್ಮವನ್ನು ಒಂದು ನಿರ್ದಿಷ್ಟ ದೈವಶಾಸ್ತ್ರೀಯವಾದ ಕೇಂದ್ರಕ್ಕೆ ಕಟ್ಟುಹಾಕಿ ಅದನ್ನು ಏಕರೂಪಿ, ಏಕಾಧಿಕಾರದ ಧರ್ಮವನ್ನಾಗಿ ಮಾಡುವ ಪ್ರಯತ್ನಗಳಿಂದ ಪಾರು ಮಾಡಲು ತಮ್ಮದೇ ರೀತಿಗಳಲ್ಲಿ ಯತ್ನಿಸಿದವರು. ಅದನ್ನೊಪ್ಪದ ಸಾಮಾಜಿಕ ವರ್ಗವೊಂದು ಆ ಕಾಲದಿಂದಲೂ ತನ್ನ ಕುಟಿಲ ರಾಜಕಾರಣವನ್ನು ನಡೆಸುತ್ತಲೇ ಬಂದಿದೆ. ಹಾಗಾಗಿ ಈ ವರ್ಗದ ರಾಜಕೀಯ ವಾರಸುದಾರನಾದ ಬಿಜೆಪಿ, ಈಗ ಆಧುನಿಕ ರಾಷ್ಟ್ರ ವ್ಯವಸ್ಥೆಯಲ್ಲಿ ಅಧಿಕಾರ ಪಡೆದು, ಮತ್ತೆ ಅಂತಹ ರಾಜಕಾರಣಕ್ಕೆ ಕೈಹಾಕಿದೆ. ಆದರೆ ಅದು ಅಧಿಕಾರ ಪಡೆದಿರುವುದು ಮತದ ಸರ್ವಾಧಿಕಾರವನ್ನು ತಿರಸ್ಕರಿಸಿರುವ ಮತಾತೀತ ರಾಷ್ಟ್ರ ಕಲ್ಪನೆಯ ಪ್ರಜಾಪ್ರಭುತ್ವದ ವಿಧಿ ವಿಧಾನಗಳನ್ನು ಬಳಸಿಕೊಂಡು ಎಂಬುದನ್ನು ಮರೆತಿದೆ. ಇದು ಉಂಡ ಮನೆಗೇ ಕನ್ನ ಹಾಕುವ ಪ್ರಯತ್ನ.

ಈ ಪ್ರಯತ್ನದ ಧೂರ್ತತನವನ್ನು ಮರೆಮಾಚಲು ಸರ್ಕಾರವು ಕಾಂಗ್ರೆಸ್‌ ಮಾಡಿದ ರಾಷ್ಟ್ರ ವಿಭಜನೆ, ಮತಾಧಾರಿತ ರಾಷ್ಟ್ರಗಳ ನೆರೆಹೊರೆ ಮತ್ತು ಮತೀಯ ದೌರ್ಜನ್ಯಗಳೆಂಬ ಭಾವನಾತ್ಮಕ ಸಂಗತಿಗಳ ಸುತ್ತ ಕಥೆಗಳನ್ನು ಕಟ್ಟುತ್ತಿದೆ. ಇಂದಿನ ಸರ್ಕಾರದ ಅಸ್ತಿತ್ವಕ್ಕೂ ಕಾರಣವಾಗಿರುವ ನಮ್ಮ ರಾಷ್ಟ್ರದ ಕಲ್ಪನೆ ಮೂಡಿದ್ದು ನಮ್ಮ ಸ್ವಾತಂತ್ರ್ಯ ಅಥವಾ ರಾಷ್ಟೀಯ ಹೋರಾಟದ ಮೂಸೆಯಲ್ಲಿ ರೂಪುಗೊಂಡ ಮೌಲ್ಯಗಳಿಂದ. ಈ ಹೋರಾಟ ಮತ್ತು ಮೌಲ್ಯಗಳಿಂದ ತನ್ನನ್ನು ದೂರವಿರಿಸಿಕೊಂಡಿದ್ದಲ್ಲದೆ ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಜನ, ಈಗ ಆ ಹೋರಾಟ ಮತ್ತು ಮೌಲ್ಯಗಳ ಮರುಪರಿಶೀಲನೆಗೆ ಮತ್ತು ಆ ಮೂಲಕ ರಾಷ್ಟ್ರದ ಕಲ್ಪನೆಯ ರಿಪೇರಿ ಕಾರ್ಯಕ್ಕೆ ಹೊರಟಿರುವುದು ಒಂದು ಧೂರ್ತ ಕೆಲಸವೇ ಆಗಿದೆ.

ಈ ಜನ ಅಂದು ಪ್ರತಿಪಾದಿಸಿದ ಮೌಲ್ಯಗಳನ್ನೆಲ್ಲ ಧಿಕ್ಕರಿಸಿ, ಈ ರಾಷ್ಟ್ರದ ಕಲ್ಪನೆಯನ್ನು ಒಪ್ಪಿ, ಈಗ 70 ವರ್ಷಗಳ ಕಾಲ ಮುನ್ನಡೆದಿದ್ದಾರೆ. ಈ ಮುನ್ನಡೆಯ ಲಾಭ ಪಡೆದು ಅಧಿಕಾರಕ್ಕೆ ಬಂದಿರುವವರು, ಈಗ ಆ ಅದೇ ತಿರಸ್ಕೃತ ರಾಷ್ಟ್ರ ಕಲ್ಪನೆ ಮತ್ತು ಮೌಲ್ಯಗಳನ್ನು ಸ್ಥಾಪಿಸಲು ನಡೆಸಿರುವ ಪ್ರಯತ್ನ ಧೂರ್ತತನ
ವೆನ್ನಿಸದೆ ಇನ್ನೇನೆನಿಸಿಕೊಂಡೀತು? ಇದನ್ನು ನ್ಯಾಯಯುತ ಎಂಬಂತೆ ಬಿಂಬಿಸಲು ಇದು, ಸ್ವಾತಂತ್ರ್ಯ ಹೋರಾಟವೂ ಸೇರಿದಂತೆ ನಮ್ಮ ಇತಿಹಾಸದ ಬಗ್ಗೆ ಅರ್ಧ ಸತ್ಯಗಳ ರೂಪದಲ್ಲಿ ಎಷ್ಟೊಂದು ಸುಳ್ಳುಗಳನ್ನು ಹೇಳುತ್ತಿದೆ.

ಅದೇನೇ ಇರಲಿ, ಇಂದು ಪೌರತ್ವ ತಿದ್ದುಪಡಿ ಮಸೂದೆಯ ಹಿನ್ನೆಲೆಯಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು, ಹಿಂದೂಗಳೆಂದು ಗುರುತಿಸಲ್ಪಡುವ ನಾವೆಲ್ಲರೂ ನಮ್ಮ ಘನತೆ ಮತ್ತು ಹೆಮ್ಮೆಗೆ ಕಾರಣವಾಗಿರುವ, ಬುದ್ಧನಿಂದ ಗಾಂಧಿ ಸೇರಿದಂತೆ ಅಂಬೇಡ್ಕರ್‌ವರೆಗಿನ ಕಬೀರ, ತುಕಾರಾಮ, ಕನಕ-ಪುರಂದರ, ಪರಮಹಂಸ- ವಿವೇಕಾನಂದ- ರಮಣ- ನಾರಾಯಣ ಗುರುಗಳಂತಹ ಸಾಧು ಸಂತರು ತಂತಮ್ಮ ಆಧ್ಯಾತ್ಮಿಕ ನುಡಿಗಟ್ಟುಗಳ ಮೂಲಕ ಎತ್ತಿ ಹಿಡಿದ ಈ ಧರ್ಮದ ಕೇಂದ್ರಶಕ್ತಿಯಾದ ಮತಾತೀತ ಗುಣದ ಮೇಲೆ ವ್ಯವಸ್ಥಿತ ದಾಳಿ ನಡೆದಿದೆ ಎಂಬುದನ್ನು. ಈ ದಾಳಿಯು ಪೌರತ್ವ ತಿದ್ದುಪಡಿ ಮಸೂದೆಯೊಂದಿಗೆ ಆರಂಭವಾಗಿದೆಯಷ್ಟೆ. ಹಾಗಾಗಿ ಈ ದಾಳಿಯನ್ನು ಜನಾಭಿಪ್ರಾಯ ರೂಪಿಸಲು, ನ್ಯಾಯಾಂಗ ಹೋರಾಟದ ನೆಲೆಯಲ್ಲೂ ಎದುರಿಸಲು ಎಷ್ಟರಮಟ್ಟಿಗೆ ಸಿದ್ಧರಾಗಿದ್ದೇವೆ ಎಂಬುದನ್ನು ಇಂದು ಆಲೋಚಿಸಬೇಕಿದೆ. ಸ್ವಧರ್ಮೇ ನಿಧನಂ ಶ್ರೇಯಃ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT