ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬುದ್ಧ ಆಡಳಿತದ ಲಕ್ಷಣ ಇದಲ್ಲ!

ಶಿಕ್ಷಣದ ಗುಣಮಟ್ಟ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದಂತೆ ‘ಜನಪ್ರಿಯ’ ನಿರ್ಧಾರ ತೆಗೆದುಕೊಳ್ಳುವುದರ ಬದಲು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ
Last Updated 7 ಜನವರಿ 2019, 20:15 IST
ಅಕ್ಷರ ಗಾತ್ರ

ಧಾರವಾಡದಲ್ಲಿ ನಡೆದ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳು ಮತ್ತು ಶಿಕ್ಷಣ ಮಾಧ್ಯಮದ ಬಗ್ಗೆ ಆಡಿರುವ ಮಾತುಗಳು ಹಲವು ಕಾರಣಗಳಿಂದ ಕುತೂಹಲ ಕೆರಳಿಸುವಂತಿವೆ. ಅವರು, ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಅಧ್ಯಕ್ಷ ಭಾಷಣದಲ್ಲಿ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ಕೊಟ್ಟಿರುವ ಕರೆಯಲ್ಲಿರುವ ಸರ್ಕಾರಿ ಶಾಲೆಗಳು ಮತ್ತು ಕನ್ನಡ ನುಡಿ ನಡುವೆ ಇರುವ ಸಂಬಂಧದ ಮಾತುಗಳ ಸೂಕ್ಷ್ಮವನ್ನು ಅರಿಯದೆ ಶಿಕ್ಷಣ ಗುಣಮಟ್ಟದ ಬಗ್ಗೆ ಬಹು ಸ್ಥೂಲವಾಗಿ ಮಾತಾಡಿ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವ
ರ್ತಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳಹೊರಟಿದ್ದಾರೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿನ ಮೂಲಸೌಲಭ್ಯಗಳ ಕೊರತೆಯ ಬಗ್ಗೆ ಕಂಬಾರರು ಆಡಿರುವ ಮಾತನ್ನು ಸರಿಯಾಗಿ ಗ್ರಹಿಸದೆ, ಇಂಥ ಕಳಪೆ ಶಾಲೆಗಳಿರಲು ತಮ್ಮ ಮೈತ್ರಿ ಸರ್ಕಾರ ಕಾರಣವೇ ಎಂಬ ಬಾಲಿಶ ಪ್ರಶ್ನೆಯನ್ನು ಕೇಳುತ್ತಾ, ತಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಬಡಬಗ್ಗರು ಖಾಸಗಿ ಇಂಗ್ಲಿಷ್ ಶಾಲೆಗಳ ಕಡೆ ಮುಖ ಮಾಡುತ್ತಿದ್ದಾರೆ ಎಂಬ ವಾದವನ್ನು ಮಂಡಿಸಿದ್ದಾರೆ.

ಈ ತರ್ಕದ ಮುಂದುವರಿಕೆಯಾಗಿ ಅವರು, ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ತಮ್ಮ ಸರ್ಕಾರ ರಕ್ಷಿಸಹೊರಟಿದೆ ಎಂದಿದ್ದಾರೆ. ಇದು ದಾರಿ ತಪ್ಪಿಸುವ ತರ್ಕವಾಗಿದ್ದು ಇದನ್ನು ಮುಖ್ಯಮಂತ್ರಿ ಬಳಸಿರುವುದು ವಿಷಾದಕರ.

ಒಬ್ಬ ಮುಖ್ಯಮಂತ್ರಿ ನಾಡು- ನುಡಿ ಮತ್ತು ಶಿಕ್ಷಣದ ವಿಷಯಗಳಲ್ಲಿ ತಾನು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಏನಾಯಿತೋ ಅದಕ್ಕೆ ತಾನು ಹೊಣೆಯಲ್ಲವೆಂದು ಹೇಳುತ್ತಾ ಈಗ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನುಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವುದೇ ತನ್ನ ಕರ್ತವ್ಯವಾಗಿದೆ ಎಂದು ವಾದಿಸುವುದು ಆಡಳಿತ ಪ್ರಬುದ್ಧತೆಯ ಲಕ್ಷಣವಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಒಂದೇ ಕಾರಣವಿರಲಾರದು. ಆ ಕಾರಣ ಶಿಕ್ಷಣ ಮಾಧ್ಯಮವಾಗಿರಬಹುದು, ಆ ಶಾಲೆಗಳಲ್ಲಿನ ಸೌಲಭ್ಯಗಳ ಕೊರತೆಯದ್ದಾಗಿರಬಹುದು ಅಥವಾ ಅಲ್ಲಿ ಒದಗಿಸಲಾಗುತ್ತಿರುವ ಶಿಕ್ಷಣದ ಗುಣಮಟ್ಟವೂ ಇರಬಹುದು. ಈ ಸಂಕೀರ್ಣ ಪರಿಸ್ಥಿತಿಯನ್ನು ಅರಿಯದೆ, ಬಡವರ್ಗದ ಪೋಷಕರ ಬಗ್ಗೆ ಸಹಾನೂಭೂತಿಯ ಭಾವನಾತ್ಮಕ ವಾದವನ್ನು ಮಂಡಿಸುತ್ತಾ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದು ಉಚಿತವಲ್ಲ. ಅವರು, ಕಂಬಾರರು ಆಡಿರುವ ‘ಶಿಕ್ಷಣ ಮಾಧ್ಯಮವಾಗಿ ಕನ್ನಡಕ್ಕೆ ಒದಗಿರುವ ಕುತ್ತು ಒಟ್ಟಾರೆ ಕನ್ನಡ ನುಡಿ- ಸಂಸ್ಕೃತಿಗೇ ಒದಗಿರುವ ದೊಡ್ಡ ಕುತ್ತಾಗಿದೆ’ ಎಂಬ ಮಾತುಗಳನ್ನೇ ಅರಿಯದೆ ತಾವು ಕನ್ನಡ ನುಡಿಯ ರಕ್ಷಣೆಗೆ ಕಂಕಣಬದ್ಧನಾಗಿರುವೆ ಎಂದು ಹೇಳುವುದು ಅಸಂಬದ್ಧವಾಗಿ ಕೇಳಿಸುತ್ತದೆ.

ಶಾಲಾ ಶಿಕ್ಷಣದ ಗುಣಮಟ್ಟದ ಬಗ್ಗೆ ಮುಖ್ಯಮಂತ್ರಿ ಮಾತಾಡುವಾಗ ಅವರ ಮನಸ್ಸಿನಲ್ಲಿ ಇಂಗ್ಲಿಷ್ ಶಿಕ್ಷಣ ಮಾಧ್ಯಮವೊಂದೇ ಆ ಗುಣಮಟ್ಟವನ್ನು ನಿರ್ಧರಿಸುತ್ತದೆ ಎಂಬ ವಿಚಾರವಿದ್ದಂತಿದೆ. ಹಾಗಾಗಿಯೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡಿ ಒಂದಿಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಬಿಟ್ಟರೆ ಈ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಿಸಿಬಿಟ್ಟು ನಾಡಿನ ಮಕ್ಕಳೂ ಈ ಶಾಲೆಗಳ ಕಡೆ ಮುಖಮಾಡತೊಡಗುತ್ತಾರೆ ಎಂಬುದು ಅವರ ಸರಳ ತರ್ಕವಿದ್ದಂತೆ ಕಾಣುತ್ತದೆ. ಆದರೆ ಶಿಕ್ಷಣ ಎನ್ನುವುದು ಒಂದು ನಾಡು ಎಂತಹ ಮಾನವ ಸಂಪನ್ಮೂಲಗಳ ಅಭಿವೃದ್ಧಿಯ ಮೂಲಕ ಎಂತಹ ನಾಡನ್ನು ಕಟ್ಟಬೇಕೆಂಬ ಆದರ್ಶಕ್ಕೆ ಸಂಬಂಧಿಸಿದ ದೊಡ್ಡ ವಿಷಯ. ಹಾಗಾಗಿ ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಣ ಮಾಧ್ಯಮದಂತಹ ವಿಷಯಗಳಿಗೆ ಸಂಬಂಧಿಸಿದಂತೆ ರಾಜಕೀಯವಾಗಿ ಜನಪ್ರಿಯ ವಾದ ನಿರ್ಧಾರ ತೆಗೆದುಕೊಳ್ಳುವುದನ್ನು ಬಿಟ್ಟು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುವುದು ಪ್ರಬುದ್ಧ ಆಡಳಿತಗಾರನೊಬ್ಬನ ಲಕ್ಷಣವಾಗಿರಬೇಕು.
-ಡಿ.ಎಸ್. ನಾಗಭೂಷಣ, ಶಿವಮೊಗ್ಗ

***
ಅಷ್ಟು ಸರಳ ಅಲ್ಲ
ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣದ ಪ್ರಸ್ತಾಪವನ್ನು ಕಂಬಾರರು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಮಾಡಿದ್ದಾರೆ. ‘ಜನರು ಬಯಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಷೇಧಿಸಲು ಸಿದ್ಧ’ ಎಂದು ಮುಖ್ಯಮಂತ್ರಿ ಅವರೂ ಹೇಳಿದ್ದಾರೆ. ಆದರೆ ಸಮ್ಮೇಳನದಲ್ಲಿ ನಿರ್ಣಯ ಮಾಡಿ, ರಾಜ್ಯ ಸರ್ಕಾರ ಆಜ್ಞೆ ಹೊರಡಿಸುವಷ್ಟು ಸರಳ ಕಾರ್ಯ ಇದಲ್ಲ. ಐದನೆಯ ತರಗತಿಯಿಂದ ಮಾಧ್ಯಮದ ಆಯ್ಕೆಯನ್ನು ವಿದ್ಯಾರ್ಥಿಯ (ಅಂದರೆ ಪಾಲಕರ) ನಿರ್ಧಾರಕ್ಕೆ ಬಿಟ್ಟುಬಿಡಿ ಎಂಬುದರ ಬಗೆಗೇ ಸಹಮತವಿಲ್ಲ. ಹಿಂದಿನ ಕಾನೂನಾತ್ಮಕ ಸೋಲು ಮರೆಯಬೇಕೇ?

ವಿಜ್ಞಾನವನ್ನು ಗ್ರಹಿಸಲು ಇಂಗ್ಲಿಷ್‌ ಬೇಕು. ಭಾರತೀಯ ಸಂಸ್ಕೃತಿಯ ಬಗೆಗೆ ತಿಳಿದುಕೊಳ್ಳಬೇಕೆಂದರೆ ಇತರ ಭಾಷೆಗಳ ಸ್ವಲ್ಪಮಟ್ಟಿನ ಪರಿಚಯವಾದರೂ ಇರಬೇಕು. ಕಂಬಾರರಲ್ಲಿ ಮೇಲರಿಮೆ, ಮುಖ್ಯಮಂತ್ರಿಯಲ್ಲಿ (ಇಂಗ್ಲಿಷ್ ಸರಿಯಾಗಿ ಬಾರದೆಂದು) ಕೀಳರಿಮೆ! ಶಿವರಾಮ ಕಾರಂತರ ಮನೆಯಲ್ಲಿ ಇಂಗ್ಲಿಷ್‌ ಎನ್‌ಸೈಕ್ಲೊಪಿಡಿಯಾಗಳೇ ಹೆಚ್ಚಾಗಿದ್ದವು; ಕುವೆಂಪು ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿದ್ದು, ಮೊದಲು ಅದರಲ್ಲೇ ಬರೆಯಲು ನಿರ್ಧರಿಸಿದ್ದರಲ್ಲವೆ? ಇಬ್ಬರೂ ಕನ್ನಡದಲ್ಲಿ ಗಣನೀಯ ಕೆಲಸ ಮಾಡಿದ್ದನ್ನು ಮರೆಯಲಾದೀತೇ?
-ಎಚ್.ಎಸ್. ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT