ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಕನ್ನಡದಲ್ಲಿ ವಿಜ್ಞಾನ- ಅಳಿಯಲಿ ಅಜ್ಞಾನ

Last Updated 2 ನವೆಂಬರ್ 2022, 19:45 IST
ಅಕ್ಷರ ಗಾತ್ರ

‘ಎರಡು ಲೋಟ ನೀರಿಗೆ ತಲೆ ಒಡೆದು ಒಂದು ಲೋಟ ಅಕ್ಕಿ ಹಾಕು...’, ‘ಉಗುರು ಬೆಚ್ಚಗಿನ ಹಾಲಿಗೆ ತೊಟ್ಟು ಮೊಸರು ಹೆಪ್ಪಿಗೆ ಸಾಕು’, ‘ಒಂದೆಳೆ ಪಾಕ ಬಂದ್ರಾಯ್ತು’... ಅಡುಗೆಗೆ ಸಂಬಂಧಿಸಿದಂತೆ ಮಗಳಿಗೆ ತಾಯಿಯ ಇಂತಹ ನಿರ್ದೇಶನಗಳು ಓಬಿರಾಯವ ಕಾಲಕ್ಕೇನೂ ಸರಿದಿಲ್ಲ. ಪುಸ್ತಕದ ಓದಿಗೂ ಮೀರಿ ಬದುಕನ್ನು ಹಸನಾಗಿಸುವುದು ನಮ್ಮ ಪರಂಪರಾಗತ ಅನುಭವಗಳೇ.

ವಿಜ್ಞಾನವು ಸಂಶೋಧನಾಲಯಗಳ, ವಿಶ್ವವಿದ್ಯಾಲಯಗಳ ದಂತಗೋಪುರದಲ್ಲಿ ಉಳಿದರೆ ಅದು ಜನಸಾಮಾನ್ಯರಿಗೆ ನಿಲುಕುವುದು ಹೇಗೆ? ವಿಜ್ಞಾನದ ಮುನ್ನಡೆಯ ಕೆಲ ಅಂಶಗಳನ್ನಾದರೂ ಆಡುನುಡಿಯಲ್ಲೇ ಜನರಿಗೆ ಪರಿಚಯಿಸಬೇಕಿದೆ.

ನಾವು ಇಷ್ಟಪಡಲಿ, ಪಡದಿರಲಿ ವಿಜ್ಞಾನ ಸಾಹಿತ್ಯ ಇಂಗ್ಲಿಷಿನಲ್ಲೇ ವಿಪುಲ, ಅಲ್ಲಿಂದಲೇ ಅದು ಜಗತ್ತಿನ ಉಳಿದ ಭಾಷೆಗಳಿಗೆ ಬರಬೇಕು. ಇತಿಹಾಸದಲ್ಲಿ ಮೇಧಾವಿಗಳು ಮಾತೃಭಾಷೆಗೆ ನಿಷ್ಠರಾಗಿದ್ದರು. ಅವರೆಲ್ಲ ತಂತಮ್ಮ ಮಾತೃಭಾಷೆಯಲ್ಲೇ ಆಲೋಚಿಸಿ ಮಾತೃಭಾಷೆಯಲ್ಲೇ ಬರೆದರು. ಚಿಂತನೆಗೆ ಒಂದು ಭಾಷೆ, ಬರವಣಿಗೆಗೆ ಇನ್ನೊಂದು ಆದರೆ ರಚಿಸುವ ಕೃತಿಗೆ, ಮಂಡಿಸುವ ವಿಚಾರಕ್ಕೆ ಹೇಗೆ ತಾನೆ ನ್ಯಾಯ ಒದಗೀತು? ಈ ತರ್ಕ ಎಲ್ಲ ಜ್ಞಾನಶಾಖೆಗಳಿಗೂ ಅನ್ವಯಿಸುತ್ತದೆ. ಅರಿಸ್ಟಾಟಲ್, ಪ್ಲೇಟೊ, ಯೂಕ್ಲಿಡ್ ಗ್ರೀಕ್ ಭಾಷೆಯಲ್ಲೇ ಗ್ರಂಥಗಳನ್ನು ರಚಿಸಿದರು. ನಂತರ ಅವರ ಅನುಯಾಯಿಗಳು ಅವನ್ನು ಅರೇಬಿಕ್‍ಗೆ ಭಾಷಾಂತರಿಸಿದರು.

ಆರ್ಕಿಮಿಡೀಸ್ ಸ್ನಾನದ ತೊಟ್ಟಿಯಿಂದ ಓಡುತ್ತ ಉದ್ಗರಿಸಿದ ಪದ ‘ಯುರೇಕಾ’ (ಕಂಡುಹಿಡಿದೆ) ಗ್ರೀಕ್ ಭಾಷೆಯದು. ಎಷ್ಟೇ ಭಾಷೆಗಳನ್ನು ಕಲಿತರೂ ಆವೇಗ, ಉದ್ವೇಗಗಳು ಹೊರಹೊಮ್ಮುವುದು ಮಾತೃಭಾಷೆಯ ಮೂಲಕವೇ ಎನ್ನಲು ಈ ಉದಾಹರಣೆಯೇ ಸಾಕು!

ನ್ಯೂಟನ್ ತನ್ನ ‘ಪ್ರಿನ್ಸಿಪಿಯ’ ಗ್ರಂಥವನ್ನು ಬರೆದಿದ್ದು ಲ್ಯಾಟಿನ್ ಭಾಷೆಯಲ್ಲಿ. ಫ್ರಾನ್ಸ್ ದೇಶದ ಗಣಿತ
ಶ್ರೇಷ್ಠರೆಲ್ಲ ಗಣಿತ ಕೃಷಿ ನಡೆಸಿದ್ದು ಫ್ರೆಂಚ್ ಭಾಷೆಯಲ್ಲಿ. ಹೀಗೆ ಅಭಿವ್ಯಕ್ತಿಗೆ ಮಾತೃಭಾಷೆಗೆ ಪರ್ಯಾಯವಾದ ಭಾಷೆಯನ್ನು ಊಹಿಸಿಕೊಳ್ಳಲೂ ಆಗದು.

ಭಾರತದಲ್ಲಿ ಆಯಾ ಪ್ರಾಂತ ಭಾಷೆಯಲ್ಲಿ ವಿಜ್ಞಾನ ಜನಪ್ರಿಯವಾಗಬೇಕು. ವಿಜ್ಞಾನ, ತಂತ್ರಜ್ಞಾನಕ್ಕೆ
ಸಂಬಂಧಿಸಿದ ಮಾಹಿತಿ ಕನ್ನಡದಲ್ಲಿದ್ದರೆ ಜನಸಮೂಹಕ್ಕೆ ಸರಾಗ, ಪ್ರಯೋಜನಕರ. ಇಂಗ್ಲಿಷ್ ಅಥವಾ ಮತ್ತ್ಯಾವುದೇ ಭಾಷೆಯಲ್ಲಿರುವ ಅರಿವನ್ನು ಕನ್ನಡಕ್ಕೆ ತಂದುಕೊಳ್ಳುವುದು ಬಹು ಸೂಕ್ಷ್ಮದ ಕೆಲಸ. ಬರವಣಿಗೆಗಾರರ ಹೊಣೆ ದೊಡ್ಡದು. ಇಂಗ್ಲಿಷಿನಲ್ಲಿರುವ ಅಂಶಗಳನ್ನು ಸಮರ್ಥವಾಗಿ ಗ್ರಹಿಸಿ ಕನ್ನಡದಲ್ಲಿ ಯೋಚಿಸಿ ಬರೆಯಬೇಕು. ಈ ದಿಸೆಯಲ್ಲಿ ಕನ್ನಡದಲ್ಲಿ ಸರಿಹೊಂದುವ ಪಾರಿಭಾಷಿಕ ಪದಗಳು ದುರ್ಲಭ, ನಿರೂಪಣೆ ಕಷ್ಟ, ತಕ್ಕ ಅರ್ಥಾನ್ವಯಗಳು ಕಷ್ಟಸಾಧ್ಯ ಎಂಬಂಥ ಅಸಹಾಯಕತೆ, ಅಪಸ್ವರಗಳುಂಟು. ಸಾವಧಾನದಿಂದ ವಿವೇಚಿಸಿದರೆ ಇವು ಭೇದಿಸಲಾಗದ ಅಡೆತಡೆಗಳೇನೂ ಅಲ್ಲ.

ವಿಜ್ಞಾನ- ತಂತ್ರಜ್ಞಾನ ನಿಘಂಟುಗಳು ದಶಕಗಳ ಹಿಂದೆಯೇ ಪ್ರಕಟಗೊಂಡಿವೆ. ಕೆಲವು ಇಂಗ್ಲಿಷ್ ಪದಗಳು ಬಹು ತಾಂತ್ರಿಕವೆನ್ನಿಸಿದರೆ ಹಾಗೆಯೇ ಬಳಸಬಹುದು. 5-12ನೇ ಶತಮಾನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಆಗ್ನೇಯ ಏಷ್ಯಾದಲ್ಲಿ ಆಂಗ್ಲೊಸ್ಯಾಕ್ಸನ್ನರು ಎಂಬ ಜನಸಮುದಾಯವಿತ್ತು. ಅವರ ಭಾಷೆ ‘ಆಂಗ್ಲೊ ಸ್ಯಾಕ್ಸನ್’ ಎಂದು ಕರೆಯಬಹುದಾದ ಹಳೇ ಇಂಗ್ಲಿಷ್. ಪ್ರಸ್ತುತ ಇಂಗ್ಲಿಷ್ ಭಾಷೆಯಲ್ಲಿರುವ ಅನೇಕ ಪದಗಳು ಆಂಗ್ಲೊ ಸ್ಯಾಕ್ಸನ್‌ ಆಗಿವೆ.

ನಮಗೆ ಪಿ.ಯು.ಸಿ.ಯಲ್ಲಿ ಗಣಿತ ಕಲಿಸುತ್ತಿದ್ದ ಉಪನ್ಯಾಸಕರೊಬ್ಬರು ವೃತ್ತದ ವಿವರಣೆಯನ್ನು ವಿಶಿಷ್ಟವಾಗಿ ನೀಡುತ್ತಿದ್ದರು: ನೋಡಿ, ಒಂದು ಸ್ಥಿರ ಬಿಂದು ಇದೆ. ಚಲಿಸುವ ಇನ್ನೊಂದಕ್ಕೆ ಅದು ನೀನೆಲ್ಲೇ ಇರು, ಹೇಗೇ ಇರು ನನ್ನಿಂದ ಒಂದೇ ದೂರದಲ್ಲಿರು ಎನ್ನುತ್ತದೆ’. ಬೆಳಕಿನ ಪ್ರಯಾಣಕ್ಕೆ ಯಾವ ಮಾಧ್ಯಮವೂ ಬೇಡ. ಅದು ಕಣವೂ ನಿಜ, ಅಲೆಯೂ ನಿಜ. ‘ಕಣಲೆ’ ಎಂಬ ಸುಂದರ ಹೆಸರು ಬೆಳಕಿಗೆ ಬಂದಿತು. ಇಂತಹ ಪದ ಪ್ರಯೋಗಗಳು ಕನ್ನಡ ವಿಜ್ಞಾನ ಸಂವಹನವನ್ನು ಶಕ್ತಿಯುತಗೊಳಿಸುತ್ತವೆ. ವಿಜ್ಞಾನ ಸಾಕ್ಷರತೆಯಿಂದ ಮೌಢ್ಯ, ಅಂಧಶ್ರದ್ಧೆ ನಿವಾರಣೆಯಾಗಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಯುತ್ತವೆ. ಮಳೆ, ಭೂಕಂಪ, ಸುನಾಮಿ, ಅಗ್ನಿಪರ್ವತ, ಗ್ರಹಣ, ಧೂಮಕೇತು ಅಂತಹವು ಕಾರ್ಯಕಾರಣ ಸಂಬಂಧಿತ ವಿದ್ಯಮಾನಗಳೇ ವಿನಾ ಪವಾಡಗಳಲ್ಲ ಎಂಬ ತಥ್ಯ ಮನವರಿಕೆಯಾಗುತ್ತದೆ.

ಯಾವುದೇ ಭಾಷೆಯಲ್ಲಿರುವ ವಿಜ್ಞಾನವನ್ನು ಕನ್ನಡದ ವಾತಾವರಣಕ್ಕೆ ಆವಾಹಿಸಿಕೊಳ್ಳಬಹುದು. 1604ರಲ್ಲಿ ಶೃಂಗೇರಿಯ ಶಂಕರನಾರಾಯಣ ಜೋಯಿಸರು 'ಗಣಿತಗನ್ನಡಿ’ ಎಂಬ ಕೃತಿ ರಚಿಸಿದರು. ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ಭಾಷೆಯ ಈ ಕೃತಿ ‘ನಂದಿನಾಗರಿ’ ಎಂಬ ಭಾಷೆಯಲ್ಲಿದ್ದು ಖಗೋಳ ವಿಜ್ಞಾನವನ್ನು ಕುರಿತದ್ದಾಗಿದೆ.

ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಕಲಿತರೆ ಮುಂದೆ ಎಂಜಿನಿಯರಿಂಗ್, ವೈದ್ಯಕೀಯ ವ್ಯಾಸಂಗ ಹೇಗೋ ಏನೋ ಎನ್ನುವ ವಿದ್ಯಾರ್ಥಿಗಳ (ಅವರಿಗೂ ಹೆಚ್ಚಾಗಿ ಅವರ ಪೋಷಕರ!) ಆತಂಕ ಅರ್ಥಹೀನ. ಏಕೆಂದರೆ ಆ ಹಂತದ ವೇಳೆಗೆ ತಕ್ಕಮಟ್ಟಿಗೆ ಅವರಲ್ಲಿ ಕನ್ನಡವೇ ಸೇತುವೆಯಾಗಿ ಇಂಗ್ಲಿಷ್ ಭಾಷೆಯ ಪರಿಶ್ರಮ ರೂಪುಗೊಂಡಿರುತ್ತದೆ. ಅವರು ಪರಾಮರ್ಶನದ ಮನಃಸ್ಥಿತಿ ರೂಢಿಸಿಕೊಂಡೇ ಇರುತ್ತಾರೆ.

ಅಂದಹಾಗೆ ‘ಬಾಲ ವಿಜ್ಞಾನ’, ‘ವಿಜ್ಞಾನ ಸಂಗಾತಿ’,‘ಸೂತ್ರ’ದಂಥ ವಿಜ್ಞಾನ ನಿಯತಕಾಲಿಕಗಳ ಪ್ರಸರಣ ಸಂಖ್ಯೆ ಹೆಚ್ಚಬೇಕು. ಮಾಧ್ಯಮಗಳು ಭೂತ, ಭವಿಷ್ಯಕ್ಕಿಂತ ವರ್ತಮಾನಕ್ಕೆ ಆದ್ಯತೆ ನೀಡಬೇಕು, ಜನರಲ್ಲಿ ಭಯ, ಭೀತಿಗೆ ಆಸ್ಪದ ನೀಡದೆ ನಾಳೆಯನ್ನು ಆತ್ಮವಿಶ್ವಾಸ
ದಿಂದ ಬರಮಾಡಿಕೊಳ್ಳುವ ಜಾಯಮಾನ ಬಿತ್ತಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT