ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಸುರಕ್ಷೆ; ಕಾಣದ ಕಾಳಜಿ

Last Updated 10 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ಮನೆಯಿಂದ ಕೆಲಸದ ಸ್ಥಳ ತಲುಪಲು ಪ್ರತಿದಿನ ಬಳಸುವ ರಸ್ತೆಯ ವಿಸ್ತರಣೆ ಕಾರ್ಯ ಕಳೆದ ಕೆಲ ತಿಂಗಳುಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಆ ರಸ್ತೆಗೆ ಹೊಂದಿಕೊಂಡಂತೆ ಇರುವ ಕಟ್ಟಡಗಳಲ್ಲಿ ನೆಲೆಸಿರುವವರು ಹಾಗೂ ಆ ರಸ್ತೆಯಲ್ಲಿ ಓಡಾಡುವ ಜನ, ಅಲ್ಲಿನ ದೂಳಿಗೆ ರೋಸಿ ಹೋಗುತ್ತಿದ್ದಾರೆ. ಕೆಲಸ ಚುರುಕುಗೊಳಿಸಿ ಸಾಧ್ಯವಾದಷ್ಟು ಬೇಗ ನಮ್ಮನ್ನು ಈ ದೂಳಿನ ಹಾವಳಿಯಿಂದ ಮುಕ್ತಗೊಳಿಸಿ ಎಂದು ಸಂಬಂಧಪಟ್ಟವರನ್ನು ಕೋರುತ್ತಿದ್ದಾರೆ.

ಹೇಗೋ ರಸ್ತೆ ಕಾಮಗಾರಿ ಮುಗಿದುಬಿಟ್ಟರೆ, ಆ ರಸ್ತೆ ಬಳಸುವ ನಾವೆಲ್ಲ ನಿಟ್ಟುಸಿರು ಬಿಡುತ್ತೇವೆ. ಆದರೆ, ಆ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರ ಪಾಡೇನು? ಅವರೂ ನಮ್ಮ ಹಾಗೆಯೇ ಮನುಷ್ಯರಲ್ಲವೇ ಎಂಬ ಪ್ರಶ್ನೆ ಈ ಸಮಾಜವನ್ನು ಕಾಡಿದಂತಿಲ್ಲ. ಆ ರಸ್ತೆಯ ಆಸುಪಾಸಿನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಹೊಂದಿರುವವರು ಮುಖಗವಸುಗಳ ಮೊರೆ ಹೋಗಿದ್ದರೆ, ಈ ಕಾರ್ಮಿಕರು ಮಾತ್ರ ತಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಪರಿಗಣಿಸದೆ ದೂಳನ್ನೇ ಉಸಿರಾಡುತ್ತಾ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರಷ್ಟೇ ಆಗಾಗ ಯಾವುದಾದರೂ ಬಟ್ಟೆಯಲ್ಲಿ ಮೂಗು ಮುಚ್ಚಿಕೊಳ್ಳುತ್ತಾರೆಯೇ ವಿನಾ, ಇಂತಹ ಕೆಲಸಗಳನ್ನು ನಿರ್ವಹಿಸುವಾಗ ತಾವು ಇಂಥದ್ದನ್ನೆಲ್ಲ ಕಡ್ಡಾಯವಾಗಿ ಧರಿಸಿರಲೇಬೇಕು ಎಂಬ ಎಚ್ಚರ ಅವರಲ್ಲೂ ಇರುವಂತೆ ತೋರುತ್ತಿಲ್ಲ. ಅವರಿಂದ ಕೆಲಸ ಮಾಡಿಸಿಕೊಳ್ಳುವವರದ್ದು ಎಂದಿನ ಅದೇ ಅಸಡ್ಡೆಯ ಧೋರಣೆ.

ಕಟ್ಟಡ ಕಾರ್ಮಿಕರು, ರಸ್ತೆ ನಿರ್ಮಾಣ ಕೆಲಸಗಾರರು, ರಸ್ತೆ-ಚರಂಡಿಗಳನ್ನು ಶುಚಿಗೊಳಿಸುವ ಪೌರ ಕಾರ್ಮಿಕರು, ನಗರಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿಕೊಂಡವರನ್ನು ಕೊಂಚ ಸಾವಧಾ ನದಿಂದ ಗಮನಿಸಿದರೂ ಸಾಕು, ಅವರ ಕುರಿತು ಈ ಸಮಾಜ ಅದ್ಯಾವ ಪರಿ ನಿರ್ಲಕ್ಷ್ಯ ಧೋರಣೆ ತಳೆಯುತ್ತಿದೆ ಎಂಬುದರ ಅರಿವಾಗುವುದು. ಇವರಿಂದ ಕೆಲಸ ಮಾಡಿಸಿಕೊಳ್ಳುವ ಗುತ್ತಿಗೆದಾರರು ಮತ್ತು ಅಧಿಕಾರಶಾಹಿಯ ಮೇಲೆ ಒತ್ತಡ ಹೇರಿ, ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸುವ ಹಾಗೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲೂ ಇದೆ ಎಂದು ನಮಗ್ಯಾರಿಗೂ ಅನಿಸುವುದೇ ಇಲ್ಲವೇನೊ! ಸ್ವಚ್ಛತೆ, ರಸ್ತೆ- ಕಟ್ಟಡ ನಿರ್ಮಾಣ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರ ಕುರಿತು ನಮ್ಮಲ್ಲಿ ಬೇರೂರಿರುವ ಧೋರಣೆಗೆ ನಮ್ಮ ನಡುವಿನಿಂದ ಆಗಾಗ ಹೊರ ಬೀಳುವ ‘ಅವರಿಗೆ ಅದೆಲ್ಲ ಅಡ್ಜಸ್ಟ್ ಆಗಿದೆ’, ‘ಎಷ್ಟೇ ದುಡ್ಡು ಸಿಕ್ಕರೂ ಕುಡ್ದು ಹಾಳು ಮಾಡ್ತಾರೆ’ ಎಂಬಂತಹ ಮಾತುಗಳು ಕನ್ನಡಿ ಹಿಡಿಯುತ್ತವೆ.

ಹೆಚ್ಚು ದೈಹಿಕ ಶ್ರಮ ಬೇಡುವ ಇಂತಹ ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳು ದೊರೆಯದಿರಲು, ಅಷ್ಟೇನೂ ದೈಹಿಕ ಶ್ರಮ ಬೇಡದ ‘ವೈಟ್ ಕಾಲರ್’ ಕೆಲಸಗಳನ್ನು ನಿರ್ವಹಿಸುವ ನಮ್ಮಲ್ಲಿರುವ ದುಷ್ಟ ಮನಸ್ಥಿತಿಯೇ ಕಾರಣವೆಂದರೆ ಅತಿಶಯೋಕ್ತಿ ಆಗಲಾರದೇನೊ.

ಸಮಾಜವು ಕೆಳಹಂತದ ಕೆಲಸಗಳೆಂದು ಪರಿಗಣಿಸುವ, ಅಂದಂದಿಗೆ ಸಮ ಎನಿಸುವಷ್ಟು ಹಣ ಸಂಪಾದಿಸಬಹುದಾದ ವೃತ್ತಿಗಳನ್ನು ಆಶ್ರಯಿಸುವವರನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರಗಳು ರೂಪಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ಟೀಕಿಸುವಾಗ ಬಳಸುವ ‘ಸರ್ಕಾರ ಹೀಗೆ ಬಿಟ್ಟಿಯಾಗಿ ಕೊಡ್ತಾ ಹೋದ್ರೆ ಜನ ಮೈಗಳ್ಳರಾಗುತ್ತಾರೆ’ ಎಂಬ ಅನಿಸಿಕೆ ಏನನ್ನು ಸೂಚಿಸುತ್ತದೆ? ಒಂದೆಡೆ, ಸರ್ಕಾರಿ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸದ ದಿನಗಳಿರಲಿ ಎಂಬ ಕೋರಿಕೆ ಮುಂದಿಡುತ್ತಿದ್ದರೆ, ಮತ್ತೊಂದೆಡೆ ಮೈ ದಣಿಯುವವರೆಗೂ ದುಡಿಯುವ ಜನರಿಗೆ ಗೌರವಯುತ ಬದುಕು ರೂಪಿಸಿಕೊಳ್ಳಲು ಅಗತ್ಯವಿರುವಷ್ಟು ಕೂಲಿ, ವಿಶ್ರಾಂತಿ ಹಾಗೂ ಸೌಲಭ್ಯಗಳಾದರೂ ದೊರೆಯಬಾರದೇ? ರಸ್ತೆ ಬದಿ ಗುಡಾರಗಳಲ್ಲಿ, ಯಾವುದೇ ಮೂಲಸೌಕರ್ಯಗಳಿಲ್ಲದ ತಾತ್ಕಾಲಿಕ ಶೆಡ್ಡುಗಳಲ್ಲಿ ಕಾರ್ಮಿಕರು ಬದುಕಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದರೂ, ಆ ಕುರಿತು ಏನೂ ಅಂದುಕೊಳ್ಳದಂತಹ ಜಡ ಮನಸ್ಥಿತಿ ನಮ್ಮಲ್ಲಿ ರೂಪುಗೊಳ್ಳಲು ಕಾರಣವಾದರೂ ಏನು?

ಅಸಂಘಟಿತ ವಲಯದ ಕಾರ್ಮಿಕರಲ್ಲದೆ, ಉತ್ಪಾದನಾ ವಲಯದ ಕಾರ್ಖಾನೆಗಳಲ್ಲೂ ಕಾರ್ಮಿಕರ ಪರಿಸ್ಥಿತಿ ನಿಕೃಷ್ಟವಾಗಿರುವುದನ್ನು ಗಮನಿಸಬಹುದಾಗಿದೆ. ಕಾರ್ಮಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟರೆ, ನಿರೀಕ್ಷಿತ ಪ್ರಮಾಣದಲ್ಲಿ ಅವರಿಂದ ಕೆಲಸ ತೆಗೆಯಲು ಸಾಧ್ಯವಿಲ್ಲವೆಂಬ ಚಿಂತನೆಗೆ ಜೋತು ಬಿದ್ದಿರುವ ಕಾರ್ಖಾನೆಗಳ ಆಡಳಿತ ಮಂಡಳಿಗಳು ಕಾರ್ಮಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿರುವುದು ಕಣ್ಣೆದುರಿನ ವಾಸ್ತವವೇ ಆಗಿದೆ. ಕುರ್ಚಿಗಳನ್ನು ಇಟ್ಟರೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ, ಹಾಗಾದರೆ ನಿಗದಿತ ಉತ್ಪಾದನಾ ಗುರಿ ತಲುಪಲಾಗುವುದಿಲ್ಲವೆಂಬ ಕಾರಣಕ್ಕೆ ಕೆಲಸದ ಸ್ಥಳದಲ್ಲಿ ಒಂದೇ ಒಂದು ಕುರ್ಚಿ ಸಹ ಇರದಂತೆ ನೋಡಿಕೊಳ್ಳುವ ಕಾರ್ಖಾನೆಗಳೂ ಇವೆ. ಇಂತಹ ‘ಉತ್ಪಾದನೆ ಹೆಚ್ಚಿಸುವ ಸಿದ್ಧಾಂತ’ಗಳೇ ಈ ಕಾಲದ ಕಾರ್ಖಾನೆಗಳು ಅಳವಡಿಸಿಕೊಳ್ಳಲೇಬೇಕಿರುವ ಅಂಶಗಳಾಗಿರುವುದು ವಿಪರ್ಯಾಸ.

ನಮಗರಿವಿಲ್ಲದಂತೆ ನಮ್ಮೊಳಗೆ ಬೇರೂರತೊಡಗಿರುವ ಲಾಭ ಕೇಂದ್ರಿತ ಬಂಡವಾಳಶಾಹಿ ಮನಸ್ಥಿತಿ, ಮನುಷ್ಯರನ್ನೇ ಯಂತ್ರಗಳಾಗಿ ಕಾಣುವ ದೃಷ್ಟಿಕೋನ ದಯಪಾಲಿಸುವತ್ತ ದಾಪುಗಾಲಿಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT