ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿಯರಲ್ಲಿ ಒಬ್ಬರಾಗಿದ್ದ ಬಿ. ಸರೋಜಾದೇವಿ ಅವರ ಸಾರ್ವಜನಿಕ ವ್ಯಕ್ತಿತ್ವವೂ ಔನ್ನತ್ಯದಿಂದ ಕೂಡಿದುದಾಗಿತ್ತು.

ಬಾಲ್ಯದಲ್ಲಿ, ಟೂರಿಂಗ್ ಟಾಕೀಸ್ಗಳಲ್ಲಿ ನೆಲದ ಮೇಲೆ ಕೂತು ನೋಡ ನೋಡುತ್ತಲೇ ನನ್ನಂಥವರಿಗೆ ಸಿನಿಮಾಗಳು ನೆಲದ ನಂಟಿನ ಕಲೆಗಳಾದವು. ಆಗ, ನನ್ನಂಥ ಹಳ್ಳಿ ಹುಡುಗರಿಗೆ ರಾಜ್ಕುಮಾರ್ ಅವರಂಥ ನಾಯಕ ನಟರಲ್ಲದೆ ನಟಿಯರ ಬಗ್ಗೆಯೂ ವಿಶೇಷ ಆಸಕ್ತಿ. ಯಾವ ನಟಿ ಚೆಂದ ಕಾಣ್ತಾರೆ, ಯಾವ ನಟಿ ಚೆನ್ನಾಗಿ ಅಭಿನಯಿಸು ತ್ತಾರೆ ಎಂದು ಗೆಳೆಯರು ಕೂತು ಮಾತನಾಡುವಾಗ ಬಿ. ಸರೋಜಾದೇವಿಯವರ ಹೆಸರು ಮುನ್ನೆಲೆಯಲ್ಲಿ ಪ್ರಸ್ತಾಪವಾಗುತ್ತಿತ್ತು.

ನಟಿಯರೆಂದರೆ ಕೇಳಬೇಕೆ? ಅವರ ಉಡುಪು, ಒಯ್ಯಾರಗಳ ಕುರಿತೂ ಮಾತುಕತೆಯಾಗುತ್ತಿತ್ತು. ಸರೋಜಾ ದೇವಿಯವರು ನಮ್ಮ ನಡುವಿನ ಗೃಹಸ್ಥೆಯಂತೆಯೇ ಕಾಣುತ್ತಿದ್ದರು. ರಾಜ್ಕುಮಾರ್ ಮತ್ತು ಇವರು ಅಭಿನಯಿಸಿದ ‘ಅಣ್ಣ ತಂಗಿ’ ಸಿನಿಮಾ ನಮ್ಮೊಳಗೆ ಇಳಿದು ಒಂದಾಗಿತ್ತು. ಕನ್ನಡದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ವರ್ಣಚಿತ್ರವಾದ ‘ಅಮರಶಿಲ್ಪಿ ಜಕಣಾಚಾರಿ’ಯ ನಾಯಕಿಯಾಗಿ ಸರೋಜಾದೇವಿ ಅವರು ಕಾಣಿಸಿಕೊಂಡಿದ್ದು ಕಣ್ಣುಗಳಿಗೆ ಹಬ್ಬವಾಗಿತ್ತು.

‘ಕಿತ್ತೂರು ಚೆನ್ನಮ್ಮ’ನ ಪಾತ್ರ ಕಣ್ಣಷ್ಟೇ ಅಲ್ಲ, ಮನಸ್ಸನ್ನೂ ತುಂಬಿಕೊಂಡಿತ್ತು. ನಾನು ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಸರೋಜಾದೇವಿಯವರು ಚೆನ್ನಮ್ಮನ ಪಾತ್ರದಲ್ಲಿ ತೋರಿದ ಅಪೂರ್ವ ಅಭಿನಯಕ್ಕೆ ಮಾರುಹೋಗಿದ್ದೆ. ಆಗ ಇಂತಹ ಅಭಿನೇತ್ರಿಯ ಪರಿಚಯವಾಗುತ್ತದೆಯೆಂಬ ಕನಸು ಕಾಣುವುದಕ್ಕೂ ಸಾಧ್ಯವಿರಲಿಲ್ಲ. ಅನೇಕ ವರ್ಷಗಳ ನಂತರ ಅವರ ಪರಿಚಯವಾಗಿ, ವಿಶ್ವಾಸದ ರೂಪ ಪಡೆಯಿತು. ಅವರು ನಿಧನರಾದಾಗ ನನ್ನಲ್ಲಿ ಮೂರು ಮುಖ್ಯ ನೆನಪುಗಳು ಕಾಡತೊಡಗಿದವು. ಅವರ ವ್ಯಕ್ತಿತ್ವದ ದೊಡ್ಡತನಕ್ಕೆ ಈ ನೆನಪುಗಳು ಸಾಕ್ಷಿಯಾಗಿವೆ:

ಒಂದು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೆಲವೇ ವರ್ಷಗಳ ಹಿಂದೆ ತಮ್ಮ ಕಚೇರಿಯಲ್ಲೇ ಏರ್ಪಡಿಸಿದ ಒಂದು ಸಮಾರಂಭದಲ್ಲಿ ನಾನು ಮತ್ತು ಸರೋಜಾದೇವಿಯವರು ಅತಿಥಿಗಳಾಗಿ ಭಾಗವಹಿಸಿ ದ್ದೆವು. ಸರೋಜಾದೇವಿಯವರು ಭಾಷಣ ಮಾಡುತ್ತ, ‘ನನಗೆ ಬರಗೂರು ರಾಮಚಂದ್ರಪ್ಪನವರ ನಿರ್ದೇಶನದ ಸಿನಿಮಾದಲ್ಲಿ ಒಂದು ಪಾತ್ರ ಮಾಡಬೇಕು ಅಂತ ಆಸೆ ಇದೆ. ಅವಕಾಶಕ್ಕಾಗಿ ಕಾಯ್ತಿದ್ದೇನೆ’ ಎಂದರು. ನನಗೆ ಆಶ್ಚರ್ಯ! ಅದು ಔಪಚಾರಿಕ ಮಾತಲ್ಲ ಎಂದು ಅವರೇ ಹೇಳಿದರು. ನಾನು ನನ್ನ ಭಾಷಣದಲ್ಲಿ ಸರೋಜಾದೇವಿಯವರ ಮಾತು ನನಗೆ ಸಿಕ್ಕಿದ ದೊಡ್ಡ ಪ್ರಶಸ್ತಿ ಮತ್ತು ಗೌರವ ಎಂದು ಹೇಳಿದೆ. ಆದರೆ, ಅವರ ಎತ್ತರದ ವ್ಯಕ್ತಿತ್ವಕ್ಕೆ ತಕ್ಕ ಪಾತ್ರವಿಲ್ಲದೆ ನನ್ನ ಸಿನಿಮಾಕ್ಕೆ ಆಹ್ವಾನಿಸಲು ಆಗಲಿಲ್ಲ ಎಂಬ ಕೊರಗು ನನ್ನಲ್ಲಿದೆ.

ಎರಡು: ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್ ಕಲಿಸುವ ಕುರಿತು ಚರ್ಚೆ ನಡೆಯುತ್ತಿದ್ದ ದಿನಗಳವು. ಸರೋಜಾದೇವಿಯವರು ನನಗೆ ಫೋನ್ ಮಾಡಿ, ‘ನೋಡಿ, ನಾನು ರಾಷ್ಟ್ರಮಟ್ಟದ ಅನೇಕ ಸಮಿತಿಗಳಲ್ಲಿ ಭಾಗವಹಿಸಿದಾಗ ಸರಿಯಾಗಿ ಇಂಗ್ಲಿಷ್ ಬಾರದೆ ತುಂಬಾ ತೊಂದರೆ ಆಗುತ್ತೆ. ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕಲ್ಲವೆ?’ ಎಂದು ಕೇಳಿದರು. ‘ಪ್ರಾಥಮಿಕ ಶಾಲೆಯಲ್ಲಿ ಮಾತೃಭಾಷೆ ಕನ್ನಡ ಮಾಧ್ಯಮವನ್ನು ಬಿಟ್ಟುಕೊಡದೆ ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಬೇಕು ಎಂಬ ಅಭಿಪ್ರಾಯದವನು ನಾನು’ ಎಂದಾಗ, ಅದನ್ನು ಅವರು ಸಂತೋಷದಿಂದ ಒಪ್ಪಿದ್ದಲ್ಲದೆ, ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವುದಕ್ಕೆ ಏನಾದರೂ ಮಾಡಬೇಕಲ್ಲ ಎಂದರು. ಆಗ ನಾನು ‘ಪ್ರಜಾವಾಣಿ’ ಪತ್ರಿಕೆಯ ಸಂಪಾದಕರ ಜೊತೆ ಮಾತಾಡಿ, ಸರೋಜಾದೇವಿಯವರ ಅನಿಸಿಕೆಗಳನ್ನು ಪ್ರಕಟಿಸಲು ಕೋರಿದೆ. ‘ಪ್ರಜಾವಾಣಿ’ಯಲ್ಲಿ ಅವರ ಅಭಿಪ್ರಾಯ ಪ್ರಕಟವಾಯಿತು.

ಮೂರು: ನನ್ನ ಸ್ನೇಹಿತರು ನನ್ನ ಹೆಸರಲ್ಲಿ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ. ಪ್ರತಿ ವರ್ಷವೂ ನನ್ನ ಆಸಕ್ತಿಯ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದ ತಲಾ ಒಬ್ಬರು ಸಾಧಕರಿಗೆ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ನನ್ನ ಪತ್ನಿ ರಾಜಲಕ್ಷ್ಮಿ ಹೆಸರಲ್ಲಿ ಪ್ರತಿವರ್ಷ ಇಬ್ಬರು ಸಾಧಕಿಯರಿಗೆ ಪ್ರಶಸ್ತಿ ನೀಡುತ್ತಾರೆ. ಇಂತಹ ಒಂದು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸರೋಜಾದೇವಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕೆಂದು ತೀರ್ಮಾನಿಸಿದ ಪ್ರತಿಷ್ಠಾನದವರು, ಅವರ ಪರಿಚಿತರೊಬ್ಬರನ್ನು ಕಳಿಸಿಕೊಟ್ಟರು. ಸರೋಜಾದೇವಿಯವರು ಅಧಿಕೃತ ಆಹ್ವಾನದ ಪತ್ರವೊಂದನ್ನು ಕೊಡಲು ಕೇಳಿದರಂತೆ! ಪ್ರತಿಷ್ಠಾನದಿಂದ ಪತ್ರವನ್ನೂ ಕೊಟ್ಟು ಬಂದರು.

ಆದರೆ, ಅವರಿಂದ ಒಪ್ಪಿಗೆ ಬರಲಿಲ್ಲವೆಂದು ಬೇರೆ ಅತಿಥಿಗಳನ್ನು ಒಪ್ಪಿಸಿ ಆಹ್ವಾನ ಪತ್ರಿಕೆಯನ್ನು ಅಚ್ಚು ಹಾಕಿಸಿದರು. ಒಂದು ದಿನ ಇದ್ದಕ್ಕಿದ್ದಂತೆ ಸರೋಜಾದೇವಿಯವರಿಂದ ಫೋನ್ ಬಂತು. ‘ಬರಗೂರು ಅವರೇ, ನಿಮ್ಮ ಕಡೆಯವರು ಮತ್ತೆ ಬರಲೇ ಇಲ್ಲ. ಕಾರ್ಯಕ್ರಮ ಇಲ್ಲವೇ?’ ಎಂದರು. ನಾನು ಆಹ್ವಾನ ಪತ್ರಿಕೆ ಅಚ್ಚಾಗಿರುವ ವಿಷಯ ಹೇಳಿದೆ.

‘ನಿಮ್ಮ ಹೆಸರಲ್ಲಿ ನಡೀತಿರೋ ಸಮಾರಂಭ. ನನ್ನ ಹೆಸರು ಇಲ್ಲದೇ ಇದ್ದರೂ ನಾನು ಬರ್ತೀನಿ. ಸಭಿಕಳಾಗಿ ಕೂತುಕೊಳ್ತೇನೆ’ ಎಂದರು. ಆಗ ನಾನು, ‘ನೀವು ಅತಿಥಿಯಾಗೇ ಬನ್ನಿ. ಬೇರೆ ಆಹ್ವಾನ ಪತ್ರಿಕೆ ಅಚ್ಚು ಮಾಡ್ತೇವೆ’ ಎಂದು ಹೇಳಿ ಅದರಂತೆ ಸ್ನೇಹಿತರಿಗೆ ತಿಳಿಸಿದೆ. ಸರೋಜಾದೇವಿಯವರು ಸಕಾಲಕ್ಕೆ ಸಮಾರಂಭಕ್ಕೆ ಬಂದು ಸಂತೋಷ ತಂದರು.

ಈ ಮೂರು ಘಟನೆಗಳು ಅವರು ನನ್ನ ಬಗ್ಗೆ ತೋರಿದ ವಿಶ್ವಾಸದ, ದೊಡ್ಡತನದ ಸಂಕೇತಗಳಾಗಿವೆ. ಎಂದೂ ಮಾಸದ ನೆನಪುಗಳಲ್ಲಿ ಸರೋಜಾದೇವಿಯವರು ಸದಾ ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.