ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಅಭಿಮಾನ ಅತಿರೇಕಕ್ಕೆ ಹೋಗದಿರಲಿ

Published 3 ಜುಲೈ 2024, 20:58 IST
Last Updated 3 ಜುಲೈ 2024, 20:58 IST
ಅಕ್ಷರ ಗಾತ್ರ

ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಪ್ರೌಢಶಾಲಾ ಶಿಕ್ಷಕರೊಬ್ಬರು ತಮ್ಮ ರಕ್ತದಿಂದಲೇ ರಚಿಸಿದ ಸುದ್ದಿ ಗಮನಸೆಳೆಯಿತು. ಅಭಿಮಾನವನ್ನು ಈ ಬಗೆಯಲ್ಲಿ ವ್ಯಕ್ತಪಡಿಸುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರನ್ನು ಕಾಡುವ ಪ್ರಶ್ನೆ. ಏಕೆಂದರೆ ಅಭಿಮಾನದ ಅಭಿವ್ಯಕ್ತಿಗಾಗಿ ರಕ್ತವನ್ನು ಬಳಸಬೇಕೇ?! ಬೇರೆ ವಿಧಾನಗಳಲ್ಲಿ ಅಭಿಮಾನವನ್ನು ವ್ಯಕ್ತಪಡಿಸಲು ಹಲವು ಅವಕಾಶಗಳಿರುವಾಗ ರಕ್ತವನ್ನು ಬಳಸಿ ಚಿತ್ರಬಿಡಿಸಿದ್ದು ಅಭಿಮಾನದ ಅತಿರೇಕದಂತೆ ಕೆಲವರಿಗೆ ಕಾಣಬಹುದು.

ರಕ್ತವು ಜನರ ಜೀವ ಉಳಿಸುತ್ತದೆ. ಸ್ವಯಂಪ್ರೇರಣೆಯಿಂದ ರಕ್ತವನ್ನು ಕೊಡಲು ಮುಂದೆ ಬರುವವರಿಂದ ಮಾತ್ರ ರಕ್ತ ಪಡೆಯಲು ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಅಗತ್ಯ ರಕ್ತ ದೊರೆಯದೆ ರೋಗಿಗಳು ಸಾವನ್ನಪ್ಪುವುದೂ ಇದೆ. ಪರಿಸ್ಥಿತಿ ಹೀಗಿರುವಾಗ ಚಿತ್ರ ರಚಿಸಲು ರಕ್ತವನ್ನು ಬಳಸಿದ್ದು ತಪ್ಪು ಸಂದೇಶಕ್ಕೆ ಎಡೆಮಾಡಿಕೊಡಬಹುದು.  ಇಂಥದ್ದೊಂದು ವರ್ತನೆಯನ್ನು ಶಿಕ್ಷಕನೊಬ್ಬ ತೋರಿದ್ದು ತುಸು ಆಶ್ಚರ್ಯ ಮೂಡಿಸುವಂಥದ್ದು.

ವಿವಿಧ ಕ್ಷೇತ್ರಗಳ ಹೀರೊಗಳ ಬಗೆಗೆ ಸಾರ್ವಜನಿಕರಲ್ಲಿ ಇರುವ ಅಭಿಮಾನವು ಅತಿರೇಕಕ್ಕೆ ಹೋಗಲು ನಾಂದಿಹಾಡಿದ್ದು ಸಿನಿಮಾ ಮಾಧ್ಯಮ ಎಂದರೆ ತಪ್ಪಾಗಲಾರದು. ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ದಿನ ಮೆರವಣಿಗೆ, ಬೃಹತ್ ಗಾತ್ರದ ಕಟೌಟ್‌ಗಳಿಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸುವುದು ಇತ್ಯಾದಿ ಚಟುವಟಿಕೆಗಳ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯುವರು. ಹಾಲಿನಂತಹ ಪೌಷ್ಟಿಕ ಆಹಾರವನ್ನು ಸಿನಿಮಾ ತಾರೆಯರ ಕಟೌಟ್‌ಗಳ ಮೇಲೆ ಸುರಿದು ಹಾಳು ಮಾಡುತ್ತಾರೆ. ಅದೆಷ್ಟೋ ಕುಟುಂಬಗಳಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳು ನಿಶ್ಶಕ್ತಿಗೆ ಗುರಿಯಾಗುತ್ತಿದ್ದಾರೆ, ಹಲವಾರು ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿ ಅಲ್ಲವೇ? ಬಡ ಕುಟುಂಬಗಳಲ್ಲಿ, ತಮ್ಮ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕಾಂಶಯುಕ್ತ ಊಟ ಒದಗಿಸಲೂ ಸಾಧ್ಯವಾಗುತ್ತಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಮೇಲಿನ ಅಭಿಮಾನದಿಂದ ಹಾಲಿನಂತಹ ಅತ್ಯುತ್ತಮ ಆಹಾರವನ್ನು ಪೋಲು ಮಾಡುತ್ತಾರೆ.

ಸಿನಿಮಾ ನಟರ ಜನ್ಮದಿನಾಚರಣೆಯಂದು ಅವರು ವಾಸಿಸುವ ಬಡಾವಣೆಗಳಲ್ಲಿ ಇರುವೆ ಕೂಡ ನುಸುಳಲು ಜಾಗವಿಲ್ಲದಷ್ಟು ಜನಸಂದಣಿ ಇರುತ್ತದೆ. ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳ ಕುರಿತು ಅಭಿಮಾನಿ ಬಳಗ ಯೋಚಿಸುವುದಿಲ್ಲ. ರಾತ್ರಿಯಿಂದಲೇ ನಟ–ನಟಿಯರ ಮನೆಯ ಮುಂದೆ ಜಮಾಯಿಸುವ ಅಭಿಮಾನಿ ಪಡೆ ತಮ್ಮ ಗೌಜು ಗದ್ದಲಗಳಿಂದ ಸುತ್ತಮುತ್ತಲಿನ ನಿವಾಸಿಗಳ ನಿದ್ರೆ ಹಾಳುಗೆಡವಿ ಅಶಾಂತಿ ಸೃಷ್ಟಿಸುತ್ತದೆ. ಅದೆಷ್ಟೋ ಮನೆಗಳಲ್ಲಿ ವೃದ್ಧರು, ಮಕ್ಕಳು, ಕಾಯಿಲೆಗಳಿಂದ ಬಳಲುತ್ತಿರುವವರು, ಪರೀಕ್ಷೆಗಾಗಿ ಓದಿಕೊಳ್ಳುತ್ತಿರುವವರು, ಹಗಲಿಡೀ ದುಡಿದು ಹೈರಾಣಾಗಿ ವಿಶ್ರಾಂತಿ ಪಡೆಯುತ್ತಿರುವವರು ಇರುವರೆಂಬ ಕಿಂಚಿತ್ ಪ್ರಜ್ಞೆ ಕೂಡ ಇಲ್ಲದಂತೆ ವರ್ತಿಸುತ್ತಾರೆ. ಕೆಲವೊಮ್ಮೆ ಇಂತಹ ಅತಿರೇಕದ ಅಭಿಮಾನವೇ ಪ್ರಾಣಕ್ಕೆ ಅಪಾಯವಾಗಿ ಪರಿಣಮಿಸುವುದುಂಟು.

ಕೆಲವು ತಿಂಗಳ ಹಿಂದೆ ಸಿನಿಮಾ ನಟರೊಬ್ಬರ ಜನ್ಮದಿನದ ಸಂದರ್ಭ ಮೆರವಣಿಗೆಯ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಬಲಿಯಾದ ದುರ್ಘಟನೆ ಹಲವರಿಗೆ ಇನ್ನೂ ನೆನಪಿನಲ್ಲಿದೆ. ಒಂದು ಕಾಲದಲ್ಲಿ ಸಿನಿಮಾ ನಟರ ಅಭಿಮಾನಿಗಳ ನಡುವೆ ಜಗಳ, ಕಾದಾಟಗಳು ಕೂಡ ನಡೆಯುತ್ತಿದ್ದವು. ಸಿನಿಮಾ ಬಿಡುಗಡೆಯ ದಿನ ಅಭಿಮಾನಿ ಗುಂಪುಗಳ ನಡುವಿನ ದ್ವೇಷ ತಾರಕಕ್ಕೇರುತ್ತಿತ್ತು. ರಸ್ತೆಗಳಲ್ಲಿ ಕೈ ಕೈ ಮಿಲಾಯಿಸಿ ಅವರು ಹೊಡೆದಾಟಕ್ಕಿಳಿಯುತ್ತಿದ್ದರು. ತಾವು ‘ವಿರೋಧಿ’ ಎಂದು ಭಾವಿಸುವ ನಟರ ಪೋಸ್ಟರ್‌ಗಳಿಗೆ ಸಗಣಿ ಬಳಿಯುವ, ಪೋಸ್ಟರ್‌ ಹರಿದು ಹಾಕುವ, ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನದ ವೇಳೆ ಗಲಾಟೆ ಮಾಡುವಂತಹ ಅತಿರೇಕದ ವರ್ತನೆಗಳನ್ನು ಅಭಿಮಾನಿ ಬಳಗ ತೋರುತ್ತಿತ್ತು. ಕೆಲವೊಮ್ಮೆ ಅಭಿಮಾನಿಗಳ ವರ್ತನೆಯಿಂದ ಕಲಾವಿದರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಮುಜುಗರವಾಗುವುದುಂಟು. 

ಇತ್ತೀಚೆಗೆ ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟನೊಬ್ಬನ ಅಭಿಮಾನಿಗಳ ಹುಚ್ಚಾಟ ಕೂಡ ಎಲ್ಲೆ ಮೀರಿದೆ. ತಮ್ಮ ನೆಚ್ಚಿನ ನಟನ ವಿರುದ್ಧ ಹೇಳಿಕೆ ನೀಡುವ ಕಲಾವಿದರನ್ನು ಇವರು ಗೋಳುಹೊಯ್ದುಕೊಳ್ಳುತ್ತಿದ್ದಾರೆ. ಅತಿಯಾದ ಅಭಿಮಾನ ಮತ್ತು ಆರಾಧನಾ ಭಾವನೆಯು ಕೆಲವು ಅಭಿಮಾನಿಗಳನ್ನು ಅಂಧರನ್ನಾಗಿಸಿದೆ. ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಆದರೆ ಅಭಿಮಾನಿಗಳು ತಾವೇ ನ್ಯಾಯಾಧೀಶರಾಗಿ ತಮ್ಮ ಆರಾಧ್ಯದೈವವನ್ನು (ನಟನನ್ನು) ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಅದೆಷ್ಟೋ ಅಭಿಮಾನಿಗಳು ನಟನಿಗೆ ಜೈಲಿನಲ್ಲಿ ನೀಡಲಾಗಿರುವ ಕೈದಿ ಸಂಖ್ಯೆಯನ್ನು ತಮ್ಮ ವಾಹನಗಳ ಮೇಲೆ ಬರೆದುಕೊಂಡು ಧನ್ಯರಾಗಿದ್ದಾರೆ.

ತಾವು ಆರಾಧಿಸುವ ನಟ, ನಟಿಯರ ಮತ್ತು ಕ್ರೀಡಾಪಟುಗಳ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ, ತಮ್ಮ ನಡೆ-ನುಡಿಗಳಲ್ಲಿ ಅವರನ್ನು ಅನುಕರಿಸುವ ಚಾಳಿಯು ಯುವಪೀಳಿಗೆಯನ್ನು ಆವರಿಸಿದೆ. ತಾವು ಆರಾಧಿಸುವವರ ಮೇಲಿನ ಅತಿಯಾದ ಪ್ರೀತಿ ಮತ್ತು ಅಭಿಮಾನ ಯುವ ಜನರನ್ನು ತಪ್ಪುದಾರಿಗೆ ಕರೆದೊಯ್ಯುತ್ತಿದೆ. ಈ ತಪ್ಪು, ಹಾಲಿನ ಅಭಿಷೇಕ, ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವಂತಹ ವರ್ತನೆಗಳ ರೂಪದಲ್ಲಿ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT