ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಲ್ಯಾಣದ ಆಶಯ ಸಾಕಾರಗೊಳ್ಳಲಿ

ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಮೂರು ವರ್ಷಗಳೇ ಕಳೆದಿದ್ದರೂ ಇವತ್ತಿಗೂ ಯಾವುದೇ ಹೊಸತಿನ ಕಲ್ಯಾಣವಿಲ್ಲ
Last Updated 16 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕಲ್ಯಾಣ ಕರ್ನಾಟಕಕ್ಕೆ ಪ್ರತಿವರ್ಷ ಎರಡು ಸ್ವಾತಂತ್ರ್ಯೋತ್ಸವಗಳು. ಒಂದು, ಆಗಸ್ಟ್‌ 15. ಮತ್ತೊಂದು, ಸೆಪ್ಟೆಂಬರ್ 17. ಅದರಂತೆ ಇಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ. ಸರ್ಕಾರವೇ ಈ ಬಾರಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಘೋಷಿಸಿದೆ. ಅಂದಹಾಗೆ, ಮೂರು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ 2019ರ ವಿಮೋಚನಾ ದಿನಾಚರಣೆಯಂದು ಹೈದರಾಬಾದ್ ಕರ್ನಾಟಕ ಪ್ರಾಂತ್ಯವನ್ನು ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದರು. ಆ ಮೂಲಕ ಹಳೆಯ ಹೈದರಾಬಾದ್ ಕರ್ನಾಟಕ ವಿಮೋಚನೆ ದಿನದ ಹೆಸರು ಬದಲಾವಣೆ ಮಾತ್ರವಲ್ಲದೆ ಅದರ ಒಟ್ಟು ಬದುಕಿನ ನೈಜ ಇತಿಹಾಸ ಶೋಧನೆಗೆ ಹಾದಿ ಹಾಕಿಕೊಟ್ಟರು.

ಕಲಬುರಗಿ ಮತ್ತು ಬೀದರ್‌ನ ಬಸವಕಲ್ಯಾಣ, ಯಾದಗಿರಿ, ಕೊಪ್ಪಳ, ರಾಯಚೂರಿನ ಅಮರಕಲ್ಯಾಣ, ಬಳ್ಳಾರಿ, ವಿಜಯನಗರದ ವಿಜಯಕಲ್ಯಾಣ ಸೇರಿಯೇ ಸಮಗ್ರಕಲ್ಯಾಣ. ಅದು ಮೂರು ಕಲ್ಯಾಣಗಳ ಸಂಗಮದ ಮಹಾಕನಸು. ಕಲ್ಯಾಣ ಕರ್ನಾಟಕವೆಂದು ಹೊಸ ಹೆಸರಿನಿಂದ ನಾಮಕರಣ ಮಾಡಿ ಮೂರು ವರ್ಷಗಳೇ ಕಳೆದುಹೋದವು. ಆದರೆ ಇವತ್ತಿಗೂ ಯಾವುದೇ ಹೊಸತಿನ ಕಲ್ಯಾಣವಿಲ್ಲ.

ಹಾಗೆಂದು ಈ ಹಿಂದಿನ ದಶಕಗಳಲ್ಲಿ ಬಿಲ್ಕುಲ್ ಅಭಿವೃದ್ಧಿಯೇ ಆಗಿಲ್ಲವೆಂದು ಹೇಳಲಾಗದು. ಆದರೆ ದಕ್ಷಿಣ ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಅಜಗಜಾಂತರ. ಸಂವಿಧಾನ ತಿದ್ದುಪಡಿ ಮೂಲಕ ದೊರಕಿರುವ ವಿಧಿ 371 ಜೆ ದೆಸೆಯಿಂದಾಗಿ ಸ್ಥಳೀಯರಿಗೆ ಕೆಲವು ಉದ್ಯೋಗಾವಕಾಶಗಳು ಪ್ರಾಪ್ತವಾಗಿವೆ. ಶೈಕ್ಷಣಿಕವಾಗಿ ಈ ಹಿಂದೆ ವೈದ್ಯಕೀಯದಂತಹ ಪ್ರವೇಶ ಸಂಖ್ಯೆಯಲ್ಲಿ ಎರಡಂಕಿದಾಟಲಾಗುತ್ತಿರಲಿಲ್ಲ. ಈಗ ನಮ್ಮ ಹುಡುಗ ಹುಡುಗಿಯರು ಮೂರಂಕಿ ಮುಟ್ಟಿ ಮುನ್ನಡೆದಿದ್ದಾರೆ. ಹಾಗೆಯೇ ಮೂರು ಸಾವಿರ ಕೋಟಿ ಅನುದಾನದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಯು ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಆಗಿರುವುದನ್ನು ಅಲ್ಲಗಳೆಯಲಾಗದು. ನೀರಾವರಿಗೆ ಸಂಬಂಧಿಸಿದ ಕೃಷ್ಣೆಯ ಕಾಡಾ (CADA) ಕೆಲಸಗಳ ಬಗ್ಗೆ ಕೇಳದಿರುವುದೇ ಕ್ಷೇಮ. ಕಾಡಾದಿಂದ ರೈತರ ಹೊಲಗಳ ಅಗತ್ಯ ಕೆಲಸಗಳು ಕಿಲುಬು ಕಾಸಿನಷ್ಟೂ ಆಗಿಲ್ಲ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಏರುಪ್ರಗತಿಯ ಸ್ಥಿತ್ಯಂತರದ ಲಕ್ಷಣಗಳೇ ಕಾಣುತ್ತಿಲ್ಲ. ಹಿಂದಿನ ನೂರು ವರ್ಷಗಳಲ್ಲಿ ಆಗದ್ದು ಇಂದಿನ ಮೂರು ವರ್ಷಗಳಲ್ಲಿ ಹೇಗೆ ತಾನೇ ಸಾಧ್ಯ ಎಂಬುದು ಪ್ರಭುತ್ವದ ಸಹಜ ಸಬೂಬು ಆಗಿದ್ದೀತು. ಅದಕ್ಕಾಗಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದ ರಾಜಕಾರಣ ಹಾಗೂ ರಾಜ ಕಾರಣಿಗಳನ್ನು ಹಳಿದಳಿದು ನಮ್ಮವರ ನಾಲಗೆಗಳೇ ಹೊಲಸಾಗಿವೆ.

ಸಾಂಸ್ಕೃತಿಕ ಲೋಕಕ್ಕೆ ಸಂಬಂಧಿಸಿದ ಹತ್ತು ಹಲವು ಲೋಪಗಳ ಆಡುಂಬೊಲವೇ ಈ ನಮ್ಮ ಕಲ್ಯಾಣ ಕರ್ನಾಟಕ. ಇಲ್ಲಿನ ಯಾವುದೇ ಜಿಲ್ಲೆಗಳಲ್ಲಿ ಇದುವರೆಗಿನ ಸರ್ಕಾರಗಳು ಒಂದೇ ಒಂದು ಸಾಂಸ್ಕೃತಿಕ ಪ್ರತಿಷ್ಠಾನವನ್ನೂ ಸ್ಥಾಪನೆ ಮಾಡಿಲ್ಲ ಎಂಬುದು ಗಂಭೀರ ಲೋಪ. ಆರೋಗ್ಯ, ಶಿಕ್ಷಣ, ಸಾರಿಗೆ, ಕೃಷಿ... ಹೀಗೆ ಅಭಿವೃದ್ಧಿ ಕ್ಷೇತ್ರದಲ್ಲಿ ನಿರಂತರ ಅನ್ಯಾಯಕ್ಕೆ ಒಳಗಾಗಿರುವುದಷ್ಟೇ ಅಲ್ಲ, ಕಲ್ಯಾಣ ಕರ್ನಾಟಕವು ಸಾಂಸ್ಕೃತಿಕವಾಗಿಯೂ ಅವಕಾಶಗಳ ನಿತಾಂತ ವಂಚನೆಗೆ ಈಡಾಗುತ್ತಲೇ ಬಂದಿದೆ. ದೂರದ ಬೆಂಗಳೂರುಕೇಂದ್ರಿತ ಕರ್ನಾಟಕ ಸರ್ಕಾರದ ನೀತಿ ಒತ್ತಟ್ಟಿಗಿರಲಿ, ನಮ್ಮದೇ 371 ಜೆ ಅಡಿಯ ಸಹಸ್ರಾರು ಕೋಟಿ ರೂಪಾಯಿಗಳಲ್ಲಿ ಇಂತಹ ಸಾಂಸ್ಕೃತಿಕ ಕೆಲಸಗಳಿಗೆ ಅವಕಾಶ ಬೇಡವೇ?

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘವನ್ನೇ ಅದಕ್ಕಾಗಿ ಸರ್ಕಾರ ರಚನೆ ಮಾಡಿದೆ. ನೂರಾರು ಕೋಟಿಗಳಷ್ಟು ಹಣ ಈ ಸಂಘದ ಕೆಲಸಕ್ಕೆ ಮೀಸಲು. ಅದಕ್ಕೆಂದೇ ಸಚಿವ ಸ್ಥಾನದ ಅಧ್ಯಕ್ಷ ಮತ್ತು ಕೆಎಎಸ್ ಶ್ರೇಣಿಯ ಹಿರಿಯ ಅಧಿಕಾರಿ, ಕಚೇರಿ, ಸಿಬ್ಬಂದಿ ವ್ಯವಸ್ಥೆಯೇ ಕಲಬುರಗಿ
ಯಲ್ಲಿದೆ. ಆದರೆ ಅದರ ಕೆಲಸಗಳು ಏನೆಂಬುದೇ ಅದಕ್ಕೆ ತಿಳಿಯುವಂತಿಲ್ಲವೇನೊ?

ಕಾಗಿನೆಲೆಯ ಕನಕದಾಸ ಸಾಹಿತ್ಯ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಕಡಕೋಳದಲ್ಲಿ ಮಡಿವಾಳಪ್ಪನ ಹೆಸರಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಕರ್ನಾಟಕ ದಾದ್ಯಂತ ಅಜಮಾಸು ಐದುನೂರು ಮಂದಿ ತತ್ವಪದಕಾರರು ಬಾಳಿ ಬದುಕಿದ್ದಾರೆ. ಅವರಲ್ಲಿ ಕಡಕೋಳ ಮಡಿವಾಳಪ್ಪನನ್ನು ತತ್ವಪದಗಳ ಅಲ್ಲಮನೆಂದೇ ಗುರುತಿಸಲಾಗಿದೆ. ಸಮಗ್ರ ತತ್ವಪದಗಳು,
ತತ್ವಪದಕಾರರ ಅಧ್ಯಯನ ಮತ್ತು ಸಂಶೋಧನೆಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು.

ಯಾದಗಿರಿ ಜಿಲ್ಲೆಯಲ್ಲಿ ರಸ್ತಾಪೂರ ಭೀಮಕವಿಯ ಹೆಸರಲ್ಲಿ ಪ್ರತಿಷ್ಠಾನ ರಚನೆಯಾಗಬೇಕು. ಹಾಗೆಯೇ ರಾಯಚೂರಿನಲ್ಲಿ ಶಾಂತರಸರ ಹೆಸರಿನ ಪ್ರತಿಷ್ಠಾನ, ಕೊಪ್ಪಳದಲ್ಲಿ ಹೆಸರಾಂತ ಸಾಹಿತಿ ಸಿದ್ದಯ್ಯ ಪುರಾಣಿಕ ಇಲ್ಲವೇ ಅಭಿನೇತ್ರಿ ಕುಕನೂರಿನ ರಹಮಾನವ್ವ ಕಲ್ಮನಿ ಅವರ ಹೆಸರಿನ ಪ್ರತಿಷ್ಠಾನ ಆಗಬೇಕು. ಬೀದರಿನಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದದೇವರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪನೆ ಆಗಬೇಕಿದೆ.

ಅದೇರೀತಿ ಕಲಬುರಗಿಯಲ್ಲಿ ವಿಮಲಕವಿ, ತತ್ವಪದಕಾರ ಖೈನೂರು ಕೃಷ್ಣಪ್ಪ ಅವರ ಹೆಸರಲ್ಲಿ ಸಾಂಸ್ಕೃತಿಕ ಪ್ರತಿಷ್ಠಾನ, ವಿಜಯನಗರದಲ್ಲಿ ಮುದೇನೂರ ಸಂಗಣ್ಣ ಪ್ರತಿಷ್ಠಾನ, ಬಳ್ಳಾರಿಯಲ್ಲಿ ಪಂಡಿತ ತಾರಾನಾಥರ ಪ್ರತಿಷ್ಠಾನವನ್ನು ಸರ್ಕಾರ ಆರಂಭಿಸಬೇಕು. ತನ್ಮೂಲಕ ಎಪ್ಪತ್ತೈದು ವರುಷಗಳ ಕಾಲ ಹೈದರಾಬಾದ್ ಕರ್ನಾಟಕಕ್ಕೆ ತಗುಲಿದ ಸಾಂಸ್ಕೃತಿಕ ಶಾಪ ವಿಮೋಚನೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT