ಬುಧವಾರ, ಜನವರಿ 20, 2021
17 °C
ಶಾಲಾ ತರಗತಿಗಳು ಔಪಚಾರಿಕವಾಗಿ ಆನ್‌ಲೈನಿನಲ್ಲಿ ನಡೆಯುತ್ತಿದ್ದರೂ ವಿದ್ಯಾರ್ಥಿ ಪೂರ್ಣಪ್ರಮಾಣದ ಶುಲ್ಕ ಭರಿಸಬೇಕೆನ್ನುವುದು ಎಷ್ಟು ಸರಿ?

ಸಂಗತ | ಶುಲ್ಕ ವ್ಯವಸ್ಥೆ: ವಿಸ್ತೃತ ಚರ್ಚೆಯಾಗಲಿ

ಕೇಸರಿ ಹರವೂ Updated:

ಅಕ್ಷರ ಗಾತ್ರ : | |

Prajavani

ಈ ವರ್ಷದ ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಇದೇ ತಿಂಗಳ 30ರ ಬಳಿಕ ಆನ್‌ಲೈನ್ ಶಿಕ್ಷಣವನ್ನು ಮುಂದುವರಿಸುವುದಿಲ್ಲ ಎಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ಅದಕ್ಕೆ ಶಿಕ್ಷಣ ಸಚಿವರು ‘ಶುಲ್ಕ ಕಟ್ಟದಿದ್ದರೂ ಮಕ್ಕಳನ್ನು ಈ ವರ್ಷ ತೇರ್ಗಡೆ ಮಾಡಬೇಕು ಎನ್ನುವ ನನ್ನ ಹೇಳಿಕೆಯನ್ನು ಅವರು ಯಾವ ರೀತಿ ಅರ್ಥಮಾಡಿಕೊಂಡರೋ! ಅವರ ಮತ್ತು ಪೋಷಕರ ಸಮಸ್ಯೆಗಳಿಗೆ ಹಿತಕರ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಕ್ಕೂಟವು ಸ್ಪಷ್ಟವಾಗಿ ಪಾಳೆಗಾರಿ ಧೋರಣೆಯನ್ನು ಅನುಸರಿಸುತ್ತಿದೆ, ಸರ್ಕಾರ ತನ್ನ ಕೀಳರಿಮೆಯನ್ನು ಪ್ರಕಟಿಸುತ್ತಿದೆ.

ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಇಂದು (ನ. 27) ಸರ್ಕಾರ ಮತ್ತು ಒಕ್ಕೂಟದ ನಡುವೆ ನಡೆಯುವ ಸಭೆಯಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಂಡು, ನಂತರ ಸರ್ಕಾರ ಹಿತಕರ ಕ್ರಮವನ್ನು ಪ್ರಕಟಿಸುವುದು ಒಳಿತು:

ಒಕ್ಕೂಟವು ಸಂವಿಧಾನದ 21ಎ ವಿಧಿಯ ವ್ಯಾಪ್ತಿಗೆ ಬರುವುದಿಲ್ಲವೇ? ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳು ಅಸ್ತಿತ್ವದಲ್ಲಿವೆಯೋ ಅಥವಾ ಶಾಲೆಗಳಿವೆ ಎಂದು ಮಕ್ಕಳು ಅಲ್ಲಿ ದಾಖಲಾಗಿ ವಿದ್ಯೆ ಕಲಿಯುತ್ತಾರೋ? ಸರ್ಕಾರ ಆಗಿಂದಾಗ್ಗೆ ಜಾರಿಗೆ ತಂದ ಕಾನೂನು, ನಿಯಮಾವಳಿ ಮತ್ತು ಪಾಲನಾ ಕ್ರಮಗಳನ್ನು ಎಲ್ಲ ಖಾಸಗಿ ಶಾಲೆಗಳೂ ಕರಾರುವಾಕ್ಕಾಗಿ ಪಾಲಿಸುತ್ತಿವೆಯೇ? ಇಲ್ಲವೆಂದಾದರೆ, ಸರ್ಕಾರ ಈವರೆಗೂ ಅಂಥ ಶಾಲೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ?

ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮಗಳನ್ನು ಬೋಧಿಸುವ ಶಾಲೆಗಳು ರಾಜ್ಯ ಸರ್ಕಾರದ ನಿಯಮಾವಳಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ಕೆಲವು ವಿಚಾರಗಳಲ್ಲಿ ಕಾಲಕಾಲಕ್ಕೆ ನುಣುಚಿಕೊಳ್ಳುತ್ತಲೇ ಬಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿರುವ ರಾಜ್ಯದ ನೆಲ, ಜಲ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತ, ಇಲ್ಲಿನ ಮಕ್ಕಳಿಗೇ ಶಿಕ್ಷಣ ನೀಡುತ್ತಿರುವ ಇಂಥ ಶಾಲೆಗಳು, ಪಠ್ಯಕ್ರಮ ಮತ್ತು ಪರೀಕ್ಷೆಗಳನ್ನು ಹೊರತುಪಡಿಸಿ ಇಲ್ಲಿನ ನಿಯಮಾವಳಿಗಳಿಗೆ ಬದ್ಧವಾಗಬೇಕಿಲ್ಲವೇ? ಇಲ್ಲ ಎಂದಾದರೆ, ಅವು ಇಲ್ಲಿ ಕಾರ್ಯನಿರ್ವಹಿಸುವ ಸರ್ವಸ್ವತಂತ್ರ ವಸಾಹತುಗಳೇ?

ಶಾಲೆ ನಡೆಯದಿದ್ದರೂ ಅಥವಾ ತರಗತಿಗಳು ಕೇವಲ ಔಪಚಾರಿಕವಾಗಿ ಆನ್‌ಲೈನಿನಲ್ಲಿ ನಡೆಯುತ್ತಿದ್ದರೂ ಆ ಶಾಲೆಯ ವಿದ್ಯಾರ್ಥಿ ಪೂರ್ಣಪ್ರಮಾಣದ ಶುಲ್ಕ ಭರಿಸಬೇಕೆನ್ನುವುದು ಎಷ್ಟು ಸರಿ? ಖಾಸಗಿ ಶಾಲೆಗಳ ಅನೇಕ ಸಿಬ್ಬಂದಿಯೇ ಒಪ್ಪಿಕೊಳ್ಳುವ ಹಾಗೆ, ಲಾಕ್‌ಡೌನ್ ನಂತರ ತಮ್ಮಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ, ಮಿಕ್ಕವರು ಅರ್ಧ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಅನೇಕ ಶಾಲೆಗಳ ಶಿಕ್ಷಕರು ತಮ್ಮ ಮನೆಗಳಿಂದಲೇ ತರಗತಿಗಳನ್ನು ನಡೆಸುತ್ತಿದ್ದಾರೆ.

ಹೀಗಿದ್ದೂ ಶಾಲಾ ಆವರಣದಲ್ಲಿನ ಶಿಕ್ಷಣಕ್ಕೆ ತಗಲುವಷ್ಟೇ ವೆಚ್ಚ ಈಗಲೂ ಆಗುತ್ತಿದೆಯೇ? ಸೇವಾ ಸಂಸ್ಥೆಗಳೆಂದು ನೋಂದಾಯಿಸಿಕೊಂಡಿರುವ ಈ ಶಿಕ್ಷಣ ಸಂಸ್ಥೆಗಳು ತಮ್ಮ ಲೆಕ್ಕಪತ್ರಗಳನ್ನು ಸಾರ್ವಜನಿಕ ಅವಗಾಹನೆಗೆ ತೆರೆದಿಡಲು ತಯಾರಿವೆಯೇ?

ಹೀಗೆ ಪ್ರಶ್ನೆಗಳನ್ನು ಕೇಳುತ್ತಲೇ ಹೋಗಬಹುದು. ಸಮಾಜದ ಎಲ್ಲ ದುಡಿಯುವ ವರ್ಗದ ಜನರೂ ಕೋವಿಡ್ ಸಂಬಂಧಿ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟದಲ್ಲಿರುವಾಗ ತನಗದು ಸಂಬಂಧವೇ ಇಲ್ಲ ಎನ್ನುವಂತೆ ಒಕ್ಕೂಟ ವರ್ತಿಸುತ್ತಿರುವುದು ಅದರ ಸಂವೇದನಾರಾಹಿತ್ಯವನ್ನಷ್ಟೇ ಬಯಲು ಮಾಡುತ್ತದೆ.

ಈ ವರ್ಷ ಚಾಲ್ತಿಯಲ್ಲಿರುವ ಪರ್ಯಾಯ ಬೋಧನಾ ವ್ಯವಸ್ಥೆಗಳು ಮಕ್ಕಳಿಗೆ ನಿಜಕ್ಕೂ ಸಮರ್ಪಕ ಕಲಿಕಾ ವಾತಾವರಣವನ್ನು ಒದಗಿಸುತ್ತಿವೆಯೇ? ಆಯಾ ವಯಸ್ಸಿಗೆ ಅವಶ್ಯಕವಾದ ಕಲಿಕೆಯ ನಿರಂತರತೆಯು ಕುಂಠಿತವಾಗದಂತೆ ನಡೆಸುತ್ತಿವೆಯೇ? ಶಾಲೆಗಳೇ ಇಲ್ಲದ ವಾತಾವರಣವು ಮಕ್ಕಳ ಮೇಲೆ ಯಾವ ರೀತಿಯ ಅಡ್ಡಪರಿಣಾಮಗಳನ್ನು ಬೀರುತ್ತಿದೆ? ಅವನ್ನು ಕಡಿಮೆ ಮಾಡಲು ಶಿಕ್ಷಣ ಮತ್ತು ಇತರ ಸಾಮಾಜಿಕ ಕ್ಷೇತ್ರಗಳು ಹೇಗೆ ಸಜ್ಜಾಗಬೇಕು? ಇಂಥ ಮುಖ್ಯ ಪ್ರಶ್ನೆಗಳನ್ನು ಶಾಲೆಗಳಾಗಲೀ ಸರ್ಕಾರದ ವಿವಿಧ ಇಲಾಖೆಗಳಾಗಲೀ ಈವರೆಗೆ ಗಣನೆಗೇ ತೆಗೆದುಕೊಂಡಿಲ್ಲ ಎನ್ನುವುದು ವಿಷಾದಕರ. ಪೋಷಕರು ಸಂಘಟಿತರಾಗದ ಹೊರತು ಇವಕ್ಕೆ ಉತ್ತರಗಳೂ ಸಿಕ್ಕುವುದಿಲ್ಲ.

ಈ ವರ್ಷ ಎಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಬೇಕು, ಎಷ್ಟು ಕಲಿಸಿ ಅಥವಾ ಎಷ್ಟು ಕಲಿಸದಿದ್ದರೂ ಮುಂದಿನ ತರಗತಿಗೆ ಹೇಗೆ ತೇರ್ಗಡೆ ಮಾಡಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದಿನಿತೂ ಹೊರೆಯಾಗದಂತೆ ಹೇಗೆ ಈ ವರ್ಷವನ್ನು ಸಾಗಹಾಕಬೇಕು ಎನ್ನುವ ವಿಚಾರಗಳೇ ಇಂದು ಮುನ್ನೆಲೆಯ ಚರ್ಚೆಯಲ್ಲಿವೆ. ತಮ್ಮ ಮಕ್ಕಳು ಪರೀಕ್ಷೆಯನ್ನೇ ಎದುರಿಸದೆ ಮುಂದಿನ ತರಗತಿಗೆ ಹೋಗಿ ಕೂರಲಿ ಎಂದು ಯಾವ ಪೋಷಕರೂ ಅಹವಾಲು ಸಲ್ಲಿಸಿಲ್ಲ. ಪರ್ಯಾಯ ವ್ಯವಸ್ಥೆಯ ಅನಿವಾರ್ಯದಲ್ಲೂ ಬೋಧನೆ ಮತ್ತು ಪರೀಕ್ಷೆ ಎರಡೂ ಸಾಧ್ಯವಾದಷ್ಟು ತೃಪ್ತಿಕರವಾಗಿಯೇ ನಡೆಯಲಿ, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದು ಬೇಡ ಎಂದು ಬಯಸುವ ಪೋಷಕರೇ ಹೆಚ್ಚು ಇದ್ದಾರೆ. ಹಾಗೆಯೇ, ಇಂಥ ಸಂಕಷ್ಟ ಕಾಲದಲ್ಲಿ ಶಿಕ್ಷಣ ಶುಲ್ಕದ ಹೊರೆ ತಕ್ಕಮಟ್ಟಿಗೆ ಕಡಿಮೆಯಾಗಲಿ ಎಂದಷ್ಟೆ ಬಯಸುತ್ತಾರೆಯೇ ಹೊರತು ಖಾಸಗಿ ಸಂಸ್ಥೆಗಳಿಂದ ಉಚಿತ ಶಿಕ್ಷಣವನ್ನಂತೂ ಬಯಸುತ್ತಿಲ್ಲ. ಈ ಎಲ್ಲ ವಿಚಾರಗಳು ಚರ್ಚೆಯಾಗಿ ಸಮಂಜಸ ಆದೇಶ ಪ್ರಕಟವಾಗಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು