ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ, ಗತ್ತು, ಗಮ್ಮತ್ತು; ಭಾರತದಲ್ಲಿ ಗಾಂಜಾ ಕಾನೂನುಬದ್ಧಗೊಳ್ಳಲಿದೆಯೇ?

Last Updated 7 ಡಿಸೆಂಬರ್ 2020, 18:36 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಮಾದಕ ದ್ರವ್ಯಗಳ ಆಯೋಗವು ಗಾಂಜಾವನ್ನು (Cannabis) ಅಪಾಯಕರವಲ್ಲದ ಮಾದಕ ದ್ರವ್ಯಗಳ ವರ್ಗಕ್ಕೆ ಸೇರಿಸಲು ಒಪ್ಪಿಗೆ ನೀಡಿದೆ. ಈ ಕುರಿತು ಹಲವು ರಾಷ್ಟ್ರಗಳ ಮತದಾನಕ್ಕೆ ವಿಶ್ವಸಂಸ್ಥೆ ಆಹ್ವಾನ ನೀಡಿತ್ತು. ಒಟ್ಟು 27 ರಾಷ್ಟ್ರಗಳು ಪರವಾಗಿ ಮತ ಹಾಕಿವೆ. ಇವುಗಳಲ್ಲಿ ಭಾರತವೂ ಒಂದು ಎಂಬುದು ಗಮನಾರ್ಹ.

ವೈದ್ಯಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾರತದ ಈ ನಿಲುವು, ಭವಿಷ್ಯದಲ್ಲಿ ‘ಗಾಂಜಾ’ ಕುರಿತ ಕಾನೂನಿನ ಬದಲಾವಣೆಗೂ ದಾರಿಯಾಗಬಹುದೇ ಎಂಬ ಚರ್ಚೆ ನಡೆಯುತ್ತಿದೆ. ಕಾನೂನು ಬದಲಾದರೆ, ಇತ್ತೀಚೆಗೆ ಸುದ್ದಿ ಮಾಡಿದ ಸಿನಿತಾರೆಯರ ಮಾದಕ ದ್ರವ್ಯಗಳೊಂದಿಗಿನ ನಂಟು- ಜೈಲುವಾಸದಂತಹ ಸ್ಥಿತಿ ಬದಲಾಗಿ, ‘ಸೊಪ್ಪು ನಮ್ದು ಸೊಪ್ಪು ನಿಮ್ದು’ ಎಂದು ಹಾಡುವ ಪರಿಸ್ಥಿತಿ ಬರಬಹುದು ಎಂಬ ಜೋಕು ಹರಿದಾಡುತ್ತಿದೆ.

ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ವಿಶ್ವಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ. ಗಾಂಜಾಕ್ಕೆ ವೈದ್ಯಕೀಯ ಉಪಯೋಗಗಳಿವೆ ಎಂಬುದು ಸಂಶೋಧನಾ ದೃಢೀಕೃತ ಸತ್ಯ. ಏಡ್ಸ್ ರೋಗಿಗಳಲ್ಲಿ ಹಸಿವು ಹೆಚ್ಚಿಸಲು, ಕ್ಯಾನ್ಸರ್ ರೋಗಿಗಳಲ್ಲಿ ನೋವು ನಿವಾರಣೆಗೆ ಗಾಂಜಾ ಉಪಯುಕ್ತ.

ಪೂರ್ತಿಯಾಗಿ ನಿಷೇಧಿಸುವ ಬದಲು, ಆರೋಗ್ಯದ ಬಗೆಗೆ ಅರಿವು, ವಯಸ್ಸಿನ ನಿರ್ಬಂಧ, ಹೆಚ್ಚಿನ ತೆರಿಗೆ, ಸಕ್ರಿಯವಾಗಿರುವ ರಾಸಾಯನಿಕ ಅಂಶಗಳ ಕಡಿತ ಮತ್ತು ನಿಲ್ಲಿಸಬೇಕೆನ್ನುವವರಿಗೆ ವೈದ್ಯಕೀಯ ಸಲಹೆ- ಚಿಕಿತ್ಸೆ ಇವು ಗಾಂಜಾಕ್ಕೂ ಅನ್ವಯವಾಗಬೇಕು ಎಂಬುದು ಈ ಕ್ರಮದ ಹಿಂದಿರುವ ಪ್ರಮುಖ ಉದ್ದೇಶ. ಇದರಿಂದ ದೇಶಕ್ಕೆ ಇತರ ಲಾಭಗಳೂ ಉಂಟು. ಪೊಲೀಸ್‌ ವ್ಯವಸ್ಥೆ ತನ್ನ ಅಮೂಲ್ಯ ಸಮಯವನ್ನು ನಿಜವಾದ ಅಪರಾಧಿಗಳನ್ನು ಹಿಡಿಯಲು ಉಪಯೋಗಿಸುವುದೂ ಸಾಧ್ಯ. ಹಾಗೆಯೇ ದೇಶದ ಆರ್ಥಿಕ ವ್ಯವಸ್ಥೆಗೆ ಹೊಸತಾದ, ಹೆಚ್ಚಿನ ಆದಾಯ!

‘ಮರಿಜುವಾನಾ’ ಎಂಬ ವರ್ಣಮಯ ಹೆಸರಿನ ಗಾಂಜಾ ಭಾರತದಲ್ಲಿ ಸುಮಾರು 200 ವರ್ಷಗಳ ಇತಿಹಾಸ ಹೊಂದಿದೆ. ವಿವಿಧ ರೀತಿಗಳಲ್ಲಿ ಇದು ಉಪಯೋಗಿಸಲ್ಪಡುತ್ತದೆ. ಇದರ ಹೂವು ಮತ್ತು ಎಲೆಗಳು, ತೊಗಟೆ ಮತ್ತು ರಾಳದಿಂದ ಬರುವ ಎಣ್ಣೆ ಎಲ್ಲವೂ ವಿವಿಧ ಪ್ರಮಾಣದಲ್ಲಿ ಸಕ್ರಿಯ ಅಂಶವಾದ, ಹೆಚ್ಚು ‘ಕಿಕ್‌’ ನೀಡುವ ‘ಟಿಎಚ್‌ಸಿ’ಯನ್ನು (ಟೆಟ್ರಾ ಹೈಡ್ರೋ ಕೆನ್ನಾಬಿನಾಲ್) ಹೊಂದಿರುತ್ತವೆ.

ಮೊದಲು ಬ್ರಿಟಿಷರು ಈ ಮಾದಕ ವಸ್ತುವನ್ನು ನಿಷೇಧಿಸಲು ಪ್ರಯತ್ನಿಸಿದರು. ಆದರೆ ಅವರದೇ ಆಯೋಗವೊಂದು ‘ಮರಿಜುವಾನಾ’ದ ಮಧ್ಯಮ ಪ್ರಮಾಣದ ಬಳಕೆ ಆಕ್ಷೇಪಾರ್ಹವಲ್ಲ ಎಂಬ ತೀರ್ಪನ್ನು ನೀಡಿತು. ಭಾರತ 1961ರಲ್ಲಿ ನಡೆದ ಮಾದಕ ವಸ್ತುಗಳ ಸಮ್ಮೇಳನದಲ್ಲಿ, ಮರಿಜುವಾನಾವನ್ನು ಅಪಾಯಕರ ಮಾದಕ ದ್ರವ್ಯಗಳ ಗುಂಪಿನಲ್ಲಿ ಸೇರಿಸುವುದನ್ನು ವಿರೋಧಿಸಿತು. ಭಾರತೀಯ ಧಾರ್ಮಿಕ- ಸಾಮಾಜಿಕ ರೀತಿ ರಿವಾಜುಗಳಲ್ಲಿ ಆಗ ಮರಿಜುವಾನಾಕ್ಕೆ ಇದ್ದ ಸ್ಥಾನ ಇದಕ್ಕೆ ಕಾರಣ. ಸಾಧು-ಸನ್ಯಾಸಿಗಳು ಅಧ್ಯಾತ್ಮ ‘ಸಾಧನ’ವಾಗಿ ‘ಭಾಂಗ್’ ಹೆಸರಿನಲ್ಲಿ ಇದನ್ನು ಬಳಸುತ್ತಿದ್ದರು. ಹೋಳಿಯಂತಹ ಹಬ್ಬಗಳಲ್ಲಿ, ಮದುವೆ- ಶುಭ ಸಮಾರಂಭಗಳಲ್ಲಿ ಭಾಂಗ್‌ ಚಟ್ನಿ ಉಪಯೋಗಿಸಲ್ಪಡುತ್ತಿತ್ತು. ಆದರೆ ಅಂತರರಾಷ್ಟ್ರೀಯ ಸಮುದಾಯ ಎರಡು ಷರತ್ತುಗಳನ್ನು ವಿಧಿಸಿ, ದೇಶದಲ್ಲಿ ಗಾಂಜಾ ಬಳಕೆಗೆ ಅನುಮತಿ ನೀಡಿತು. ಆ ಷರತ್ತುಗಳೆಂದರೆ, ಒಂದು, ಭಾರತ ಗಾಂಜಾ ರಫ್ತು ಮಾಡಕೂಡದು. ಎರಡು, ಕ್ರಮೇಣ 25 ವರ್ಷಗಳಲ್ಲಿ ಭಾರತವು ಗಾಂಜಾ ಬಳಕೆ ಅಪರಾಧ ಎಂಬ ಕಾನೂನು ತರಬೇಕು. ಅದರಂತೆ 1985ರಲ್ಲಿ ಜಾರಿಗೆ ಬಂದ ನಾರ್ಕೋಟಿಕ್‌ ಆ್ಯಂಡ್‌ ಸೈಕೋಟ್ರೋಪಿಕ್‌ ಸಬ್‌ಸ್ಟ್ಯಾನ್ಸಸ್‌ ಕಾಯ್ದೆಯು ಮರಿಜುವಾನಾ ಬಳಕೆಯನ್ನು ಅಪರಾಧ ಎಂದು ಘೋಷಿಸಿತು.

ಈಗ ನಿರಪರಾಧೀಕರಣದ ಪರವಾಗಿ ಮತ ಹಾಕುವುದರೊಂದಿಗೆ ಭಾರತ ಒಂದು ಪೂರ್ಣಚಕ್ರ ತಿರುಗಿಸುವುದರತ್ತ ಹೆಜ್ಜೆ ಹಾಕಿದೆ. ಆದರೆ ಮನೋವೈದ್ಯೆಯಾಗಿ ನನ್ನಂತಹವರ ಕಾಳಜಿ ಏನು? ಗಾಂಜಾ ಉಪಯೋಗ ಮೆದುಳು- ಮನಸ್ಸು- ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಸಮಸ್ಯೆಗಳಿಗೆ ಹೆಚ್ಚು ಈಡಾಗುವ ಅಪಾಯ ಇರುವ ಯುವಜನರಲ್ಲಿ ಟಿಎಚ್‌ಸಿಯ ಹೆಚ್ಚಿನಂಶ ಮಾನಸಿಕ ಕಾಯಿಲೆಗಳನ್ನು ಬಹುಬೇಗ ಉಲ್ಬಣಗೊಳಿಸುವ ಸಾಧ್ಯತೆಗಳಿವೆ. ಹಾಸ್ಟೆಲ್‍ಗಳಲ್ಲಿ ಹೂಗಿಡಗಳ ಮಧ್ಯೆಯೇ ಗಾಂಜಾ ಗಿಡಗಳನ್ನು ಬೆಳೆಯುವುದು, ವಿದ್ಯಾರ್ಥಿಗಳು ಕದ್ದುಮುಚ್ಚಿ ಗಾಂಜಾ ಸಿಗರೇಟು ಸೇದುವುದು ಇವೆಲ್ಲಾ ಈಗಾಗಲೇ ನಾವು ನೋಡುತ್ತಿರುವ ಪ್ರಕರಣಗಳೇ.

ಕಾನೂನುಬದ್ಧವಾದರೆ ಇವೆಲ್ಲವೂ ತಮ್ಮ ಆಕರ್ಷಣೆ ಕಳೆದುಕೊಂಡು ಇಲ್ಲದಂತಾಗುತ್ತವೆಯೋ ಅಥವಾ ರಾಜಾರೋಷವಾಗಿ ಹೆಚ್ಚಾಗುತ್ತವೆಯೋ ಸದ್ಯದ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟ. ಎರಡು ವರ್ಷಗಳ ಹಿಂದೆ ಆ್ಯಮ್‍ಸ್ಟರ್‌ಡ್ಯಾಂಗೆ ಹೋಗಿದ್ದಾಗ, ಅಲ್ಲಿನ ಅಂಗಡಿಗಳಲ್ಲಿ ಮುಕ್ತವಾಗಿ ದೊರೆಯುತ್ತಿದ್ದ ‘ಗಾಂಜಾ ಲಾಲಿಪಾಪ್’ಗಳನ್ನು ನೋಡಿ, ‘ಮಕ್ಕಳು ತಿಂದುಬಿಟ್ಟರೆ ಏನು ಗತಿ!’ ಎಂದು ಹೆದರಿದ್ದು ಇಂದಿಗೂ ನೆನಪಿನಲ್ಲಿದೆ.

ಹಾಗಾಗಿಯೇ ಗಾಂಜಾದ ನಿರಪರಾಧೀಕರಣವಾದರೂ ಅಥವಾ ಜನವಿರೋಧಕ್ಕೆ ತಲೆಬಾಗಿ ಈಗ ಇರುವ ಕಾನೂನೇ ಮುಂದುವರಿದರೂ ‘ಎಲ್ಲಿ- ಯಾವಾಗ- ಎಷ್ಟು ಅದರ ಉಪಯೋಗ, ಯಾರಿಗೆ ಬೇಕು, ಬೇಡ’ ಎಂಬ ಅರಿವೇ ನಮ್ಮ ಯುವಜನರನ್ನು, ಇಡೀ ಸಮಾಜವನ್ನು ಮಾದಕ ದ್ರವ್ಯಗಳ ದ್ವಂದ್ವ ಮನಃಸ್ಥಿತಿಯಿಂದ ಮುಕ್ತರಾಗಿಸಬಲ್ಲದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT