ಸೋಮವಾರ, ಜನವರಿ 24, 2022
28 °C

ಸಂಗತ: ಸೂರ್ಯ ನಮಸ್ಕಾರ ಮತ್ತು ವೈಜ್ಞಾನಿಕ ಒತ್ತಾಸೆ

ಡಾ. ಎ.ಶ್ರೀಧರ Updated:

ಅಕ್ಷರ ಗಾತ್ರ : | |

Prajavani

ಮಕ್ಕಳ ಮನಸ್ಸಿನ ಬಗ್ಗೆ ವೈಜ್ಞಾನಿಕ ಚೌಕಟ್ಟಿನಲ್ಲಿ ಸಾವಿರಾರು ಅಧ್ಯಯನಗಳು ನಡೆದಿವೆ. ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಕಲಿಕೆ, ನೆನಪಿನ ಶಕ್ತಿ, ಆಲೋಚನಾ ಸಾಮರ್ಥ್ಯ, ಭಾಷೆ, ವ್ಯಕ್ತಿತ್ವ ವಿಕಸನ ಸೇರಿದಂತೆ ನೂರಾರು ವಿಷಯಗಳ ಬಗ್ಗೆ ವೈಜ್ಞಾನಿಕ ವಿವರಣೆಯ ಸಿದ್ಧಾಂತಗಳಿವೆ. ಅದರಲ್ಲೂ ವಿಶೇಷವಾಗಿ ಶಾಲಾ ಕಲಿಕೆಯ ನಮೂನೆಗಳು, ಅವುಗಳಿಂದ ಮಕ್ಕಳ ಮನೋವಿಕಾಸದ ಪರಿಯನ್ನು ತಿಳಿಯಪಡಿಸುವ ವ್ಯಾಖ್ಯಾನಗಳಿವೆ.

ಇವುಗಳನ್ನೇ ಆಧರಿಸಿ ಶೈಕ್ಷಣಿಕ ನೀತಿಯನ್ನು ಅಳವಡಿಸಿಕೊಂಡಿರುವ ದೇಶಗಳು ಹಲವು. ಇದರ ಅನುಷ್ಠಾನದ ಫಲವಾಗಿ ಮಕ್ಕಳ ಮನೋಸಾಮರ್ಥ್ಯದ ಏಳಿಗೆಯಾಗಿರುವುದರ ಬಗ್ಗೆಯೂ ವಿಮರ್ಶೆ, ಅಧ್ಯಯನ, ಮಾರ್ಗಸೂಚಿಗಳು ಲಭ್ಯವಿವೆ. ಮಕ್ಕಳ ನಡೆನುಡಿಯ ಮುನ್ನಡೆ, ಹಿನ್ನಡೆಗಳ ಬಗ್ಗೆ ಅರಿವು ಮೂಡಿಸುವ ಇಂತಹ ವಿಷಯಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡಿರುವ ವೈದ್ಯರು, ಶಿಶುರೋಗತಜ್ಞರು ವಿಶ್ವದಾದ್ಯಂತ ಅದೆಷ್ಟೋ ಸಂಖ್ಯೆಯಲ್ಲಿದ್ದಾರೆ.

ದೇಹಾರೋಗ್ಯವನ್ನು ಸದೃಢಗೊಳಿಸುವ, ಏಕಾಗ್ರತೆ ಹೆಚ್ಚಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ ಅಭ್ಯಸಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಮೊಬೈಲು, ಕಂಪ್ಯೂಟರ್‌ನಂತಹ ತಾಂತ್ರಿಕ ಸಲಕರಣೆಗಳ ಮೇಲಿನ ಅವಲಂಬನೆಯಿಂದ ಮಕ್ಕಳ ಮನಸ್ಸನ್ನು ಸೆಳೆಯಬಹುದೆಂಬ ಕಾರಣದಿಂದಲೂ ಇದು ಅವಶ್ಯಕ ಎಂದು ಹೇಳಲಾಗುತ್ತಿದೆ.

ಬಹುಶಃ ಇದೊಂದು ಅತಿಉತ್ಪ್ರೇಕ್ಷಿತ ಮಾತಷ್ಟೇ. ಹೀಗೆನ್ನುವುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಕಾಲೇಜು ವಿದ್ಯಾರ್ಥಿ ದಿಸೆ ಆರಂಭವಾಗುವ ವಯಸ್ಸು ಹದಿ ಹರೆಯದ ಕೊನೆಯ ಅವಧಿಯಲ್ಲಿ ಇರುವಂತಹದ್ದು. ಉಲ್ಲಾಸ, ಉನ್ಮಾದ, ಸಾಹಸ, ಸಂಕಟ ಇವು ಆ ವಯೋಮಾನದವರ ಪ್ರಮುಖ ಲಕ್ಷಣಗಳು. ಇವನ್ನು ನಿಯಂತ್ರಿಸುವ ಅಥವಾ ನಿರ್ವಹಿಸುವ ಪ್ರಯತ್ನಗಳೂ ಜೊತೆಯಲ್ಲಿಯೇ ನಡೆಯುವುದು ದಿಟ. ಮನೆಯ ವಾತಾವರಣ, ಗೆಳೆಯರ ಗುಂಪು ಮತ್ತು ಸತತ ಸೋಲುಗಳು ಈ ನಿಯಂತ್ರಣದ ಮಾದರಿಗಳು.

ಆದರೂ ಹತ್ತಾರು ವಿಷಯಗಳತ್ತ ಸಾಗುವ ಮನಸ್ಸು, ಅತಿ ಕ್ಷಿಪ್ರವಾಗಿ ಎಲ್ಲವನ್ನೂ ಅನುಭವಿಸುವ ಬಯಕೆ, ಮೋಹ, ಪ್ರೇಮಗಳತ್ತ ಸದಾ ಸುಳಿಯುವ ಒಳಭಾವಗಳು, ಅಂದ-ಚೆಂದವನ್ನು ಸಂಭ್ರಮಿಸಿ ಸವಿಯುವ ನವ ಆಕಾಂಕ್ಷೆಗಳು ತುಂಬಿ ತುಳುಕುತ್ತಿರು ವಂತಹ ಮನೋಶಾರೀರಿಕ ಸನ್ನಿವೇಶದ ಹಂತ ಇದು. ಈ ನಡೆನುಡಿಗಳಲ್ಲಿ ಅನೇಕವು ತಾತ್ಕಾಲಿಕವಾಗಿದ್ದು ನಂತರದಲ್ಲಿ ಸಂಪೂರ್ಣವಾಗಿ ಬದಲಾಗುತ್ತವೆ.

ಇಂತಹದ್ದೊಂದು ಮನುಷ್ಯ ಸಹಜ ಬೆಳವಣಿಗೆಯ ಅದ್ಭುತ ಅವಧಿಯನ್ನು ಒಂದು ಸರ್ಕಾರಿ ಆದೇಶದ ಮೂಲಕ ನಿಯಂತ್ರಿಸುತ್ತೇವೆ ಎಂದುಕೊಳ್ಳುವುದು ಸಂಭ್ರಾಂತಿಯಷ್ಟೇ. ಮನೋಗುಣಗಳಾದ ಅಭಿರುಚಿ, ಅಭಿಪ್ರೇರಣೆ, ಗುರಿ ಮುಟ್ಟುವ ಛಲಕ್ಕೆ ಅಗತ್ಯದ ವರ್ತನೆಗಳನ್ನು ಕಡೆಗಣಿಸುವ ಯಾವುದೇ ತಂತ್ರವು ಬಲವಂತದ ಹೇರಿಕೆಯಾಗುತ್ತದೆ. ಇನ್ನು ಮಕ್ಕಳ ಸ್ಮೃತಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ನೆನಪು ಮತ್ತು ಮರೆವು ಎಲ್ಲರಲ್ಲಿಯೂ ಇರುವುದಾದರೂ ಒಂದೇ ರೀತಿ ಕಾರ್ಯನಿರ್ವಹಿಸದು. ಉದಾಹರಣೆಗೆ, ಕೆಲವರಿಗೆ ಅಂಕಿಗಳು ತಕ್ಷಣದಲ್ಲಿ ನೆನಪಿನಲ್ಲಿ ಉಳಿದಂತೆ, ಅಕ್ಷರಗಳು ಉಳಿಯದಿರಬಹುದು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಈ ವಿಷಯದ ಬಗ್ಗೆ ತಪ್ಪುಗ್ರಹಿಕೆಗಳೇ ಹೆಚ್ಚು. ಉದಾಹರಣೆಗೆ, ವಿಜ್ಞಾನ- ತಂತ್ರಜ್ಞಾನದ ಕಲಿಕೆಗೆ ಉತ್ತಮ ನೆನಪಿನ ಶಕ್ತಿ ಇರಬೇಕೆನ್ನುವುದೇನೂ ನಿಜವಲ್ಲ. ಕಲೆ, ಸಾಹಿತ್ಯದ ವಿಷಯಗಳ ಅಭ್ಯಾಸಕ್ಕೂ ಅದೇ ಮಟ್ಟದ ನೆನಪಿನ ಬಲ ಇರಬೇಕಾಗುತ್ತದೆ.

ಇಂತಹ ಮನೋಗುಣಗಳಿದ್ದ ಮಕ್ಕಳಿಗೆ ಸೂಕ್ತ ಕಲಿಕೆಯ ವಾತಾವರಣ ಇದ್ದ ಪಕ್ಷದಲ್ಲಿ ಏಕಾಗ್ರತೆ ಎನ್ನುವಂತಹ ಪದಬಳಕೆಯ ಅಗತ್ಯವೇ ಇರದು. ಬದಲಿಗೆ ಕಲಿಯುವಿಕೆ, ಕಲಿಸುವಿಕೆಯ ಪಾತ್ರವೇ ಮಹತ್ವದ್ದಾಗಿರುತ್ತದೆ. ಹಾಗೇ ಕಲಿಯುವಿಕೆಯಲ್ಲೂ ಕಲಿಸುವವರ ನೆರವು ಇಲ್ಲದೆಯೇ ಉತ್ತಮವಾಗಿ ಕಲಿಯುವುದು ಸಾಧ್ಯ. ಒಂದು ರೀತಿಯಲ್ಲಿ ಏಕಲವ್ಯನ ಕಲಿಕೆ ಇದ್ದ ಹಾಗೆ. ಅವನಲ್ಲಿ ಮುಖ್ಯವಾಗಿ ಇದ್ದದ್ದು ಕಲಿಯುವ ಆಸಕ್ತಿ. ಜೊತೆಗೆ ಕಲಿಯುವುದಕ್ಕೆ ಅಗತ್ಯ ಇದ್ದಂತಹ ವಾತಾವರಣ ಮತ್ತು ಅಭಿಪ್ರೇರಣೆ. ಇವು ಇಂದಿನ ದಿನಗಳಲ್ಲಿ ಶಾಲಾ ಕಾಲೇಜಿನ ಪರಿಸರದಿಂದ ದೂರವಿರುವುದೇ ಹೆಚ್ಚು. ಇಂದು ಶಿಕ್ಷಣ ಕ್ಷೇತ್ರವು ಅತಿಲಾಭ ತರಬಲ್ಲ ಉದ್ದಿಮೆಯ ಸ್ವರೂಪವನ್ನು ತಾಳಿ ರುವುದರಿಂದ ಬಹುಜನರಿಗೆ ಗುಣಮಟ್ಟದ ಶಿಕ್ಷಣ ಗಗನಕುಸುಮವೇ ಹೌದು. ಸೂರ್ಯ ನಮಸ್ಕಾರ ಇದನ್ನು ಬದಲಿಸಿಬಿಟ್ಟರೆ ಅದೆಷ್ಟು ಅಮೋಘ!

ಹಾಗೆಯೇ, ಇಂದು ನಮ್ಮ ಮನೋಸಾಮಾಜಿಕ ಆರೋಗ್ಯದ ಪರಿಸ್ಥಿತಿಯೂ ಕಳವಳಕಾರಿಯಾಗಿದೆ. ಸಾರ್ವಜನಿಕವಾಗಿ ಹಗೆತನ, ಹಿಂಸೆಯನ್ನೇ ಬೋಧಿ ಸುವ, ಪ್ರಚೋದಿಸುತ್ತಿರುವವರ ಗುಂಪುಗಳು ಬಲ ವಾಗಿ ಬೆಳೆಯುತ್ತಿದ್ದು ಮಕ್ಕಳು ಮತ್ತು ಯುವಜನರ ಮನಸ್ಸಿನಲ್ಲಿ ಆತಂಕ, ಗೊಂದಲಗಳನ್ನು ಸೃಷ್ಟಿಸುತ್ತಿವೆ. ಇದರೊಂದಿಗೆ ತಂತ್ರಜ್ಞಾನದ ಸೌಲಭ್ಯ ಮತ್ತು ಸಂವ ಹನದ ಮಾಧ್ಯಮಗಳೆಲ್ಲವೂ ಒಟ್ಟಾದಾಗ ಕಲಿಕೆಯ ಅಡಿಪಾಯವನ್ನೇ ಕದಲಿಸುವಷ್ಟು ಬಲವಾಗಿರುತ್ತವೆ.

ಒಂದು ಮಾತಂತೂ ಸತ್ಯ. ಯುವಜನರ ಶಕ್ತಿ- ಸಾಮರ್ಥ್ಯ ಹೆಚ್ಚಿಸಬೇಕೆಂಬ ಪ್ರಯತ್ನ ಶ್ಲಾಘನೀಯ. ಆದರದು ವೈಜ್ಞಾನಿಕ ಅಧ್ಯಯನಗಳು ಕಂಡು ಕೊಂಡಂಥ ಸತ್ಯವಾಗಿರಬೇಕು. ಹಸಿವಿನಲ್ಲೂ ಪಾಠ ಕಲಿಯಲು ಶಾಲಾ ಕಾಲೇಜಿನತ್ತ ಬರುವ ಮಕ್ಕಳ ಘನೋದ್ದೇಶವನ್ನು ಬೆಂಬಲಿಸುವುದು ಮೆಚ್ಚಿಕೊಳ್ಳತಕ್ಕದ್ದು. ಬದಲಿಗೆ, ಕವಾಯತಿನ ರೀತಿಯಲ್ಲಿ ಮೈಕೈ ಚಲಿಸುವುದರ ಮೂಲಕ ಮನೋಸಿದ್ಧಿ, ಯೋಗಸಿದ್ಧಿ ಮಾಡಬೇಕೆನ್ನುವುದು ಯೋಗಶಾಸ್ತ್ರದ ಉದ್ದೇಶ ಮತ್ತು ನಿಯಮಗಳನ್ನು ನಿರಾಕರಿಸಿದಂತೆಯೇ ಸರಿ.

ಲೇಖಕ: ಮನೋವಿಜ್ಞಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು