ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಗ್ರಾಮ ನ್ಯಾಯಾಲಯ ಗ್ರಾಮ ತಲುಪೇ ಇಲ್ಲ!

Published 3 ಜುಲೈ 2023, 23:30 IST
Last Updated 3 ಜುಲೈ 2023, 23:30 IST
ಅಕ್ಷರ ಗಾತ್ರ

ಅಶಕ್ತರು ನ್ಯಾಯ ಪಡೆಯಲು ನ್ಯಾಯಾಲಯಗಳಿಗೆ ಹೋಗುವ ಬದಲು ಖುದ್ದು ನ್ಯಾಯಾಲಯಗಳೇ ಅವರ ಬಳಿಗೆ ಬರುವಂತೆ ಮಾಡುವ ಸದುದ್ದೇಶದಿಂದ ಹಾಗೂ ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಅನುಷ್ಠಾನ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ಗ್ರಾಮ ನ್ಯಾಯಾಲಯ ಕಾಯ್ದೆ- 2008 ಅನ್ನು ಜಾರಿಗೆ ತಂದಿತು. ಪ್ರತಿಯೊಬ್ಬ ವ್ಯಕ್ತಿಗೂ ತ್ವರಿತಗತಿಯಲ್ಲಿ ಗುಣಮಟ್ಟದ ನ್ಯಾಯ ಸಿಗಬೇಕು ಎಂದು ಭಾರತ ಕಾನೂನು ಆಯೋಗ  ನೀಡಿರುವ ಸಲಹೆಯ ಮೇರೆಗೆ ಈ ಕಾಯ್ದೆ ಅನುಷ್ಠಾನಗೊಂಡಿತು. ಅದರ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಬಹುದಾಗಿದೆ. ಆಯಾ ರಾಜ್ಯದ ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ಈ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಹೊಣೆ ರಾಜ್ಯ ಸರ್ಕಾರಗಳ ಮೇಲಿದೆ.

ರಾಜ್ಯ ಸರ್ಕಾರವು ಹೈಕೋರ್ಟ್‌ ಸಲಹೆ ಮೇರೆಗೆ ಗ್ರಾಮ ನ್ಯಾಯಾಲಯದ ಅಧ್ಯಕ್ಷರನ್ನಾಗಿ ನ್ಯಾಯಾಧಿಕಾರಿ
ಯೊಬ್ಬರನ್ನು ನೇಮಕ ಮಾಡುತ್ತದೆ. ಇದು ಒಂದು ಬಗೆಯ ಸಂಚಾರಿ ನ್ಯಾಯಾಲಯವಾಗಿದ್ದು, ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಲಯಗಳ ಅಧಿಕಾರವನ್ನು ಚಲಾಯಿಸುತ್ತದೆ. ಸಿವಿಲ್‌ ವಿವಾದಗಳಾದ ಆಸ್ತಿ ಖರೀದಿ ಹಕ್ಕು, ನೀರಾವರಿ ಕಾಲುವೆಯಿಂದ ನೀರನ್ನು ತೆಗೆದುಕೊಳ್ಳುವುದು ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ವಿವಾದಗಳು, ವೇತನ ಪಾವತಿ ಕಾಯ್ದೆ ಹಾಗೂ ಕನಿಷ್ಠ ವೇತನ ಕಾಯ್ದೆ ಅಡಿ ಬರುವ ಹಕ್ಕುಗಳು, ವ್ಯಾಪಾರ ವಹಿವಾಟು ಅಥವಾ ಆ ಸಂಬಂಧದ ಸಾಲದಿಂದ ಉಂಟಾಗುವ ಹಣದ ದಾವೆಗಳು, ಭೂಮಿಯ ಸಾಗುವಳಿಯಲ್ಲಿ ಪಾಲುದಾರಿಕೆಯಿಂದ ಉಂಟಾಗುವ ವಿವಾದಗಳು ಹಾಗೂ ಎರಡು ವರ್ಷಗಳ ಶಿಕ್ಷೆ ಮೀರದ ಅಪರಾಧಗಳು, ಕಳ್ಳತನ, ಕಳವು ಮಾಲು ಹಾಗೂ ಸಣ್ಣಪುಟ್ಟ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಇದಕ್ಕೆ ಇದೆ. ಗ್ರಾಮ ನ್ಯಾಯಾಲಯವು ಸಿವಿಲ್ ವ್ಯಾಜ್ಯದ ಸಂಬಂಧ ನೀಡುವ ತೀರ್ಪಿನ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ, ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಗ್ರಾಮ ನ್ಯಾಯಾಲಯಗಳ ಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆರ್ಥಿಕ ನೆರವು ನೀಡುವ ಮೂಲಕ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ, ಈ ಕಾರ್ಯಾಚರಣೆಯ ಸಂಪೂರ್ಣ ಯಶಸ್ಸು ಕ್ರಮಬದ್ಧವಾದ ಅನುಷ್ಠಾನವನ್ನು ಅವಲಂಬಿಸಿರುತ್ತದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಕೇರಳದಲ್ಲಿ ಹೆಚ್ಚಿನ ಗ್ರಾಮ ನ್ಯಾಯಾಲಯಗಳು ಸ್ಥಾಪನೆಯಾಗಿವೆ. ಕರ್ನಾಟಕ ಈ ವಿಚಾರದಲ್ಲಿ ತುಂಬಾ ಹಿಂದೆ ಉಳಿದಿದೆ.

ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿದೆ. ಈ ನ್ಯಾಯಾಲಯಗಳನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದಕ್ಕೆ ಪೂರಕವಾಗಿ ಕೆಲವು ನಿರ್ದೇಶನಗಳನ್ನು ನೀಡಿದೆ. ಇತ್ತೀಚೆಗೆ ನಡೆದ ಅಖಿಲ ಭಾರತ ಕಾನೂನು ಸಚಿವರ ಸಭೆಯಲ್ಲಿ ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಕುರಿತು ಚರ್ಚೆ ನಡೆದಿದೆ. ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಇರುವೆಡೆ ಹಂತ ಹಂತವಾಗಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಹಿಂದಿನ ಕಾನೂನು ಸಚಿವರು ತಿಳಿಸಿದ್ದರು. ದುರದೃಷ್ಟದ ಸಂಗತಿಯೆಂದರೆ, ರಾಜ್ಯದಲ್ಲಿ ಒಂದೇ ಒಂದು ಗ್ರಾಮ ನ್ಯಾಯಾಲಯವೂ ಕಾರ್ಯನಿರ್ವಹಿಸುತ್ತಿಲ್ಲ. ಗೌರಿಬಿದನೂರು ತಾಲ್ಲೂಕಿನ ಹೊಸೂರು ಹಾಗೂ ಗುಡಿಬಂಡೆ ತಾಲ್ಲೂಕಿನ ಮಂಡಿಕಲ್ ಹೋಬಳಿಗಳಲ್ಲಿ ಎರಡು ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಇವೆರಡೂ ಕಾರ್ಯನಿರ್ವಹಿಸುತ್ತಿಲ್ಲ. 

ಕೋರ್ಟ್‌ಗಳಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಒಂದು ಕೋಟಿಗೂ ಹೆಚ್ಚು ಸಿವಿಲ್ ಪ್ರಕರಣಗಳು ಮತ್ತು ಮೂರು ಕೋಟಿಗೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ನ ಅಂಕಿಅಂಶಗಳು ತಿಳಿಸುತ್ತವೆ. ಹಾಗಾಗಿ, ದೇಶದ ನ್ಯಾಯಾಂಗ ವ್ಯವಸ್ಥೆಗೆ ಗ್ರಾಮ ನ್ಯಾಯಾಲಯಗಳ ಅಗತ್ಯವಿದ್ದು, ಇದರಿಂದ ಕೋರ್ಟ್‌ಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು.

ಗ್ರಾಮ ನ್ಯಾಯಾಲಯ ಸ್ಥಾಪನೆ ಯೋಜನೆಯನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡುವುದರ ಜೊತೆಗೆ, ಸೂಕ್ತ ಮೂಲ ಸೌಕರ್ಯಗಳ ನಿರ್ವಹಣೆಗಾಗಿ ಹಣವನ್ನು ಸರಿಯಾಗಿ ವಿನಿಯೋಗಿಸಬೇಕು. ಗ್ರಾಮ ನ್ಯಾಯಾಲಯದ ಪ್ರಯೋಜನಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವುದು ಬಹು ಮುಖ್ಯವಾದ ಕೆಲಸವಾಗಿದೆ.

ಗ್ರಾಮ ನ್ಯಾಯಾಲಯ ಕಾಯ್ದೆಯನ್ನು 2008ರಲ್ಲಿ ಕೇಂದ್ರದಲ್ಲಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿತು. ಈಗ, ರಾಜ್ಯ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವ ಮೂಲಕ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಶಕ್ತರಿಗೆ ಗುಣಮಟ್ಟದ ನ್ಯಾಯವನ್ನು ದೊರಕಿಸಿಕೊಡಬೇಕಾಗಿದೆ.

ಲೇಖಕ: ಸಹಪ್ರಾಧ್ಯಾಪಕ, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಕಾನೂನು ಅಧ್ಯಯನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT