ಸೋಮವಾರ, ಸೆಪ್ಟೆಂಬರ್ 20, 2021
25 °C
ಮಳೆ ನೀರನ್ನು ಸಂಗ್ರಹಿಸಿಕೊಂಡು, ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಸರಬರಾಜಿನಲ್ಲಾಗುವ ಸೋರಿಕೆ ತಡೆದರೆ ಬೃಹತ್ ನಗರಗಳು ನೀರಿನ ಬಳಕೆಯಲ್ಲಿ ಸ್ವಾವಲಂಬಿಯಾಗುತ್ತವೆ

ಸಂಗತ: ಜಲ ಸ್ವಾವಲಂಬನೆಗೆ ಇದೋ ಹಾದಿ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಎಪ್ಪತ್ತೈದನೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೇಕೆದಾಟು ಯೋಜನೆ ಖಚಿತ ಎಂದು ಹೇಳುತ್ತಾ, ಅಮೃತ ನಗರೋತ್ಥಾನ ಯೋಜನೆಯ ಅಡಿಯಲ್ಲಿ ಬೆಂಗಳೂರಿನ 75 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿ
ಪಡಿಸಲಾಗುವುದು ಎಂದಿದ್ದಾರೆ. ಅದರ ಪ್ರಕಾರ ಕೆರೆಗಳ ಅಭಿವೃದ್ಧಿಯಾದರೆ, ನಗರಕ್ಕೆ ದೂರದಿಂದ ನೀರು ತರುವ ಅಗತ್ಯ ಬರಲಾರದು.

ಅವರ ಹೇಳಿಕೆಗೆ ಪೂರಕವಾದ ಅನೇಕ ಸಕಾರಾತ್ಮಕ ಅಂಶಗಳಿವೆ. ಕೆರೆಗಳ ಅಭಿವೃದ್ಧಿಗೆ ಅಣೆಕಟ್ಟೆಗೆ ಬೇಕಾಗುವಂತೆ ಸಾವಿರಾರು ಕೋಟಿ ರೂಪಾಯಿ ಬೇಕಿಲ್ಲ. ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ 800 ಮಿ.ಮೀ. ಮಳೆ ಬೀಳುತ್ತದೆ. ಅದರ ಅರ್ಧದಷ್ಟನ್ನು ಹಿಡಿದಿಟ್ಟುಕೊಂಡು ಬಳಸಿದರೂ ಬೆಂಗಳೂರಿನ ನೀರಿನ ಬವಣೆ ಬಹುಪಾಲು ಬಗೆಹರಿಯುತ್ತದೆ. ಕಾವೇರಿ ನದಿಯ ಗಣನೀಯ ಪಾಲು ನೀರು ಈಗಾಗಲೇ ಬೆಂಗಳೂರಿಗೆ ಹರಿದು ಬರುತ್ತಿದೆ.

ಕೆರೆತಜ್ಞ ಶಿವಾನಂದ ಕಳವೆ ಅವರು ಹೇಳುವಂತೆ, ನಗರದ ಎಲ್ಲ ಕೆರೆಗಳನ್ನು ಸರಣಿ ಕೆರೆಗಳಂತೆ ಜೋಡಿಸಿಬಿಟ್ಟರೆ ಬೆಂಗಳೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಕೆರೆಗಳ ಹೂಳೆತ್ತಿ ಒತ್ತುವರಿಯನ್ನು ತೆರವುಗೊಳಿಸಿ, ಏರಿಗಳನ್ನು ಭದ್ರಗೊಳಿಸಿದರೆ ನಮ್ಮ ನಗರದ ವಿಶಾಲ ಕೆರೆಗಳು ಕುಡಿಯುವ ಮತ್ತು ಬಳಕೆಗೆ ಬೇಕಾಗುವ ನೀರೊದಗಿಸುತ್ತವೆ. ಆಗ ಅಪಾರ ಪರಿಸರ ನಾಶ ಮಾಡುತ್ತಿರುವ ಎತ್ತಿನಹೊಳೆ ಮತ್ತು ಉದ್ದೇಶಿತ ಮೇಕೆದಾಟು ಯೋಜನೆಗಳೆರಡೂ ಬೇಕಾಗುವುದಿಲ್ಲ.

ಬೆಂಗಳೂರು ನಗರದ ನೀರಿನ ಸವಾಲು ಎದುರಿಸಲು ಇನ್ನೂ ಒಂದು ಸುವರ್ಣಾವಕಾಶಇದೆ. ಅದು ನಗರದ ಮನೆ, ಉದ್ಯಮ, ಹೋಟೆಲ್, ಶಾಲೆ, ಮಾಲ್ ಮತ್ತಿತರ ಜಾಗಗಳಿಂದ ಬಳಕೆಯ ನಂತರ ಚರಂಡಿ, ಕಾಲುವೆಗಳನ್ನು ಸೇರುವ ನೀರನ್ನು ಸಂಪೂರ್ಣವಾಗಿ ಪುನರ್ಬಳಕೆ ಮಾಡುವುದು! ಅದಕ್ಕೆ ಬೇಕಾದ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಳಸಿ ಯಶಸ್ವಿಯಾದ ಅನೇಕ ಉದಾಹರಣೆಗಳು ವಿಶ್ವದಾದ್ಯಂತ ಇವೆ.

ಇಸ್ರೇಲ್‌ನಲ್ಲಿ ನಮ್ಮ ಕೋಲಾರ ಜಿಲ್ಲೆಯಲ್ಲಿ ಬೀಳುವ ಮಳೆಯ ಕಾಲುಭಾಗ ಮಾತ್ರ ಲಭ್ಯವಿದ್ದರೂ ಇಡೀ ದೇಶದಲ್ಲಿ ನೀರಿನ ಅಭಾವ ತಲೆದೋರದಂತೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ನಮೀಬಿಯಾದಂಥ ಪುಟ್ಟದೇಶ ತನ್ನ ಪ್ರಜೆಗಳು ಬಳಸಿ ಬಿಸಾಡುವ ತ್ಯಾಜ್ಯ ನೀರನ್ನೆಲ್ಲ ಶುದ್ಧೀಕರಿಸಿ ಕುಡಿಯಲು ಬಳಸುತ್ತಿದೆ!

ಬೆಂಗಳೂರಿನಷ್ಟೇ ವಿಶಾಲವಾಗಿರುವ ದ್ವೀಪರಾಷ್ಟ್ರ ಸಿಂಗಪುರ ಕುಡಿಯುವ ನೀರಿನ ಅರ್ಧದಷ್ಟನ್ನು ಪಕ್ಕದ ಮಲೇಷ್ಯಾದಿಂದ ತರಿಸಿಕೊಳ್ಳುತ್ತಿತ್ತು. ಈಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನ್ನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕುಡಿಯಲು ಮತ್ತು ಉದ್ಯಮಗಳಿಗೆ ಬಳಸುತ್ತಿದೆ. ಜೊತೆಗೆ ಸಮುದ್ರದ ನೀರಿನ ಉಪ್ಪನ್ನು ಬೇರ್ಪಡಿಸುವುದರ ಜೊತೆಗೆ, ಬೀಳುವ ಮಳೆಯ ಪ್ರತೀ ಹನಿಯನ್ನೂ ಸಂಗ್ರಹಿಸಿ ಬಳಸುತ್ತಿದೆ. ಜಾಗದ ಕೊರತೆ ಇರುವ ಸಿಂಗಪುರದಲ್ಲಿ ಶುದ್ಧೀಕರಣ ಘಟಕಗಳನ್ನು 250 ಅಡಿ ಆಳದಲ್ಲಿ ಭೂಮ್ಯಂತರ್ಗತಗೊಳಿಸಿ 48 ಕಿ.ಮೀ. ಉದ್ದದ ಸುರಂಗಗಳ ಮೂಲಕ ತ್ಯಾಜ್ಯ ನೀರನ್ನು ಹಾಯಿಸಿ ಶುದ್ಧಗೊಳಿಸಲಾಗುತ್ತಿದೆ. ಎರಡು– ಮೂರು ಹಂತಗಳಲ್ಲಿ ತಿಳಿಗೊಳಿಸಿದ ನಂತರ ಅಲ್ಟ್ರಾವಯಲೆಟ್ ಕಿರಣ ಹಾಯಿಸಿ ಅತ್ಯಂತ ಶುದ್ಧ ನೀರನ್ನು ಉತ್ಪಾದಿಸಿ ಕಂಪ್ಯೂಟರ್‌ಗಳ ಮೈಕ್ರೊಚಿಪ್‍ ತಯಾರಿಕೆಗೂ ಬಳಸಲಾಗುತ್ತಿದೆ! ಶುದ್ಧೀಕರಿಸಿದ ತ್ಯಾಜ್ಯ ನೀರು ಸಿಂಗಪುರದ ಶೇ 40ರಷ್ಟು ಬೇಡಿಕೆ ಪೂರೈಸುತ್ತಿದೆ.

ಬೃಹತ್ ಅಣೆಕಟ್ಟು ಯೋಜನೆಗಳಿಗೆ ಹೋಲಿಸಿದರೆ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ತಗಲುವ ಖರ್ಚು ಶೇ 25ರಷ್ಟು ಮಾತ್ರ. ಬೆಂಗಳೂರಿಗೆ ಪ್ರತಿದಿನ ಕಾವೇರಿ ನದಿಯಿಂದ 140 ಕೋಟಿ ಲೀಟರ್‌ ನೀರು ಸರಬರಾಜಾಗುತ್ತದೆ. ಮನೆಗಳ ಬೋರ್‌ವೆಲ್ ಮತ್ತು ಮಳೆನೀರು ಸಂಗ್ರಹ ವ್ಯವಸ್ಥೆಯಿಂದ ಬೇಡಿಕೆಯ ಸ್ವಲ್ಪ ಭಾಗ ಪೂರೈಕೆಯಾಗುತ್ತದೆ. ಬೆಂಗಳೂರಿನಂಥ ಮೆಟ್ರೊ ನಗರದ ಪ್ರಜೆಗೆ ದಿನಕ್ಕೆ 150ರಿಂದ 200 ಲೀಟರ್ ನೀರು ಬೇಕೆಂಬ ಲೆಕ್ಕವಿದೆ.

ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆ ಹೊಂದಿರುವ ಬೃಹತ್ ಉದ್ಯಮಗಳು, ಅಪಾರ್ಟ್‌ಮೆಂಟ್, ಮಾಲ್‍ಗಳು ಕೊಳವೆ ಬಾವಿಯ ನೀರನ್ನೇ ಅವಲಂಬಿಸಿವೆ. ಅನೇಕ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ. ಆದರೂ ನೀರಿನ ಕೊರತೆ ಇದೆ. ಚೆನ್ನೈ ನಗರದಲ್ಲಿ ಮನೆ, ಉದ್ಯಮ, ಮದುವೆ ಛತ್ರ, ಆಸ್ಪತ್ರೆ, ಶಾಲೆ, ಹೋಟೆಲ್, ಹಾಸ್ಟೆಲ್‍ಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ನಮ್ಮಲ್ಲೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ.

ಜಲಸಂಪನ್ಮೂಲ ತಜ್ಞರು ದಕ್ಷಿಣ ಭಾರತದಲ್ಲೇ ಹೆಚ್ಚಾಗಿದ್ದಾರೆ. ಬೀಳುವ ಮಳೆ ನೀರನ್ನು ಅವರ ಅನುಭವ ಮತ್ತು ಮಾರ್ಗದರ್ಶನದಲ್ಲಿ ಸಂಗ್ರಹಿಸಿಕೊಂಡು, ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಸರಬರಾಜಿನಲ್ಲಾಗುವ ಸೋರಿಕೆಯನ್ನು ತಡೆದರೆ ಬೃಹತ್ ನಗರಗಳು ನೀರಿನ ಬಳಕೆಯಲ್ಲಿ ಸಂಪೂರ್ಣ ಸ್ವಾವಲಂಬಿಯಾಗುತ್ತವೆ. ಅಣೆಕಟ್ಟು, ಪೈಪ್ ಅಳವಡಿಕೆಗೆ ನಡೆಸುವ ಕಾಮಗಾರಿಯನ್ನು ಕೆರೆಗಳನ್ನು ಸರಿಮಾಡಲು ಬಳಸಿದರೆ ಅರಣ್ಯ ನಾಶವೂ ತಪ್ಪುತ್ತದೆ ಮತ್ತು ಕಡಿಮೆ ಖರ್ಚಿನಲ್ಲಿ ಬೇಕಾದ ನೀರೂ ಸಿಗುತ್ತದೆ.

ಬೆಂಗಳೂರಿಗೆ ಸೈನ್ಸ್ ಸಿಟಿ, ಲೇಕ್ ಸಿಟಿ, ಸ್ಪೇಸ್ ಟೆಕ್ನಾಲಜಿ ಸಿಟಿ ಎಂಬ ಬಿರುದುಗಳಿವೆ. ಅದು ಸಾರ್ಥಕವಾಗಬೇಕಾದರೆ, ತಂತ್ರಜ್ಞಾನ ಬಳಸಿಕೊಂಡು ತನಗೆ ಬೇಕಾದ ನೀರನ್ನು ತಾನೇ ಪಡೆಯುವಂತಾಗಬೇಕು. ಪರಿಸರದ ಮೇಲಿನ ಒತ್ತಡ ತಡೆಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು