ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸರಿಯಾಗಿ ತಿನ್ನುವುದೆಂದರೆ...

ತಿನ್ನುವಿಕೆಗೆ ಸಂಬಂಧಿಸಿದ ಕಾಯಿಲೆಗಳು ಬರೀ ದೇಹಕ್ಕಲ್ಲ, ಮನಸ್ಸಿಗೂ ನೇರ ಸಂಬಂಧ ಹೊಂದಿರುತ್ತವೆ
Last Updated 24 ಫೆಬ್ರವರಿ 2023, 22:00 IST
ಅಕ್ಷರ ಗಾತ್ರ

ನಾವು ಸೇವಿಸುವ ಆಹಾರವು ದೇಹಕ್ಕೆ ಪುಷ್ಟಿಯನ್ನು ಮನಸ್ಸಿಗೆ ಸಂತೃಪ್ತಿಯನ್ನು ನೀಡಬೇಕು. ಆಹಾರದ ಮಹತ್ವವನ್ನು ಅರಿತೇ ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತು! ಆದರೆ ಬದಲಾದ ಆಧುನಿಕ ಜೀವನಶೈಲಿಯಲ್ಲಿ ಆಹಾರ ಸೇವನೆಯು ಹೊತ್ತು ಗೊತ್ತಿಲ್ಲದೆ, ಕೈಗೆ ಸಿಕ್ಕಿದ್ದನ್ನು ನುಂಗುವ ಯಾಂತ್ರಿಕ ಕ್ರಿಯೆಯಾಗಿದೆ. ಇದರೊಂದಿಗೇ ತಿನ್ನುವಿಕೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ!

ತಿನ್ನುವಿಕೆಯ ಕಾಯಿಲೆಗಳು ಎಂದರೆ ನಮ್ಮ ನಿತ್ಯದ ಆಹಾರ ಸೇವನೆ ದೋಷಪೂರಿತವಾಗಿದ್ದು, ದೇಹ, ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರಿ ನಮ್ಮ ಕಾರ್ಯಕ್ಷಮತೆಯನ್ನು ಕುಂದಿಸುವಂಥದ್ದು. ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆಗಳು ಬರೀ ದೇಹಕ್ಕೆ ಸಂಬಂಧಿಸಿದವುಗಳಲ್ಲ, ಮನಸ್ಸಿಗೂ ನೇರ ಸಂಬಂಧ ಹೊಂದಿವೆ. ಹಾಗಾಗಿಯೇ ಇವು ಮನೋದೈಹಿಕ ಕಾಯಿಲೆಗಳು!

ತಿನ್ನುವಿಕೆಯ ಕಾಯಿಲೆ ಎಂದೊಡನೆ ‘ಅದೆಂಥ ಕಾಯಿಲೆ, ಅವೆಲ್ಲಾ ಫಾರಿನ್ ಕಾಯಿಲೆಗಳು, ತಿನ್ನಲು ಹೆಚ್ಚು ಸಿಕ್ರೆ ಹೀಗೇ ಆಗೋದು’ ಎಂದು ಲಘುವಾಗಿ ಮಾತನಾಡಿ, ಅವುಗಳ ಇರುವಿಕೆಯನ್ನೇ ನಿರ್ಲಕ್ಷಿಸಲಾಗುತ್ತದೆ. ಪರಿಣಾಮವಾಗಿ ಸುಸ್ತು, ಋತುಚಕ್ರದ ಏರುಪೇರು, ಹಲ್ಲಿನ ಸಮಸ್ಯೆ, ಹೃದಯದ ತೊಂದರೆ, ಖಿನ್ನತೆ, ದುಃಖ, ಗೊಂದಲ ಹೀಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಮೌನವಾಗಿ ಅನುಭವಿಸುತ್ತಾ ನರಳುತ್ತಿರುವವರು ಸಾವಿರಾರು ಜನ! ಈ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಫೆಬ್ರು
ವರಿ ತಿಂಗಳಲ್ಲಿ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ.

ಅನೋರೆಕ್ಸಿಯಾ ನರ್ವೋಸ ಮತ್ತು ಬುಲಿಮಿಯಾ ಎಂಬುವು ತಿನ್ನುವಿಕೆಯ ಎರಡು ಪ್ರಮುಖ ಕಾಯಿಲೆಗಳು. ಅನೋರೆಕ್ಸಿಯಾದಲ್ಲಿ ನೋಡಲು ಸರಿಯಾಗೇ ಇದ್ದರೂ ದಪ್ಪವಾಗಿಬಿಟ್ಟರೆ ಎನ್ನುವ ಭಯ ಕಾಡುತ್ತದೆ. ತೆಳ್ಳಗೆ ಇದ್ದರೂ ತೂಕ ಹೆಚ್ಚಿದೆ ಎನ್ನುವಂತಹ ಅಸಮಾಧಾನ ಹೊಂದಿದ್ದು, ಕಡಿಮೆ ತಿಂದು ಸದಾ ತೂಕ ಕಳೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಬುಲಿಮಿಯಾದಲ್ಲಿ ಮಿತಿಮೀರಿ ತಿನ್ನುವುದು, ನಂತರ ನಾಚಿಕೆ, ತಪ್ಪಿತಸ್ಥ ಭಾವನೆಯಿಂದ ತೂಕ ಹೆಚ್ಚುವುದನ್ನು ತಡೆಯಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುವುದು. ಉದಾಹರಣೆಗೆ, ತಿಂದ ನಂತರ ವಾಂತಿ ಮಾಡುವುದು, ಸಿಕ್ಕಾಪಟ್ಟೆ ವ್ಯಾಯಾಮದಲ್ಲಿ ತೊಡಗುವುದು ಇವೆಲ್ಲವೂ ಕಂಡುಬರುತ್ತವೆ.

ಈ ಕಾಯಿಲೆಗೆ ಆನುವಂಶೀಯತೆ, ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆ ಇದ್ದರೂ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹದಿಹರೆಯದಲ್ಲಂತೂ ಸಾಮಾಜಿಕ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ಹರೆಯಕ್ಕೆ ಕಾಲಿಟ್ಟ ಮಕ್ಕಳಿಗೆ ಬದಲಾದ ದೈಹಿಕ ಸ್ವರೂಪದ ಬಗ್ಗೆ ಕುತೂಹಲ, ಆಕರ್ಷಣೆ ಜತೆ ತಮಗಿರುವ ಕೊರತೆಗಳ ಬಗ್ಗೆ ಅಸಮಾಧಾನವೂ ಹೆಚ್ಚು. ಇದರೊಂದಿಗೇ ಇತರರ ಕಣ್ಣಿಗೆ ತಾವು ಸುಂದರವಾಗಿ ಕಾಣಬೇಕು ಎನ್ನುವುದು ಸಹಜ ಬಯಕೆ. ಹೀಗಾಗಿ ತಮ್ಮ ನೆಚ್ಚಿನ ನಟ-ನಟಿಯರನ್ನು ಅನುಕರಿಸುವುದು, ಹೊಸ ಹೊಸ ಟ್ರೆಂಡ್ ಗಮನಿಸುವುದು ಎಲ್ಲವೂ ಸಾಮಾನ್ಯ.

ನಮ್ಮಲ್ಲಿ ಹೆಣ್ಣುಮಕ್ಕಳ ಸೌಂದರ್ಯದ ಪರಿಕಲ್ಪನೆಯನ್ನು ಝೀರೊ ಸೈಜ್, ಬೆನ್ನಿಗಂಟಿದ ಹೊಟ್ಟೆ, ಕಡ್ಡಿಯಂಥ ಕೈ ಕಾಲು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತದೆ. ವಾಸ್ತವವನ್ನು ಮರೆಮಾಚಿ, ರಮ್ಯ ಲೋಕದಲ್ಲಿ ಹುಡುಗಿಯರು ವಿಹರಿಸುತ್ತಾರೆ. ಆ ಭ್ರಮಾಲೋಕದತ್ತ ಆಕರ್ಷಿತರಾಗಿ ಈ ಎಲ್ಲಾ ಸರ್ಕಸ್ ಮೂಲಕ ತಾವೂ ಮೆಚ್ಚುಗೆ, ಮನ್ನಣೆ, ಆತ್ಮವಿಶ್ವಾಸ ಗಳಿಸುವ ಹಂಬಲ. ಇಂಥವರು ದಿಢೀರ್ ಡಯೆಟ್, ತೂಕ ಇಳಿಸುವ ಕ್ರಾಶ್ ಕೋರ್ಸ್‌ಗಳಿಗೆ ಮುಗಿಬೀಳುತ್ತಾರೆ. ಇದರೊಂದಿಗೇ ಕಡಿಮೆ ತಿಂದಷ್ಟು ಐಡಿಯಲ್ ಸೈಜ್ ಆಗುವ ಗುರಿಗೆ ಹತ್ತಿರ ಎಂಬ ಆಸೆ. ಇದೆಲ್ಲದರ ಪರಿಣಾಮವಾಗಿ ಆರೋಗ್ಯವನ್ನು ನಿರ್ಲಕ್ಷಿಸಿ ಸೌಂದರ್ಯಸಿದ್ಧಿಗಾಗಿ ಸತತ ಸಾಧನೆಯಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ!

ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕುವುದು, ಅವುಗಳಿಗೆ ಬಂದ ಕಮೆಂಟ್ ಗಮನಿಸುವುದು, ನಿರೀಕ್ಷಿಸಿದ ಮೆಚ್ಚುಗೆ ಸಿಗದಿದ್ದಾಗ ತನ್ನ ಬಗ್ಗೆ ಅನುಮಾನ, ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಕೂಡಲೇ ತನ್ನ ದೈಹಿಕ ಲಕ್ಷಣ, ತೂಕದ ಬಗ್ಗೆ ಸ್ವವಿಮರ್ಶೆ, ಇತರರೊಂದಿಗೆ ಹೋಲಿಕೆ ಇವೆಲ್ಲವೂ ಸಾಮಾನ್ಯ. ಇತರರ ಮೆಚ್ಚುಗೆಗಾಗಿ ಸತತ ಹುಡುಕಾಟ, ಸಾಧಿಸಿ ತೋರಿಸುವ ಹಟ ಇವೆಲ್ಲವೂ ಯುವಜನರ ಆಹಾರ ಸೇವನೆಯ ಕ್ರಮವನ್ನು ಬದಲಿಸಬಹುದು.

ಈ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಆದರೆ ಅವುಗಳನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಮುಖ್ಯ. ಸರಿಯಾದ ಆಹಾರಕ್ರಮ ಮತ್ತು ಭಾವನೆಗಳ ನಿಯಂತ್ರಣವೂ ಚಿಕಿತ್ಸೆಯಲ್ಲಿ ಮುಖ್ಯವಾಗುತ್ತದೆ. ದೇಹದ ಎತ್ತರಕ್ಕೆ ತಕ್ಕದಾದ ತೂಕವನ್ನು ಹೊಂದಿರುವುದು, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು ಆರೋಗ್ಯಕರ ಅಭ್ಯಾಸ. ದೇಹ-ಮನಸ್ಸನ್ನು ಚಟುವಟಿಕೆಯಿಂದ ಇಡಲು ವ್ಯಾಯಾಮ ಬೇಕು. ಸರಿಯಾದ ಆಹಾರ, ಉತ್ತಮ ಆರೋಗ್ಯ, ಆತ್ಮವಿಶ್ವಾಸ ಮತ್ತು ಆನಂದ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿವೆ ಎಂಬುದನ್ನು ಅರಿಯೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT