ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಿವಿಯಾಗಬೇಕಿದೆ ಮನದಾಳದ ಮಾತಿಗೆ

ಮಕ್ಕಳು ಕೋವಿಡ್ ಕಾಲದಲ್ಲಿನ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವನ್ನು ಶಿಕ್ಷಕರು ಶಾಲೆಯಲ್ಲಿ ಸೃಷ್ಟಿಸುವ ಮೂಲಕ ಭಾವನಾತ್ಮಕ ಭದ್ರತೆ ಕಲ್ಪಿಸಬೇಕಾಗಿದೆ
Last Updated 7 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಕೋವಿಡ್ ತೀವ್ರಗತಿಯಲ್ಲಿದ್ದ ಕಾಲಘಟ್ಟದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಸನ್ನಿವೇಶ ದಲ್ಲಿ ಆತಂಕ, ಒತ್ತಡಗಳನ್ನು ಎದುರಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಒಡನಾಟ, ಸಂವಾದ, ಸಂವಹನಗಳ ಮೂಲಕ ಕಲಿಸಲಾಗದೆ ಅನಿವಾರ್ಯವಾಗಿ ನೂತನ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ತೆರೆದುಕೊಂಡು ಬೋಧಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಶಿಕ್ಷಕರ ನೇರ ಬೋಧನೆಯ ಜೊತೆ ಗೆಳೆಯರೊಂದಿಗೆ ಆಟ, ವಿನೋದಗಳ ಮೂಲಕ ಸಹಜವಾಗಿ ಆಗುತ್ತಿದ್ದ ಸಾಮಾಜೀಕರಣದಿಂದ ವಂಚಿತ ರಾಗಿದ್ದ ವಿದ್ಯಾರ್ಥಿಗಳು ಮನೆಯಿಂದ ಹೊರಬರದೆ ಮೊಬೈಲ್, ಲ್ಯಾಪ್‌ಟಾಪ್, ದೂರದರ್ಶನದಂತಹ ಮಾಧ್ಯಮಗಳ ಮೂಲಕ ಕಲಿಯುವ ಒತ್ತಡದಲ್ಲಿದ್ದರು.

ದೀರ್ಘಕಾಲದ ಬಿಡುವಿನ ನಂತರ ಇದೀಗ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ಮರು ಪ್ರಾರಂಭವಾಗಿವೆ. ಇಂತಹ ಸಂದರ್ಭದಲ್ಲಿ, ಈವರೆಗೆ ಶಿಕ್ಷಕರು ತಾವು ನಿರ್ವಹಿಸುತ್ತಿದ್ದ ಪಾತ್ರಗಳಲ್ಲಿ ಕಂಡುಕೊಳ್ಳಬಹುದಾದ ಬದಲಾವಣೆಗಳು ಮುಖ್ಯ ಪಾತ್ರ ವಹಿಸುತ್ತವೆ.

ಕೋವಿಡ್ ಕಾಲದಲ್ಲಿ ತಂತ್ರಜ್ಞಾನದ ವಿವಿಧ ಸಾಧನಗಳನ್ನು ಬಳಸಿ, ಆನ್‍ಲೈನ್ ಮೂಲಕ ಪಾಠ ಬೋಧನೆ ಮಾಡಲು ಶಿಕ್ಷಕರು ಕಲಿತಿದ್ದಾರೆ. ವಿವಿಧ ಕಲಿಕಾಂಶಗಳಿಗೆ ಸಂಬಂಧಿಸಿದಂತೆ ಅನೇಕ ಶಿಕ್ಷಕರು ವಿಡಿಯೊಗಳನ್ನು ಸೃಜಿಸಿ, ಅವುಗಳಿಗೆ ಅಗತ್ಯವಾದ ಚಿತ್ರ, ಪೂರಕ ಮಾಹಿತಿ ಸೇರಿಸಿ, ಅನಿಮೇಶನ್ ಅಳ ವಡಿಸಿ, ಎಡಿಟ್ ಮಾಡಿ, ತಮ್ಮದೇ ಯುಟ್ಯೂಬ್ ಚಾನೆಲ್‍ಗಳಲ್ಲಿ ಅವುಗಳನ್ನು ಅಪ್‍ಲೋಡ್ ಮಾಡು ತ್ತಿದ್ದಾರೆ. ಪಾಠಕ್ಕೆ ಪೂರಕವಾಗಿ ಅಂತರ್ಜಾಲ
ದಲ್ಲಿ ಲಭ್ಯವಿರುವ ಅನೇಕ ಚಿತ್ರ, ಆಡಿಯೊ, ವಿಡಿಯೊ ಸಂಪನ್ಮೂಲಗಳ ಹುಡುಕಾಟ ನಡೆಸಿ, ತಮ್ಮ ಆನ್‍ಲೈನ್ ತರಗತಿಗಳಿಗೆ ಬಳಸುವುದನ್ನು ಕಲಿತಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ಪ್ರಸಾರವಾಗುವ ದೂರದರ್ಶನ ಪಾಠಗಳನ್ನು ವೀಕ್ಷಿಸಿ, ಅವುಗಳಲ್ಲಿರುವ ಉತ್ತಮ ಅಂಶ ಗಳನ್ನು ತಮ್ಮ ಪಾಠಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಬೋಧನೆಯ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಯಾಚೆ ಗಮನಿಸಿ, ತಮ್ಮ ಕಲಿಕೆಯ ಪರಿಧಿಯನ್ನು ಹಿಗ್ಗಿಸಿಕೊಳ್ಳಲು ಅವಕಾಶ ದೊರೆತಿದೆ.

ಕೋವಿಡ್ ಕಾಲದಲ್ಲಿ ಶಿಕ್ಷಕರಲ್ಲಿ ಆದ ಈ ಕಲಿಕೆಯು ಅವರು ವಿದ್ಯಾರ್ಥಿಗಳಿಗೆ ಕೈಗೊಳ್ಳುವ ನೇರ ತರಗತಿ
ಗಳನ್ನು ಸಂಪದ್ಭರಿತಗೊಳಿಸಲು ನೆರವಾಗಲಿದೆ. ಇದರ ಜೊತೆ ವಿದ್ಯಾರ್ಥಿಗಳು ಸಹ ಶಿಕ್ಷಣಕ್ಕೆ ಪೂರಕವೆನಿಸುವ ಅನೇಕ ಕೌಶಲಗಳನ್ನು ಕಲಿತು ಬಂದಿರುತ್ತಾರೆ. ಕೋವಿಡ್ ಸನ್ನಿವೇಶದಲ್ಲಿ ಆದ ಕಲಿಕೆಯ ನಷ್ಟವನ್ನು ಮಾತ್ರ ಅಂದಾಜಿಸದೆ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಕಟ್ಟಿಕೊಂಡಿರುವ ಅನುಭವಗಳ ಆಧಾರದ ಮೇಲೆ ಶಿಕ್ಷಕರು ತಮ್ಮ ತರಗತಿಗಳ ಬೋಧನೆಯನ್ನು ರೂಪಿಸ ಬೇಕಾಗಿದೆ.

ಅನೇಕ ಕುಟುಂಬಗಳು ಕೋವಿಡ್ ಕಾರಣದಿಂದ ಕುಟುಂಬ ಸದಸ್ಯರ ಅನಾರೋಗ್ಯ, ಸಾವು, ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ, ಏಕಾಂಗಿತನ, ಮಾನಸಿಕ ಆಘಾತದಂತಹ ಸಮಸ್ಯೆಗಳಿಂದ ತೊಂದರೆಗೀಡಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ ಕುಟುಂಬಗಳಿಂದ ಶಾಲೆಗೆ ಹಾಜರಾಗುವ ಅನೇಕ ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಭಾವನಾತ್ಮಕವಾಗಿ ಸ್ಪಂದಿಸುವ ಅಗತ್ಯವಿದೆ. ಈ ಅಂಶಗಳನ್ನು ಶಿಕ್ಷಕರು ಅರ್ಥ ಮಾಡಿಕೊಂಡು, ಅಂತಹ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಒಡನಾಡುವ ಅಗತ್ಯವಿದೆ.

ಕೋವಿಡ್ ಕಾಲದಲ್ಲಿ ಮಕ್ಕಳು ಓದಿದ ಪುಸ್ತಕ ಗಳು, ದಕ್ಕಿಸಿಕೊಂಡ ಅನುಭವಗಳು, ಅನುಭವಿ ಸಿದ ಸಂತಸ, ಸಂಕಟ, ಸಮಸ್ಯೆಗಳ ಕುರಿತಾದ ವಿಷಯಗಳನ್ನು ಮಕ್ಕಳು ತಾವಾಗಿಯೇ ಮುಕ್ತ ವಾಗಿ ಹಂಚಿಕೊಳ್ಳಲು ಸಾಧ್ಯವಾಗುವ ವಾತಾವರಣ ವನ್ನು ಶಿಕ್ಷಕರು ತರಗತಿಯಲ್ಲಿ ಸೃಷ್ಟಿಸಬೇಕು. ಮಕ್ಕಳ ಮಾತುಗಳಿಗೆ ಶಿಕ್ಷಕರು ಕಿವಿಯಾಗಬೇಕು. ಹಂಚಿ ಕೊಳ್ಳಲು ಇಚ್ಛಿಸದ ಮಕ್ಕಳನ್ನು ಗುರುತಿಸಿ, ಅವರ ಮೌನವನ್ನೂ ಗೌರವಿಸಬೇಕು. ಶಿಕ್ಷಕರು ತೋರುವ ಇಂತಹ ಅನುಭೂತಿಯು ಮಕ್ಕಳಲ್ಲಿ ಭಾವನಾತ್ಮಕ ಭದ್ರತೆ ಹೊಂದುವಂತೆ ಮಾಡುತ್ತದೆ. ಇದರ ಜೊತೆ ಮಕ್ಕಳಿಗೆ ತಮ್ಮ ಶಾಲೆಯ ಮೇಲೆ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳು ಮೂಡುತ್ತವೆ. ಇದು ಅವರ ಶಾಲಾ ಜೀವನವನ್ನು ಮುಂದುವರಿಸಲು ಅಗತ್ಯವಾದ ಚೈತನ್ಯವನ್ನು ಅವರಿಗೆ ನೀಡುತ್ತದೆ.

ಶಾಲೆಗಳು ದೀರ್ಘ ಅವಧಿಯ ಬಿಡುವಿನ ನಂತರ ಪ್ರಾರಂಭವಾಗಿವೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿರುವ ಕಲಿಕೆಯ ಅಂತರವನ್ನು ಸರಿದೂಗಿಸಲು ಶಿಕ್ಷಕರು ಸಹಜವಾಗಿ ಅವರ ಕಲಿಕಾ ಮಟ್ಟ ಅಳೆಯಲು ಪರೀಕ್ಷೆ ಮಾಡುವುದು ಹಾಗೂ ಪಠ್ಯಾಂಶ ಬೋಧನೆಗೆ ಹೆಚ್ಚು ಒತ್ತು ನೀಡುತ್ತಾರೆ. ಈ ಪ್ರಕ್ರಿಯೆಯಿಂದ ಮಕ್ಕಳಲ್ಲಿ ಕಲಿಕೆಯೆಡೆ ನಿರಾಸಕ್ತಿಯ ಭಾವ, ಆತಂಕ, ಒತ್ತಡಗಳು ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಹಾಡು, ಕತೆ, ಕವಿತಾ ವಾಚನ, ನಾಟಕ, ಪ್ರಶ್ನೆ, ಸಂವಾದ, ಯೋಜನಾ ಕಾರ್ಯ, ರಸಪ್ರಶ್ನೆ, ವೈಜ್ಞಾನಿಕ ಪ್ರಯೋಗ ಹಾಗೂ ಇತರ ಪ್ರಾಯೋಗಿಕ ಚಟುವಟಿಕೆ, ಬರವಣಿಗೆ, ಓದುವ ಅಭ್ಯಾಸಗಳಲ್ಲಿ ಮಕ್ಕಳನ್ನು ನಿಧಾನವಾಗಿ ತೊಡಗಿಸಿ
ಕೊಳ್ಳುವ ಕಾರ್ಯ ಮಾಡಬೇಕು.

ವಿದ್ಯಾರ್ಥಿಗಳು ಹಂತ ಹಂತವಾಗಿ ಖುಷಿ, ಸಂತಸ, ಆಸಕ್ತಿಗಳಿಂದ ಕಲಿಕೆಯೆಡೆಗೆ ಸಾಗುವಂತೆ ಕಾರ್ಯತಂತ್ರ, ಚಟುವಟಿಕೆಗಳನ್ನು ಶಿಕ್ಷಕರು ರೂಪಿಸಿ, ಮುನ್ನಡೆಯುವ ಅಗತ್ಯ ಇದೆ.

ಕೋವಿಡ್ ಸನ್ನಿವೇಶವು ಮಕ್ಕಳ ಸಾಮಾಜಿಕ ಬೆಳವಣಿಗೆಗೆ ಬಹು ದೊಡ್ಡ ಪೆಟ್ಟು ನೀಡಿದೆ. ವಿದ್ಯಾರ್ಥಿಗಳು ದೈಹಿಕ ಅಂತರವನ್ನು ಕಾಯ್ದುಕೊಳ್ಳು ತ್ತಲೇ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಪಂದಿಸುತ್ತಾ ಸಹಪಾಠಿಗಳ ಜೊತೆ ಒಡನಾಡುವಂತೆ ಮಾಡಬೇಕಿದೆ. ತರಗತಿಗಳು ಹೆಚ್ಚು ಹೆಚ್ಚು ಸಂವೇದನಾ ಶೀಲವಾಗುವಂತೆ ರೂಪಿಸುವ ಜರೂರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT