ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಕ್ರಮ ಸಕ್ರಮದ ನಡುವೆ ಮತಮೌಲ್ಯ

ಮತದಾರರಿಗೆ ಆಮಿಷ ಒಡ್ಡುವ ಮುಖಾಂತರ ಇಡೀ ಸಮಾಜವನ್ನು ಭ್ರಷ್ಟಗೊಳಿಸುವ ಪದ್ಧತಿಯನ್ನು ತಡೆಗಟ್ಟಲು ಏನು ಮಾಡಬೇಕು?
Published 25 ಏಪ್ರಿಲ್ 2023, 1:20 IST
Last Updated 25 ಏಪ್ರಿಲ್ 2023, 1:20 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆ ಮತ್ತು ಸಮಗ್ರ ಅಭಿವೃದ್ಧಿ ಎಂಬ ನಾಲ್ಕು ಮೂಲ ಮಂತ್ರಗಳನ್ನು ಜಪಿಸುತ್ತಲೇ, ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಧುಮುಕಿವೆ. ಕನ್ನಡಿಗರು ಆಯ್ಕೆ ಮಾಡಬೇಕಿರುವುದು ಪಕ್ಷಗಳನ್ನೋ ಅಥವಾ ವ್ಯಕ್ತಿಗಳನ್ನೋ ಎನ್ನುವ ಮಟ್ಟಿಗೆ ವ್ಯಕ್ತಿಕೇಂದ್ರಿತ ಪ್ರಚಾರ ಮತ್ತು ವ್ಯಕ್ತಿ ಆರಾಧನೆಯ ಚಟುವಟಿಕೆಗಳು ಪರಾಕಾಷ್ಠೆ ತಲುಪಿವೆ.

ಕನ್ನಡಿಗರ ಆಯ್ಕೆ ಮತ್ತು ಆದ್ಯತೆಗಳೇನು ಎನ್ನುವ ಸುಳಿವೇ ಇಲ್ಲದಂತೆ ಚುನಾವಣೆಯ ಅಬ್ಬರದಲ್ಲಿ ಹಣದ ಹರಿವು ಹೆಚ್ಚಾಗಿದೆ. ಪ್ರಜಾಪ್ರಭುತ್ವದ ಮೂಲ ಬೇರುಗಳನ್ನು ಗಟ್ಟಿಗೊಳಿಸುವ ಪಂಚಾಯತ್‌ ವ್ಯವಸ್ಥೆಗೆ ಶುಭ ನಾಂದಿ ಹಾಡಿದ ಕರ್ನಾಟಕದಲ್ಲಿ ಇಂದು ಇಡೀ ಪ್ರಜಾತಂತ್ರ ವ್ಯವಸ್ಥೆಯನ್ನು ಸಂಪತ್ತು, ಅಧಿಕಾರ, ಹಣ ಮತ್ತು ಮಾರುಕಟ್ಟೆ ಆಳುತ್ತಿರುವುದನ್ನು ವಿಷಾದ ದಿಂದಲೇ ಗಮನಿಸಬೇಕಿದೆ. ಜನಪ್ರತಿನಿಧಿಗಳು ಅಕ್ಷರಶಃ ಧನಪ್ರತಿನಿಧಿಗಳಾಗಿರುವುದನ್ನು ಸಹಿಸಿಕೊಂಡೇ ರಾಜ್ಯದ ಜನತೆ ‘ಉತ್ತಮ’ರನ್ನು ಆಯ್ಕೆ ಮಾಡಬೇಕಿದೆ. ಈ ಜಟಿಲ ಪ್ರಶ್ನೆಗಳನ್ನು ಹೊತ್ತುಕೊಂಡೇ ಕರ್ನಾಟಕದ ಮತದಾರರು ಮತಗಟ್ಟೆಗೆ ಹೋಗಬೇಕಾಗಿದೆ.

ಒಮ್ಮೆ ಅಭ್ಯರ್ಥಿಗಳು ಅಧಿಕೃತವಾಗಿ ಘೋಷಿಸಿರುವ ಆಸ್ತಿಯನ್ನು ಗಮನಿಸಿದಾಗ, ನಮ್ಮನ್ನು ಪ್ರತಿನಿಧಿಸುವವರು ಯಾವ ಸ್ತರದಲ್ಲಿದ್ದಾರೆ, ನಾವು ಅಂದರೆ ಸಾಮಾನ್ಯ ಪ್ರಜೆಗಳು ಯಾವ ಮಟ್ಟದಲ್ಲಿದ್ದೇವೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಭಾವಿ ಅಥವಾ ಸಂಭಾವ್ಯ ಜನಪ್ರತಿನಿಧಿಗಳ ಸ್ಥಿರಾಸ್ತಿಯ ಮೌಲ್ಯ ನಿಷ್ಕರ್ಷೆಯಾಗುವುದು ಸರ್ಕಾರ ನಿಗದಿಪಡಿಸಿರುವ ದರದಲ್ಲಿ. ಇದರ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿದರೆ, ಇಡೀ ಸಮಾಜವೇ ಹೃದಯಾಘಾತಕ್ಕೆ ಒಳಗಾಗಬಹುದು.

ಈ ‘ಜನಸೇವಕ’ರ ಆಸ್ತಿಯ ಹೆಚ್ಚಳ ಹೇಗಾಗಿದೆ, ಆದಾಯದ ಮೂಲ ಏನು, ಐದು ವರ್ಷಗಳಲ್ಲಿ ಶೇ 50ರಷ್ಟು ಆಸ್ತಿ ಹೆಚ್ಚಳ ಹೇಗೆ ಸಾಧ್ಯವಾಗಿದೆ ಎಂಬಂತಹ ಪ್ರಶ್ನೆಗಳು ಬಹುಶಃ ಇತರ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಕಣ್ಣಿಗೆ ಗೋಚರಿಸದೇ ಹೋಗುತ್ತವೆ. ಶೇ 80ರಷ್ಟು ಬಡತನ ಹೊಂದಿರುವ ದೇಶದ ಕತೆ, ವ್ಯಥೆ ಇದು.

ಇದರ ನಡುವೆಯೇ ರಾಜಕಾರಣದ ಔದ್ಯಮೀಕರಣ ತನ್ನ ಅತ್ಯುನ್ನತ ಹಂತ ತಲುಪಿರುವುದನ್ನು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಮತ್ತೊಂದೆಡೆ, ತಾವು ಸಂಪಾದಿಸಿ, ಶೇಖರಿಸಿ, ಸಂಗ್ರಹಿಸಿ, ಕೂಡಿಟ್ಟಿರುವ ಅಪಾರ ಆಸ್ತಿಯ ಒಂದು ತುಣುಕನ್ನು ‘ಸಂಭಾವ್ಯ ಜನಪ್ರತಿನಿಧಿ’ಗಳು ಮತದಾರ ಪ್ರಭುಗಳತ್ತ ಎಸೆಯಲು ನಾನಾ ತಂತ್ರಗಾರಿಕೆಗಳನ್ನು ಅನುಸರಿಸುತ್ತಿದ್ದಾರೆ. ಹಣ, ಹೆಂಡ, ಪಂಚೆ, ಸೀರೆ ಅಂತಹವುಗಳ ಯುಗವನ್ನು ದಾಟಿ ನವ ಭಾರತ ಈಗ ಬಹಳ ಮುನ್ನಡೆದಿದೆ. ಆಮಿಷಗಳ ಸ್ವರೂಪ ಮತ್ತು ಮಾರುಕಟ್ಟೆ ಮೌಲ್ಯ ಎರಡು ಸಹ ರೂಪಾಂತರ ಹೊಂದಿವೆ. ಆದರೂ ಪಾರಂಪರಿಕವಾಗಿ ನಡೆದುಬಂದಿರುವ ಪದ್ಧತಿಯನ್ನು ಕೈಬಿಡದೆ ‘ಸಂಭಾವ್ಯ ಜನಪ್ರತಿನಿಧಿ’ಗಳು ಪ್ರತಿಯೊಂದು ಮತಕ್ಕೂ ಒಂದು ಮೌಲ್ಯವನ್ನು ನಿಗದಿಪಡಿಸಿ ನಗದು ಹಂಚಿಕೆಯಲ್ಲಿ ತೊಡಗಿದ್ದಾರೆ. ಹಣದುಬ್ಬರಕ್ಕೆ ಅನುಗುಣವಾಗಿ ಈ ಮೌಲ್ಯವೂ ವೃದ್ಧಿಯಾಗಿದ್ದು, ಐನೂರು ರೂಪಾಯಿಯಿದ್ದ ಮತದ ಬೆಲೆ ಈಗ ಐದು ಸಾವಿರಕ್ಕೂ ತಲುಪಿದೆ.

ಚುನಾವಣಾ ಆಯೋಗ ಈವರೆಗೂ ಜಪ್ತಿ ಮಾಡಿ ವಶಪಡಿಸಿಕೊಂಡಿರುವ ಮೌಲ್ಯವೇ ₹ 239.52 ಕೋಟಿಯಷ್ಟಿದೆ. ಇದರಲ್ಲಿ ಹಣ, ಹೆಂಡ, ಗೃಹೋಪಯೋಗಿ ಸರಕು, ಮಾದಕ ವಸ್ತು, ಚಿನ್ನ, ಬೆಳ್ಳಿ ಎಲ್ಲವೂ ಸೇರಿವೆ. ವಶಪಡಿಸಿಕೊಂಡ ಈ ವಸ್ತುಗಳು ಮತ್ತು ನಗದು ಎಲ್ಲವೂ ಮುಂದೆ ಏನಾಗುತ್ತವೆ? ಯಾರೂ ಇದನ್ನು ಪ್ರಶ್ನಿಸುತ್ತಿಲ್ಲ ಅಲ್ಲವೇ?

ಇಷ್ಟೆಲ್ಲಾ ಅಕ್ರಮಗಳ ನಡುವೆಯೂ ನಾಗರಿಕರು ಪ್ರಾಮಾಣಿಕ, ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಯ ನಿರೀಕ್ಷೆಯಲ್ಲಿರುವುದು ನಿಜಕ್ಕೂ ಸೋಜಿಗವೇ. ಮತದಾರ ಏಕೆ ‘ಸಂಭಾವ್ಯ ಜನಪ್ರತಿನಿಧಿ’ಗಳಿಂದ ಹಣ ಪಡೆಯುತ್ತಾನೆ? ಎಷ್ಟೇ ಕಷ್ಟಕಾರ್ಪಣ್ಯಗಳಿದ್ದರೂ ಕಡುಬಡತನದಲ್ಲಿರುವ ವ್ಯಕ್ತಿ ಸಹ ಈ ನಾಯಕರ ಬಳಿ ಸ್ವಇಚ್ಛೆಯಿಂದ ಹೋಗಿ, ‘ನಿಮಗೆ ಮತ ಹಾಕುತ್ತೇನೆ, ನನಗೆ ಹಣ ಕೊಡಿ’ ಎಂದು ಕೇಳುವುದಿಲ್ಲ. ಬದಲಾಗಿ, ನಾಯಕರು ಎನಿಸಿಕೊಂಡವರೇ ಅವನ ಮನೆ ಬಾಗಿಲಿಗೆ ಹೋಗಿ ಆಮಿಷಗಳನ್ನು ತಲುಪಿಸುತ್ತಾರೆ. ಸಾಮಾನ್ಯ ಚರ್ಚೆಯಲ್ಲಿ ‘ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ’ ಎಂದು ಹೇಳುವುದುಂಟು. ಆದರೆ ಯಾರು ಸಹ ಮಾರಾಟ ಮಾಡುತ್ತಿಲ್ಲ, ಜನರ ಬಳಿ ಇರುವ ಅಮೂಲ್ಯ ಮತವನ್ನು ಆಮಿಷಗಳ ಮೂಲಕ ಖರೀದಿಸಲಾಗುತ್ತಿದೆ. ಅಂದರೆ ಭ್ರಷ್ಟತೆಯ ಮೂಲ ಇರುವುದು ಆಮಿಷ ಒಡ್ಡಿ ಕೊಡುವವರಲ್ಲೇ ವಿನಾ ಪಡೆಯುವವರಲ್ಲಿ ಅಲ್ಲ ಅಲ್ಲವೇ? ಮತದಾರರ ಮುಖಾಂತರ ಇಡೀ ಸಮಾಜವನ್ನು ಭ್ರಷ್ಟಗೊಳಿಸುವ ಈ ಪದ್ಧತಿಯನ್ನು ತಡೆಗಟ್ಟಲು ಏನು ಮಾಡಬೇಕು?

ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರೀತಿಸುವ, ಗೌರವಿಸುವ ಪ್ರತಿಯೊಬ್ಬ ನಾಗರಿಕನನ್ನೂ ಈ ಪ್ರಶ್ನೆ ಕಾಡಲೇಬೇಕಿದೆ. ವೋಟಿಗಾಗಿ ನೋಟು ಅಥವಾ ಒಂದು ನೋಟಿಗೆ ಒಂದು ವೋಟು ಎನ್ನುವ ಒಂದು ಪರಂಪರೆಯನ್ನು ವ್ಯವಸ್ಥಿತಗೊಳಿಸಿರುವ ಸಮಾಜವನ್ನು ಸುಧಾರಿಸುವತ್ತ ಪ್ರಜ್ಞಾವಂತ ಸಮಾಜ ಯೋಚಿಸಲು ಇದು ಸಕಾಲ ಎನಿಸುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT