ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟರ್ಟಲ್ ವಾಕ್ಸ್’ ಎಲ್ಲೆಡೆ ಸದ್ದು ಮಾಡಲಿ

Last Updated 22 ಮೇ 2019, 18:30 IST
ಅಕ್ಷರ ಗಾತ್ರ

‘ಕಲ್ಲು’ ಆಮೆಗಳನ್ನು ನಾವು ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದೇವೆ. ಈಗ ಭಂಜಿಸಿ-ಭುಜಿಸುವ ನಮ್ಮ ಮನಃಸ್ಥಿತಿಯ ಪರಿಣಾಮ, ‘ಮನುಷ್ಯ’ನಿಂದ ಅವುಗಳನ್ನು ರಕ್ಷಿಸಬೇಕಾದ ಪ್ರಮೇಯ! ಆಮೆಗಳ ಸಂರಕ್ಷಣೆ ಕುರಿತು ಸಾಮುದಾಯಿಕ ಒಲವು ಬೆಳೆಸಲು, ಪ್ರತಿವರ್ಷ ಮೇ 23ರಂದು ಆಮೆಗಳ ವಿಶ್ವ ದಿನ ಆಯೋಜಿಸಲಾಗುತ್ತದೆ.

ನಮ್ಮ ದೇಶದಲ್ಲಿ ‘ಕಲ್ಲಾಮೆ’ ಮತ್ತು ‘ನೀರಾಮೆ’ ಪ್ರಜಾತಿಗೆ ಸೇರಿದ ಆಮೆಗಳಿಗೆ ಈಗ ಹೇಳತೀರದಷ್ಟು ಅಪಾಯಗಳಿವೆ. ಅಪರೂಪದ ಆಮೆಗಳು ಭಾರತದಿಂದ ಈಶಾನ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಕಳ್ಳಸಾಗಣೆಯಾಗಿ, ವಿಶಿಷ್ಟ ಖಾದ್ಯಗಳಾಗಿ ವಿದೇಶಿಗರ ತಾಟಿಗೆ ಆನುತ್ತಿವೆ. ಆ ಪೈಕಿ ಕೆಲವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳ್ಳಮಾರ್ಗಗಳ ಮೂಲಕ ಮಾರಲಾಗುತ್ತಿದೆ. ಅವುಗಳ ‘ಕೆರಾಟಿನ್ ಕರಟ’ವನ್ನು ಬೆಲ್ಟ್ ಹುಕ್, ಉಂಗುರ, ಕಿವಿಯೋಲೆ, ಪೆನ್ ಇತ್ಯಾದಿಯಾಗಿ ರೂಪಿಸಿ ಮಾರುವ ಜಾಲವೂ ಇದೆ!

2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕಳ್ಳಸಾಗಣೆದಾರರಿಂದ 30 ಸಾವಿರ ಆಮೆಗಳನ್ನು ರಕ್ಷಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಂಡಿದೆ. ವಿಚಿತ್ರವೆಂದರೆ, ವಿದೇಶದ ಆಮೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವ, ನಿರ್ಬಂಧಿಸುವ ಅಥವಾ ಮಾರಾಟ ಮತ್ತು ಸಾಕಣೆಗೆ ಸಂಬಂಧಿಸಿದಂತೆ ಈವರೆಗೆ ಸಮರ್ಪಕ ಕಾನೂನು ಈ ನೆಲದಲ್ಲಿ ಜಾರಿಯಲ್ಲಿಲ್ಲ!

ಆಮೆಗಳ ವಾಸಸ್ಥಳಗಳ ಅತಿಕ್ರಮಣ ಗಂಭೀರ ಸಮಸ್ಯೆ. ಕಾರವಾರದ ರವೀಂದ್ರನಾಥ ಟ್ಯಾಗೋರ್‌ ಕಡಲತೀರ ಮತ್ತು ದೇವ್‍ಬಾಗ್ ಸೇರಿದಂತೆ, 380 ಕಿ.ಮೀ. ಉದ್ದದ ಕನ್ನಡ ಕರಾವಳಿಯು ಕಡಲಾಮೆಗಳ ಹೆರಿಗೆ ಮನೆ. ಕಡಲ್ಕೊರೆತ ತಡೆಗೆ ಕಾಂಕ್ರೀಟ್ ಗೋಡೆ, ಬೃಹತ್ ಕಲ್ಲಿನ ಹಾಸುಗಳನ್ನು ಸಮುದ್ರ ತಟಕ್ಕೆ ನಿರ್ಮಿಸಿದ್ದರಿಂದ, ಸದ್ಯ ಸಾವಿರಾರು ಕಿ.ಮೀ. ಕ್ರಮಿಸಿ ಮೊಟ್ಟೆ ಇಡಲು ಆಗಮಿಸುವ ಹೆಣ್ಣು ಕಡಲಾಮೆಗಳ ‘ಮೆಟರ್ನಿಟಿ ಹೋಮ್‌’ ಅನ್ನು ಕಸಿದುಕೊಂಡಂತಾಗಿದೆ!‌

ಕುಂದಾಪುರ ತ್ರಾಸಿಯ ನಂದಿ ನಾಯ್ಕ್, ಭಟ್ಕಳ ಬಳಿ ಧಾಮಜಾಲಿಯ ಸುಬ್ಬಯ್ಯ ಅಂತಹವರು ಕಳೆದ ಮೂರು ದಶಕಗಳಲ್ಲಿ ಲಕ್ಷಾಂತರ ಮೊಟ್ಟೆಗಳನ್ನು ಕಾಳಜಿಯಿಂದ ಸಂಗ್ರಹಿಸಿ, ಮರಿ ಮಾಡಿಸಿದ್ದಾರೆ. ನಂದಿ ನಾಯ್ಕ್ ಅವರ ನಿವೃತ್ತಿಯ ನಂತರ ತ್ರಾಸಿಯ ಕಡಲಾಮೆ ಸಂರಕ್ಷಣಾ ಕೇಂದ್ರ ಕೆಲಕಾಲ ಬಾಗಿಲು ಮುಚ್ಚಿತ್ತು. ಕುಂದಾಪುರದ ಬೆಂಗ್ರೆ ಮತ್ತು ಭಟ್ಕಳದ ಬೆಳಕೆಯೂ ಇಂತಹ ಆಮೆ ರಕ್ಷಣೆಯ ಸಾವಿರಾರು ಕಥೆಗಳನ್ನು ಒಡಲಲ್ಲಿ ಹುದುಗಿಸಿ ಇಟ್ಟುಕೊಂಡಿವೆ.

ಹಡಗುಗಳಿಂದ ಹೊರಚೆಲ್ಲುವ ಎಣ್ಣೆ, ಕಲ್ಮಶ ದ್ರವಗಳು ಉಪ್ಪುನೀರಿನ ಆಮೆಗಳಿಗೆ; ನದಿಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದಿಂದ ಸಿಹಿನೀರಿನ ಆಮೆಗಳಿಗೆ ಅಕಾಲಿಕ ಸಾವು ತರುತ್ತಿವೆ. ವೈಕಲ್ಯ ಹೊಂದಿದ ಅಥವಾ ಅಶಕ್ತ ಮರಿಗಳು ಜನ್ಮತಳೆಯಲು ಕಾರಣವಾಗಿವೆ ಎಂದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಆಹಾರದ ಅಲಭ್ಯತೆ, ಪ್ಲಾಸ್ಟಿಕ್ ಭಕ್ಷಣೆಯಿಂದ ಆಮೆಗಳು ಸಾವನ್ನಪ್ಪುತ್ತಿರುವ ಕಳವಳಕಾರಿ ಬೆಳವಣಿಗೆಯನ್ನೂ ಕಡಲ ಜೀವಶಾಸ್ತ್ರಜ್ಞರು ಗುರುತಿಸಿದ್ದಾರೆ.

ಸಮುದ್ರ ತಟಗಳು ಇತ್ತೀಚೆಗೆ ಅತ್ಯಂತ ಜನನಿಬಿಡವಾಗುತ್ತಿವೆ. ಮಧ್ಯರಾತ್ರಿ ಮೀರಿದರೂ ಕರಗದ ಜನಸಂದಣಿ, ಕಣ್ಣು ಕೋರೈಸುವ ಝಗಮಗ ದೀಪಗಳ ಸಾಲು, ತಂದು ಬಿಸಾಡಿದ ತ್ಯಾಜ್ಯವು ಆಮೆಗಳಿಗೆ ಮೃತ್ಯುಕೂಪವಾಗುತ್ತಿದೆ. ಕೆಲವೊಮ್ಮೆ ಆಮೆ ಮರಿಗಳು ಪ್ಲಾಸ್ಟಿಕ್, ದಾರ, ವೈರ್, ಮೀನು ಹಿಡಿಯಲು ಬಳಸುವ ಬಲೆಗಳಲ್ಲಿ ಸಿಲುಕಿ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುತ್ತಿವೆ.

ಆಸಕ್ತ ಪರಿಸರ ಪ್ರೇಮಿಗಳು ಇಂತಹವುಗಳ ವಿರುದ್ಧದ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಕಡಲಾಮೆಗಳ ರಕ್ಷಣೆ, ಮೊಟ್ಟೆ ಮತ್ತು ಮರಿಗಳ ಸಂಗ್ರಹ ಹಾಗೂ ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸುವುದು, ನಾಯಿ ಹಾಗೂ ಉಪದ್ರವಕಾರಿ ಜನರ ಕೈಗೆ ಸಿಗದಂತೆ ಕಣ್ಗಾವಲು ವ್ಯವಸ್ಥೆ ರೂಪಿಸಿ, ಅವುಗಳ ಹೆರಿಗೆ ಮನೆಯನ್ನು ದಿನದ 24 ಗಂಟೆಯೂ ಸುರಕ್ಷಿತವಾಗಿ ಕಾಯುವ ಮನಸ್ಸು ಮಾಡಿದ್ದಾರೆ.

ಕಡಲಾಮೆ ಮೊಟ್ಟೆ ಇಟ್ಟ ಗೂಡುಗಳನ್ನು ಗುರುತಿಸಿ, ಮೊಟ್ಟೆಗಳಿಗೆ ವಿಶಿಷ್ಟ ಗುರುತು ನೀಡಿ, ಸಂಗ್ರಹಿಸಿಕೊಂಡು ಸಮೀಪದ ‘ಹ್ಯಾಚರೀಸ್’ನಲ್ಲಿ ಪಾಲನೆ-ಪೋಷಣೆ ಮಾಡಿ, ಸ್ವತಂತ್ರವಾಗಿ ಬದುಕಬಲ್ಲವು ಎಂಬುದು ಖಾತ್ರಿಯಾಗುತ್ತಿದ್ದಂತೆ ಸಮುದ್ರಕ್ಕೆ ಬಿಡುವ ‘ಟರ್ಟಲ್ ವಾಕ್ಸ್’ ಸ್ವಯಂ ಸೇವಕರ ಪಡೆ ಈಗ ಅಲ್ಲಿ ಮನೆಮಾತು. ಹೀಗಾಗಿ, ಕಡಲಾಮೆ ಮೊಟ್ಟೆ ಕಬಳಿಸುವುದು ಅಥವಾ ಕದ್ದೊಯ್ಯುವುದು ಈಗ ಕಳ್ಳಸಾಗಣೆದಾರರಿಗೆ ಸಿಂಹಸ್ವಪ್ನ.

ಕಳ್ಳಸಾಗಣೆದಾರರಿಂದ ರಕ್ಷಿಸಲಾಗುವ ಆಮೆಗಳಿಗೆ ಶುಶ್ರೂಷೆ, ಪೋಷಣೆ, ಕೆಲವೊಮ್ಮೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕಾದ ಅನಿವಾರ್ಯವೂ ಈ ಸ್ವಯಂ ಸೇವಕರಿಗೆ ಒದಗಿಬರುತ್ತದೆ. ಚಿಕಿತ್ಸಾ ವೆಚ್ಚ ಭರಿಸಲು ಅನೇಕ ಯುವಜನರು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಅವುಗಳ ಬಗ್ಗೆ ನಿರಂತರ ಅಧ್ಯಯನ, ದಾಖಲಾತಿ, ಗಣತಿ, ಪ್ರಜನನ ಸಂಖ್ಯೆಯ ವಿವರ ಮತ್ತು ಸಂಶೋಧನೆಗೂ ಹಣಕಾಸಿನ ಅಗತ್ಯವಿದೆ.

ನಮ್ಮ ಸ್ಥಳೀಯ ಕೆರೆ, ತೊರೆ, ಗುಡ್ಡ-ತಟಾಕಗಳಲ್ಲಿ, ಪುಟ್ಟ ಸಂಕಗಳಲ್ಲಿ ಮೆದು ಬೆನ್ನಿನ ನೀರಾಮೆಗಳಿವೆ. ಅಳಿವೆ, ಹಿನ್ನೀರು ಮತ್ತು ತರಿ ಭೂಮಿಯಲ್ಲಿ ಅವುಗಳನ್ನು ಬಂಧಿಸಿ, ಮಾರಾಟ ಮಾಡುವವರಿದ್ದಾರೆ, ತಿನ್ನುವವರೂ ಇದ್ದಾರೆ. ಸ್ಥಳೀಯವಾಗಿ ಆಮೆಗಳನ್ನು ರಕ್ಷಿಸುವ ಪುಟ್ಟ ಪ್ರಯತ್ನ ನಡೆಯಲಿ ಎಂಬ ಸದಾಶಯ ಈ ಬಾರಿಯ ಆಮೆ ಸಪ್ತಾಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT