ಅಶ್ರುವಾಯು, ಲಾಠಿಪ್ರಹಾರ
ಬೆಂಗಳೂರು, ಸೆ. 12– ಸೆಂಟ್ರಲ್ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ನಗರದ ಪೊಲೀಸರು ನಾಲ್ಕು ಬಾರಿ ಅಶ್ರುವಾಯು ಮತ್ತು ಹಲವಾರು ಬಾರಿ ಲಾಠಿಪ್ರಹಾರ ಮಾಡಿ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ವಿದ್ಯಾರ್ಥಿಗಳ ಗುಂಪನ್ನು ಚದುರಿಸಿದರು.
ಕಳೆದ ವಾರ ಹಾಸನದಲ್ಲಿ ನಡೆದ ಘಟನೆಯ ಬಗ್ಗೆ ನ್ಯಾಯಾಂಗ ವಿಚಾರಣೆ ಆಗಬೇಕೆಂದು ಒತ್ತಾಯಿಸಿರುವ ವಿದ್ಯಾರ್ಥಿಗಳ ಚಳವಳಿಯು ಮೂರನೇ ದಿನವಾದ ಇಂದು ವಿಕೋಪ ಹಂತಕ್ಕೆ ಮುಟ್ಟಿತು.
ವಿದ್ಯಾರ್ಥಿಗಳಿಂದ ಸತತ ಕಲ್ಲಿನ ಸುರಿಮಳೆ, ಪೊಲೀಸರಿಂದ ಪದೇ ಪದೇ ಲಾಠಿಪ್ರಹಾರ ನಡೆದು, ಸೆಂಟ್ರಲ್ ಕಾಲೇಜಿನ ಪ್ರದೇಶ ಕಾಳಗದ ಕಣದಂತೆ ಕಂಡುಬಂತು. ಘಟನೆಯ ಸಂಬಂಧ ಪೊಲೀಸರು 47 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
***
ಸರ್ಕಾರಿ ಉದ್ಯಮ ಸಮಿತಿ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರ ರಾಜೀನಾಮೆ
ಬೆಂಗಳೂರು, ಸೆ. 12– ವಿಧಾನಸಭೆಯಲ್ಲಿ ಸಮಿತಿಯ ವರದಿಯ ಮೇಲೆ ನಡೆದ ಚರ್ಚೆಯಲ್ಲಿ ಕೆಲ ಸದಸ್ಯರು ಸಮಿತಿಯ ಸದಸ್ಯರ ಮೇಲೆ ದೋಷಾರೋಪಣೆ ಮಾಡಿದ ಕಾರಣ ನೊಂದ ವಿಧಾನಮಂಡಲದ ಸರ್ಕಾರಿ ಉದ್ಯಮಗಳ ಸಮಿತಿಯ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರು, ಸಮಿತಿಯ ಸದಸ್ಯತ್ವ ಹಾಗೂ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದಾರೆ.
ಇಂದಿನಿಂದ ಜಾರಿಗೆ ಬರುವ ರಾಜೀನಾಮೆಯನ್ನು ಶ್ರೀಯುತರು ಇಂದು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರು.
ಕೃಷಿ– ಕೈಗಾರಿಕೆ ಕಾರ್ಪೊರೇಷನ್ ವ್ಯವಹಾರದ ಬಗ್ಗೆ ಸಮಿತಿ ಸಲ್ಲಿಸಿದ ವರದಿ ಬಗ್ಗೆ ನಿನ್ನೆ ತಾನೇ ವಿಧಾನಸಭೆಯಲ್ಲಿ ಚರ್ಚೆ ಮುಗಿಯಿತು.