ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಬು'- ಮಾಲ್ದೀವ್ಸ್ ಸಂಭ್ರಮಿಸಿದ ಜನನಾಯಕ

Last Updated 29 ಸೆಪ್ಟೆಂಬರ್ 2018, 19:50 IST
ಅಕ್ಷರ ಗಾತ್ರ

ಧವಳ ಹುಡಿ ಮರಳಿನ ಕಡಲ ಕಿನಾರೆಗಳು. ವರ್ಷದ ಹನ್ನೆರಡೂ ತಿಂಗಳು ಬೆಚ್ಚನೆ ಹವೆ. ಭೂಮಧ್ಯ ರೇಖೆಯ ಮೇಲೆ ಹಿಂದೂ ಮಹಾಸಾಗರದ ನಡುವಣ 1,200 ಹವಳ ದ್ವೀಪಗಳ ಮೋಹಕ ಗುಚ್ಛವೇ ಮಾಲ್ಡೀವ್ಸ್‌. ರಾಜಕೀಯ ತಳಮಳ ಮತ್ತು ಹವಾಮಾನ ಬದಲಾವಣೆಯ ಸಂಕಟಕ್ಕೆ ಸಿಲುಕಿರುವ ನಾಡು.

ಮಾಲ್ಡೀವ್ಸ್‌ ದ್ವೀಪಗಳನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಆದರೆ ಈ ಸ್ವರ್ಗ ಅಲ್ಪಾಯು. 2004ರ ಸುನಾಮಿ ಈ ದೇಶದ ಮೂರನೆಯ ಒಂದು ಭಾಗವನ್ನು ನುಂಗಿ ಹಾಕಿತು. ಹಿಮನದಿಗಳು ಮತ್ತು ದೈತ್ಯ ಹಿಮಬಂಡೆಗಳು ಕರಗಿ ಸಮುದ್ರಮಟ್ಟ ಸತತ ಏರತೊಡಗಿದೆ. ಸಮುದ್ರಮಟ್ಟದಿಂದ ಕೇವಲ ಆರು ಗಜ ಎತ್ತರದಲ್ಲಿರುವ ಮಾಲ್ಡೀವ್ಸ್‌ ಕೆಲವೇ ದಶಕಗಳಲ್ಲಿ ಸಾಗರದ ಹೊಟ್ಟೆ ಸೇರಲಿದೆ.

ಮಾಲ್ಡೀವ್ಸ್‌ನ ಒಟ್ಟು ವಿಸ್ತೀರ್ಣ 300 ಚದರ ಕಿ.ಮೀ.ಗಳು. ಜನಸಂಖ್ಯೆ 4 ಲಕ್ಷ. ತುಸು ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಮಾಲ್ಡೀವ್ಸ್‌ ಸೇರಿಸಿದರೆ ಒಂದು ಬೆಂಗಳೂರು ಆದೀತು. ಆದರೆ ಈ ಪುಟ್ಟ ದೇಶದ ಕರೆನ್ಸಿ ‘ರುಫಿಯಾ’ ಭಾರತದ ರುಪಾಯಿಗಿಂತ ತುಟ್ಟಿ ಮತ್ತು ಗಟ್ಟಿ. ನಮ್ಮ ನಾಲ್ಕೂ ಮುಕ್ಕೂಲು ರುಪಾಯಿಗಳು ಒಂದು ‘ರುಫಿಯಾ’ಗೆ ಸಮ. ನೂರಕ್ಕೆ ನೂರು ಮುಸಲ್ಮಾನ ದೇಶ. ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾಗಿಲ್ಲ. ದುಬಾರಿ ಪ್ರವಾಸೋದ್ಯಮವೇ ಶೇ 70ರಷ್ಟು ಆದಾಯ ಮೂಲ.

ಭಾರತದ ನೆರೆಹೊರೆಯ ಈ ಪುಟ್ಟ ದೇಶ ಹಿಂದೂ ಮಹಾಸಾಗರದ ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿ ಪವಡಿಸಿದೆ. ಹಿಂದೂ ಮಹಾಸಾಗರದೊಳಕ್ಕೆ ಸರಕು ಸಾಗಣೆ ನೌಕೆಗಳ ಚಲನವನಲದ ಮೇಲೆ ಬೇಹುಗಾರಿಕೆಯ ಕಣ್ಣಿಡುವುದು ಸುಲಭ ಮತ್ತು ಈ ಚಲನವಲನವನ್ನು ತಕ್ಕಮಟ್ಟಿಗೆ ನಿಯಂತ್ರಿಸುವುದೂ ಸಾಧ್ಯ. ಈ ಮಹತ್ವವನ್ನು ಅರಿತ ಚೀನಾ, ಕಳೆದ ಐದಾರು ವರ್ಷಗಳಿಂದ ಇಲ್ಲಿ ನೆಲೆ ನಿರ್ಮಿಸಲು ಭಾರೀ ಪ್ರಯತ್ನ ನಡೆಸಿದೆ. ಬಂಡವಾಳ ಹೂಡಿಕೆಯ ಹೊಳೆ ಹರಿಸಿದೆ. ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆಯಿದು. ಹೀಗಾಗಿಯೇ ಮಾಲ್ಡೀವ್ಸ್‌ ನ ಆಗುಹೋಗುಗಳು, ಕದಲಿಕೆ– ಕನಲಿಕೆಗಳು ಭಾರತದ ಪಾಲಿಗೆ ಬಹುಮುಖ್ಯ.

ಸರ್ವಾಧಿಕಾರಿ ಯಾಮೀನ್ ಭಾರತದ ಗೆಳೆತನವನ್ನು ಧಿಕ್ಕರಿಸಿದ್ದ. ನೆರವಿನ ರೂಪದಲ್ಲಿ ನೀಡಿದ್ದ ಹೆಲಿಕಾಪ್ಟರುಗಳನ್ನು ಹಿಂದಿರುಗಿಸಿದ್ದ. ಚೀನಾ ದೇಶಕ್ಕೆ ರತ್ನಗಂಬಳಿಯ ನಡೆಮುಡಿ ಹಾಸಿದ್ದ. ಶತಕೋಟಿ ಡಾಲರುಗಳ ಭಾರೀ ಋಣಭಾರದಲ್ಲಿ ಯಾಮೀನ್ ಮತ್ತು ಮಾಲ್ಡೀವ್ಸ್‌ ಅನ್ನು ಕೆಡವಿತ್ತು ಚೀನಾ. ಈ ಪುಟ್ಟ ದೇಶದ ವಿದೇಶಾಂಗ ನೀತಿ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಚೀನಾ ನಿಯಂತ್ರಿಸತೊಡಗಿತ್ತು!

ಈ ದೇಶದ ಜನ ಕಳೆದ ಭಾನುವಾರ ರಾತ್ರಿ ಬೀದಿಗಳಿದು ಪರಸ್ಪರ ಅಭಿನಂದಿಸಿ ಸಂಭ್ರಮಿಸಿದರು. ಈ ಉಲ್ಲಾಸದ ಹಿಂದೆ ಹೊಸ ರಾಷ್ಟ್ರಾಧ್ಯಕ್ಷನ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶವಿತ್ತು. ಮಹಮ್ಮದ್ ಯಾಮೀನ್ ಗಯೂಂ ಎಂಬ ದುರಹಂಕಾರಿ ಸರ್ವಾಧಿಕಾರಿಯ ಸೋಲು ಮತ್ತು ಇಬ್ರಾಹಿಂ ಮಹಮ್ಮದ್ ಸೋಲಿಹ್ ಎಂಬ ನಗೆಮೊಗದ ಸ್ನೇಹಜೀವಿ ಮತ್ತು ಅಪ್ಪಟ ಜನತಂತ್ರವಾದಿಯ ಗೆಲುವಿತ್ತು. ಕೇವಲ ಮಾಲ್ಡೀವ್ಸ್‌ ಮಾತ್ರವಲ್ಲ, ಚೀನಾ ವಿನಾ ಬ್ರಿಟನ್, ಅಮೆರಿಕದಂತಹ ಪ್ರಭಾವಿ ದೇಶಗಳಿಗೆ ಕೂಡ ಈ ವಿದ್ಯಮಾನ ನಿರಾಳ ಭಾವ ಮೂಡಿಸಿದೆ. ಭಾರತದ ಮುಖದ ಮೇಲಂತೂ ಮಂದಹಾಸವೇ ಬೆಳಗಿದೆ.

ಇಬ್ರಾಹಿಂ ಮಹಮ್ಮದ್ ಸೋಲಿಹ್ ನಾಲ್ಕು ವಿರೋಧಪಕ್ಷಗಳ ಸಮಾನ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದವರು. ನಿಯೋಜಿತ ರಾಷ್ಟ್ರಾಧ್ಯಕ್ಷ. ಈಗಾಗಲೆ ಸೋಲೊಪ್ಪಿಕೊಂಡಿರುವ ಸರ್ವಾಧಿಕಾರಿ ಯಾಮೀನ್ ಹೊಸ ಚೇಷ್ಟೆಗೆ ಕೈ ಹಾಕದೆ ಹೋದರೆ 54ರ ನಡುವಯಸ್ಕ ಸೋಲಿಹ್ ಶೀಘ್ರದಲ್ಲೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮಾಲ್ಡೀವ್ಸ್‌ ರಾಜಕಾರಣದ ಪರಿಚಯ ಇಲ್ಲದವರಿಗೆ ಸೋಲಿಹ್ ಅಪರಿಚಿತ ಹೆಸರು. ಆದರೆ ಅವರು 25 ವರ್ಷಗಳಿಂದ ಸಂಸತ್ ಸದಸ್ಯರು. ಅಲ್ಲಿನ ರಾಜಕಾರಣಕ್ಕೆ ಬಹುಪಕ್ಷಗಳ ಗಣತಂತ್ರದ ಸ್ವರೂಪವನ್ನು ತರಲು ಹೋರಾಡಿದವರು ಅವರು. ಮಾಜಿ ರಾಷ್ಟ್ರಾಧ್ಯಕ್ಷ ಮಹಮ್ಮದ್ ನಾಶೀದ್ ಅವರಿಗೆ ಹೆಗಲೆಣೆಯಾಗಿ ದುಡಿದವರು. ಇಬ್ರಾಹಿಂ ಸೋಲಿಹ್‌ ತಮ್ಮ ದೇಶದ ಜನರ ಪಾಲಿಗೆ ‘ಇಬು’ ಎಂದೇ ಪ್ರೀತಿಪಾತ್ರರು.

ಸರ್ವಾಧಿಕಾರಿ ಯಾಮೀನ್ ದಮನ ಪರ್ವದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ವಿರೋಧ ಪಕ್ಷಗಳ ಅತಿರಥ ಮಹಾರಥರು, ಮಾನವಹಕ್ಕುಗಳ ಹೋರಾಟಗಾರರು ಜೈಲು ಪಾಲಾದರು ಇಲ್ಲವೇ ದೇಶಭ್ರಷ್ಟರಾದರು. ಭ್ರಷ್ಟಾಚಾರ- ಸರ್ವಾಧಿಕಾರವನ್ನು ಬಯಲು ಮಾಡಿದ ಪತ್ರಕರ್ತರು ಕಣ್ಮರೆಯಾದರು. ಮೊಟ್ಟ ಮೊದಲ ಜನತಾಂತ್ರಿಕ ಸರ್ಕಾರದ ರಾಷ್ಟ್ರಾಧ್ಯಕ್ಷ ಮಹಮ್ಮದ್ ನಾಶೀದ್, ಕಳೆದ ಹಲವು ವರ್ಷಗಳಿಂದ ಶ್ರೀಲಂಕಾದಲ್ಲಿ ಆಶ್ರಯ ಪಡೆದರು. ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿಯ ತಲೆಯಾಳು ಅವರು. ದೇಶಭ್ರಷ್ಟರಾಗುವ ಮುನ್ನ ಸುಳ್ಳು ಮೊಕದ್ದಮೆಗಳನ್ನು ಹೂಡಿ ಅವರನ್ನು ಜೈಲಿಗೆ ತಳ್ಳಲಾಗಿತ್ತು. ಮೊನ್ನೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿತ್ತು. ಹೀಗಾಗಿ ಅವರಿಗೆ ಬದಲಾಗಿ ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿಯ ಸೋಲಿಹ್ ಕಣಕ್ಕಿಳಿದರು. ನಾಲ್ಕು ವಿರೋಧ ಪಕ್ಷಗಳ ಸಮಾನ ಅಭ್ಯರ್ಥಿಯಾದರು.

ಎಗ್ಗಿಲ್ಲದೆ ಅಧಿಕಾರ ದುರ್ಬಳಕೆ ಮಾಡಿದ ಸರ್ವಾಧಿಕಾರಿ ಯಾಮೀನ್ ತನಗೆ ಸೋಲೇ ಇಲ್ಲ ಎಂಬ ಭ್ರಮೆಯಲ್ಲಿದ್ದ. ಆದರೆ ‘ಅಟ್ಟಹಾಸದ ಆಗಸದಲ್ಲಿ ಹಾರಾಡುವ’ ನಿರಂಕುಶ ಪ್ರಭುಗಳನ್ನು ನೆಲಕ್ಕೆ ಜಗ್ಗಿ ಎಳೆದು ತರುವ ಮಹಾನ್ ಶಕ್ತಿ ಮತದಾತರಿಗೆ ಉಂಟು. ಇತಿಹಾಸವೇ ಈ ಮಾತಿಗೆ ಸಾಕ್ಷಿ. ಆದರೆ ಜನಶಕ್ತಿಯನ್ನು ಹಗುರವಾಗಿ ಪರಿಗಣಿಸಿ ಇತಿಹಾಸದ ಕಣ್ಣಿಗೆ ಮಣ್ಣೆರಚುವ ವ್ಯರ್ಥ ಪ್ರಯತ್ನವನ್ನು ಚಂಡ ಪ್ರಚಂಡ ನಾಯಕರು ಈಗಲೂ ನಮ್ಮ ನಡುವೆ ಮೊರೆದು ಭೋರ್ಗರೆಯುತ್ತಿದ್ದಾರೆ. ಆದರೆ ಇತಿಹಾಸ ಮರುಕಳಿಸುತ್ತಲೇ ಇರುತ್ತದೆ. ಸದಾ ಸರ್ವದಾ ಅದರ ಕಣ್ಣುಗಳಿಗೆ ಮಣ್ಣೆರಚುವುದು ಅಸಾಧ್ಯ.

ನಾಶೀದ್ ಮತ್ತು ಸೋಲಿಹ್ ಸಮೀಪದ ಬಂಧುಗಳು. ಭಾರತದ ಪರ ರಾಜಕಾರಣಿಗಳು. ಯಾಮೀನ್ ಅವಧಿಯಲ್ಲಿ ಭಾರತ ತಟಸ್ಥವಾಗಿ ಉಳಿದರೂ ಈ ಮುಂದಾಳುಗಳ ಭಾರತ ಪಕ್ಷಪಾತ ಮುಕ್ಕಾಗಿಲ್ಲ. ಸೋಲಿಹ್ ಮತದಾರರ ಮನೆ ಬಾಗಿಲುಗಳಿಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದುಂಟು. ಜನತಂತ್ರವನ್ನು ಮತ್ತೆ ಸ್ಥಾಪಿಸುವ ಜೊತೆಗೆ ಜನಪರ ಸ್ಥಿರ ಸರ್ಕಾರವನ್ನು ನೀಡುವ ಭರವಸೆಯನ್ನು ನೀಡಿದರು. ಮಾಲ್ಡೀವ್ಸ್‌ ಪಾಲಿಗೆ ‘ಭಾರತವೇ ಪ್ರಥಮ’ ಎಂಬ ನೀತಿಯನ್ನು ಪುನಃ ಜಾರಿಗೆ ತರುವ ವಚನ ನೀಡಿದರು. ಭಾರೀ ಜನಸ್ಪಂದನ ಅವರಿಗೆ ದೊರೆಯಿತು. ಆದರೂ ಯಾಮೀನ್ ಮತ ಎಣಿಕೆಯಲ್ಲಿ ಏರುಪೇರು ಮಾಡಿ ಮೋಸದಿಂದ ಗೆಲುವು ತನ್ನದೇ ಎಂದು ಘೋಷಿಸುವ ದಟ್ಟ ಆತಂಕ ವಿರೋಧ ಪಕ್ಷಗಳಿಗೆ ಇದ್ದೇ ಇತ್ತು. ಆದರೆ ಜನತಾಂತ್ರಿಕ ಪವಾಡ ನಡೆದೇ ಹೋಯಿತು, ಸೋಲಿಹ್ ಗೆದ್ದರು.

38,500 ಮತಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿರುವ ಸೋಲಿಹ್ ಮೂವತ್ತನೆಯ ವಯಸ್ಸಿಗೇ ಸಂಸದನಾಗಿ ಆಯ್ಕೆಯಾಗಿದ್ದರು. ಜನರ ನಡುವೆ ಖುಷಿ ಕಾಣಬಲ್ಲ ವ್ಯಕ್ತಿ. ಪತ್ನಿ ಫರ್ಜಾನ್ ಅಹ್ಮದ್. ಮಕ್ಕಳು- ಸಾರಾ ಮತ್ತು ಯಮನ್ ಒಳಗೊಂಡ ಸುಖೀ ಕುಟುಂಬ ಅವರದು.

‘ನಮ್ಮಲ್ಲಿ ಬಹು ಮಂದಿಗೆ ಇದೊಂದು ಕಠಿಣ ಪಯಣವಾಗಿತ್ತು. ಕಾರಾಗಾರ ಇಲ್ಲವೇ ಗಡಿಪಾರಿನ ಶಿಕ್ಷೆಯಿಂದ ಶುರುವಾದ ಈ ಪಯಣ ಮತಪೆಟ್ಟಿಗೆಗಳ ಮುಂದೆ ಅಂತ್ಯಗೊಂಡಿದೆ’ ಎಂದು ಸೋಲಿಹ್ ಹೇಳಿದ್ದಾರೆ. ಅವರ ಸಹಪಯಣಿಗ ಮಾಜಿ ರಾಷ್ಟ್ರಾಧ್ಯಕ್ಷ ಮಹಮ್ಮದ್ ನಾಶೀನ್ ಮತ್ತಿತರೆ ದೇಶಭ್ರಷ್ಟ ಸಂಸದರು ಮಾಲ್ಡೀವ್ಸ್‌ ಮರಳುವ ಗಳಿಗೆಗೆ ಕಾಯುತ್ತಿದ್ದಾರೆ.

ಸಮೂಹ ಮಾಧ್ಯಮ ಸಂಸ್ಥೆಗಳು, ನ್ಯಾಯಾಂಗ, ಸಂಸದೀಯ ವ್ಯವಸ್ಥೆ, ಮಾನವಹಕ್ಕುಗಳ ಸಂಸ್ಥೆಗಳನ್ನು ಸರ್ವಾಧಿಕಾರ ಮುರಿದು ಒಗೆದಿದೆ. ಅವುಗಳನ್ನು ಈಗ ತಳಮಟ್ಟದಿಂದ ಇಟ್ಟಿಗೆ ಮೇಲೆ ಇಟ್ಟಿಗೆ ಇರಿಸಿ ಮತ್ತೆ ಕಟ್ಟುವ ಕಠಿಣ ಹೊಣೆಗಾರಿಕೆ ಸೋಲಿಹ್ ಅವರದು. ಚೀನಾ ದ್ವೇಷವನ್ನು ಕಟ್ಟಿಕೊಳ್ಳಲು ಹಿಂಜರಿದು ದೂರ ಸರಿದಿದ್ದ ಭಾರತ ಇದೀಗ ಪುನಃ ಸಹಾಯ ಹಸ್ತ ಚಾಚತೊಡಗಿದೆ. ಅಗತ್ಯ ಬಿದ್ದರೆ ಹಸ್ತಕ್ಷೇಪಕ್ಕೂ ಹಿಂಜರಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT