ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಸವ ಇರುವುದು ಬಸವಳಿಯಲು ಅಲ್ಲ

Last Updated 8 ಜನವರಿ 2021, 15:11 IST
ಅಕ್ಷರ ಗಾತ್ರ

‘ರೋಡ್ ಸೈಡ್ನಲ್ಲಿ ಪೇಪರ‍್ರು, ಪ್ಲಾಸ್ಟಿಕ್ಕು, ಕೊಳ್ತೋಗಿರೋ ಹಣ್ಣು, ತರಕಾರಿ ತಿಂದ್ಕೊಂಡು ಹೆಂಗೋ ಆರಾಮಾಗಿದ್ದ ಬಸ್ವನ್ನ ಹಿಡ್ಕಬಂದು ಕಟ್ಟಾಕವಲ್ಲ ಇವ್ಕೆನೂ ಬುದ್ದಿ ಇಲ್ವ?’ ಉದ್ಯಾನವನದಲ್ಲಿ ವಾಯುವಿಹಾರ ಮಾಡುತ್ತಿದ್ದ ಹಿರಿಯರು ಕೋಪದಿಂದಲೇ ಅಸಮಾಧಾನ ಹೊರಹಾಕುತ್ತಿದ್ದರು. ಪಡ್ಡೆ ಹುಡುಗರು ಒಂದು ಬೀಡಾಡಿ ದನವನ್ನು ಹಿಡಿದು ತಂದು ಅಲ್ಲೇ ಮೂಲೆಯಲ್ಲಿ ಕಟ್ಟಿಹಾಕಿದ್ದರು. ಹುಡುಗರ ಹಾವಳಿಯಿಂದ ಬೆದರಿದ್ದ ದನ ಆಹಾರ, ನೀರಿಲ್ಲದೆ ಬಸವಳಿದು ಹೋಗಿತ್ತು. ಹುಡುಗರ ಗ್ಯಾಂಗು ಅದ್ಭುತವಾದದ್ದನ್ನು ಸಾಧಿಸಿದಂತೆ ಬೀಗಿ, ಕೇಕೆ ಹಾಕುತ್ತ ನಿಂತಿತ್ತು. ಇವರಿಗೆ ತಿಳಿ ಹೇಳಿ ಅವಮಾನಿತರಾಗುವುದಕ್ಕಿಂತ ಸುಮ್ಮನಿರುವುದೇ ವಾಸಿಯೆಂದು ಹಿರಿಯರು ಭಾವಿಸಿದಂತಿತ್ತು. ಸಂಕ್ರಾಂತಿ ಬಂತೆಂದರೆ ನಗರ ಪ್ರದೇಶದ ಕೆಲ ಪಡ್ಡೆ ಹುಡುಗರ ಪಡೆ ಬೀಡಾಡಿ ದನಗಳನ್ನು ಹಿಡಿದು ತಂದು ಪಳಗಿಸಿ, ಸಂಕ್ರಾಂತಿಯ ದಿನ ಕಿಚ್ಚು ಹಾಯಿಸುವುದನ್ನೇ ದನಗಳಿಗೆ ನೀಡುವ ಪರಮಗೌರವವೆಂದು ಭಾವಿಸಿರುವುದು ದುರದೃಷ್ಟಕರ. ಇಂಥ ದನಗಳು ವರ್ಷಪೂರ್ತಿ ಆಹಾರಕ್ಕಾಗಿ ಬೀದಿ ಬೀದಿ ಅಲೆಯುವಾಗ, ತಿನ್ನಲಿಕ್ಕೆ ಏನೂ ಸಿಗದೆ ಸಿನಿಮಾ ಪೋಸ್ಟರ್, ಪ್ಲಾಸ್ಟಿಕ್ ತ್ಯಾಜ್ಯವನ್ನೇ ತಿಂದು ಹಸಿವು ನೀಗಿಸಿಕೊಳ್ಳುವಾಗ ಈ ಹುಡುಗರೆಲ್ಲ ಎಲ್ಲಿ ಹೋಗಿದ್ದರು? ದನಗಳನ್ನು ಹಿಂಸಿಸಿ ಪೂಜಿಸುವುದರಿಂದ ಇವರಿಗೆ ದೊರೆಯುವ ಲಾಭವಾದರೂ ಏನು?

ಬೀದಿನಾಯಿಗಳ ರಕ್ಷಣೆಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತದೆ, ಗೋಹತ್ಯೆ ನಿಷೇಧ ಕಾನೂನಾಗಿ ಜಾರಿಯಲ್ಲಿದೆ. ಆದರೆ ಬೀದಿಗೆ ಬಿದ್ದ ದನಗಳ ಯೋಗಕ್ಷೇಮದ ಬಗ್ಗೆ ಚಕಾರ ಎತ್ತುವವರಿಲ್ಲ! ಬಸವನೆಂಬ ಅಭಿದಾನ ಪಡೆದ ದನಗಳು ಬಸವಳಿದು ಅಲೆಯಲಿಕ್ಕಾಗಿಯೇ ಇವೆಯೆಂಬ ಭಾವನೆ ಬೇರೂರಿರುವಂತಿದೆ. ಇಂಥ ದನಗಳಿಗೆ ನಿಜವಾಗಿಯೂ ಗೋಶಾಲೆಯ ಅಗತ್ಯವಿದೆ. ಉಚಿತ ಆಹಾರ, ಆರೋಗ್ಯ, ರಕ್ಷಣೆಯ ಹಕ್ಕು ಇವುಗಳಿಗೂ ಇದೆ.

–ಮಧುಕುಮಾರ ಸಿ.ಎಚ್., ಚಾಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT